ಅಂಗೈ ಬಿಸಿಯಾಗಿ, ಮನಸ್ಸು ಶಾಂತವಾಯಿತು: ಇಷ್ಟಲಿಂಗ ದೀಕ್ಷೆ ಪಡೆದ ಜರ್ಮನಿಯ ಶೇನೈ ಗಾಲ್

ಎಂ. ಎ. ಅರುಣ್
ಎಂ. ಎ. ಅರುಣ್

“ಬಸವಣ್ಣನವರ ಸಾಧನೆ ಅದ್ಬುತ. ಆದರೆ ಇದೆಲ್ಲ ನನಗೆ ಹೊಸದು, ನಾನಿನ್ನೂ ಕಲಿಯಬೇಕು.”

ಬೆಂಗಳೂರು

ಜರ್ಮನಿಯ ಬರ್ಲಿನ್ ನಗರದ ನಿವಾಸಿ 55-ವರ್ಷದ ಶೇನೈ ಗಾಲ್ ಶಿವರಾತ್ರಿಯ ದಿನ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಸ್ವಾಮಿಯವರಿಂದ ಇಷ್ಟಲಿಂಗ ದೀಕ್ಷೆ ಪಡೆದುಕೊಂಡರು.

ಸದ್ಯ ಕೇರಳದಲ್ಲಿರುವ ಶೇನೈ ಅವರಿಗೆ ಕರೆ ಮಾಡಿದಾಗ ಅವರ ಬಾಯಿಂದ ಬಂದ ಮೊದಲ ಪದ ‘ಶರಣು ಶರಣಾರ್ಥಿಗಳು’. (ಅವರು ಬಸವ ಮೀಡಿಯಾದಿಂದ ಕರೆ ಬರುವ ನಿರೀಕ್ಷೆಯಲ್ಲಿದ್ದರು. ಬಸವ ತತ್ವದವರು ಒಬ್ಬರಿಗೊಬ್ಬರು ನಮಸ್ಕಾರದ ಬದಲು ಶರಣು ಎನ್ನುವುದೂ ಅವರಿಗೆ ಗೊತ್ತಿತ್ತು.)

ಶಿವರಾತ್ರಿಯ ದಿನ ತಾವು ಪಡೆದ ಇಷ್ಟಲಿಂಗ ದೀಕ್ಷೆ ಯಾವದೇ ಪೂರ್ವ ಸಿದ್ಧತೆಯಿಲ್ಲದೆ, ಪೂರ್ವ ಆಲೋಚನೆಯಿಲ್ಲದೆ ಅನಿರೀಕ್ಷಿತವಾಗಿ ನಡೆದ ಘಟನೆ, ಎಂದು ಶೇನೈ ಹೇಳಿದರು.

ಫೆಬ್ರವರಿಯಲ್ಲಿ ಅವರು ಬೀದರಿಗೆ ಬಂದು ತಮಗೆ ಯೋಗ ಕಲಿಸಿದ್ದ ಕವಿತಾ ಹಂಗರಗಿ ಅವರ ಮನೆಯಲ್ಲಿ ಉಳಿದುಕೊಂಡು ಅಲ್ಲಿ ಇದ್ದವರೆಲ್ಲಾ ವಿಭೂತಿಯಿಡುವುದು, ಲಿಂಗ ಪೂಜೆ ಮಾಡುವುದನ್ನು ನೋಡಿದ್ದರು.

“ಇವರಿಗಲ್ಲಾ ಪೂಜೆಯೆಂದರೆ ಒಂದು ನಿರ್ದಿಷ್ಟ ಸಮಯದಲ್ಲಿ ಮಾಡುವ ವಿಧಿಯಲ್ಲ. ಪ್ರತಿ ನಿತ್ಯ, ಪ್ರತಿ ಗಳಿಗೆ ನಡೆನುಡಿಯಲ್ಲಿ ವ್ಯಕ್ತವಾಗುವ ಆಳವಾದ ನಂಬಿಕೆ, ಒಂದು ಜೀವನ ಶೈಲಿಯಾಗಿ ತೋರಿತು. ಅದು ನನಗೆ ಇಷ್ಟವಾಯಿತು,” ಎಂದು ಶೇನೈ ಹೇಳಿದರು.

ಆರು ವರ್ಷಗಳ ಹಿಂದೆ ಯೋಗ ಕಲಿಯಲು ಕೇರಳಕ್ಕೆ ಬಂದಿದ್ದಾಗ ಅವರಿಗೆ ಕವಿತಾ ಪರಿಚಯವಾಗಿತ್ತು. ಅಲ್ಲಿ ಕವಿತಾ ಅವರ ಕೊರಳಲ್ಲಿ ಇದ್ದ ಲಿಂಗ, ಯಾವಾಗಲೂ ಧರಿಸುತ್ತಿದ್ದ ವಿಭೂತಿಗಳನ್ನು ಶೇನೈ ಆಸಕ್ತಿಯಿಂದ ಗಮನಿಸಿದ್ದರು.

ಕವಿತಾ ಅವರು ಲಿಂಗ ಪೂಜೆ ಮಾಡದೇ ಏನನ್ನೂ ತಿನ್ನುವುದಿಲ್ಲ ಎಂದು ತಿಳಿದಾಗ ಶರಣ ಪರಂಪರೆಯ ಮೇಲೆ ಶೇನೈ ಆವರಿಗೆ ಮತ್ತಷ್ಟು ಕುತೂಹಲ ಮೂಡಿತು. ಆಗ ಅವರಿಗೆ ಬಸವಣ್ಣ, ಇಷ್ಟಲಿಂಗ, ಕಲ್ಯಾಣ, ಶರಣ ಚಳುವಳಿಗಳನ್ನು ಕವಿತಾ ಪರಿಚಯ ಮಾಡಿಕೊಟ್ಟಿದ್ದರು.

“ಸಮಾಜದಲ್ಲಿ ಸಮಾನತೆ ಪ್ರತಿಪಾದಿಸಿದ, ವಿಶ್ವದ ಮೊದಲ ಸಂಸತ್ತು ಅನುಭವ ಮಂಟಪ ಕಟ್ಟಿದ ಬಸವಣ್ಣನವರ ಸಾಧನೆ ಅದ್ಬುತ. ಆದರೆ ಇದೆಲ್ಲ ನನಗೆ ಹೊಸದು, ನಾನಿನ್ನೂ ಕಲಿಯಬೇಕು,” ಎಂದು ಶೇನೈ ಹೇಳಿದರು.

ಕಳೆದ ಡಿಸೆಂಬರಿನಲ್ಲಿ ಕವಿತಾ ಅವರು ಯೋಗ ಶಿಬಿರ ನಡೆಸಲು ಜರ್ಮನಿಗೆ ಹೋಗಿದ್ದರು. ಅಲ್ಲಿ ಶೈನಿ ಅವರೊಂದಿಗೆ ಒಡನಾಟ ಮತ್ತಷ್ಟು ಹೆಚ್ಚಿತು. ಅವರು ಭಾರತಕ್ಕೆ ಹಿಂತಿರುಗಿದ ಬಂದ ಕೆಲವೇ ದಿನಗಳಲ್ಲಿ ಶೇನೈ ಕೂಡ ಬಸವಣ್ಣನವರನ್ನು ಹತ್ತಿರದಿಂದ ಅರಿಯಲು ಬೀದರಿಗೆ ಬಂದಿಳಿದರು.

ಅವರಿಗೆ ಲಿಂಗಾಯತ ಧರ್ಮದ ತತ್ವ ಆಚರಣೆಗಳನ್ನು ಕವಿತಾ ಮತ್ತಷ್ಟು ಪರಿಚಯ ಮಾಡಿಕೊಟ್ಟರು. ಅಕ್ಕ ಅನ್ನಪೂರ್ಣ ತಾಯಿಯವರು ಬಸವ ತತ್ವವನ್ನು ಪ್ರಚಾರ ಮಾಡಿದ ರೀತಿ, ವ್ಯಕ್ತಿಗಳ ಬದಲು ವಚನಗಳನ್ನು ಪೀಠದ ಮೇಲಿಟ್ಟು ಪೂಜಿಸಿದ್ದನ್ನು, ತಲೆಯ ಮೇಲೆ ಹೊತ್ತು ಗೌರವಿಸಿದುದು ಶೇನೈ ಅವರ ಮೇಲೆ ಪ್ರಭಾವ ಬೀರಿದವು.

ಬೀದರಿನಲ್ಲಿ ಲಿಂಗಾಯತ ಮಹಾಮಠದ ಪೂಜೆಗಳಲ್ಲಿ ಪಾಲ್ಗೊಂಡಿದ್ದು ವಿಶಿಷ್ಟ ಅನುಭವವಾಯಿತು. ಅಲ್ಲಿ ಎಲ್ಲರೂ ತನ್ಮಯರಾಗಿ ಮಾಡಿಕೊಳ್ಳುತ್ತಿದ್ದ ಇಷ್ಟಲಿಂಗ ಪೂಜೆ, ಸಾಮೂಹಿಕವಾಗಿ ಸೃಷ್ಟಿಯಾಗುತ್ತಿದ್ದ ಸಾತ್ವಿಕ ಶಕ್ತಿ ಅವರನ್ನು ಶರಣ ಪರಂಪರೆಗೆ ಮತ್ತಷ್ಟು ಸೆಳೆಯಿತು.

ಶಿವರಾತ್ರಿಯ ದಿನದ ಪೂಜೆಯಲ್ಲಿ ಪಾಲ್ಗೊಂಡಾಗ ಶೇನೈ ಅವರ ಆಸಕ್ತಿಯನ್ನು ನೋಡಿ ಅವರು ಇಷ್ಟಲಿಂಗ ದೀಕ್ಷೆ ಪಡೆಯಲು ಪಕ್ವವಾಗಿದ್ದಾರೆ ಎಂದು ಕವಿತಾ ಅವರಿಗೆ ಅನಿಸಿತು. ಅವರ ಸಲಹೆಯನ್ನು ತಕ್ಷಣ ಒಪ್ಪಿಕೊಂಡು ಶೇನೈ ಪ್ರಭುದೇವ ಶ್ರೀಗಳಿಂದ ದೀಕ್ಷೆ ಪಡೆದರು.

ಇಷ್ಟಲಿಂಗವನ್ನು ಕೈಯಲ್ಲಿ ಹಿಡಿದಾಗ ಏನನಿಸಿತು?

ಬರ್ಲಿನ್ ನಗರದಲ್ಲಿ ಶೇನೈ ಅವರ ಜೊತೆ ಕವಿತಾ

“ಮೊದಲ ಬಾರಿಗೆ ಇಷ್ಟಲಿಂಗ ಪೂಜೆ ಮಾಡುತ್ತಿದ್ದರಿಂದ ಕೈಯನ್ನು ಹೆಚ್ಚು ಹೊತ್ತು ಎತ್ತಿ ಹಿಡಿಯಲು ಕಷ್ಟವಾಗಬಹುದು, ಬೇಕಾದರೆ ಯಾವುದಾದರ ಮೇಲೆ ಕೈಯಿಟ್ಟುಕೊಳ್ಳಿ ಅಂತ ಕೆಲವರು ಸಲಹೆ ನೀಡಿದ್ದರು. ಆದರೆ ಕೈಯನ್ನು ಎತ್ತಿ ಹಿಡಿದಿಟ್ಟುಕೊಳ್ಳಲು ನನಗೆ ಯಾವುದೇ ಕಷ್ಟವಾಗಲಿಲ್ಲ,” ಎಂದು ಶೇನೈ ಹೇಳಿದರು.

“ನಾನು ದೀಕ್ಷೆ ಪಡೆದ ಸ್ಥಳದಲ್ಲಿ ಬಹಳ ಜನರಿದ್ದರು, ಗದ್ದಲವಿತ್ತು. ಅದೆಲ್ಲಾ ಕಿವಿಯ ಮೇಲೆ ಬೀಳುತ್ತಿದ್ದರೂ, ಮನಸ್ಸು ಖಾಲಿಯಾದಂತೆ, ಶಾಂತವಾದಂತೆ, ಪ್ರಸನ್ನವಾದಂತೆ ಅನಿಸಿತು. ಸ್ವಲ್ಪ ಸಮಯ ಕಳೆದಂತೆ ಬಹಳ ಸಹಜವಾದ, ಬಹಳ ಸೂಕ್ಷ್ಮವಾದ ಸತ್ವಯುತ ಶಕ್ತಿ ಸಮೀಪವಿದ್ದಂತೆ ಅನುಭವವಾಯಿತು. ನನ್ನ ಅಂಗೈಯ ಕೇಂದ್ರದಲ್ಲಿ ಒಂದು ಸೂಕ್ಷ್ಮವಾದ ಬಿಂದು ಬಿಸಿಯಾದಂತೆ ಅನಿಸಿತು.

ಇದೆಲ್ಲಾ ನನಗೆ ತುಂಬಾ ಹೊಸ ಅನುಭವ. ಈ ದಾರಿಯಲ್ಲಿ ನಾನು ಎಷ್ಟು ದೂರ ಹೋಗಬಹುದು, ನನ್ನ ಅನುಭವಗಳು ಏನೇನಾಗಬಹುದು, ನನ್ನಲ್ಲಿ ಯಾವ ರೀತಿಯ ಬದಲಾವಣೆಗಳಾಗಬಹುದು ಏನೂ ಗೊತ್ತಿಲ್ಲ. ಒಂದು ವರ್ಷವಾದ ಮೇಲೆ ಮತ್ತೆ ಮಾತಾಡೋಣ,” ಎಂದು ಹೇಳಿದರು.

ಶೇನೈ ಬಾಲ್ಯದಿಂದಲೇ ಯೋಗವನ್ನು ತಮ್ಮ ತಾಯಿಯವರಿಂದ ಕಲಿತಿದ್ದರು. ಅವರಿಗೆ ಮೊದಲಿನಿಂದಲೂ ಆಧ್ಯಾತ್ಮದ ಬಗ್ಗೆ ಒಲವಿದೆ. ಕಲೆಯಲ್ಲಿ ಆಸಕ್ತಿಯಿರುವ ಅವರು ಕಲಾ ಸಂಸ್ಥೆಗಳೊಂದಿಗೆ ಕಾಯಕ ಮಾಡುತ್ತಾರೆ.

ಅವರ ಮಾರ್ಗದರ್ಶಕರಾಗಿರುವ ಕವಿತಾ ಹೃಷಿಕೇಶದಲ್ಲಿ ನೆಲಸಿರುವ ಬೀದರಿನವರು. ಅವರು ಹೃಷಿಕೇಶದಲ್ಲಿ ಹಲವಾರು ವರ್ಷ ಯೋಗ ಕಲಿತಿದ್ದಾರೆ, ಕಲಿಸಿದ್ದಾರೆ. ಉತ್ತರಖಂಡಿನ ಸಂಸ್ಕೃತ ವಿಶ್ವವಿದ್ಯಾಲಯದ ಪದವೀಧರರು. ಈಗ ಸಮರ್ಪಣಾ ಯೋಗ ಸಂಸ್ಥೆಯನ್ನು ನಡೆಸುತ್ತಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ

https://chat.whatsapp.com/IxxC2m7AXyW84KPf73t5iL

Share This Article
2 Comments
  • ಶೇನೈ ಯವರಿಗೆ ಕೋಟಿ ಶರಣು…ಇಷ್ಟಲಿಂಗ ಮಹತ್ವ ಜಗತ್ ಮುಟ್ಟುವ ಸಮಯ ಈಗ ಬಂದಿದೆ ಎನ್ನುವುದಂತು ಸ್ಪಷ್ಟ. ಜಗದಗಲ ಬಸವಣ್ಣ. ಜಗದಗಲದ ಕುರುಹಾದ ಇಷ್ಟಲಿಂಗ ಶಿವಯೋಗವು ಪ್ರಸಿದ್ಧಿ ಪಡೆಯುವ ಕಾಲ ಸನ್ನಿಹಿತವಾಗಿದೆ ಅನಿಸುತ್ತದೆ. ಬಸವ ಮೀಡಿಯಾ ಎಲ್ಲರಿಗೂ ಬಸವಣ್ಣನವರ ಸಿದ್ದಾಂತ ತಲುಪಿಸುವ ಸೇತುವೆ ಆಗಿರುವುದು ಬಹಳ ಸಂತೋಷ

  • 🙏🙏🙏🙏🙏🙏 ಈ ಕಾರ್ಯಕ್ಕೆ ಪ್ರಭುದೇವರಿಗೆ ಇಷ್ಟು ಮಾತ್ರ ಹೇಳಬಹುದು….. ಅನಂತ ಶರಣು ಶರಣಾರ್ಥಿ

Leave a Reply

Your email address will not be published. Required fields are marked *