ಬಿಜೆಪಿ ಟಿಕೆಟ್ಟಿಗೆ 2 ಕೋಟಿ ರೂ. ವಂಚನೆ; ಪ್ರಹ್ಲಾದ್‌ ಜೋಶಿ ಸಹೋದರನ ವಿರುದ್ಧ ಪೊಲೀಸ್‌ ಕೇಸ್‌

ಬಸವ ಮೀಡಿಯಾ
ಬಸವ ಮೀಡಿಯಾ

ಬಿಜೆಪಿ ಟಿಕೆಟ್ಟಿಗೆ 2 ಕೋಟಿ ರೂ. ವಂಚನೆ; ಪ್ರಹ್ಲಾದ್‌ ಜೋಶಿ ಸಹೋದರನ ವಿರುದ್ಧ ಪೊಲೀಸ್‌ ಕೇಸ್‌

ಬೆಂಗಳೂರು

ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಜೆಡಿಎಸ್ ಮಾಜಿ ಶಾಸಕನಿಂದ 2 ಕೋಟಿ‌ ರೂಪಾಯಿ ಪಡೆದು ವಂಚಿಸಿರುವ ಆರೋಪದಡಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರನ ಕುಟುಂಬದ ವಿರುದ್ಧ ಬಸವೇಶ್ವನಗರ ಪೊಲೀಸ್​​ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಸುನೀತಾ ಚವ್ಹಾಣ್ ಎಂಬುವರು ನೀಡಿದ ದೂರಿನನ್ವಯ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ, ವಿಜಯ್ ಲಕ್ಷ್ಮೀ ಜೋಶಿ, ಅಜಯ್ ಜೋಶಿ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 2024ನೇ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಬಿಜಾಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಗೋಪಾಲ್ ಜೋಶಿ ಹಾಗೂ ವಿಜಯಲಕ್ಷ್ಮೀ ಜೋಶಿ, ಅಜಯ್ ಜೋಶಿ ಅವರುಗಳು ಸೇರಿಕೊಂಡು ಐದು ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟು 2.25 ಕೋಟಿ ರೂ. ಪಡೆದು ವಂಚಿಸಿದ್ದಾರೆ. ಟಿಕೆಟ್ ಸಿಗದಿದ್ದಕ್ಕೆ ಹಣ ವಾಪಸ್ ಕೇಳಿದಾಗ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಎಫ್​​ಐಆರ್​​​​ನಲ್ಲಿ ಇರುವ ಅಂಶಗಳಿವು

“ಪರಿಚಯಸ್ಥರೊಬ್ಬರ ಮೂಲಕ ಗೋಪಾಲ್ ಜೋಶಿ ಪರಿಚಯವಾಗಿದ್ದು, ಈ ವೇಳೆ 2024ನೇ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಟೆಕೆಟ್ ಕೊಡಿಸುತ್ತೇನೆ. 5 ಕೋಟಿ ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಅದಕ್ಕೆ ನಿರಾಕರಿಸಿದಾಗ 25 ಲಕ್ಷ ರೂ. ಮುಂಗಡ ಕೊಡಿ, ಬಾಕಿ ಹಣಕ್ಕೆ ಚೆಕ್ ಕೊಡುವಂತೆ ಗೋಪಾಲ್ ಜೋಶಿ ಹೇಳಿದ್ದರು. ಅದರಂತೆ 5 ಕೋಟಿ ರೂ. ಮೊತ್ತದ ಚೆಕ್ ಹಾಗೂ 25 ಲಕ್ಷ ರೂ.ಅನ್ನು ಗೋಪಾಲ್ ಸೂಚನೆ ಮೇರೆಗೆ ಬಸವೇಶ್ವರನಗರದಲ್ಲಿರುವ ಸಹೋದರಿ ವಿಜಯಲಕ್ಷ್ಮೀ ಜೋಶಿಗೆ ನೀಡಲಾಗಿತ್ತು”.

“ಆದರೆ, ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿಸಿಲ್ಲ. ಅದನ್ನು ಪ್ರಶ್ನಿಸಿದಾಗ 5 ಕೋಟಿ ರೂ. ಮೊತ್ತದ ಚೆಕ್ ವಾಪಸ್ ನೀಡಿದ್ದಾರೆ. ಆದರೆ, 25 ಲಕ್ಷ ರೂ. ಕೊಡಲಿಲ್ಲ. ನಂತರ 200 ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್ ಬಿಲ್​ ಬಾಕಿ ಇದ್ದು, ಅದು ಬರಬೇಕಿದೆ. ಹೀಗಾಗಿ ಹೆಚ್ಚುವರಿಯಾಗಿ 1.75 ಕೋಟಿ ರೂ. ಕೊಡು ಎಂದು ಕೇಳಿದಾಗ, ನಮ್ಮ ಪತಿ ದೇವಾನಂದ್, ಸಂಬಂಧಿಕರು ಹಾಗೂ ಸ್ನೇಹಿತರ ಬಳಿ ಪಡೆದು ಕೊಟ್ಟಿದ್ದಾರೆ. ಈ ವೇಳೆ, ಗೋಪಾಲ್ ಪುತ್ರ ಅಜಯ್, ಈ ಹಣಕ್ಕೆ ನಾನೇ ಶ್ಯೂರಿಟಿ ಎಂದು ಹೇಳಿದ್ದರು. ಆದರೆ, ಇದುವರೆಗೂ ಹಣ ನೀಡಿಲ್ಲ. ಅದನ್ನು ಕೇಳಿದಾಗ, ವಿಜಯಲಕ್ಷ್ಮೀ ಸದ್ಯ ನಮ್ಮ ಬಳಿ ಹಣ ಇಲ್ಲ. ಕೋರ್ಟ್‌ನಲ್ಲಿ ಕೇಸ್ ಹಾಕಿಕೊಳ್ಳಿ ಎಂದೆಲ್ಲ ಧಮ್ಕಿ ಹಾಕಿದ್ದಾರೆ. ಬೆದರಿಕೆ ಹಾಕಿ ತನ್ನ ಕೈಗಳಿಂದ ನನಗೆ ಹಲ್ಲೆ ಮಾಡಿ, ತನ್ನ ಬಳಿಯಿದ್ದ ಕೀ ಚೈನಿಂದ ನನ್ನ ಬಲ ಕುತ್ತಿಗೆಯ ಭಾಗಕ್ಕೆ ಎಸೆದು ನೋವುಂಟು ಮಾಡಿ, ಅವಾಚ್ಯವಾಗಿ ಬೈದಿರುತ್ತಾರೆ”.

“ನಾನು ಹಾಗೂ ನನ್ನ ಮಗ ಇಬ್ಬರು ಏನಾದರೂ ಸರಿಯೆಂದು ಮನೆಯ ಮುಂಬಾಗ ನಿಂತಿದ್ದೆವು. ಆಗ ಕೆಲ ಗೂಂಡಾಗಳು ಬಂದು ಹೆದರಿಸಿದ್ದಾರೆ. ಹೀಗೆ ಬಿಜೆಪಿಯಿಂದ ಲೋಕಸಭಾ ಟಿಕೆಟ್ ಕೊಡಿಸುವುದಾಗಿ ನಂಬಿಸಿ, ನನಗೆ ಮೋಸ ಮಾಡುವ ಉದ್ದೇಶದಿಂದ ಎಲ್ಲರೂ ಸೇರಿ ಒಳಸಂಚು ನಡೆಸಿ ನಮ್ಮಿಂದ ಹಣ ಪಡೆದು, ಲೋಕಸಭಾ ಚುನಾವಣೆಗೆ ಟಿಕೆಟ್ ಅನ್ನು ಕೊಡಿಸದೇ, ನಮ್ಮಿಂದ ಪಡೆದ ಹಣ ನೀಡದೇ, ಕೇಳಲು ಹೋದ ನನಗೆ ಮನೆಯಿಂದ ರಸ್ತೆಗೆ ತಳ್ಳಿ, ಜಾತಿ ನಿಂದನೆ, ಹಲ್ಲೆ ಮಾಡಿರುವ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ” ಸುನೀತ್ ಚವ್ಹಾಣ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Share This Article
Leave a comment

Leave a Reply

Your email address will not be published. Required fields are marked *