ಗೊರುಚಗೆ ಗುರುಬಸವ ಪ್ರಶಸ್ತಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದ‌ರ

ಬೀದರನ ಬಸವ ಸೇವಾ ಪ್ರತಿಷ್ಠಾನ ಬಸವಗಿರಿಯಿಂದ ಪ್ರತಿ ವರ್ಷ ಆಚರಿಸಲಾಗುವ ವಚನ ವಿಜಯೋತ್ಸವದಲ್ಲಿ ಗುರು ಬಸವ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಸಕ್ತ 2025 ನೇ ಸಾಲಿನ ಪ್ರತಿಷ್ಠಿತ ಈ ಗುರು ಬಸವ ಪ್ರಶಸ್ತಿಗೆ ಹಿರಿಯ ವಿದ್ವಾಂಸರಾದ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕಾ ಅಕ್ಕ ತಿಳಿಸಿದ್ದಾರೆ.

ಪ್ರಶಸ್ತಿಯು 51 ಸಾವಿರ ರು. ನಗದು, ಪ್ರಶಸ್ತಿ ಪತ್ರ, ಫಲಕ ಒಳಗೊಂಡಿದ್ದು 2025 ನೇ ಸಾಲಿನ ಪ್ರಶಸ್ತಿಯನ್ನು ಫೆಬ್ರವರಿ 12 ರಂದು ಪ್ರದಾನ ಮಾಡಲಾಗುವುದು ಎಂದಿದ್ದಾರೆ

ಸ್ವತಂತ್ರ ಚಳುವಳಿಯ ಹೋರಾಟಗಾರರು, ಸ್ವಾತಂತ್ರೋತ್ತರ ಭಾರತದ ವಿಶೇಷವಾಗಿ ಕನ್ನಡ ನಾಡಿನ ಇತಿಹಾಸದಲ್ಲಿ ಸುಮಾರು ಮುಕ್ಕಾಲು ಶತಮಾನದಿಂದ ವಿವಿಧ ರಂಗದಲ್ಲಿ ಅವರು ಸಲ್ಲಿಸಿದ ಸೇವೆ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿ ಶರಣ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮನೆ ಮನಕ್ಕೆ ತಲುಪಸಿಲು ಅಹರ್ನಿಶಿ ದುಡಿದಿದ್ದಾರೆ.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, 1995 ರಿಂದ 2016 ರ ವರೆಗೆ ರಾಷ್ಟ್ರಮಟ್ಟದ 12 ಸಮ್ಮೇಳನಗಳು, ರಾಜ್ಯಮಟ್ಟದ 8 ಮಹಿಳಾ ಸಮ್ಮೇಳನಗಳು, 600ಕ್ಕೂ ಅಧಿಕ ದತ್ತಿಗಳ ಸಂಗ್ರಹ, 90 ಗ್ರಂಥಗಳ ಪ್ರಕಟಣೆ ಪೂರೈಸಿರುವುದರ ಜೊತೆಗೆ 2024ರ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತ್ಯ ಮತ್ತು ಸಮಾಜಕ್ಕೆ ಕೊಟ್ಟ ಕೊಡುಗೆ ಸುವರ್ಣಾಕ್ಷರಗಳಿಂದ ಬರೆದಿಡುವಂತಾಗಿದೆ.

ಸಾಹಿತ್ಯ ಕ್ಷೇತ್ರದಲ್ಲಿ, ಪತ್ರಿಕಾ ಕ್ಷೇತ್ರದಲ್ಲಿ, ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ಅವರು ಮಾಡಿದ ಸೇವೆ ಅವರ್ಣನೀಯ, ಸೇವೆಗೆ ಸಂದ ಗೌರವ ಹಾಗೂ ಪ್ರಶಸ್ತಿಗಳು ಹಲವಾರು. ಯೋಜನಾಧಿಕಾರಿಯಾಗಿ, ಸಂಘಟಕರಾಗಿ, ಹಲವು ಸಂಘ-ಸಂಸ್ಥೆಗಳ ಸದಸ್ಯರಾಗಿ ಸಮ್ಮೇಳನಗಳ ಅಧ್ಯಕ್ಷರಾಗಿ, ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪದ ತಜ್ಞರ ಸಮಿತಿಯ ಅಧ್ಯಕ್ಷರಾಗಿ ಎಲ್ಲರ ಸ್ವಪ್ನ ಸಾಕಾರಗೊಳಿಸುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ಶರಣನಿಷ್ಠ, ಭವ್ಯ ಬದುಕಿಗೆ ಕೇಡಿಲ್ಲದ ಹಾಗೆ ಒಲಿದಂತೆ ಅನುಪಮ ಸೇವೆಗೈದ ಗೊರುಚ ಅವರನ್ನು ಬಸವ ಸೇವಾ ಪ್ರತಿಷ್ಠಾನ, ಬೀದರ ವತಿಯಿಂದ 2025ನೇ ಸಾಲಿನ ಗುರುಬಸವ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂದು ಅಕ್ಕ ತಿಳಿಸಿದ್ದಾರೆ.

Share This Article
Leave a comment

Leave a Reply

Your email address will not be published. Required fields are marked *