ಬಸವನಬಾಗೇವಾಡಿ
ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಸಮಾಜದ ರಾಜ್ಯಮಟ್ಟದ 3ನೇ ಸಮ್ಮೇಳನವನ್ನು ಫೆ.2 ರಂದು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್.ಎಸ್. ಪಾಟೀಲ ಹೇಳಿದರು.
ಪಟ್ಟಣದ ಸಿದ್ಧರಾಮೇಶ್ವರ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಂಘದ ಪದಾಧಿಕಾರಿಗಳು, ಹಂಡೆವಜೀರ ಸಮಾಜ ಬಾಂಧವರು ಸಮ್ಮೇಳನದ ಸಿದ್ದತೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರು.
ಪ್ರತಿ ಹತ್ತು ವರ್ಷಕ್ಕೊಮ್ಮೆ ರಾಜ್ಯ ಸಮ್ಮೇಳನ ಆಯೋಜಿಸಲಾಗುತ್ತಿದೆ. 2004 ರಲ್ಲಿ ಬಸವನಬಾಗೇವಾಡಿ, 2014 ರಲ್ಲಿ ಶಹಾಪುರದಲ್ಲಿ ನಡೆದ ರಾಜ್ಯಮಟ್ಟದ ಸಮ್ಮೇಳನದ ಯಶಸ್ವಿಗೆ ಉತ್ತಮ ಸಹಕಾರ ದೊರಕಿತ್ತು. ಈ 3ನೇ ಸಮ್ಮೇಳನದಲ್ಲಿ 25 ಸಾವಿರಕ್ಕೂ ಹೆಚ್ಚಿನ ಸಮಾಜ ಬಾಂಧವರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.
ಕೂಡಲಸಂಗಮದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಸಮಾಜದ ಇತಿಹಾಸ ಹಾಗೂ ಸಾಧಕರ ಕುರಿತಾದ ಗೋಷ್ಠಿಗಳು ನಡೆಯಲಿವೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರು ಸಾಧಕರಿಗೆ ರಾಷ್ಟ್ರ ಮಟ್ಟದ ಹಂಡೆಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಪ್ರಶಸ್ತಿ ಫಲಕದೊಂದಿಗೆ ತಲಾ ರೂ. 25 ಸಾವಿರ ನಗದು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಸಮ್ಮೇಳನದಲ್ಲಿ ವಿವಿಧ ಗ್ರಂಥಗಳ ಬಿಡುಗಡೆ ಮಾಡಲಾಗುವುದು. ಸಮ್ಮೇಳನದ ಮುನ್ನಾದಿನ (ಫೆ.1 ರಂದು) ಗ್ರಂಥಗಳ ಪರಿಚಯ ಕುರಿತು ವಿಶೇಷ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಕಳೆದ ವರ್ಷ ರಾಜ್ಯದಲ್ಲಿ ಎಸ್.ಎಸ್. ಎಲ್.ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು ಜ.25 ರೊಳಗಾಗಿ ಆಯಾ ತಾಲ್ಲೂಕಿನ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಬಳಿ ಹೆಸರು ನೋಂದಾಯಿಸಬೇಕು. ಸರ್ಕಾರಿ ಕೋಟಾದಲ್ಲಿ ಎಂ.ಬಿ.ಬಿ.ಎಸ್ ಗೆ ಆಯ್ಕೆಯಾದ ಸಮಾಜದ ವಿದ್ಯಾರ್ಥಿಗಳನ್ನು ಸಹ ಸಮ್ಮೇಳನದಲ್ಲಿ ಸನ್ಮಾನಿಸಲಾಗುವುದು ಎಂದು ಹೇಳಿದರು.
ಸಮ್ಮೇಳನದಲ್ಲಿ ನಿಡುಮಾಮಿಡಿ ಪೀಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಕೊಟ್ಟೂರು ಪೀಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಸಾನಿಧ್ಯ ವಹಿಸುವರು. ಅವಳಿ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಗಣ್ಯರು ಸೇರಿದಂತೆ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ ಎಂದು ಪಾಟೀಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಜಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಆರ್.ಎಸ್. ಪಾಟೀಲ, ಯುವ ಘಟಕದ ಅಧ್ಯಕ್ಷ ಸಂಗನಗೌಡ ಯಂಕಂಚಿ, ಸಹಕಾರ್ಯದರ್ಶಿ ಪ್ರಭುಗೌಡ ಬೆಳ್ಳಿ, ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಮುಖಂಡರಾದ ಶೇಖರಗೌಡ ಬಿರಾದಾರ, ದೇವೇಂದ್ರ ಗೋನಾಳ ಮತ್ತಿತರರು ಇದ್ದರು./