ಗುಳೇದಗುಡ್ಡ
ವಾರದ ಮಹಾಮನೆ ಕಾರ್ಯಕ್ರಮವು ಶನಿವಾರ, ಶರಣರಾದ ದಿಗಂಬರಪ್ಪ ಮೇದಾರ, ಕಂಠಿ ಪೇಟೆ ಅವರ ಮನೆಯಲ್ಲಿ ಜರುಗಿತು.
ಧರ್ಮಗುರು ಬಸವಣ್ಣನವರ ವಚನ –
ಸುಖ ಬಂದಡೆ ಪುಣ್ಯದ ಫಲವೆನ್ನೆನು
ದುಃಖ ಬಂದಡೆ ಪಾಪದ ಫಲವೆನ್ನೆನು
ನೀ ಮಾಡಿದಡಾಯಿತ್ತೆಂದೆನ್ನೆನು
ಕರ್ಮಕ್ಕೆ ಕರ್ತೃವೆ ಕಡೆಯೆಂದೆನ್ನೆನು
ಉದಾಶೀನವಿಡಿದು ಶರಣೆನ್ನೆನು
ಕೂಡಲಸಂಗಮದೇವಾ ನೀ ಮಾಡಿದುಪದೇಶವು
ಎನಗೀ ಪರಿಯಲ್ಲಿ ಸಂಸಾರವ ಸವೆಯ ಬಳಸುವೆನು.
ಪ್ರಾರಂಭದಲ್ಲಿ ಶರಣೆಯರಾದ ಜಯಶ್ರೀ ಬರಗುಂಡಿ ಹಾಗೂ ವಿಶಾಲಾಕ್ಷೀ ಗಾಳಿ ಅವರಿಂದ ಸಕಲ ಶರಣರ ಸ್ತುತಿ ಪದ್ಯದ ಪ್ರಾರ್ಥನೆಯಾಯಿತು.
ವಚನದ ಅರ್ಥವನ್ನು ವಿವರಿಸುತ್ತಾ ಪ್ರೊ. ಸಿದ್ಧಲಿಂಗಪ್ಪ ಬಿ. ಬರಗುಂಡಿಯವರು ವಚನವು ಮಹೇಶ್ವರ ಸ್ಥಲದ ವಚನವಾಗಿದೆ. ಇಲ್ಲಿ ಸಾಧಕನು ಶ್ರದ್ಧಾಭಕ್ತಿಯ ಭಕ್ತಸ್ಥಲದಿಂದ ನೈಷ್ಠಿಕ ಭಕ್ತಿಯ ಮಹೇಶ್ವರ ಸ್ಥಲದ ಹಂತದಲ್ಲಿದ್ದಾನೆ. ಸದಾಚಾರದಿಂದ ಬದುಕಿದ ಭಕ್ತನೀಗ ಗುರುಲಿಂಗಯುಕ್ತನಾದ ಅರಿವಿನ ಖಣಿಯಾಗಿದ್ದಾನೆ. ಹಿಂದಿನ ಜನ್ಮ ಅದರ ಫಲಾಫಲಗಳಾದ ಪಾಪ ಪುಣ್ಯವೆಂಬ ಭಯ ಹುಟ್ಟಿಸುವ ಅಜ್ಞಾನದ ಬೇರಿಗೆ ಈ ವಚನದ ಮೂಲಕ ಕೊಡಲಿ ಪೆಟ್ಟನ್ನು ಹಾಕಲಾಗಿದೆ. ಅರಿವು, ಆಚಾರ, ಅನುಭಾವ ಕಾಯಕ ಮತ್ತು ದಾಸೋಹ ತತ್ವಗಳು ಶರಣರು ಬೋಧಿಸಿದ ಶಾಶ್ವತ ಸತ್ಯಗಳು. ಇದರಿಂದ ಜನನ-ಮರಣ, ಪಾಪ-ಪುಣ್ಯ, ಸ್ವರ್ಗ-ನರಕಗಳ ಭ್ರಾಂತಿಯಿಂದ ಹೊರಬಂದು ಶರಣ ಜೀವನದಲ್ಲಿ ಬದುಕಬೇಕಾಗಿದೆ.

ಕಾಂಬುದೆಲ್ಲ ಕೂಡಲಸಂಗಮ ಎಂಬುದರಲ್ಲಿ ಗಟ್ಟಿ ವಿಶ್ವಾಸವನ್ನಿಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ಕಾಲ ಕಾಲಾಂತರದಲ್ಲಿ ಶೋಷಣೆಯ ಕೂಪದಿಂದ ಮೇಲೆದ್ದು ಬರಲಾಗುವದಿಲ್ಲ. ಇಷ್ಟೇ ಅಲ್ಲ ದೇವರೆಂಬ ಭ್ರಮೆಯನ್ನೆ ಬಸವಣ್ಣನವರು ಹರಿದೊಗೆದರು. ‘ನೀ ಮಾಡಿದಡೆ ಆಯಿತ್ತು’ ಎಂಬ ಅಪ್ರಲಾಪವನ್ನೇ ತಿರಸ್ಕರಿಸಿದರು. ಮನುಷ್ಯನ ಬದುಕು ಯಾಂತ್ರಿಕವಾದ ಇತರ ಪ್ರಾಣಿಗಳ ಬದುಕಿನಂತಲ್ಲ, ಅದು ವೈಚಾರಿಕತೆಯಿಂದ ಕೂಡಿದುದು. ತನ್ನನ್ನು ದೇವರು ಸೃಷ್ಟಿಸಿದ್ದಾನೆ. ತನ್ನ ಕ್ರೀಯಾದಿಗಳಿಗೆ ಆತನೇ ಕರ್ತೃ ಎನ್ನದೇ ತನ್ನನ್ನು ಒಳಗೊಂಡಂತೆ ಸಕಲ ಚರಾಚರವೆಲ್ಲವೂ ಪರಶಿವ ತತ್ವವೇ. ಹೀಗಿರುವಾಗ ತನ್ನ ಕೆಲಸ ಕಾರ್ಯಗಳಿಗೆ ತಾನೇ ಹೊಣೆಯಾಗಿರುತ್ತಾನೆ. ಬದುಕಿನಲ್ಲಿ ಕಷ್ಟ-ಸುಖಗಳು ಬರುವುದು ಸಹಜವೇ ಅದಕ್ಕೆ ಹೆದರಬೇಕಿಲ್ಲ.
ತನ್ನಲ್ಲಿ ಇಷ್ಟಲಿಂಗ ಇರುವಾಗ ಆ ಮೂಲಕ ಪ್ರಾಣಲಿಂಗ-ಭಾವಲಿಂಗಗಳೊಂದಿಗೆ ಸಂಬಂಧವಾಗಿರುವಾಗ ಯಾರಿಗಾದರೂ – ದೇವರಿಗೂ ಹೆದರಬೇಕಿಲ್ಲ. ಇದು ಪಾಪದಿಂದಾಗುವ ಹೆದರಿಕೆಯಿಂದಲೂ ಅಪ್ಪ ಬಸವಣ್ಣನವರು ಅತೀತರಾಗಿದ್ದಾರೆ. ಇಂಥ ಧೈರ್ಯದಿಂದ ತಪ್ಪು ತಪ್ಪಾಗಿ ಕಾರ್ಯ ಮಾಡುವುದಿಲ್ಲ. ಜೊತೆಗೆ ಅಲಕ್ಷ್ಯತನವನ್ನೂ ತೋರಿಸುವುದಿಲ್ಲ ಎಂಬ ಪ್ರಾಮಾಣಿಕ ಅನಿಸಿಕೆಯನ್ನು ಅಪ್ಪ ಬಸವಣ್ಣನವರು ಈ ವಚನದ ಮೂಲಕ ಕರುಣಿಸಿದ್ದಾರೆ ಎಂದು ವಿವರಿಸಿದರು.

ಶರಣ ಪ್ರೊ, ಸುರೇಶ ರಾಜನಾಳ ಅವರು ಮಾತನಾಡುತ್ತ ‘ಅಪ್ಪನವರ ಈ ವಚನ ನಮಗೆ ನಿಷ್ಠೆಯಿಂದ ಬದುಕಲು ಕಲಿಸುತ್ತದೆ. ಹೊತ್ತು ಬಂದಾಗಲೆಲ್ಲ ಗೋಸುಂಬೆಯಂತೆ ಮನುಷ್ಯ ಬದುಕಬಾರದು. ಪಾಪ ಪುಣ್ಯಗಳ ಮೌಢ್ಯವನ್ನು ಲೆಕ್ಕಕ್ಕೆ ತರದೇ ಹಸನಾದ ಬದುಕನ್ನು ಬದುಕಬೇಕೆಂಬುದು ವಚನದ ಹಿಂದಿನ ಆಶಯ. ಇಲ್ಲಿ ಪಾಪ ಪುಣ್ಯಗಳೆಂಬವು ಮುಂದಿನ ಕರ್ಮದ ಫಲವೆಂದು ಭಾವಿಸಬಾರದು. ಅದು ಇಂದಿನ ನಮ್ಮ ಕೆಲಸ ಹಾಗೂ ಮನಸ್ಸಿನ ನಿರ್ಧಾರದ ಮೇಲೆಯೇ ನಿಂತಿದೆ ಎಂಬುದು ಅಪ್ಪನವರ ಆಶಯವಾಗಿದೆ’’ ಎಂದು ವಚನದ ಅರ್ಥವನ್ನು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ, ಅನುಭಾವಿ ಶರಣ ಮಾಹಾದೇವಯ್ಯಸ್ವಾಮಿ ನೀಲಕಂಠಮಠ ಅವರು ವಚನವನ್ನು ನಿರ್ವಚನಗೈಯುತ್ತ, ‘ಶ್ರೀ ಬಸವಣ್ಣನವರ ಉದ್ಧೇಶವು ಜನರ ಮನಸ್ಸಿನಲ್ಲಿ ಅದುವರೆಗೂ ಬೀಡು ಬಿಟ್ಟಿದ್ದ ಅನಾವಶ್ಯಕ, ವಿಚಾರಹೀನ ಹೆದರಿಕೆಯನ್ನು ಕಳೆದು ಧೈರ್ಯದ ಹೊಸ ಬೀಜವನ್ನು ಬಿತ್ತುವದಾಗಿತ್ತು. ಸಣ್ಣ ಮಕ್ಕಳಿಗೆ ಗುಮ್ಮನ ಹೆದರಿಕೆಯನ್ನು ತೋರಿಸುವಂತೆ, ಕರ್ಮ ಸಿದ್ಧಾಂತವನ್ನು ಮುಂದೆ ಮಾಡಿ ನಮ್ಮ ಕಷ್ಟಗಳಿಗೆಲ್ಲ, ಹೀನಸ್ಥಿತಿಗೆಲ್ಲ ಹಿಂದೆ ಮಾಡಿದ ಪಾಪಂಗಳೇ ಕಾರಣ ಅವುಗಳಿಂದ ಪಾರಾಗಲು ಪುಣ್ಯ ಮಾಡಬೇಕು. ಪುಣ್ಯವೆಂದರೆ ಧನ, ಧಾನ್ಯ ಇತ್ಯಾದಿಗಳನ್ನು ಪುರೋಹಿತಶಾಹಿಗಳಿಗೆ ದಾನ ಮಾಡಬೇಕೆಂದು ತಿಳಿಸಿ ಶೋಷಣೆ ಮಾಡುತ್ತಿರುವ ಸಂದರ್ಭದಲ್ಲಿ ಬಸವಣ್ಣನವರು ‘ಇಂದಿನ ಭೋಗವು ಕೈಯ ಮೇಲೆ’ ಎಂದು ಸ್ಪಷ್ಟಪಡಿಸಿದರಲ್ಲದೆ ಇದನ್ನೇ ಜೀವನ ಪೂರ್ತಿ ನಡೆಸುವದಾಗಿ ಪಣ ತೊಟ್ಟರು.
ನಾವು ಮಾಡಿದ ಒಳ್ಳೆಯ ಕೆಟ್ಟ ಕೆಲಸಗಳೇ ನಮ್ಮ ಸುಖ ದುಃಖಕ್ಕೆ ಮೂಲ ಕಾರಣವೇ ವಿನಃ ಅದು ಯಾರೋ ಮಾಡಿದ ಯಾರದೋ ಪ್ರಭಾವವಲ್ಲ. ಇಂದು ಮಾಡಿದ ಕಾರ್ಯದ ಫಲ ಇಂದೇ ಸಿಗುವಾಗ ಒಳ್ಳೆಯದನ್ನೆ ನಾವು ಆಯ್ದುಕೊಳ್ಳಬೇಕು. ನಮ್ಮ ಪಾಪ ಪುಣ್ಯಗಳ ಲೆಕ್ಕಾಚಾರವನ್ನು ದೇವರೆಂಬುವರು ಇಟ್ಟು ಅದಕ್ಕೆ ಫಲವನ್ನು ಆತನೇ ಕೊಡುತ್ತಾನೆ ಎಂಬುದೇ ಒಂದು ಭ್ರಾಂತಿ. ಈ ಭ್ರಾಂತಿಯಿಂದ ಹೊರಗೆ ಬಂದು ನಿರ್ಭಯವಾಗಿ ಬದುಕಿ ಅನ್ಯರಿಗೆ ಮೋಸವಿಲ್ಲದೆ, ಅನ್ಯಾಯವಿಲ್ಲದ ಬದುಕನ್ನು ಬದುಕಿದರೆ ಅದೇ ಸಾರ್ಥಕ ಬದುಕು; ಅದೇ ಕೂಡಲಸಂಗಮದೇವರ ಉಪದೇಶ ಎಂಬುದನ್ನು ವಿವರವಾಗಿ ತಿಳಿಸಿದರು.

ಪ್ರೊ. ಶ್ರೀಕಾಂತ ಎಮ್. ಗಡೇದ, ಉಪನ್ಯಾಸಕರು, ಹನ್ನೆರಡನೆಯ ಶತಮಾನದ ವಚನಗಳ ಮಹತ್ವವನ್ನು ವಿವರಿಸುತ್ತ, ಶರಣರ ಬದುಕಿನಲ್ಲಿ ಬಡತನದ ಪ್ರಶ್ನೆಯೇ ಇದ್ದಿಲ್ಲ. ಏಕೆಂದರೆ, ಕಾಯಕ ಮಾಡುವದು ಕಡ್ಡಾಯವಾಗಿತ್ತು. ದುಡಿದೇ ಬದುಕಬೇಕೆನ್ನುವ ಆಶಯ ಆಗಿದ್ದರಿಂದ ದುಡಿದ ಫಲದಲ್ಲಿ ಬದುಕಬೇಕೆನ್ನುವ ಆಶಯದ ಕಾರಣ, ಸಂಗ್ರಹ ನಿಷೇಧವಿದ್ದರಿಂದ ಗಳಿಕೆಯ ಪ್ರಶ್ನೆಯೇ ಬರುವದಿಲ್ಲ. ಆದ್ದರಿಂದ ಶ್ರೀಮಂತಿಕೆಯ ಪ್ರಶ್ನೆಯೇ ಇಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಎಲ್ಲರೂ ಸಮಾನರು. ಮೇಲು-ಕೀಳು, ಬಡವ-ಬಲ್ಲಿದ ಎನ್ನುವ ವಿಚಾರವೇ ಇಲ್ಲ.
ಕಾಯಕ ಕಡ್ಡಾಯವಿದ್ದ ಕಾರಣ ಬೇಡುವ ಸ್ಥಿತಿಯೇ ಬರುವದಿಲ್ಲ. ಶರಣರು ನಡೆದ ದಾರಿ ಸಮಾನತೆಯದಾಗಿತ್ತು. ಕಾಯಕ ಮತ್ತು ದಾಸೋಹ ತತ್ವಗಳ ಮೇಲೆ ಬದುಕಿದ ಅವರು ಪಾಪ ಪುಣ್ಯಗಳ ಗೊಂದಲಕ್ಕೆ ಬೀಳದೆ ಸರಿಯಾದ ದಾರಿಯಲ್ಲಿಯೇ ನಡೆದರು. ಆವರೆಗೆ ಪ್ರಚಲಿತದಲ್ಲಿದ್ದ ಕರ್ಮ ಸಿದ್ಧಾಂತವನ್ನು ಕಡೆಗಣಿಸಿ ಸಮಸಂಸ್ಕೃತಿಯನ್ನೇ ಆಯ್ದುಕೊಂಡು ಮುನ್ನುಗ್ಗಿದರು. ಎಂಥ ಕಠಿಣ ಪರಸ್ಥಿತಿ ಬಂದರೂ ಸತ್ಯನ್ಯಾಯಗಳ ದಾರಿಯಲ್ಲೇ ಸಾಗಿ, ಜೀವನ ಪೂರ್ತಿ ಅದರಂತೆ ನಡೆಯುತ್ತೇನೆ ಎಂಬುದು ಧರ್ಮಗುರು ಬಸವಣ್ಣನವರ ಜೀವನ ಗುರಿಯಾಗಿತ್ತು. ಇಂದು ನಮಗೂ ಅದೇ ಆದರ್ಶವಾಗಬೇಕೆಂದು ಹೇಳಿದರು.
ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಒಡೆಯರಾದ ಶರಣ ದಿಗಂಬರಪ್ಪ ಮೇದಾರ ಹಾಗೂ ಕುಟುಂಬ ವರ್ಗದವರಿಗೆ ಕಾರ್ಯಕ್ರಮದ ಆಯೋಜಕರು ಶರಣು ಸಮರ್ಪಣೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಮೇದಾರ ಬಂಧುಗಳನ್ನೊಳಗೊಂಡಂತೆ ರಾಚಣ್ಣ ಕೆರೂರ ದಂಪತಿಗಳು, ಮಹಾಲಿಂಗಪ್ಪ ಕರನಂದಿ, ಬಸಲಿಂಗಯ್ಯ ಕಂಬಾಳಿಮಠ, ಪಾಂಡಪ್ಪ ಕಳಸಾ, ದಾನಪ್ಪ ಬಂಡಿ, ಕೃಷ್ಣಾಜಿ ಮಹೇಂದ್ರಕರ, ಶಿವಪುತ್ರಪ್ಪ ಬೀಳಗಿ, ಈರಣ್ಣ ಅಲದಿ, ದಾಕ್ಷಾಯಣಿ ತೆಗ್ಗಿ, ಕೃಷ್ಣಪ್ಪ ಶಿರೂರ ಮೊದಲಾದವರು ಮತ್ತು ಮೇದಾರ ಕಾಯಕದ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದ ಮಧ್ಯೆ ಶರಣ ದಿಗಂಬರಪ್ಪ ಮೇದಾರ ಅವರು ಬಿದಿರಿನಲ್ಲಿ ತಯಾರಿಸಿದ ಸೈಕಲ್, ಬಂಡಿ, ರಥ ಮೊದಲಾದ ಕಲಾಕೃತಿಗಳನ್ನು ಶಿವಾನುಭವಿಗಳೆಲ್ಲರೂ ನೋಡಿ ಸಂತೋಷಪಟ್ಟರು. ಮೂಲ ಕಸುಬನ್ನು ಇನ್ನೂ ಉಳಿಸಿಕೊಂಡಿರುವುದಕ್ಕೆ ಎಲ್ಲರೂ ಹರ್ಷಿಸಿದರು.
ಕಾರ್ಯಕ್ರಮದ ಆಯೋಜಕರಿಗೆ ಕೋಟಿ ಶರಣು ಶರಣಾರ್ಥಿಗಳು