ಬೆಂಗಳೂರು
ಪತ್ರಕರ್ತೆ ಮತ್ತು ಹೋರಾಟಗಾರ್ತಿ ಗೌರಿ ಲಂಕೇಶ್ ಅವರ 8ನೇ ಪುಣ್ಯಸ್ಮರಣೆಯನ್ನು ಇಂದು ಬೆಂಗಳೂರಿನ ಚಾಮರಾಜಪೇಟೆ ರುದ್ರಭೂಮಿಯ ಅವರ ಸಮಾಧಿ ಬಳಿ “ಗೌರಿ ನುಡಿನಮನ” ಕಾರ್ಯಕ್ರಮದ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವೆ ಹಾಗೂ ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ್, ಗೌರಿ ಲಂಕೇಶ್ ಅವರು ಸತ್ಯ ಮತ್ತು ನ್ಯಾಯಕ್ಕಾಗಿ ಗುಂಡೇಟಿಗೆ ಬಲಿಯಾದರೂ, ಅವರ ಹೋರಾಟ ಮತ್ತು ಆದರ್ಶಗಳು ಎಂದಿಗೂ ಜೀವಂತವಾಗಿವೆ ಎಂದು ಹೇಳಿದರು.

ಪ್ರತಿ ವರ್ಷ ಸೆಪ್ಟೆಂಬರ್ 5ರಂದು ನಡೆಯುವ ಈ ಕಾರ್ಯಕ್ರಮದಲ್ಲಿ, ಗೌರಿ ಲಂಕೇಶ್ ಅವರ ನಿಷ್ಠೆ, ಬದ್ಧತೆ ಮತ್ತು ನಿರ್ಭೀತ ಹೋರಾಟವನ್ನು ಸ್ಮರಿಸಲಾಯಿತು. ಈ ಬಾರಿ ಸೆ.5ರ ಬದಲು ಸೆ.6ರಂದು ಗೌರಿ ನುಡಿನಮನ ಕಾರ್ಯಕ್ರಮವನ್ನು ಆಚರಿಸಲಾಯಿತು. “ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಮೃತಪಟ್ಟರೆ, ಅವರನ್ನು ಸ್ಮರಿಸಲು ಕೇವಲ ಕಲ್ಲಿನ ಸಮಾಧಿಗಳು ಮಾತ್ರ ಉಳಿಯುತ್ತವೆ. ಆದರೆ, ಗೌರಿ ಅವರು ನಮ್ಮೆಲ್ಲರ ಮನಸ್ಸಿನಲ್ಲಿ ಸದಾ ನೆಲೆಸಿದ್ದಾರೆ. ಇದಕ್ಕೆ ಕಾರಣ, ಅವರು ತಾವು ನಂಬಿದ ಸಿದ್ಧಾಂತಕ್ಕೆ, ತತ್ವಕ್ಕೆ ಕೊನೆಯವರೆಗೂ ಅಂಟಿಕೊಂಡಿದ್ದ ಬದ್ಧತೆ. ಸತ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧರಾದ ಅವರ ಧೈರ್ಯ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ” ಎಂದು ಬಿ.ಟಿ.ಲಲಿತಾ ನಾಯಕ್ ತಿಳಿಸಿದರು.

ಅವರು ಮುಂದುವರೆದು, “ಗೌರಿ ಅವರ ಜೊತೆ ಜನರು ಇದ್ದರು, ಅವರ ನಂತರದ ಪೀಳಿಗೆಯೂ ಇದೆ. ಅವರು ಕೇವಲ ಪತ್ರಕರ್ತೆಯಾಗಿರಲಿಲ್ಲ, ಬದಲಿಗೆ ಸತ್ಯಪ್ರತಿಪಾದಕಿಯಾಗಿ, ಬಂಡಾಯದ ಪ್ರತೀಕವಾಗಿ ಘಮಘಮಿಸುತ್ತಲೇ ಇರುತ್ತಾರೆ. ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಅನಾಹುತಗಳನ್ನು ಪ್ರಶ್ನಿಸಲು, ಸತ್ಯವನ್ನು ನಿರ್ಭೀತಿಯಿಂದ ಹೊರತರಲು ಗೌರಿ ಲಂಕೇಶ್ ತೋರಿಸಿದ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು. ಯಾವುದೇ ಪ್ರಭಾವಕ್ಕೆ, ಯಾವುದೇ ಹಂಗಿಗೂ ಒಳಗಾಗದೆ, ನ್ಯಾಯ ಮತ್ತು ಸತ್ಯಕ್ಕಾಗಿ ಹೋರಾಡುವ ಮನೋಭಾವವನ್ನು ನಾವು ರೂಢಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಮ್ಮ ಎದೆಗೆ ಗುಂಡೇಟು ಬಿದ್ದರೂ ಚಿಂತೆಯಿಲ್ಲ ಎಂಬ ರೀತಿಯಲ್ಲಿ ಸತ್ಯಶೋಧಕರಾಗಿ ನಾವು ಮುನ್ನಡೆಯಬೇಕು. ಗೌರಿ ಅವರು ನಮಗೆ ಇದೇ ಸಂದೇಶವನ್ನು ನೀಡಿದ್ದಾರೆ. ನಾವು ಈ ಸಂದೇಶಕ್ಕೆ ಬದ್ಧರಾಗಿರೋಣ” ಎಂದು ಹೇಳಿದರು. ಗೌರಿ ಲಂಕೇಶ್ ಅವರ ಆದರ್ಶಗಳಿಗೆ ಬದ್ಧರಾಗಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಅವರು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ಆರಂಭದಲ್ಲಿ ರಮೇಶ್ ಗಬ್ಬೂರು ರಚನೆಯ ಈ ಕೆಳಗಿನ ಹೋರಾಟ ಗೀತೆಯನ್ನು ಕೆವಿಎಸ್‌ನ ಗುರುಬಸವ ಮತ್ತು ಸಂಗಡಿಗರು ಹಾಡಿದರು.
ಬಿತ್ತುವ ಪ್ರೀತಿಯ ಅರ್ಥವ ಅರಿಯದೆ
ಗುಂಡು ಹೊಡೆದಿರಿ
ತೂರಿದ್ದು ಗೌರಿಗೆ ತಾಕಿದ್ದು ನಮ್ಮೆದೇಗೆ
ನೂರು ಗುಂಡುಗಳು ತೂರಿ ಬಂದರು
ಗುಡುಗುಡು ಗುಡುಗುಡು ಗುಡುಗುವೆವು
ಅಂದು ಬುದ್ಧ ಬಸವಣ್ಣ
ಇಂದು ಭೀಮನ ಮಕ್ಕಳು ನಾವಣ್ಣ
ಗಾಂಧಿಯಿಂದ ಗೌರಿಯವರೆಗೆ
ಶಾಂತಿ ಸಾರಿದವರು ಯಾರಣ್ಣ //ತೂರಿದ್ದು//
ಅಂದು ದಾಬೋಲ್ಕರ್ ಪನ್ಸಾರೆ
ಇಂದು ಕಲಬುರ್ಗಿ ಗೌರಿಯು
ಮುಂದೆ ನಾವಿರುವೆವು
ನಿಮ್ಮ ಗುಂಡಿಗೆ ಎದೆಗೊಟ್ಟು //ತೂರಿದ್ದು//

ಈ ಕಾರ್ಯಕ್ರಮದಲ್ಲಿ ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್, ದಿನೇಶ್ ಅಮಿನ್ ಮಟ್ಟು, ಡಾ. ವಿಜಯಮ್ಮ, ಶಿವಸುಂದರ್, ಕೆ.ಬಾಲು, ವಿ.ಆರ್. ಕಾರ್ಪೆಂಟರ್, ಅಂಬಣ್ಣ ಅರೋಲಿಕರ್, ವಿ.ಎಸ್. ಶ್ರೀಧರ್, ದೊಡ್ಡಿಪಾಳ್ಯ ನರಸಿಂಹಮೂರ್ತಿ, ಕೆ.ಎಲ್. ಅಶೋಕ್, ನೂರ್ ಶ್ರೀಧರ್ ಮತ್ತು ರಾಜಲಕ್ಷ್ಮಿ ಅಂಕಲಗಿ, ಸುನೀಲ್ ಸಿರಸಂಗಿ, ಸಿರಿಮನೆ ನಾಗರಾಜ್, ಹೇಮಕ್ಕ ಸಿರಿಮನೆ ಸೇರಿದಂತೆ ಅನೇಕ ಗಣ್ಯರು, ಹೋರಾಟಗಾರರು, ಪತ್ರಕರ್ತರು ಹಾಗೂ ಗೌರಿ ಲಂಕೇಶ್ ಅಭಿಮಾನಿಗಳು ಭಾಗವಹಿಸಿದ್ದರು.
(ವರದಿ ಚಿತ್ರ ಕೃಪೆ ನಾನು ಗೌರಿ/naanugauri.com)