ಬೆಂಗಳೂರು
ರಾಜಾಜಿನಗರದ ಬಸವ ಮಂಟಪದಲ್ಲಿ ಶಿವರಾತ್ರಿ ಅಂಗವಾಗಿ ಸರ್ವ ಶರಣರ ದಿನಾಚರಣೆ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಮಾಡಲಾಯಿತು.
ಪೂಜ್ಯ ಮಹಾಜಗದ್ಗುರು ಮಾತೆ ಗಂಗಾದೇವಿ ತಾಯಿಯವರು ಸಾಂದರ್ಭಿಕವಾಗಿ ಮಾತನಾಡುತ್ತ, ಶಿವರಾತ್ರಿಯ ದಿನದಂದು ಸರ್ವ ಶರಣರ ದಿನಾಚರಣೆಯನ್ನಾಗಿ ಆಚರಿಸಬೇಕು ಎಂದು ಕರೆಕೊಟ್ಟರು.

ಲಿಂಗಾಯತ ಧರ್ಮದಲ್ಲಿ ೭೭೦ ಅಮರಗಣಂಗಳು ಹಾಗು ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣರು ಆಗಿ ಹೋಗಿದ್ದಾರೆ. ಅವರೆಲ್ಲರ ಸ್ಮರಣೆ ಮಾಡಲು ವರ್ಷದ ೩೬೫ ದಿನವೂ ಸಾಲುವದಿಲ್ಲ.
ಅದಕ್ಕಾಗಿ ಶಿವರಾತ್ರಿಯ ದಿನದಂದು ಲಿಂಗೈಕ್ಯ ಮಹಾಜಗದ್ಗುರ ಪೂಜ್ಯ ಮಾತೆ ಮಹಾದೇವಿ ತಾಯಿಯವರು ಸುಮಾರು ೪ ದಶಕಗಳಿಂದ ೭೭೦ ಅಮರಗಣಗಳಿಗೆ ಅವರ ಹೆಸರನ್ನು ಹೇಳುತ್ತಾ ಶರಣು ಶರಣಾರ್ಥಿ ಸಲ್ಲಿಸಿ ಅವರನ್ನ ಸ್ಮರಣೆ ಮಾಡುವ ಪರಂಪರೆಯನ್ನ ರೂಢಿಗೆ ತಂದಿದ್ದಾರೆ. ಈ ರೀತಿ ನಾಡಿನ ಎಲ್ಲಾ ಬಸವ ಭಕ್ತರು ಈ ಸರ್ವ ಶರಣರ ದಿನಾಚರಣೆಯನ್ನು ರೂಢಿಗೆ ತರಬೇಕೆಂದು ಕರೆಕೊಟ್ಟರು.

ತಾಯಿ ಭಾರತಿ ಕೆಂಪಯ್ಯನವರು ದೇವರ ಪರಿಕಲ್ಪನೆಯ ಬಗ್ಗೆ ಸುದೀರ್ಘವಾದ ಅನುಭಾವವನ್ನು ನೀಡಿದರು.
ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ನೆರವೇರಿಸಲಾಯಿತು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನ ಚಂದ್ರಮೌಳಿ ಎನ್. ಲಿಂಗಾಯತ ಅವರು ಆಡಿದರು. ಅಧ್ಯಕ್ಷತೆಯನ್ನು ವಿದೇಶದಲ್ಲಿ ನೆಲೆಸಿ, ಕಾರ್ಯಕ್ರಮಕ್ಕೆ ಬಂದಂಥ ಕೃಷ್ಣೇಗೌಡರು ವಹಿಸಿದ್ದರು. ಕೃಷ್ಣೇಗೌಡರನ್ನು ಕಾರ್ಯಕ್ರಮದಲ್ಲಿ ಸತ್ಕರಿಸಲಾಯಿತು.

ಕಾರ್ಯಕ್ರಮವು ಪ್ರಸಾದ ದಾಸೋಹದೊಂದಿಗೆ ಮುಕ್ತಾಯವಾಯಿತು. ಸಂಘಟನೆಗಳ ಶರಣ ಶರಣೆಯರು ಉಪಸ್ಥಿತರಿದ್ದರು.
