ಓದುವುದು ಕೇವಲ ಪರೀಕ್ಷೆ ಪಾಸ್ ಮಾಡುವುದಕ್ಕಾಗಿ ಅಲ್ಲ. ನಮ್ಮ ವ್ಯಕ್ತಿತ್ವ ವಿಕಾಸಕ್ಕಾಗಿ.
ಸಾಣೇಹಳ್ಳಿ
ಇಲ್ಲಿನ ಗುರುಬಸವ ಮಹಾಮನೆಯಲ್ಲಿ ಏರ್ಪಡಿಸಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ವಿದ್ಯಾರ್ಥಿಗಳು ಗುರುಗಳಿಗೆ ಹಿರಿಯರಿಗೆ ಗೌರವ ಕೊಡುವ ಗುಣ ಬೆಳೆಸಿಕೊಂಡರೆ ತಮ್ಮನ್ನು ನಾವು ದೊಡ್ಡವರನ್ನಾಗಿ ಮಾಡಿಕೊಂಡಂತೆ. ಪರೀಕ್ಷೆ ಎಂದರೆ ಭಯವಲ್ಲ. ಅದೊಂದು ಸಂತೋಷ ಹಾಗೂ ಹಬ್ಬದ ಕ್ಷಣ. ಪರೀಕ್ಷೆಯಲ್ಲಿ ಬರೆಯುವಂಥ ಅಂಶಗಳು ಸರಳವಾಗಿ, ಶುದ್ಧವಾಗಿರಬೇಕು. ಎಲ್ಲರಿಗೂ ಅರ್ಥವಾಗುವಂತೆ, ವಾಕ್ಯಗಳ ರಚನೆ ಚೆನ್ನಾಗಿರಬೇಕು.

ಪರೀಕ್ಷೆಯ ನಿಯಮಗಳು ದಿನದಿಂದ ದಿನಕ್ಕೆ ಬದಲಾಗುತ್ತಲಿವೆ. ಆ ನಿಮಯಗಳೇ ಎಲ್ಲರನ್ನು ಭಯಪಡಿಸುವ ವಾತಾವರಣ ನಿರ್ಮಾಣ ಆಗುತ್ತಿದೆ. ವಿದ್ಯಾರ್ಥಿಗಳಿಗೆ ನಂಬಿಕೆ, ವಿಶ್ವಾಸ ಬಹಳ ಮುಖ್ಯ. ಎಂತಹ ಕಠಿಣ ಸಂದರ್ಭ ಬಂದರೂ ವರ್ಷವಿಡಿ ಓದಿದ್ದನ್ನು ಧೈರ್ಯದಿಂದ, ನಂಬಿಕೆ ವಿಶ್ವಾಸದಿಂದಲೇ ಪರೀಕ್ಷೆಯನ್ನು ಬರೆಯಬೇಕು. ನಂಬಿಕೆ ಇಲ್ಲದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಓದುವುದು ಕೇವಲ ಪರೀಕ್ಷೆಗಾಗಿ, ಪಾಸ್ ಮಾಡುವುದಕ್ಕಾಗಿ ಅಲ್ಲ. ನಮ್ಮ ವ್ಯಕ್ತಿತ್ವ ವಿಕಾಸಕ್ಕಾಗಿ. ಇಂದಿನ ದಿನಮಾನಗಳಲ್ಲಿ ವಿದ್ಯಾವಂತರೇ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದುರಂತ. ವಿದ್ಯಾರ್ಥಿಗಳು ದುಶ್ಚಟ, ದುರಭ್ಯಾಸಗಳಿಗೆ ಬಲಿಯಾಗದೇ ನೈತಿಕ ನೆಲೆಗಟ್ಟಿನ ಮೇಲೆ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು.
ಪ್ರತಿಯೊಬ್ಬರು ಆಡುವ ಮಾತುಗಳು ಶುದ್ಧವಾಗಿರಬೇಕು. ನಾಲಿಗೆ ತನ್ನ ಕುಲ ಹೇಳುತ್ತದೆ ಎನ್ನುವ ಮಾತಿದೆ. ಮನುಷ್ಯ ತನ್ನ ನಾಲಿಗೆ ಮೇಲೆ ಹತೋಟಿ ಸಾಧಿಸಬೇಕು. ನಾಲಿಗೆಯಿಂದಲೇ ಸಮಾಜದಲ್ಲಿ ಏನೆಲ್ಲ ಅವಾಂತರಗಳು ಸೃಷ್ಟಿಯಾಗುತ್ತಿರುವುದನ್ನು ದಿನನಿತ್ಯ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಪಂಚೇಂದ್ರಿಯಗಳ ಮೇಲೆ ಹತೋಟಿ ಸಾಧಿಸಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಬೇಕು. ವಿದ್ಯಾರ್ಥಿಗಳು ಬೇಜವಾಬ್ದಾರಿತನ, ಕುಕೃತ್ಯಗಳನ್ನು ಮಾಡದೇ ಜವಾಬ್ದಾರಿ ಕೆಲಸಗಳನ್ನು ಮಾಡಬೇಕು.

ಸಾಣೇಹಳ್ಳಿಯಲ್ಲಿ ಓದಿದ ಮಕ್ಕಳು ತಮ್ಮ ಬದುಕನ್ನು ಗಟ್ಟಿಗೊಳಿಸಿಕೊಳ್ಳಬೇಕು. ಓದುವುದು ಸದ್ಗುಣಗಳನ್ನು ಕಲಿಯುವುದಕ್ಕೆ ಹೊರತು ಕಿವಿಯನೂದುವುದಕ್ಕೆ ಅಲ್ಲ’ ಎನ್ನುವ ಅರಿವಿರಬೇಕು. ಓದುವುದು ಬೇರೆಯವರ ಬದುಕನ್ನು ಉದ್ಧಾರ ಮಾಡಲು ಎನ್ನುವ ತಿಳಿವಳಿಕೆ ಮಾಡಬೇಕು. ವಿದ್ಯಾರ್ಥಿಗಳು ಮುಂದಿನ ದಿನಮಾನಗಳಲ್ಲಿ ನಿಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಬೇಕೆಂದು ಹಾರೈಸಿದರು.
ಸಾಣೇಹಳ್ಳಿ ಪರೀಕ್ಷಾ ಕೇಂದ್ರ ಮುಖ್ಯಸ್ಥ ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ; ವಿದ್ಯಾರ್ಥಿಗಳು ಪರೀಕ್ಷೆಯನ್ನು ಹಬ್ಬದ ರೀತಿಯಲ್ಲಿ ಆಚರಿಸಿ, ಪರೀಕ್ಷೆಯನ್ನು ಬರೆಯಿರಿ. ಪ್ರತಿಯೊಂದು ಪರೀಕ್ಷಾ ಕೇಂದ್ರಗಳು ಬಹಳಷ್ಟು ಕಠಿಣ ನಿಯಮಗಳನ್ನು ಮಾಡಿ ಪರೀಕ್ಷೆ ನಡೆಸುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಭಯಪಡದೇ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಾದ ಶಶಾಂಕ, ಸಚಿನ್, ಜಾಹ್ನವಿ, ಪಾರ್ವತಿ, ಲಾವಣ್ಯ ಹಾಗೂ ಜ್ಞಾನೇಶ ಅನಿಸಿಕೆಗಳನ್ನು ಹೇಳಿದರು.
ಶಿಕ್ಷಕಿ ಸುಧಾ ಎಂ. ಸ್ವಾಗತಿಸಿ ನಿರೂಪಿಸಿದರು. ವೇದಿಕೆಯ ಮೇಲೆ ಮುಖ್ಯ ಶಿಕ್ಷಕಿ ಶಿಲ್ಪಾ ಇದ್ದರು. ಗುರುಪಾದೇಶ್ವರ ಪ್ರೌಢಶಾಲೆಯ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.