ಯಲಬುರ್ಗಾ
ರಾಷ್ಟ್ರೀಯ ಬಸವದಳದ ವತಿಯಿಂದ ಹೊಸದಾಗಿ ನಿರ್ಮಾಣಗೊಂಡ ಅನುಭವ ಮಂಟಪ ಹಾಗೂ ವಿಶ್ವಗುರು ಬಸವಣ್ಣವರ ಮೂರ್ತಿ ಅನಾವರಣ ಹಾಗೂ ಕಲ್ಯಾಣ ದರ್ಶನ ಪ್ರವಚನ-2024 ಕಾರ್ಯಕ್ರಮದ ಚಾಲನೆ ತಾಲ್ಲೂಕಿನ ಗುಳೆ ಗ್ರಾಮದಲ್ಲಿ ಜರುಗಿತು.
ಬಸವಾದಿ ಶರಣರು ರಚಿಸಿದ ವಚನಗಳು ಎಂದೆಂದಿಗೂ ಜೀವಂತ. ಪ್ರಾರ್ಥನೆಯು ಬದುಕಿನ ಜೀವಾಳವಾಗಬೇಕು. ನಿರಾಕಾರ ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕಾದರೆ ಅನುಭವ ಮಂಟಪದಿಂದ ಸಾಧ್ಯವೆಂದು ಶರಣರು ತಿಳಿಸಿದ್ದಾರೆ. ವಚನ ಸಾಹಿತ್ಯ ನಾಡಿನಾದ್ಯಂತ ಪ್ರಚಾರವಾಗುವ ಕಾಲ ಕೂಡಿಬಂದಿದೆ. ವಚನಗಳಿಗೆ ಜಗತ್ತು ಉದ್ಧಾರ ಮಾಡುವ ಶಕ್ತಿ ಸಾಮರ್ಥ್ಯವಿದೆ ಎಂದು ಕೂಡಲಸಂಗಮ ಬಸವ ಧರ್ಮಪೀಠದ ಡಾ. ಗಂಗಾ ಮಾತಾಜಿ ಕಾರ್ಯಕ್ರಮದಲ್ಲಿ ಹೇಳಿದರು.
ಶರಣ ಗ್ರಾಮ ಎಂದು ಮರುನಾಮಕರಣಗೊಂಡ ಗುಳೆ ಗ್ರಾಮದಲ್ಲಿ ಕಟ್ಟಿದ ಅನುಭವ ಮಂಟಪ ಬೇರೆ ಊರಿಗೆ ಮಾದರಿಯಾಗಿದೆ. ಈ ಭಾಗದಲ್ಲಿ ಬಸವತತ್ವವನ್ನು ಪ್ರಸಾರ ಮಾಡಿದ ಚಿಂತಕ ವೀರಭದ್ರಪ್ಪಣ್ಣ ಕುರುಕುಂದಿ ಅಗಲಿಕೆಯಿಂದ ಶರಣ ಬಳಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು. ನೂತನ ಅನುಭವ ಮಂಟಪದಲ್ಲಿ ಚಿಂತನೆ, ವಚನಗೋಷ್ಠಿಗಳು ನಿರಂತರ ನಡೆಯಬೇಕು, ಅಂದಾಗ ಮಂಟಪಕ್ಕೆ ಸಾರ್ಥಕತೆ ಬರುತ್ತದೆ ಎಂದರು.
ಜನೇವರಿ 12ರಿಂದ 14ರವರೆಗೆ ಕೂಡಲಸಂಗಮದಲ್ಲಿ ನಡೆಯುವ ಶರಣ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಸವಭಕ್ತರು ಆಗಮಿಸಬೇಕೆಂದು ಮಾತಾಜಿ ಮನವಿ ಮಾಡಿಕೊಂಡರು.
ಸಮಾಜದಲ್ಲಿ ನೆಲೆಯೂರಿರುವ ಮೂಢನಂಬಿಕೆ, ಕಂದಾಚಾರಗಳನ್ನು ತೊರೆದು ಬಸವಾದಿ ಶರಣರ ಬದುಕನ್ನು ಜನ ಅನುಕರಿಸಬೇಕೆಂದು ಮನಗೂಳಿಯ ಪೂಜ್ಯ ವಿರತೀಶಾನಂದ ಸ್ವಾಮೀಜಿ ಹೇಳಿದರು. ಕುಷ್ಟಗಿ ಕಾಲೇಜು ಪ್ರಾಚಾರ್ಯ ಡಾ. ಶರಣಬಸವ ಡಾಣಿ ಮಾತನಾಡಿ, ಗುಳೆ ಗ್ರಾಮವು ಬಸವ ತತ್ವದ ತಿರುಳನ್ನು ಮೈಗೂಡಿಸಿಕೊಂಡಿದೆ. ಜಗತ್ತು ಇರುವವರೆಗೆ ಬಸವಣ್ಣ ಜನಮಾನಸದಲ್ಲಿ ಇರುತ್ತಾರೆ ಎಂದರು.
ಮನಗೂಳಿ ವಿರಕ್ತ ಮಠದ ವಿರತೀಶಾನಂದ ಸ್ವಾಮೀಜಿ ಮಾತನಾಡಿ,‘ಶರಣರ ವಚನಗಳು ಸಮಾನತೆ ಸಾರುವುದಷ್ಟೆ ಅಲ್ಲ, ಸಮಾಜವನ್ನು ಸನ್ಮಾರ್ಗದತ್ತ ಸಾಗುವಂತೆ ಮಾಡುವ ಶಕ್ತಿ ಹೊಂದಿವೆ’ ಎಂದು ಹೇಳಿದರು.
ಹುಕ್ಕೇರಿ ತಾಲೂಕು ಬಸವಬೆಳವಿಯ ಶರಣಬಸವ ಸ್ವಾಮೀಜಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಶಿವಶಂಕರ ದೇಸಾಯಿ, ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಬಸವರಾಜ ಹೂಗಾರ, ಶರಣಪ್ಪ ಹೊಸಳ್ಳಿ ಸಹ ಮಾತನಾಡಿದರು.
ಅನುಭವ ಮಂಟಪ ನಿರ್ಮಾಣಕ್ಕೆ 5 ಲಕ್ಷ ರು. ಅನುದಾನ ಒದಗಿಸಿದ ಮಾಜಿ ಸಚಿವ ಹಾಲಪ್ಪ ಆಚಾರ ಅವರನ್ನು ಸತ್ಕರಿಸಲಾಯಿತು.
ಶಿವಾನಂದ ಸ್ವಾಮೀಜಿ, ಹರ್ಷಾನಂದ ಗುರೂಜಿ, ಗಂಗಮ್ಮ ವೀರಭದ್ರಪ್ಪ ಕುರಕುಂದಿ, ರೇಣುಕಪ್ಪ ಮಂತ್ರಿ, ದ್ಯಾಮಣ್ಣ ಮೂಲಿ, ಬಸನಗೌಡ ಪೊಲೀಸಪಾಟೀಲ, ನಾಗಭೂಷಣ ನವಲಿ, ತಿಮ್ಮನಗೌಡ ಚಿಲ್ಕರಾಗಿ, ಬಿ.ಟಿ. ಶಿವಬಸಯ್ಯ, ಶರಣಪ್ಪ ರ್ಯಾವಣಕಿ, ರುದ್ರಪ್ಪ ಮರಕಟ್, ಕರೆಗೌಡ ಕುರಕುಂದಿ, ನಾಗನಗೌಡ ಜಾಲಿಹಾಳ, ಅಯ್ಯಪ್ಪ ಗುಳೇದ, ಶರಣಪ್ಪ ನಿಲೋಗಲ್ಲ, ರಾಚಪ್ಪ ಹುರಳಿ, ದೇವಪ್ಪ ಕೋಳೂರ ಮತ್ತಿತರರು ಉಪಸ್ಥಿತರಿದ್ದರು.
ಗುಳೆ ಗ್ರಾಮ ಬಹುಶಃ ಕರ್ನಾಟಕದಲ್ಲಿ “ಆದರ್ಶ ಬಸವತತ್ವ ಗ್ರಾಮ”ವಾಗಿದೆ. ಹಳ್ಳಿಯಿಂದ ದಿಲ್ಲಿಯವರೆಗೆ ಇದೇರೀತಿ ಬಸವಬೆಳಕು ಪಸರಿಸಲಿ. “ಭಾರತ ದೇಶ – ಜೈ ಬಸವೇಶ”