ಬೆಂಗಳೂರು/ಹುಬ್ಬಳ್ಳಿ
ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಹೇಳಿ 2ಕೋಟಿ ರೂ. ಇಸಿದುಕೊಂಡು ವಂಚಿಸಿದ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹೋದರ ಗೋಪಾಲ ಜೋಶಿ ಅವರನ್ನು ಬೆಂಗಳೂರು ಪೊಲೀಸರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬಂಧಿಸಿ ಹುಬ್ಬಳ್ಳಿಗೆ ಕರೆತಂದಿದ್ದು, ಇಲ್ಲಿನ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪಂಚನಾಮೇ ನಂತರದ ಪ್ರಕ್ರಿಯೆ ನಡೆಸುತ್ತಿದ್ದಾರೆ.
ಎಸಿಪಿ ಚಂದನ್ ನೇತೃತ್ವದ ಬೆಂಗಳೂರು ಬಸವೇಶ್ವರ ನಗರ ಠಾಣೆ ಪೊಲೀಸರ ತಂಡ ಕೊಲ್ಹಾಪುರದಲ್ಲಿ ವಶಕ್ಕೆ ಪಡೆದ ನಂತರ ಹುಬ್ಬಳ್ಳಿಯ ಇಂದಿರಾ ಕಾಲೋನಿಯ ಮನೆಯಲ್ಲಿ ತಪಾಸಣೆ ನಡೆಸಿ ಪಂಚನಾಮೆ ನಡೆಸಿದ ನಂತರ ಹೆಚ್ಚಿನ ಪ್ರಕ್ತಿಯೆ ಪೂರೈಸಲು ಕೇಶ್ವಾಪುರ ಠಾಣೆಗೆ ಕರೆತಂದಿದ್ದಾರೆ.
‘ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ತಲೆಮರೆಸಿಕೊಂಡಿದ್ದ ಖಚಿತ ಮಾಹಿತಿ ಬಂದಿತ್ತು. ಲಾಡ್ಜ್‌ವೊಂದರಲ್ಲಿ ಗೋಪಾಲ ಜೋಶಿ ವಾಸ್ಯವ್ಯ ಮಾಡಿದ್ದರು. ಅಲ್ಲಿಗೆ ತೆರಳಿದ್ದ ಬಸವೇಶ್ವರ ನಗರ ಠಾಣೆಯ ವಿಶೇಷ ಪೊಲೀಸ್ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ’ ಎಂದು ಮೂಲಗಳು ಖಚಿತಪಡಿಸಿವೆ.
‘ಗೋಪಾಲ ಜೋಶಿ ಅವರ ಪುತ್ರ ಅಜಯ್ ಜೋಶಿ ಅವರ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಮತ್ತೊಂದು ಪೊಲೀಸ್ ತಂಡವು ಅವರನ್ನು ಪುಣೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಪ್ರಕರಣದಲ್ಲಿ ಅವರ ಪಾತ್ರ ಕಂಡುಬಂದರೆ ಬಂಧಿಸಲಾಗುವುದು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಆರೋಪಿ ಗೋಪಾಲ ಜೋಶಿ ಅವರನ್ನು ಬೆಂಗಳೂರಿಗೆ ಕರೆ ತರಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಕೇಳಲಾಗುವುದು’ ಎಂದು ಮೂಲಗಳು ತಿಳಿಸಿವೆ.
ಮನೆಯಲ್ಲಿ ಶೋಧ: ದಾಖಲೆ ಜಪ್ತಿ
ಬೆಂಗಳೂರು ಪಶ್ಚಿಮ ವಿಭಾಗದ ಎಸಿಪಿ ಚಂದನ ಕುಮಾರ್ ನೇತೃತ್ವದ ಪೊಲೀಸ್ ತಂಡವು ಸ್ಥಳೀಯ ಪೊಲೀಸರ ನೆರವಿನಿಂದ ಕೇಶ್ವಾಪುರದ ಇಂದಿರಾ ಕಾಲೊನಿಯಲ್ಲಿರುವ ಗೋಪಾಲ ಜೋಶಿ ಅವರ ಮನೆಗೆ ತೆರಳಿ ಎರಡು ಗಂಟೆ ಪರಿಶೀಲಿಸಿತು.
ಹಣಕಾಸಿನ ವ್ಯವಹಾರ ಮತ್ತು ಚೆಕ್ ವಹಿವಾಟಿನ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ದಾಖಲೆ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಂತರ ಗೋಪಾಲ ಜೋಶಿ ಅವರನ್ನು ಕೇಶ್ವಾಪುರ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು. ದೂರುದಾರರಾದ ಸುನಿತಾ ಚವ್ಹಾಣ್ ಅವರ ಸಮ್ಮುಖದಲ್ಲಿ ಮಾಹಿತಿ ಪಡೆದಿರುವುದಾಗಿ ತಿಳಿದು ಬಂದಿದೆ.