ಬೀದರ್
ಅಕ್ಟೋಬರ್ 19ರಂದು ಸ್ವಾಭಿಮಾನಿ ಕಲ್ಯಾಣ ಪರ್ವದ ಉದ್ಘಾಟನೆಯನ್ನು ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟನೆ ಮಾಡಲಿದ್ದಾರೆ, ಎಂದು ಸ್ವಾಭಿಮಾನಿ ಕಲ್ಯಾಣ ಪರ್ವ ಉತ್ಸವ ಸಮಿತಿಯ ಕಾರ್ಯದರ್ಶಿ ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೌರಾಡಳಿತ ಸಚಿವ ರಹಿಂಖಾನ್ ಷಟಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ. ದಿವ್ಯ ಸಾನಿಧ್ಯವನ್ನು ಭಾಲ್ಕಿಯ ಪೂಜ್ಯ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೆವರು, ಹಾರಕೂಡದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು, ಹುಬ್ಬಳ್ಳಿ ಹೊಸಮಠದ ಪೂಜ್ಯ ಜಗದ್ಗುರು ಡಾ. ಚಂದ್ರಶೇಖರ ಸ್ವಾಮೀಜಿ, ಪೂಜ್ಯ ರಾಜೇಶ್ವರ ಶಿವಾಚಾರ್ಯರು ತಡೋಳಾ, ಪೂಜ್ಯ ಜಯಬಸವಾನಂದ ಶ್ರೀಗಳು ಸೇರಿದಂತೆ ಹಲವು ಮಠಾಧೀಶರು ವಹಿಸಲಿದ್ದಾರೆ.
ಅಕ್ಟೋಬರ್ 19 ಮತ್ತು 20 ರಂದು ಬಸವಕಲ್ಯಾಣದ ಸಸ್ತಾಪುರ ಬಂಗ್ಲಾ ಸಮೀಪದ ಬೇಗ್ ಸಭಾಮಂಟಪದಲ್ಲಿ ಬೆಂಗಳೂರಿನ ಬಸವ ಗಂಗೋತ್ರಿಯಲ್ಲಿರುವ ಶ್ರೀ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ನೇತೃತ್ವದಲ್ಲಿ ಸ್ವಾಭಿಮಾನಿ ಕಲ್ಯಾಣ ಪರ್ವ ಜರುಗಲಿದೆ. ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ಬಸವ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
“ವಚನ ಸಂಗಮ” ಪುಸ್ತಕವನ್ನು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎಸ್.ನಾಗರಾಳೆ ಬಿಡುಗಡೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಚಿಕ್ಕಮಗಳೂರು ರಾ.ಬ.ದಳದ ಅಧ್ಯಕ್ಷ ಬಾಣೂರು ಚನ್ನಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಹಿರಾಬಾದ ಸಂಸದ ಸುರೇಶ ಶೆಟಕಾರ, ಶಾಸಕರಾದ ಪ್ರಭು ಚವ್ಹಾಣ, ಶರಣು ಸಲಗರ, ಡಾ. ಸಿದ್ದು ಪಾಟೀಲ, ಡಾ. ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ವಿಜಯಸಿಂಗ್, ಧನರಾಜ ತಾಳಂಪಳ್ಳಿ ಆಗಮಿಸಲಿದ್ದಾರೆ.
ಅಕ್ಟೋಬರ್ 19ರ ಮಧ್ಯಾಹ್ನ ರಾಷ್ಟ್ರೀಯ ಬಸವ ದಳದ ಯುವಗೋಷ್ಠಿ ಜರುಗಲಿದೆ. ಗೋಷ್ಠಿಯನ್ನು ಬೀದರ ಸಂಸದರಾದ ಸಾಗರ ಖಂಡ್ರೆ ಉದ್ಘಾಟಿಸಲಿದ್ದಾರೆ. ಈ ಗೋಷ್ಠಿಯಲ್ಲಿ ರಾಜ್ಯದ ಹಲವು ಜಿಲ್ಲೆಗಳ ಹಾಗೂ ಪಕ್ಕದ ತೆಲಂಗಾಣ ಮತ್ತು ಮಹಾರಾಷ್ಟ್ರದ ರಾ.ಬ.ದಳದ ಕಾರ್ಯಕರ್ತರು ಪಾಲ್ಗೊಂಡು “ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿ ಯುವಕರ ಪಾತ್ರ” ಕುರಿತು ಚರ್ಚಿಸಲಿದ್ದಾರೆ. ಸಾಯಂಕಾಲ 6 ಗಂಟೆಯ ಧರ್ಮಚಿಂತನಗೋಷ್ಠಿಯಲ್ಲಿ ಖಾದ್ರಿ ವೆಲ್ಫೇರ್ ಸೊಸೈಟಿಯ ಸೂಫಿ ಸೈಯದ್ ಶಾ ಮಹಮ್ಮದ್ ಗೌಸ್ ಖಾದ್ರಿ ಮತ್ತು ಸೂಫಿ ಸಂತ ಪಿರೆ ತರಿಕತ್ ಅಬ್ದುಲ್ ರಜಾಕ್ ಖಾದ್ರಿ, ಭಾಲ್ಕಿಯ ಪೂಜ್ಯ ಗುರುಬಸವ ಪಟ್ಟದ್ದೆವರು, ಗುರುದ್ವಾರದ ಸರ್ದಾರ್ ದರ್ಬಾರಾಸಿಂಗ್ ಜೀ, ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವರು ಪಾಲ್ಗೊಂಡು ವಿವಿಧ ವಿಷಯಗಳ ಗೋಷ್ಠಿ ನಡೆಯಲಿದೆ. ಇದೇ ವೇಳೆ ದಾಸೋಹಿಗಳ ಹಾಗೂ ಸಾಧಕರಿಗೆ ಸನ್ಮಾನ ನಡೆಯಲಿದೆ.
ಅ. 20 ರಂದು ಬೆ. 8 ಗಂಟೆಗೆ ಶರಣ ವಂದನೆ, ಶರಣರಿಗೆ ಶರಣಾರ್ಥಿ, ಏಳು ನೂರಾ ಎಪ್ಪತ್ತು ಅಮರ ಗಣಂಗಳ ಹೆಸರು ಹೇಳಿ ಶರಣಾರ್ಥಿ ಸಲ್ಲಿಸುವ ವಿಶೇಷ ಕಾರ್ಯಕ್ರಮ ಜರುಗಲಿದೆ.
20 ರಂದು ಬೆ. 11 ಗಂಟೆಗೆ ಧರ್ಮಚಿಂತನಗೋಷ್ಠಿ ಕಾರ್ಯಕ್ರಮವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶಿವರಾಜ ಪಾಟೀಲ ಅತಿವಾಳ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸತ್ಯಾದೇವಿ ಮಾತಾಜಿ ಕೋರಿದ್ದಾರೆ.
ಎರಡು ದಿವಸಗಳ ಸ್ವಾಭಿಮಾನಿ ಕಲ್ಯಾಣ ಪರ್ವದಲ್ಲಿ ಬೆಳಿಗ್ಗೆ 6 ಗಂಟೆಗೆ ಕೊಪ್ಪಳದ ಗಣನಾಯಕರಾದ ವೀರಣ್ಣ ಕೊರ್ಲಳ್ಳಿ ಅವರಿಂದ ಬಸವ ಚಿಂತನ ಪ್ರಭೆ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜೆ ಜರುಗಲಿದೆ. ಸೋಲಾಪುರದ ರಾಜೇಶ್ವರಿ ಹಾಗೂ ಸಂಗಡಿಗರಿಂದ ವಿಶೇಷ ಅಕ್ಕಮಹಾದೇವಿ ರೂಪಕ ಜರುಗಲಿದೆ. ಮಕ್ಕಳಿಂದ ವಚನ ನೃತ್ಯ, ಕಲಾವಿದರ ವಚನ ಗಾಯನ ನಡೆಯಲಿದೆ. ಸಾಯಂಕಾಲ ಸಮಾರೋಪ ಸಮಾರಂಭ ಜರುಗಿ ಪಥಸಂಚಲನ ನಡೆಯಲಿದೆ.
ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ, ಅಧ್ಯಕ್ಷರು ಸ್ವಾಭಿಮಾನಿ ಕಲ್ಯಾಣ ಪರ್ವ ಉತ್ಸವ ಸಮಿತಿ ಬಸವಕಲ್ಯಾಣ.
💐🙏