ಕೈ ಜಾರಿದ ಎಡೆಯೂರು
ಎಡೆಯೂರು ಕ್ಷೇತ್ರದ ವಾರಸುದಾರರು ಗದುಗಿನ ಶ್ರೀಗಳು
ಲಿಂಗಾಯತರಲ್ಲಿ ವಿರಕ್ತ ಮಠಗಳನ್ನು ಸ್ಥಾಪಿಸಿದ್ದು ತೋಂಟದ ಸಿದ್ದಲಿಂಗೇಶ್ವರರ ಶಿಷ್ಯರು. ಸಂಪ್ರದಾಯ, ದಾಖಲೆಗಳ ಪ್ರಕಾರ ಎಡೆಯೂರು ಕ್ಷೇತ್ರದ ವಾರಸುದಾರರೆಂದರೆ ಗದುಗಿನ ಶ್ರೀಗಳು.
ಇಂದು ಸಾವಿರಾರು ಮಠಗಳಿದ್ದರೂ ಗದ್ದುಗೆಯ ದರ್ಶನಕ್ಕೆ ಧಾರ್ಮಿಕ ವಿಧಿಯಂತೆ ಹೋಗುವವರು ಗದುಗಿನ ಶ್ರೀಗಳು ಮಾತ್ರ. ಇವರು ತಮ್ಮ ಹೆಸರಿನ ಹಿಂದೆ “ತೋಂಟದ” ಪದವನ್ನು ಕಡ್ಡಾಯವಾಗಿ ಬಳಸುತ್ತಾರೆ.
ಮಠವನ್ನು ವಶಕ್ಕೆ ತೆಗೆದುಕೊಂಡರೂ ಕ್ಷೇತ್ರದ ನಿರ್ವಹಣೆಯನ್ನು ಸರಕಾರ ಕಡೆಗಣಿಸಿತು. ಸ್ಥಳೀಯ ಶಾನುಭೋಗ, ಮಾಮಲೇದಾರರಂತವರು ನೆರವು ಕೋರುತ್ತಿದ್ದು ಅಂದಂದಿನ ಗದುಗಿನ ಶ್ರೀಗಳನ್ನು.
ಕ್ಷೇತ್ರದ ನೈವಿದ್ಯ, ನಂದಾದೀಪಗಳ ವೆಚ್ಚದಿಂದ ಹಿಡಿದು ಕಟ್ಟಡ, ರಥ ಮುಂತಾದವುಗಳ ನಿರಂತರ ಜೀರ್ಣೋದ್ದಾರ ಮಾಡಿದ್ದು ಗದುಗಿನ ಶ್ರೀಗಳು. ಇವುಗಳ ಎಲ್ಲಾ ದಾಖಲೆ, ರಸೀತಿಗಳು ಲಭ್ಯವಿವೆ.
ಗದ್ದುಗೆಯ ಮುಂದೆ ತೂಗು ಬಿಟ್ಟಿರುವ ಸರಕಾರದ ನಾಮಫಲಕ ಕ್ಷೇತ್ರದ ಗುರು ಪರಂಪರೆಯನ್ನು ಗುರುತಿಸುತ್ತದೆ. ಸಿದ್ದಲಿಂಗ ಯತಿಗಳಿಂದ ಶುರುವಾಗಿ ಗದುಗಿನ ಶ್ರೀಗಳೊಂದಿಗೆ ಮುಕ್ತಾಯವಾಗುತ್ತದೆ.
ಒಟ್ಟಾರೆ, ಎಡೆಯೂರು ಕ್ಷೇತ್ರ ಬಸವ ತತ್ವ ಪಾಲಿಸುವ ಸಂಸ್ಥೆಯೊಂದರಿಂದ ಸರಕಾರಕ್ಕೆ ಹಸ್ತಾಂತರವಾಯಿತು. ಪ್ರಸಿದ್ಧ ಲಿಂಗಾಯತ ಮಠ ವೈದಿಕ ದೇವಸ್ಥಾನವಾಗಿ ಬದಲಾಯಿತು.
(ಯಡೆಯೂರು ಸಿದ್ದಲಿಂಗೇಶ್ವರ ಕ್ಷೇತ್ರದ ವಾರಸುದಾರರು ಗದುಗಿನ ಶ್ರೀಗಳು
’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೫)