ಪರಶುರಾಮ ವಾಗ್ಮೋರೆ ಹಾಗೂ ಮನೋಹರ ಯಡವೆಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಲಾಯಿತು.
ವಿಜಯಪುರ
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದು ತವರಿಗೆ ಆಗಮಿಸಿದ ವಿಜಯಪುರದ ಇಬ್ಬರು ಆರೋಪಿಗಳಿಗೆ ಶನಿವಾರ ಸಂಘಪರಿವಾರದ ಕಾರ್ಯಕರ್ತರು ಸನ್ಮಾನಿಸಿ ಅದ್ದೂರಿ ಸ್ವಾಗತ ಕೋರಿದರು.
ಇಬ್ಬರು ಆರೋಪಿಗಳು, ಪರಶುರಾಮ ವಾಗ್ಮೋರೆ ಹಾಗೂ ಮನೋಹರ್ ಯಡವೆ, ನಗರದ ಕಾಳಿಕಾ ಮಂದಿರದಲ್ಲಿ ಪೂಜೆ ಮಾಡಿ ಪ್ರಾರ್ಥಣೆ ಸಲ್ಲಿಸಿದರು. ಬಳಿಕ ಪರಶುರಾಮ ವಾಗ್ಮೋರೆ ಹಾಗೂ ಮನೋಹರ ಯಡವೆಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಲಾಯಿತು.
ನಂತರ ಶಿವಾಜಿ ವೃತ್ತಕ್ಕೆ ತೆರಳಿ ಶಿವಾಜಿ ಮೂರ್ತಿಗೆ ಹಾರ ಹಾಕಿದರು. ಇದೇ ವೇಳೆ ಮಾತನಾಡಿದ ಶ್ರೀರಾಮ ಸೇನೆಯ ಮುಖಂಡ ನೀಲಕಂಠ ಕಂದಗಲ್ ಗೌರಿ ಲಂಕೇಶ ಹತ್ಯೆಯಲ್ಲಿ ಪರಶುರಾಮ ಹಾಗೂ ಮನೋಹರ್ ಭಾಗಿಯಾಗಿಲ್ಲ. ಹಿಂದೂ ಪರ ಹೋರಾಟಗಾರರನ್ನು ಕಾಂಗ್ರೆಸ್ ಸರ್ಕಾರ ಟಾರ್ಗೆಟ್ ಮಾಡುತ್ತಿದೆ. ಸಾದ್ವಿ ಪ್ರಜ್ಞಾಸಿಂಗ್ಗೆ ವಿನಾ ಕಾರಣ ಬಂಧಿಸಲ್ಪಟ್ಟಿದ್ದರು. ಅವರಿಗೆ ಹಿಂಸೆ ನೀಡಲಾಗಿತ್ತು. ಅವರು ನಿರಪರಾಧಿಗಳಾಗಿ ಹೊರಗೆ ಬಂದಂತೆ ನಮ್ಮ ಜಿಲ್ಲೆಯ ಪರಶುರಾಮ ಹಾಗೂ ಮನೋಹರ್ ನಿರಪರಾಧಿಗಳಾಗಿ ಬಿಡುಗಡೆಯಾಗಿ ಬರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಕರಣದಲ್ಲಿ ಬಂಧಿತರಾಗಿದ್ದ ಪರಶುರಾಮ ವಾಗ್ಮೋರೆ ಹಾಗೂ ಮನೋಹರ್ ಯಡವೆ ಅವರಿಗೆ ಸುಮಾರು ಆರೂವರೆ ವರ್ಷಗಳ ಬಳಿಕ 2024ರ ಅ.11ರಂದು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿತ್ತು. ಅ.11ರಂದೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದ ಆರೋಪಿಗಳು ನೇರವಾಗಿ ವಿಜಯಪುರಕ್ಕೆ ಆಗಮಿಸಿದರು.
2017ರ ಸಪ್ಟೆಂಬರ್ 5ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿನ ದಾಳಿಯಿಂದ ಹತ್ಯೆ ಮಾಡಲಾಗಿತ್ತು. ಬಳಿಕ ವಿಜಯಪುರದ ಸಿಂದಗಿ ಪಟ್ಟಣದ ಬಸವನಗರ ನಿವಾಸಿ ಪರಶುರಾಮ್ ವಾಗ್ಮೋರೆ ಹಾಗೂ ಜಯಪುರ ತಾಲೂಕಿನ ರತ್ನಾಪೂರ ಗ್ರಾಮದ ಮನೋಹರ ಯಡವೆ ಎಂಬುವರನ್ನು ಗೌರಿ ಲಂಕೇಶ್ ಹತ್ಯೆ ಆರೋಪದ ಮೇಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ(ಎಸ್‌ಐಟಿ) ಬಂಧಿಸಿತ್ತು. ಗೌರಿ ಲಂಕೇಶ್ ಹತ್ಯೆಯಲ್ಲಿ ಒಟ್ಟು 25 ಜನ ಆರೋಪಿಗಳನ್ನು ಎಸ್‌ಐಟಿ ಬಂಧಿಸಿತ್ತು.
ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೂ ಆರೋಪಿಗಳಿಗೆ ಜಾಮೀನು ಸಿಕ್ಕಿರಲಿಲ್ಲ. ಗೌರಿ ಲಂಕೇಶ್ ಹತ್ಯೆ ನಂತರದಲ್ಲಿ ಸುಮಾರು ಆರುವರೆ ವರ್ಷಗಳ ಬಳಿಕ 25 ಜನ ಆರೋಪಿಗಳಲ್ಲಿ 18 ಜನರಿಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದ್ದು, ಇನ್ನೂ 7ಮಂದಿ ಆರೋಪಿಗಳಿಗೂ ಜಾಮೀನು ಸಿಗಲಿದೆ ಎನ್ನಲಾಗಿದೆ.
ಆಗಸ್ಟ್ ತಿಂಗಳಲ್ಲಿ ‘ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಜಾಮೀನು ಮೇಲೆ ಹೊರಬಂದಿದ್ದ ಮತ್ತೊಬ್ಬ ಆರೋಪಿ ಮದ್ದೂರು ನವೀನ್‌ರನ್ನು ಪ್ರತಾಪ್ ಸಿಂಹ ಭೇಟಿಯಾಗಿ ವಿವಾದ ಸೃಷ್ಟಿಸಿದ್ದರು.