ಕಲಬುರಗಿ
ಗಂಡನನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಮಹಿಳೆಗೆ ಮೊಟ್ಟ ಮೊದಲು ಸ್ವಾತಂತ್ರ್ಯ ಒದಗಿಸಿಕೊಟ್ಟ ಮೊದಲ ಮಹಿಳೆ ಶರಣೆ ಅಕ್ಕಮಹಾದೇವಿ. ಮಹಿಳೆ ಮದುವೆಯಾಗದಿದ್ದರೂ ಮೋಕ್ಷ ದೊರೆಯುತ್ತದೆ ಎಂಬುದನ್ನು ಸಾರಿದ ದಿಟ್ಟ ಮಹಿಳೆ ಎಂದು ಶರಣ ಚಿಂತಕಿ ಡಾ. ಮೀನಾಕ್ಷಿ ಬಾಳಿ ಹೇಳಿದರು.
ನಗರದ ಕೊಠಾರಿ ಭವನದ ಕಲ್ಯಾಣ ಮಂಟಪದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಯಂತಿ ಉತ್ಸವ ಕೇವಲ ಆಡಂಬರದ ಪ್ರದರ್ಶನವಾಗದೆ ಅವರ ತತ್ವ ಆದರ್ಶಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ಸಮಸ್ಯೆಗಳಾದ ವರದಕ್ಷಿಣೆ, ಮೌಢ್ಯ, ಕಂದಾಚಾರಗಳ ಬಗ್ಗೆ ಮಹಿಳೆಯರು ಜಾಗೃತರಾಗಿ ಲಿಂಗ ಸಮಾನತೆ ಮಹಿಳಾ ಹಕ್ಕುಗಳ ಬಗ್ಗೆ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಅಕ್ಕಮಹಾದೇವಿಯ ಜಯಂತಿ ಜೊತೆಗೆ ಮಾಸಿಕ ಶರಣ ಸಂಗಮ ಶೀರ್ಷಿಕೆ ಆಡಿಯಲ್ಲಿ ಈ ತಿಂಗಳಲ್ಲಿ ಬರುವ ಶಿವಶರಣರ ಮತ್ತು ಮಹನೀಯರಾದ ಜೇಡರ ದಾಸಿಮಯ್ಯ, ಸಮಗಾರ ಹರಳಯ್ಯ, ತುಮಕೂರು ಸಿದ್ದಗಂಗಾ ಮಠದ ಲಿಂ. ಪೂಜ್ಯಶ್ರೀ ಶಿವಕುಮಾರ ಸ್ವಾಮಿಗಳು ಹಾಗೂ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಜಯಂತಿ ಆಚರಿಸಿ ಪುಷ್ಪ ನಮನ ಸಲ್ಲಿಸಿ ಅವರು ವಹಿಸಿದ ಪಾತ್ರಗಳ ಬಗ್ಗೆ ಮೆಲಕು ಹಾಕಲಾಯಿತು.

ಇದೇ ವೇಳೆ ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಮಧ್ಯಾಹ್ನದ ನಡೆದ ಗೋಷ್ಠಿಯಲ್ಲಿ ಶರಣಬಸವ ವಿದ್ಯಾವರ್ಧಕ ಸಂಘದ ಪೂಜ್ಯ ಡಾ. ದಾಕ್ಷಾಯಿಣಿ ಅಪ್ಪಾ ಅವರು ಮಾತನಾಡಿ, ಅಕ್ಕಮಹಾದೇವಿಯ ಸಮೀಕರಿಸಿ ಮಹಿಳೆಯರು ಧೈರ್ಯ ತ್ಯಾಗ ಮತ್ತು ಸಮರ್ಪಣೆಯಿಂದ ಸಮಾಜ ಮುನ್ನಡೆಸುವಲ್ಲಿ ಕಾರ್ಯತತ್ಪರರಾಗಬೇಕೆಂದು ಕರೆ ನೀಡಿದರು.
ವೇದಿಕೆಯ ಮೇಲೆ ಅನಸೂಯಾ ನಡಕಟ್ಟಿ, ಡಾ. ಶಕುಂತಲಾ ದುರ್ಗಿ, ಡಾ. ಶೀಲಾ ಸಿದ್ದರಾಮ, ಡಾ. ಕಾವ್ಯಶ್ರೀ ಮಹಾಗಾಂವಕರ, ಪೂಜ್ಯಶ್ರೀ ಪ್ರಭುತಾಯಿ, ಡಾ. ವಿಲಾಸವತಿ ಖೂಬಾ, ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ, ಜಾಹ್ನವಿ ಮೋದಿ, ಪೂರ್ಣಿಮಾ ನಮೋಶಿ, ಮಹಿಳಾ ಘಟಕದ ಅಧ್ಯಕ್ಷೆ ನಳಿನಿ ಮಹಾಗಾಂವಕರ, ಕಾರ್ಯದರ್ಶಿ ಜಯಶ್ರೀ ಕೋಣಿನ, ಸುಲೇಖಾ ಮಾಲಿಪಾಟೀಲ, ಶಾರದಾ ಜಂಬಲದಿನ್ನಿ, ಶೀಲಾ ಕಾಮಶೆಟ್ಟಿ, ಉಷಾ ಸಜ್ಜನ, ಛಾಯಾ ಪಟ್ಟಣಶೆಟ್ಟಿ, ಬಸಮ್ಮ ಕಿರಣಗಿ, ಸಾವಿತ್ರಿ ಪಾಲಕಿ, ಶಾರದಾ ಓಗಿ, ರೇಣುಕಾ ಡಾಂಗೆ, ಸಾಕ್ಷಿ ಸತ್ಯಂಪೇಟೆ, ನೀಲಾಂಬಿಕಾ ವಿ.ಎಸ್. ಇತರರು ಇದ್ದರು.
ನಂತರ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಅವರು ತಮ್ಮ ಹಾಸ್ಯ ಚಟಾಕಿ ಮೂಲಕ ಸಭಿಕರನ್ನು ರಂಜಿಸಿದರು.