ಗದಗ:
ಬಸವಣ್ಣನವರು ಎಲ್ಲ ಸಮುದಾಯದ ಶರಣರನ್ನು ಇಂಬಿಟ್ಟುಕೊಂಡು ಸಾಗಿದರು. ಊರಲ್ಲಿ ಕಾಲಿಡಲು ಅವಕಾಶವೇ ಇಲ್ಲದಂತಹವರನ್ನು ಅನುಭವ ಮಂಟಪಕ್ಕೆ ಕರೆತಂದು, ಅವರನ್ನು ಶರಣರನ್ನಾಗಿಸಿದ ಮಹಾಮಹಿಮ ಬಸವಣ್ಣನವರೆಂದು ನಿವೃತ್ತ ಪ್ರಾಧ್ಯಾಪಕ ಎಸ್.ಎಸ್.ಹರ್ಲಾಪುರ ಹೇಳಿದರು.
ಅವರು ಬಸವ ಸಮುದಾಯ ಭವನದಲ್ಲಿ ನಡೆದ ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಟನೆಗಳ ಸಯುಕ್ತಾಶ್ರಯದಲ್ಲಿ ನಡೆದ ವಚನ ಶ್ರಾವಣ ೨೦೨೪ರ ಮಂಗಲೋತ್ಸವ,ವಚನ ನಿರ್ವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೇಲೂರು ಶ್ರೀ ಗುರ ಬಸವೇಶ್ವರ ಮಠದ ಡಾ. ಮಹಾಂತ ಬಸವಲಿಂಗ ಸ್ವಾಮಿಗಳು ಸಾನಿಧ್ಯವಹಿಸಿ ಮಾತನಾಡಿದರು.
ಕರ್ನಾಟಕ ನಾಟಕ ಅಕಾಡೆಮಿಯ ೨೪-೨೫ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಬಾಜನರಾದ ಸಾಹಿತಿ, ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ ಅವರಿಗೆ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಶರಣರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬಸವದಳ ಶರಣೆಯರಿಂದ ವಚನ ಪ್ರಾರ್ಥನೆ ನಡೆಯಿತು. ಕುಮಾರಿ ವಚನ ಆತಲಗಿ ಹಾಗೂ ಸಂಗಡಿಗರಿಂದ ವಚನ ನೃತ್ಯ,ಶರತ್ ಲಿಂಗದಾಳ ಅವರು ಧರಿಸಿದ ಬಸವಣ್ಣನವರ ವೇಷಭೂಷಣ ಎಲ್ಲರ ಗಮನ ಸೆಳೆಯಿತು.
ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ ಹಾಗೂ ಅಧ್ಯಕ್ಷತೆ ವಹಿಸಿದ್ದ ವಿ.ಕೆ.ಕರೇಗೌಡ್ರ ಮಾತನಾಡಿದರು.
ಸಂವಿಧಾನ ಪೀಠಿಕೆಯನ್ನು ಎಸ್. ಎ. ಮುಗದ ಅವರು ಬೋಧಿಸಿದರು. ಎಂ.ಬಿ. ಲಿಂಗದಾಳ ಸ್ವಾಗತಿಸಿದರು. ಪ್ರಕಾಶ ಅಸುಂಡಿ ನಿರೂಪಿಸಿದರು, ಗೌರಕ್ಕ ಬಡಿಗಣ್ಣವರ ವಂದಿಸಿದರು.
ದಾಸೋಹ ವ್ಯವಸ್ಥೆಯನ್ನು ಬಸವರಾಜ ಹಿರೇಹಡಗಲಿ ಬಂದುಗಳು ವಹಿಸಿಕೊಂಡಿದ್ದರು. ಎಲ್ಲ ಬಸವಪರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಭಾಗಿಗಳಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.