ಈ ಲೋಕದವರಿಗೆ ಆ ಲೋಕದ ಹುಚ್ಚು ಬಿಡಿಸಿದ ಶರಣರು: ಅರಣ್ಯಾಧಿಕಾರಿ ಸಿದ್ದಯ್ಯ ಹಿರೇಮಠ

ಶಿವಮೊಗ್ಗ

ಈ ಲೋಕದವರಿಗೆ ಆ ಲೋಕದ ಹುಚ್ಚು ಬಿಡಿಸಿ, ಈ ಲೋಕವನ್ನೇ ದೇವಲೋಕವನ್ನಾಗಿ ಮಾರ್ಪಡಿಸುವ ದಾರಿ ತೋರಿದ್ದು ಬಸವಣ್ಣನವರ ವಚನಗಳು ಎಂದು ವಲಯ ಅರಣ್ಯಾಧಿಕಾರಿ ಸಿದ್ದಯ್ಯ ಹಿರೇಮಠ ಹೇಳಿದ್ದಾರೆ.

ಶಿವಮೊಗ್ಗ ಬಸವ ಕೇಂದ್ರ ಆಯೋಜಿಸಿದ್ದ ಚಿಂತನ ಕಾರ್ತಿಕದಲ್ಲಿ ‘ಲೋಕದ ಡೊಂಕ ನೀವೇಕೆ ತಿದ್ದುವಿರಿ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ಲೋಕದಲ್ಲಿ ಬದಲಾವಣೆ ಆಗಬೇಕು ಎಂಬುದು ನಿಜ. ಆದರೆ, ಅದು ಈ ಬದಲಾವಣೆ ಎಲ್ಲಿಂದ ಶುರುವಾಗಬೇಕು ಎಂಬುದನ್ನು ಶರಣರ ಪ್ರಶ್ನೆ. ಪ್ರತಿಯೊಬ್ಬರೂ ತಮ್ಮ ನಡೆ- ನುಡಿ, ತನು-ಮನ ಶುದ್ದವಾಗಿಟ್ಟು ಕೊಂಡಲ್ಲಿ ಕಲ್ಯಾಣ ರಾಜ್ಯ ಸಾಧ್ಯವಾಗಲಿದೆ ಎಂಬುದು ಬಸವಣ್ಣನವರ ಆಶಯ ಎಂದರು.

ನೆರೆಮನೆಯವರ ದುಖಃದಲ್ಲಿ ಇದ್ದಾಗ ಅವರನ್ನು ಸಂತೈಸುವುದು ಹೆಚ್ಚುಗಾರಿಕೆ ಅಲ್ಲ. ಸ್ವಸ್ಥ ಸಮಾಜದಲ್ಲಿ ಪ್ರತಿಯೊಬ್ಬರ ದುಖಃಕ್ಕೆ ಪ್ರತಿಯೊಬ್ಬರೂ ಸ್ಪಂದಿಸಬೇಕು- ಅದು ತೋರಿಕೆ ಆಗಬಾರದು ಎಂದರು. ಉತ್ಸವಗಳನ್ನು ಮಾಡುವಾಗ ತೋರುವ ಉತ್ಸಾಹ ಬೇರೆ ಸಂದರ್ಭಗಳಲ್ಲೂ ಇರಬೇಕು ಎಂದರು.

ಸಾನಿಧ್ಯ ವಹಿಸಿದ್ದ ಬಸವ ಕೇಂದ್ರದ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿ, ನಾವು ಆಚರಣೆಗೆ ತರಲಾಗದ ವಿಷಯಗಳನ್ನು ಇನ್ನೊಬ್ಬರ ಮೇಲೆ ಹೇರಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ನಮ್ಮ ಆತ್ಮಾವಲೋಕ ಮಾಡಿಕೊಳ್ಳುವ ಮೂಲಕ ವೈಯಕ್ತಿಕ ನೆಲೆಯಲ್ಲಿ ಶುದ್ಧರಾದರೆ ಇಡೀ ಸಮುದಾಯವೇ ಉತ್ತಮ ಸ್ಥಿತಿಗೆ ಬರುತ್ತದೆ ಎಂದರು.

ಬಸವಣ್ಣ ಪ್ರಜ್ಞಾಪೂರ್ವಕವಾಗಿ ಯಾರಿಗೂ ಉಪದೇಶ- ಬೋಧನೆ ಮಾಡಲಿಲ್ಲ. ನಡೆನುಡಿಗಳ ಮೂಲಕವೇ ಹೇಳಬೇಕಾಗಿದ್ದನ್ನು ಹೇಳಿದ್ದಾರೆ. ಇದೇ ನೆಲೆಯಲ್ಲಿ ಲೋಕದ ಡೊಂಕ ನೀವೇಕೆ ತಿದ್ದುವಿರಿ ಎಂದು ಹೇಳಿದ್ದಾರೆ ಎಂದು ವಿಶ್ಲೇಷಿಸಿದರು.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ, ಜಿಲ್ಲಾ ಘಟಕ ಉಪಾಧ್ಯಕ್ಷ ಎಂ. ಪಿ. ಆನಂದಮೂರ್ತಿ ಅಧ್ಯಕ್ಷತೆವಹಿಸಿದ್ದರು. ಬಸವಕೇಂದ್ರದ ಉಪಾಧ್ಯಕ್ಷರಾದ ಚಂದ್ರಪ್ಪ, ನಿವೃತ್ತ ಉಪನ್ಯಾಸಕ ಬಸವರಾಜಪ್ಪ, ಜಿ.ರುದ್ರೇಶಪ್ಪ, ಜಗದೀಶ ಕವಿ, ವೇದಿಕೆಯಲ್ಲಿದ್ದರು.

Share This Article
Leave a comment

Leave a Reply

Your email address will not be published. Required fields are marked *