ಬಸವತತ್ವದ ಗಟ್ಟಿ ಧ್ವನಿ ಡಾ. ತೋಂಟದ ಸಿದ್ಧರಾಮ ಶ್ರೀಗಳು

ಇಂದು ಶ್ರೀಗಳ ಜನ್ಮದಿನ

ಬೆಳಗಾವಿ

ಕನ್ನಡನಾಡಿನ ಅತ್ಯಂತ ಪ್ರಜ್ಞಾವಂತ ಸ್ವಾಮಿಗಳಲ್ಲಿ ಒಬ್ಬರಾಗಿರುವ ಗದುಗಿನ ಶ್ರೀ ಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರು ನಮ್ಮ ನಾಡು ಕಂಡ ಅಪರೂಪದ ಯತಿವರೇಣ್ಯರು.

ನಾಡು-ನುಡಿ, ನೆಲ-ಜಲ, ಸಂಸ್ಕೃತಿ-ಸಂಸ್ಕಾರ ಇವುಗಳ ಕುರಿತು ಅನನ್ಯ ಅಭಿಮಾನವನ್ನಿಟ್ಟುಕೊಂಡಿರುವ ಪೂಜ್ಯರು ಅಪ್ಪಟ ಬಸವಾಯತರು. ಶರಣತತ್ವವನ್ನು ಕೇವಲ ಕಂಠೋದ್ಗತ ಮಾಡಿಕೊಳ್ಳದೇ ಹೃದ್ಗತವಾಗಿಸಿಕೊಂಡಿರುವ ಪೂಜ್ಯರು ನಮ್ಮ ದಿನಮಾನದ ಅಧ್ಯಾತ್ಮಲೋಕದ ಸಾಕ್ಷಿಪ್ರಜ್ಞೆಯಾದವರು.

ಬೆಳಗಾವಿಯಂತಹ ಸೂಕ್ಷ್ಮಪ್ರದೇಶದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿದವರು. ತಮ್ಮ ಶ್ರೀಮಠದ ಮೂಲಕ ೨೦ ಸಾವಿರಕ್ಕೂ ಅಧಿಕ ಗ್ರಂಥಗಳನ್ನು ಸಂಗ್ರಹಿಸಿ ಮತ್ತು ನೂರಾರು ಗ್ರಂಥಗಳನ್ನು ಪ್ರಕಟಿಸಿ ತಮ್ಮ ಪುಸ್ತಕ ಪ್ರೀತಿಗೆ ನಿದಶ೯ನರಾದವರು.

ಕನಾ೯ಟಕದ ಶ್ರೇಷ್ಠ ನೀರಾವರಿ ತಜ್ಞರಾದ ಶ್ರೀ ಎಸ್. ಜಿ . ಬಾಳೇಕುಂದ್ರಿಯವರ ಹೆಸರನ್ನು ಯಾವ ಸರಕಾರವೂ ಗಮನಿಸದಿದ್ದಾಗ ಬಾಳೇಕುಂದ್ರಿಯವರ ಹೆಸರಿನಲ್ಲಿಯೇ ತಾಂತ್ರಿಕ ಮಹಾವಿದ್ಯಾಲಯವನ್ನು ಸ್ಥಾಪಿಸಿ ಅವರ ಹೆಸರನ್ನು ಚಿರಸ್ಥಾಯಿಯಾಗಿಸಿದವರು.

ತಾಂತ್ರಿಕ ಶಿಕ್ಷಣ ಗಗನಕುಸುಮವಾಗಿದ್ದ ಸಂದಭ೯ದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡಮಕ್ಕಳ ಬದುಕನ್ನು ಬೆಳಗುತ್ತಿರುವವರು.

ವೃದ್ಧಾಶ್ರಮವನ್ನು ಸ್ಥಾಪಿಸಿ ನೂರಾರು ಹಿರಿಯರಿಗೆ ಅನ್ನ ಆಶ್ರಯ ನೀಡಿದವರು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವನ್ನು ಬೆಳಗಾವಿಯಲ್ಲಿಯೇ ಸ್ಥಾಪಿಸುವಂತೆ ಒತ್ತಾಯಿಸಿ ಯಶಸ್ವಿಯಾದವರು.
ಅನೇಕ ರೈತಪರ, ಜೀವಪರ ಹೋರಾಟಗಳನ್ನು ಸಂಘಟಿಸಿ ಯಶಸ್ವಿಗೊಳಿಸಿದವರು.

೨೦೦೩ ರಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ೮೦ಸಾವಿರಕ್ಕೂ ಅಧಿಕ ಕನ್ನಡಾಭಿಮಾನಿಗಳಿಗೆ ಪ್ರಸಾದ ದಾಸೋಹವನ್ನು ಅತ್ಯಂತ ಅಚ್ಚುಕಟ್ಟಾಗಿ ನಿವ೯ಹಿಸಿ ಅಪಾರ ಜನಮನ್ನಣೆಗೆ ಪಾತ್ರರಾದವರು. IAS ಪರೀಕ್ಷೆಗಾಗಿ ಕನಾ೯ಟಕದಿಂದ ದೆಹಲಿಗೆ ಹೋಗುವ ಪರೀಕ್ಷಾಥಿ೯ಗಳಿಗೆ ಉಚಿತ ಆಶ್ರಯ ನೀಡುತ್ತಿರುವವರು. ನಿಗ೯ತಿಕರ, ಅಬಲರ, ನೊಂದವರ ನೋವ ನಿವಾರಿಸುವ ಮಹತ್ಕಾಯ೯ವನ್ನು ಸದ್ದಿಲ್ಲದೇ ಮಾಡುತ್ತಿರುವವರು. ಹೀಗೆ ಬರೆಯುತ್ತ ಹೋದರೆ ಸಾಧನೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ರಾಷ್ಟ್ರಸಂತರಾದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರು ಅಪಾರವಾಗಿ ಗೌರವಿಸುತ್ತಿದ್ದ ಕೆಲವೇ ಕೆಲವು ಪೂಜ್ಯರಲ್ಲಿ ಗದುಗಿನ ಪೂಜ್ಯರು ಒಬ್ಬರು. ಬದುಕು ಬರಹಗಳ ಮೂಲಕ ಸ್ವಾಮಿತ್ವದ ಘನತೆ ಗೌರವಗಳನ್ನು ಹೆಚ್ಚಿಸುತ್ತಿರುವ ಪೂಜ್ಯರು ನಮ್ಮ ದಿನಮಾನದ ಅಪರೂಪ ಯತಿಗಳು. ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರ ಸಮಗ್ರ ಸಾಹಿತ್ಯವನ್ನು ಪ್ರಕಟಿಸಲು ಸಜ್ಜಾದಾಗ ಜ್ಞಾನಭಂಡಾರವೇ ಆಗಿದ್ದ ಸಮಗ್ರ ಸಾಹಿತ್ಯವನ್ನು ಪರಿಷ್ಕರಿಸುವವರು ಯಾರು? ಎಂಬ ಪ್ರಶ್ನೆ ಬಂದಾಗ, ಸ್ವತಃ ಶ್ರೀ ಸಿದ್ಧೇಶ್ವರ ಶ್ರೀಗಳವರೇ ಸೂಚಿಸಿದ ಹೆಸರು ಗದುಗಿನ ಶ್ರೀಗಳದ್ದು. ಅತ್ಯಂತ ಶ್ರಮ ಶ್ರದ್ದೆಯಿಂದ ಆ ಕಾಯ೯ವನ್ನು ಪೂಣ೯ಗೊಳಿಸಿದ ಗದುಗಿನ ಶ್ರೀಗಳು ನಿಜಕ್ಕೂ ಅಭಿನಂದನಾಹ೯ರು.

ಬಹುಭಾಷಾ ಪ್ರವೀಣರಾದ ಪೂಜ್ಯರು ಹಿಂದಿ ಭಾಷೆಯಲ್ಲಿರುವ ಅನೇಕ ಮೌಲಿಕ ಗ್ರಂಥಗಳನ್ನು ಕನ್ನಡಕ್ಕೆ ಭಾಷಾಂತರಿಸಿ, ಪ್ರತಿಷ್ಠಿತ ಕುವೆಂಪು ಭಾಷಾ ಭಾರತಿ ಪ್ರಶಸ್ತಿಗೆ ಭಾಜನರಾದವರು. ಪೂಜ್ಯರು ಹಲವಾರು ಚಿಂತನಶೀಲ ಗ್ರಂಥಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದವರು. ಭಕ್ತಿ ಜ್ಞಾನ ವೈರಾಗ್ಯಗಳ ಸಾಕಾರರೂಪವಾದ ಪೂಜ್ಯರು ವಚನತತ್ವ ಪ್ರಸಾರಕ್ಕಾಗಿ ತಮ್ಮ ಸವ೯ಸ್ವವನ್ನೂ ಸಮಪಿ೯ಸಿದವರು.

ಶರಣ ತತ್ವದ ದಂಡನಾಯಕರಾಗಿ ತಮ್ಮ ಧೀರೋದಾತ್ತ ಚಿಂತನೆಗಳ ಮೂಲಕ ಲಕ್ಷಾಂತರ ಬಸವ ಬಂಧುಗಳ ಆರಾಧ್ಯರಾಗಿದ್ದ ಗದುಗಿನ ಜಗದ್ಗುರು ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಆತ್ಮೀಯ ಪೂಜ್ಯರಾಗಿ ಅವರ ಎಲ್ಲ ಮಹತ್ಕಾಯ೯ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಪೂಜ್ಯರು ಅವರ ಸಮಥ೯ ವಾರಸುದಾರರಾದವರು. ನನ್ನಂತಹ ಅನೇಕ ಸಾಧಕರಿಗೆ ಸುಬುದ್ಧಿಯೆಂಬ ಉದಕವನೆರೆದು ಸಲಹುತ್ತಿರುವವರು. ಆದರೆ ಪೂಜ್ಯರು ಎಂದೂ ತಮ್ಮ ಸಾಧನೆಯ ಕುರಿತು ಗಂಟೆಗಟ್ಟಲೇ ಸಂದಶ೯ನ ನೀಡಲಿಲ್ಲ, ಪತ್ರಿಕೆಗಳಲ್ಲಿ ಪುಟಗಟ್ಟಲೇ ಬರೆಯಿಸಿಕೊಳ್ಳಲಿಲ್ಲ. ಬಣ್ಣನೆಯ ದಾಹವಾಗಲಿ, ಮನ್ನಣೆಯ ಮೋಹವಾಗಲಿ ಅವರಿಗಿಲ್ಲ. ಈ ಎಲ್ಲ ಕಾರಣಕ್ಕಾಗಿಯೇ ಪೂಜ್ಯರನ್ನು ನಾಡಿನ ವಿದ್ವಜ್ಜನರೆಲ್ಲ ಅಪಾರವಾಗಿ ಗೌರವಿಸುತ್ತಾರೆ.

ಚೈತನ್ಯದ ಚಿಲುಮೆ ಸದಾಶಿವನ ಒಲುಮೆಯಾಗಿ ಸಾಥ೯ಕ ಬದುಕನ್ನು ಬದುಕುತ್ತಿರುವ ಪೂಜ್ಯರಿಗೆ ಜನ್ಮದಿನದ ಭಕ್ತಿಯ ಶುಭಾಶಯಗಳು. ‘ಯಾವ ಆಡಂಬರಕ್ಕೂ ಒಳಗಾಗದ ಪರಿಶುದ್ಧ ಭಾವ
ಭೂಮಿಮೇಲೆ ನಡೆದೇ ಭಾನುಮುಟ್ಟಿದ ದೊಡ್ಡ ಜೀವ’.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/ILsKluXiq8VG6CRftVzc2g

Share This Article
1 Comment
  • My heartiest pranamam to the honourable sacred soul on the auspicious occasion of the birthday for the services rendered to the poor children to enlighten the future of them throughout the life and works of him of kannada and border protection.Once again Pranamam to the CV eternal soul.

Leave a Reply

Your email address will not be published. Required fields are marked *

ವಿರಕ್ತಮಠ ಶೇಗುಣಸಿ, ಬೆಳಗಾವಿ