ಗಜೇಂದ್ರಗಡ
ಭೀಮಕವಿ ವಿರಚಿತ ಪ್ರಸಿದ್ಧ “ಬಸವ ಪುರಾಣ” ಪ್ರವಚನ ಪ್ರಾರಂಭೋತ್ಸವವು ಸೋಮವಾರ ಸಂಜೆ ಇಲ್ಲಿನ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ನಡೆದ ಸಮಾರಂಭದಲ್ಲಿ ಉದ್ಘಾಟನೆಗೊಂಡಿತು.
ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ ಹಾಲಕೇರಿ-ಗಜೇಂದ್ರಗಡದ ಪೂಜ್ಯ ಅನ್ನದಾನ ಮಹಾ ಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ, ಫಕೀರ ದಿಂಗಾಲೇಶ್ವರ ಸ್ವಾಮಿಗಳು ಫಕೀರೇಶ ಸಂಸ್ಥಾನ ಮಠ, ಶಿರಹಟ್ಟಿ ಇವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಅನ್ನದಾನ ಮಠದ ಪೀಠಾಧ್ಯಕ್ಷ ಮುಪ್ಪಿನ ಬಸವಲಿಂಗ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ಕೊಟ್ಟೂರು ಸ್ವಾಮಿಗಳು ದರೂರು, ಗುರುಸಿದ್ದೇಶ್ವರ ಶಿವಾಚಾರ್ಯರು ಹೊಸೂರು, ನಿರಂಜನ ಪ್ರಭುಸ್ವಾಮಿಗಳು ಗರಗನಾಗಲಾಪುರ, ಸಿದ್ದಲಿಂಗ ದೇಶಿಕರು ಸೋಮಸಮುದ್ರ, ಮರಿಕೊಟ್ಟೂರು ದೇಶಿಕರು ಶ್ರೀಧರಗಡ್ಡೆ, ವಿಶ್ವೇಶ್ವರ ದೇವರು ಸಂಗನಾಳ ಕಾರ್ಯಕ್ರಮದ ಸಮ್ಮುಖ ವಹಿಸಿದ್ದರು.
ಜಿ.ಎಸ್. ಪಾಟೀಲ ಶಾಸಕರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿದರು.

ತಿಂಗಳು ಕಾಲ ನಡೆಯುವ ಪುರಾಣ ಪ್ರವಚನವನ್ನು ಇಲಕಲ್ಲ, ಗುಡೂರಿನ ಅನ್ನದಾನ ಶಾಸ್ತ್ರಿಗಳು ಪ್ರಾರಂಭ ಮಾಡಿದರು.
ಸಂಗಮೇಶ ನೀಲಾ, ಷಣ್ಮುಖಯ್ಯ ಕಂಚಿನೆಗಳೂರ, ಸಿದ್ದೇಶಕುಮಾರ ಲಿಂಗನಬಂಡಿ ಒಳಗೊಂಡ ಕಲಾಬಳಗ ಬಸವಾದಿ ಶರಣರ ವಚನಗಳು, ಅನ್ನದಾನೇಶ್ವರರ ಹಾಡುಗಳನ್ನು ಹಾಡಿ ಪುರಾಣಕ್ಕೆ ಮೆರುಗು ತಂದರು.
ಬಸವ ಪುರಾಣ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು, ಹಲವಾರು ಸಮಾಜದ ಮುಖಂಡರು, ಗಜೇಂದ್ರಗಡ ಸುತ್ತಮುತ್ತಲಿನ ಗ್ರಾಮಗಳಿಂದ ಬಂದ ಶರಣ ಶರಣೆಯರು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಕೊನೆಗೆ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮೊದಲ ದಿನ ಹಾಲಕೆರೆ ಗ್ರಾಮದ ಬಸವಭಕ್ತರು ದಾಸೋಹ ಸೇವೆ ಸಲ್ಲಿಸಿದರು.
ಪಾದಯಾತ್ರೆ
ಪ್ರತಿದಿನ ಮುಂಜಾನೆ ಅನ್ನದಾನೇಶ್ವರ ಮಠದ ಪೂಜ್ಯ ಮುಪ್ಪಿನ ಬಸವಲಿಂಗ ಸ್ವಾಮಿಗಳ ನೇತೃತ್ವದಲ್ಲಿ, ಪುರಾಣ ಸಮಿತಿ ಮುಖಂಡರು ಒಳಗೊಂಡು, ಪಟ್ಟಣದ ಬೇರೆ ಬೇರೆ ವಾರ್ಡ್ ಗಳಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪುರಾಣ ಕಾರ್ಯಕ್ರಮಕ್ಕೆ ಆಗಮಿಸಲು ಜನರನ್ನು ಈ ಮೂಲಕ ಕೋರಲಾಗುತ್ತಿದೆ.
ಬಸವಜ್ಯೋತಿ ಯಾತ್ರೆ
ಸೋಮವಾರ ಮುಂಜಾನೆ ಗಜೇಂದ್ರಗಡ ಪಟ್ಟಣದಲ್ಲಿ ಬಸವ ಜ್ಯೋತಿ ಯಾತ್ರೆ ಅದ್ಧೂರಿಯಾಗಿ ನಡೆಯಿತು.
ಹಾನಗಲ್ಲ ಕುಮಾರಸ್ವಾಮಿಗಳು ಸ್ಥಾಪಿತ ಶಿವಯೋಗ ಮಂದಿರದಿಂದ ತರಲಾದ ಬಸವ ಜ್ಯೋತಿಯನ್ನು, ಕುಂಬಾರ ಓಣಿಯಲ್ಲಿರುವ ಅನ್ನದಾನೇಶ್ವರ ಮಠದಿಂದ ಪ್ರಾರಂಭಗೊಳಿಸಲಾಯಿತು. ನಾಡಿನ ಜಾನಪದ ಕಲಾ ತಂಡಗಳೊಂದಿಗೆ, ಪ್ರಮುಖ ಬೀದಿಗಳ ಮುಖಾಂತರ ಪುರಾಣ ವೇದಿಕೆಗೆ ಪವಿತ್ರ ಬಸವ ಜ್ಯೋತಿಯ ಆಗಮನವಾಯಿತು. ಹಾಲಕೆರೆ ಅನ್ನದಾನ ಮಠ ಪೀಠಾಧ್ಯಕ್ಷ ಮುಪ್ಪಿನ ಬಸವಲಿಂಗ ಸ್ವಾಮಿಗಳು, ಇನ್ನಿತರ ಪೂಜ್ಯರು, ಪುರಾಣ ಸಮಿತಿ ಪದಾಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಗಳ ಹಾಗೂ ಗಜೇಂದ್ರಗಡ ಪಟ್ಟಣದ ಶರಣ, ಶರಣೆಯರು ಮೆರವಣಿಗೆಯಲ್ಲಿ ಬಸವಾದಿ ಶರಣರಿಗೆ ಜಯಘೋಷ ಹಾಕುತ್ತಾ, ಭಕ್ತಿ ಭಾವದಿಂದ ಹೆಜ್ಜೆ ಹಾಕಿದರು.



