ಫೆಬ್ರವರಿ 27: ‘ವಚನ ದರ್ಶನ’ಕ್ಕೆ ಎಲ್ಲಾ ಲಿಂಗಾಯತ ಸಂಘಟನೆಗಳಿಂದ ಒಂದೇ ಉತ್ತರ

ಬಸವ ಮೀಡಿಯಾ
ಬಸವ ಮೀಡಿಯಾ

ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಮತ್ತು ರಾಜ್ಯಾಧ್ಯಕ್ಷ ಶಂಕರ ಬಿದರಿ ಮುಖ್ಯ ಅತಿಥಿಗಳಾಗಿ ಬರಲಿದ್ದಾರೆ.

ಬೆಂಗಳೂರು

ಬಸವಾದಿ ಶರಣರ ತತ್ವವನ್ನು ತಿರುಚುವ ಸಾಹಸಕ್ಕೆ ಕೈ ಹಾಕಿರುವ ಸಂಘ ಪರಿವಾರ ಪ್ರಾಯೋಜಿತ ‘ವಚನ ದರ್ಶನ’ ಪುಸ್ತಕಕ್ಕೆ ಸಮುದಾಯದ ಪರವಾಗಿ ಸ್ಪಷ್ಟ ಉತ್ತರ ನೀಡಲು ಐದು ಪ್ರಮುಖ ಲಿಂಗಾಯತ ಸಂಘಟನೆಗಳು ಫೆಬ್ರವರಿ 27ರಂದು ವೇದಿಕೆ ಹಂಚಿಕೊಳ್ಳುತ್ತಿವೆ.

ವಚನ ದರ್ಶನ ಪುಸ್ತಕಕ್ಕೆ ಪ್ರತಿಯಾಗಿ ಬಂದಿರುವ ‘ವಚನ ದರ್ಶನ ಮಿಥ್ಯ Vs ಸತ್ಯ’ ಪುಸ್ತಕವನ್ನು ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ರಾಷ್ಟ್ರೀಯ ಬಸವದಳ, ಬಸವ ಸಮಿತಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಇತರ ಬಸವಪರ ಸಂಘಟನೆಗಳು
ಸಾಮೂಹಿಕವಾಗಿ ಬಿಡುಗಡೆ ಮಾಡಲು ಕೈ ಜೋಡಿಸಿವೆ.

ಇವುಗಳಲ್ಲಿ ಮೊದಲ ನಾಲ್ಕು ಸಂಘಟನೆಗಳು ವಚನ ದರ್ಶನವನ್ನು ಈಗಾಗಲೇ ಸ್ಪಷ್ಟವಾಗಿ ವಿರೋಧಿಸಿವೆ. ಆದರೆ ಈ ವಿವಾದದ ಮೇಲೆ ಇಲ್ಲಿಯವರೆಗೆ ಮೌನ ವ್ರತ ಹಿಡಿದಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೂಡ ಪುಸ್ತಕ ಬಿಡುಗಡೆಯನ್ನು ಬೆಂಬಲಿಸುತ್ತಿರುವುದು ಗಮನ ಸೆಳೆಯುವ ಬೆಳೆವಣಿಗೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೂಡ ಪುಸ್ತಕ ಬಿಡುಗಡೆಯನ್ನು ಬೆಂಬಲಿಸುತ್ತಿದೆ.

ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಮತ್ತು ರಾಜ್ಯಾಧ್ಯಕ್ಷ ಶಂಕರ ಬಿದರಿ ಮುಖ್ಯ ಅತಿಥಿಗಳಾಗಿ ಬರಲಿದ್ದಾರೆ. ಕಾರ್ಯದರ್ಶಿ ರೇಣುಕಾ ಪ್ರಸನ್ನ ಕೂಡ ವೀರಶೈವ ಮಹಾಸಭಾವನ್ನು ಪ್ರತಿನಿಧಿಸಲಿದ್ದಾರೆ ಎಂದು ತಿಳಿದು ಬಂದಿದೆ.

“ಇಂತಹ ಕಾರ್ಯಕ್ಕೆ ಎಲ್ಲಾ ಸಂಘಟನೆಗಳು ಒಟ್ಟಿಗೆ ಬರುತ್ತಿರುವುದು ಇದೇ ಮೊದಲು. ಎಲ್ಲರೂ ಒಗ್ಗಟ್ಟಾಗಿ ರಾಜಕೀಯ ಪಕ್ಷಗಳಿಗೆ ಒಂದು ಸ್ಪಷ್ಟವಾದ ಸಂದೇಶ ಕಳಿಸಬೇಕಾಗಿದೆ. ಮುಖ್ಯವಾಗಿ ಲಿಂಗಾಯತರೆಂದು ಗುರುತಿಸಿಕೊಂಡು ಬೇಕಾಬಿಟ್ಟಿ ಮಾತನಾಡುತ್ತಿರುವ ರಾಜಕಾರಣಿಗಳಿಗೂ ದೊಡ್ಡ ಪಾಠ ಕಲಿಸಬೇಕಾಗಿದೆ,” ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಹೇಳಿದರು.

ಇಂತಹ ಕಾರ್ಯಕ್ಕೆ ಎಲ್ಲಾ ಸಂಘಟನೆಗಳು ಒಟ್ಟಿಗೆ ಬರುತ್ತಿರುವುದು ಇದೇ ಮೊದಲು.

ಬಸವ ಸಮಿತಿಯ ಅನುಭವ ಮಂಟಪ ಸಭಾಂಗಣದಲ್ಲಿ ಬೆಳಗ್ಗೆ 11ಗಂಟೆಗೆ ಬಿಡುಗಡೆಯಾಗುತ್ತಿರುವ ‘ಮಿಥ್ಯ Vs ಸತ್ಯ’ ಪುಸ್ತಕವನ್ನು ಟಿ ಆರ್ ಚಂದ್ರಶೇಖರ್ ಮತ್ತು ಮುಕ್ತಾ ಕಾಗಲಿ ಸಂಪಾದಿಸಿದ್ದಾರೆ.

ಬೃಹತ್ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ತೋಂಟದ ಸಿದ್ಧರಾಮ ಶ್ರೀಗಳು, ಡಾ. ಬಸವಲಿಂಗ ಪಟ್ಟದ್ದೇವರು, ಪಂಡಿತಾರಾಧ್ಯ ಶ್ರೀಗಳು, ಡಾ. ಗಂಗಾಮಾತಾಜಿಯವರು, ಶರಶ್ಚಂದ್ರ ಶ್ರೀಗಳು, ಸಿದ್ಧಲಿಂಗ ಶ್ರೀಗಳು, ಶಿವಾನಂದ ಶ್ರೀಗಳು, ಡಾ. ಅಲ್ಲಮಪ್ರಭು ಶ್ರೀಗಳು, ಮುಂತಾದ ಸ್ವಾಮೀಜಿಗಳು ಭಾಗಹಿಸುತ್ತಿದ್ದಾರೆ.

ಪುಸ್ತಕವನ್ನು ಸದ್ಯಕ್ಕೆ ದಕ್ಷಿಣ ಕರ್ನಾಟಕದ ಐದು ನಗರಗಳಲ್ಲಿ, ಉತ್ತರ ಕರ್ನಾಟಕದ 10 ನಗರಗಳಲ್ಲಿ ಬಿಡುಗಡೆ ಮಾಡುವ ಆಲೋಚನೆಯಿದೆ. ಕೊನೆಯ ಕಾರ್ಯಕ್ರಮ ದೆಹಲಿಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.

ಬಿ ಎಲ್ ಸಂತೋಷ್, ದತ್ತಾತ್ರೇಯ ಹೊಸಬಾಳೆಯಂತಹ ಹಿರಿಯ ಆರೆಸ್ಸೆಸ್ ನಾಯಕರ ನೇತೃತ್ವದಲ್ಲಿ ‘ವಚನ ದರ್ಶನ’ ಪುಸ್ತಕ ದೆಹಲಿಯೂ ಸೇರಿದಂತೆ ಹಲವಾರು ನಗರಗಳಲ್ಲಿ ಅದ್ದೊರಿ ಸಮಾರಂಭಗಳಲ್ಲಿ ಬಿಡುಗಡೆಯಾಯಿತು.

ಕಲ್ಯಾಣ ಕ್ರಾಂತಿಯನ್ನೇ ನಿರಾಕರಿಸುವ, ವಚನಗಳೆಲ್ಲಾ ಸಂಸ್ಕೃತದ ಮೂಲದವು ಎಂದು ಪ್ರತಿಪಾದಿಸುವ, ಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಒಪ್ಪಿಕೊಳ್ಳದ ವಚನ ದರ್ಶನ ತಂಡದ ವಿರುದ್ಧ ಲಿಂಗಾಯತ ಸಮುದಾಯದಿಂದ ತೀಕ್ಷ್ಣ ಪ್ರತಿಕ್ರಿಯೆ ಬಂದು ಪ್ರತಿಭಟನೆಗಳೂ ನಡೆದವು.

ಹಲವಾರು ನಗರಗಳಲ್ಲಿ ಸ್ಥಳೀಯ ಬಸವ ತತ್ವದ ಕಾರ್ಯಕರ್ತರು ವಚನ ದರ್ಶನದ ಬಿಡುಗಡೆ ಕಾರ್ಯಕ್ರಮಗಳಿಗೆ ಹೋಗದಂತೆ ಲಿಂಗಾಯತ ಸ್ವಾಮೀಜಿಗಳನ್ನು ತಡೆದರು.

“‘ಸತ್ಯ ಮಿಥ್ಯ’ ಪುಸ್ತಕ ಈ ಪ್ರತಿರೋಧದ, ಪ್ರತಿಭಟನೆಯ ಒಂದು ಬೌದ್ಧಿಕ ಪ್ರಯತ್ನ. ಈ ಪುಸ್ತಕದಲ್ಲಿ ವಚನ ಸಾಹಿತ್ಯ ಮತ್ತು ಬಸವ ಸಿದ್ದಾಂತಗಳು ಸ್ವತಂತ್ರ ಲಿಂಗಾಯತ ಧರ್ಮ ಸಿದ್ಧಾಂತ ಎಂಬುದನ್ನು ಪ್ರತಿಪಾದಿಸಲಾಗಿದೆ. ವಚನಗಳು ಉಪನಿಷತ್ತುಗಳ ಅನುವಾದ, ವೇದಾಗಮಗಳ ತಾತ್ಪರ್ಯ ಎಂಬ ವಚನ ದರ್ಶನದಲ್ಲಿನ ವಿಕೃತ, ಸುಳ್ಳು ವಾದಗಳನ್ನು ಉದಾಹರಣೆಯೊಂದಿಗೆ ಕಿತ್ತೋಗೆಯಲಾಗಿದೆ,” ಎಂದು ಟಿ ಆರ್ ಚಂದ್ರಶೇಖರ್ ಹೇಳಿದರು.

ಚಿಂತಕಿ ಮೀನಾಕ್ಷಿ ಬಾಳಿ ಅಕ್ಟೋಬರ್ ತಿಂಗಳಲ್ಲಿ ವಚನ ದರ್ಶನ ಪುಸ್ತಕದ ವಿರುದ್ಧ ವಚನ ನಿಜದರ್ಶನವನ್ನು ಬರೆದು ಬಿಡುಗಡೆ ಮಾಡಿದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Share This Article
11 Comments
    • ಎರಡೂ ಬಣಗಳು ಸೇರಿರುವುದು ಸಂದರ್ಭೋಚಿತ. ಬಹುಶಃ ಬಸವಣ್ಣನವರ ಆಶಯವೂ ಇದೇ ಆಗಿತ್ತು. “ಇವನಾರವ ಇವನಾರವ ಎನ್ನದೆ ಇವ ನಮ್ಮವ ಇವ ನಮ್ಮವ” ಎನ್ನುವುದರಲ್ಲಿಯೇ ಸಾರ್ಥಕತೆಯೂ ನೆಲೆಸಿದೆ. ನಾವೆಲ್ಲರೂ ಒಂದೇ ಆದರೆ ನೆನಪಿಡಿ ನಾವು ಬಸವ ತತ್ವದ ಪ್ರತಿಪಾದಕರು. ಎಲ್ಲರೂ ಶ್ರೇಷ್ಟರೇ…ಯಾರೂ ಕನಿಷ್ಟರಲ್ಲ. ಬಸವಣ್ಣನೇ ಧರ್ಮ ಸಂಸ್ಥಾಪಕ

  • ಜಾತ್ಯತೀತವಾದ ಲಿಂಗಾಯತ ಧರ್ಮ ಬೆಳೆಯಲಿ ಶ್ರೀ ಗುರು ಬಸವ ಲಿಂಗಾಯ ನಮಃ ಶರಣು ಶರಣಾರ್ಥಿಗಳು ಚನ್ನಬಸವಣ್ಣ ಶೆಟ್ಟರ .ಬ್ಯಾಡಗಿ

    • Basavadharma aims to eliminate inequality ,injustice and exploitation in any form .
      It is horrible to hear and observe that till date there are individuals and institutions opposing such a great dharma . Even some lingayats are part of it .!

  • ಅತ್ಯುತ್ತಮ ಬೆಳವಣಿಗೆ. ಕರ್ನಾಟಕ ಸರ್ಕಾರ ಬಸವಣ್ಣನವರನ್ನು ” ಸಾಂಸ್ಕೃತಿಕ ನಾಯಕ ” ಎಂದು ಘೋಷಿಸಿದ್ದನ್ನು ನಾವು ಅಂದರೆ ಲಿಂಗಾಯತರು ಒಟ್ಟಾಗಿ ಸಂಭ್ರಮಿಸುತ್ತಿಲ್ಲ. ಕರ್ನಾಟಕ ಸರ್ಕಾರದ ಈ ನಿರ್ಣಯ ಐತಿಹಾಸಿಕ. ಕಾಲ ಈಗ ಪಕ್ವವಾಗಿದೆ. ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ – ಎಂಬ ಬಸವಣ್ಣನವರ ಆಶಯದಂತೆ ನಾವು ನಡೆದದ್ದೇ ಆದರೆ ಯಶಸ್ಸು ಶತಸಿದ್ದ. ಲಿಂಗಾಯತ ಸಮಾಜದ ಹಿರಿಯರು ಮತ್ತು ವಿವಿಧ ಮಠಾಧಿಪತಿಗಳು ಒಂದೇ ವೇದಿಕೆಯಲ್ಲಿ ಸೇರುತ್ತಿರುವುದು ನಮಗೆ ಹಾಲು ಜೇನು ಕುಡಿದಷ್ಟೇ ಸಂತೋಷವಾಗಿದೆ. ಹಿಂದೆ ನಿವೃತ್ತ IAS ಅಧಿಕಾರಿಗಳಾಗಿದ್ದ ಶ್ರೀ ಸಿದ್ದಯ್ಯ ಪುರಾಣಿಕರ ನಂತರ, ಈಗ ಶ್ರೀ SM ಜಾಮದಾರ್, ನಿವೃತ್ತ IAS ಮತ್ತು ಶ್ರೀ ಶಂಕರ ಬಿದರಿ ನಿವೃತ್ತ IPS ಈ ಇಬ್ಬರು ಅಧಿಕಾರಿಗಳು ಲಿಂಗಾಯತ ಸಮಾಜದ ಸೇವೆಗೆ ಬಂದಿರುವುದು ನಮ್ಮ ಭಾಗ್ಯವೇ ಸರಿ. ಈ ಇಬ್ಬರು ಮಹನೀಯರನ್ನು ಒಂದೇ ವೇದಿಕೆಯಲ್ಲಿ ನೋಡುವುದೇ ಒಂದು ಹೆಮ್ಮೆ.ಈ ಈರ್ವರ ಅಪಾರ ಆಡಳಿತಾತ್ಮಕ ಅನುಭವವನ್ನು ನಮ್ಮ ಸಮಾಜ ಬಳಸಿಕೊಳ್ಳಬೇಕಿದೆ

  • ಇದು ಒಳ್ಳೆಯ ಬೆಳವಣಿಗೆ ಈ ಬೆಳವಣಿಗೆ ಲಿಂಗಾಯತ ಧಮ೯ದ ಸೈದ್ದಾಂತಿಕ ಭದ್ರತೆಗೆ ಧಕ್ಕೆತರದಿರಲಿ ಅಥವಾ ಇಲ್ಲಿಯವರೆಗೆ ಅಖಿಲ ಭಾರತ ವೀರಶೈವ ಮಹಾಸಭಾವು ರಾಜಕಾರಣಕ್ಕಾಗಿ / ರಾಜಕೀಯ ನಾಯಕರ ಉಪಯೋಗಕ್ಕಾಗಿ ಬಳಸಲ್ಪಟ್ಟ ಸಂಘಟನೆ ,ಯಂಬ ಅಪವಾದವನ್ನು ಸರಿಪಡಿಸುವ ನಿಧಾ೯ರ ಜಾ ಲಿಂ ಮಾ ಸಂಘಟನೆಯಿಂದ ಪಡೆಯುವಂತಾದರೆ ಕನಾ೯ಟಕದ ಲಿಂಗಾಯತರು ಇಲ್ಲಿಯವರೆಗೆ ನಡೆದ ಹೋರಾಟದ ನೋವುಗಳೆಲ್ಲವನ್ನು ಮರೆತು ಒಂದಾಗಿಹೋಗಲು ಅತೀವ ಸಂತೋಷ ಪಡುತ್ತಾರೆ.

  • 🙏👍ಇದು ಒಳೆಯ ಬೆಳವಣಿಗೆ ಎಲ್ಲರು ಒಟ್ಟು ಗುಡಿಸೇರಿರುವದು ತುಂಬಾ ಸಂತೋಷದ ವಿಚಾರ ಬಸವಾದಿ ಶಿವ ಶರಣರ ಆಶೀರ್ವಾದ ಸದಾ ಇರಲಿ 🙏🙏🙏🙏

    • జైహో బసవేశ్వర శరణు శరణర్తి లింగాయత ధర్మ పెద్దలకు శరణు శరణర్తి.

  • ಸಕಾರಾತ್ಮಕ ಬೆಳವಣಿಗೆ, ಲಿಂಗಾಯಿತ ಸ್ವತಂತ್ರ ಧರ್ಮ ಬೇಡಿಕೆಗೆ ಸಹಸ್ರಾರು ಆನೆಯ ಬಲ ಬಂದಂತಾಗಿದೆ.

  • ಒಳ್ಳೆಯ ಬೆಳವಣಿಗೆ, ಎಲ್ಲಾ ಸಂಘಟನೆಗಳ ಒಗ್ಗಟ್ಟು ಹೀಗೆ ಮುಂದುವರೆಯಲಿ, ಬಸವ ಸಿದ್ದಾಂತದ ಬದ್ಧತೆಗೆ ಯಾವುದೇ ಧಕ್ಕೆ ಬಾರದಿರಲಿ ಎಂದು ಆಶಿಸುತ್ತೇವೆ. 👍🙏

Leave a Reply

Your email address will not be published. Required fields are marked *