ಗದಗ
ಅಲ್ಪತೆ ಅಳಿಸಿ ವಿಶ್ವತೆ ತರುವುದೇ ಶಿಕ್ಷಣದ ಉದ್ದೇಶವಾಗಬೇಕು. ಪ್ರತಿಯೊಬ್ಬರನ್ನು ವಿಶ್ವಮಾನವರನ್ನಾಗಿ ರೂಪಿಸುವಲ್ಲಿ ವಿದ್ಯೆ, ಸಂಸ್ಕೃತಿ ಮತ್ತು ನಾಗರಿಕತೆಗಳ ಪಾತ್ರ ಮಹತ್ವದ್ದು. ಜಾತಿ ಮತ ಪಂಥಗಳನ್ನು ಮೀರಿ ನಾವೇಲ್ಲರೂ ವಿಶ್ವಮಾನವರಾಗೋಣ ಎಂದು ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೭೨೬ ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಬಾಲ್ಯದಿಂದಲೇ ನಾವೆಲ್ಲರೂ ಒಂದು ಎಂಬ ಭಾವನೆಯನ್ನು ಮಕ್ಕಳಲ್ಲಿ ಬಿತ್ತಬೇಕು. ಮನುಷ್ಯ ಹುಟ್ಟುತ್ತಲೇ ವಿಶ್ವಮಾನವನಾಗಿರುತ್ತಾನೆ. ಬೆಳೆಯುತ್ತ ಸಮಾಜ ಅಲ್ಪಮಾನವನನ್ನಾಗಿ ರೂಪಿಸುತ್ತದೆ. ಇವನಾರವ ಇವನಾರವ ಎನ್ನದೆ, ಇವನಮ್ಮವ ಇವನಮ್ಮವ ಎನ್ನುವುದೇ ವಿಶ್ವಮಾನವ ಕಲ್ಪನೆ. ವಿಶ್ವವೇ ನಮ್ಮ ಮನೆ ಎಂಬ ವಿಶಾಲವಾದ ಭಾವನೆ ಬೆಳೆದಾಗ ಮಾತ್ರ ವಿಶ್ವಮಾನವ ದಿನಾಚರಣೆ ಸಾರ್ಥಕ ಎಂದರು.
ಮನುಷ್ಯ ಜಾತಿ ತಾನೊಂದೇ ವಲಂ ಎಂದು ಅಸಮಾನತೆಯನ್ನು ತೊಡೆದು ಹಾಕಬೇಕು. ದ್ವೇಷ ಅಸೂಯೆ ಬಿಟ್ಟು ವಿಶ್ವಕುಟುಂಬಿಗಳಾಗಬೇಕು. ಪ್ರತಿಯೊಬ್ಬರು ಪ್ರೀತಿ, ಸಾಮರಸ್ಯ, ಸಮಾನತೆಯಿಂದ ಬದುಕುವುದೇ ನಿಜವಾದ ಧರ್ಮ. ಕುವೆಂಪು ಅವರು ಆ ಮತ ಈ ಮತವಲ್ಲ, ಮನುಜ ಮತ. ಆ ಪಥ ಈ ಪಥವಲ್ಲ, ವಿಶ್ವಪಥ ಎಂದು ಸಾರಿದ್ದಾರೆ ಎಂದು ಶ್ರೀಗಳು ಮಾತನಾಡಿದರು.

ಉಪನ್ಯಾಸಕರಾಗಿ ಆಗಮಿಸಿದ ಗದುಗಿನ ಎ.ಎಸ್.ಎಸ್. ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಬಾಹುಬಲಿ ಜೈನರ ಮಾತನಾಡುತ್ತಾ, ಕುವೆಂಪು ಶ್ರೇಷ್ಠ ಕವಿ. ಅಧ್ಯಾತ್ಮಿಕ, ನಿಸರ್ಗ, ವೈಚಾರಿಕ ಕವಿ. ಹತ್ತು ಹಲವು ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿ ವಿಶಿಷ್ಟವಾದ ವಿಶ್ವಮಾನವ ಸಂದೇಶ ಕೊಟ್ಟಿದ್ದಾರೆ ಎಂದು ಹೇಳಿದರು.
ಸೋಮಶೇಖರ ಮುನವಳ್ಳಿ ಯು.ಎಸ್.ಎ. ಇವರು ಕೊಡಮಾಡುವ ಡಾ ಎಸ್.ಎಸ್. ಉಪ್ಪಿನ ಧಾರವಾಡ ಇವರ ಸ್ಮರಣಾರ್ಥ ಶ್ರೀಮತಿ ಕೀರ್ತನಾ ಕುಮಾರಿ ಕೆ. ಜಿಲ್ಲಾ ವರದಿಗಾರರು ಸಂಯುಕ್ತ ಕರ್ನಾಟಕ ಬೆಳಗಾವಿ ಇವರಿಗೆ ಮಾಧ್ಯಮ ಪ್ರಶಸ್ತಿಯನ್ನು ಮತ್ತು ಮಾತೋಶ್ರೀ ವೀರಮ್ಮ ನಾಗಪ್ಪ ಮುನವಳ್ಳಿ ಇವರ ಸ್ಮರಣಾರ್ಥ ಸಮಾಜ ಸೇವಿಕಾ ಪ್ರಶಸ್ತಿಯನ್ನು ಶ್ರೀಮತಿ ಶಹನಾಜ ಬೇಗಂ ಸಲೀಂ ಅಣ್ಣಿಗೇರಿ ಶಿಕ್ಷಕಿಯರು ಸ.ಉ.ಪ್ರಾ.ಶಾಲೆ ನಂ. ೫ ಎಸ್.ಎಂ ಕೃಷ್ಣ ನಗರ ಗದಗ ಇವರಿಗೆ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಶಿವಪೂಜಿ, ರಾಜ್ಯಾಧ್ಯಕ್ಷರು ಪತ್ರಕರ್ತರ ಸಂಘ ಬೆಂಗಳೂರು ಬೆಳಗಾವಿ ಇವರು ಮಾತನಾಡಿದರು.
ಪ್ರದೀಪ ಅರ್ಕಸಾಲಿ ಸಾ. ಹಗರಿಬೊಮ್ಮನಹಳ್ಳಿ ಇವರು ವಾಯೋಲಿನ್ ನುಡಿಸಿದರು. ಪ್ರಸಾದ ಸುತಾರ ಇವರು ಸಂಗೀತ ಸೇವೆ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಕುಮಾರ ಧನುಷ್ಯ ಎಂ. ಮಳಗಲಿ ಹಾಗೂ ವಚನ ಚಿಂತನವನ್ನು ಕುಮಾರಿ ಕೃತಿಕಾ .ಎಸ್. ಅರಸಿದ್ದಿ ನಡೆಸಿಕೊಟ್ಟರು.
ದಾಸೋಹ ಸೇವೆಯನ್ನು ರತ್ನಕ್ಕ ಬಸನಗೌಡ ಪಾಟೀಲ್, ಅವಿನಾಶ ಮತ್ತು ಅಭಿಲಾಶ ಇವರು ಹುಟ್ಟುಹಬ್ಬದ ಪ್ರಯುಕ್ತ ಶ್ರೀಮತಿ ವಿದ್ಯಾ ಪ್ರಭು ಗಂಜಿಹಾಳರವರು ವಹಿಸಿಕೊಂಡಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಉಪಾಧ್ಯಕ್ಷ ಉಮೇಶ್ ಪುರದ, ವಿದ್ಯಾ ಪ್ರಭು ಗಂಜಿಹಾಳ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ ಉಪಸ್ಥಿತರಿದ್ದರು.
ಶಿವಾನುಭವ ಸಮಿತಿಯ ಚೆರಮನ್ ಐ. ಬಿ. ಬೆನಕೊಪ್ಪ ಸ್ವಾಗತಿಸಿದರು. ಶಿವಾನಂದ ಹೊಂಬಳ ಕಾರ್ಯಕ್ರಮ ನಿರೂಪಿಸಿದರು.