ಗುಳೇದಗುಡ್ಡ:
ಲಿಂಗಾಯತ ಧರ್ಮವು ನುಡಿಯದೇ ನಡೆಯನ್ನು ರೂಢಿಸಿಕೊಂಡು ಅನುಸರಿಸುತ್ತದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬರಗುಂಡಿ ಹೇಳಿದರು.
ಪಟ್ಟಣದ ಶಿವಕೃಪಾ ರಂಗಮಂದಿರದಲ್ಲಿ ಆಯೋಜಿಸಿದ್ದ ಜಾಗತಿಕ ಲಿಂಗಾಯತ ಮಹಸಭಾ ತಾಲೂಕ ಘಟಕ ಹಾಗೂ ಪದಾಧಿಕಾರಿಗಳ ಸೇವಾದೀಕ್ಷೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಲಿಂಗಾಯತವು ಕಾಯಕದಿಂದ ಸಮಾಜದ ಬಂಧುತ್ವ ಕಟ್ಟಿ, ದುಡಿಯುವ ಜನರಿಗೆ ಅಪ್ಪ ಬೊಪ್ಪ ಎಂದು ಮಾನವೀಯ ಆಪ್ತತೆಯನ್ನು ಸಾಧಿಸಿದೆ. ಮಾನಸಿಕವಾಗಿ, ಬೌದ್ಧಿಕವಾಗಿ ಯಾರನ್ನೂ ಹಿಂಸಿಸದೇ ಲಿಂಗಾತೀತ, ಜಾತ್ಯತೀತವಾಗಿ ಮನುಜ ಮತಕ್ಕಾಗಿ ಬಸವಣ್ಣನವರ ಕೊಡುಗೆಯನ್ನು ಅನುಸರಿಸುತ್ತದೆ ಎಂದರು.
ಮುಂದುವರೆದು, ವೈದಿಕವು ಧಾರ್ಮಿಕ ತತ್ವಗಳನ್ನು ಬೋಧಿಸಿ ಜನರನ್ನು ಮೋಸಗೊಳಿಸುತ್ತದೆ. ಲಿಂಗಾಯತ ಧರ್ಮವು ವೈದಿಕ ಧರ್ಮದ ಮೌಢ್ಯಗಳನ್ನು ಧಿಕ್ಕರಿಸುತ್ತದೆ ಎಂದರು.
ವರ್ತಮಾನದ ಮತಾಂಧರಿಗೆ ಬಸವ ತತ್ವವನ್ನು ಪ್ರಸಾರ ಮಾಡಿ ಜನಸೇವೆಗೆ ಕಾರ್ಯೋನ್ಮುಖವಾಗಿ ಲಿಂಗಾಯತ ಮಹಾಸಭಾ ತಾಲೂಕ ನೂತನ ಘಟಕ ಉತ್ತಮ ಕೆಲಸ ಮಾಡಲೆಂದು ಬರಗುಂಡಿಯವರು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಶರಣ ರಾಜಣ್ಣ ಕೆರೂರು ಮಾತನಾಡುತ್ತಾ, ಲಿಂಗದೀಕ್ಷೆ ಎನ್ನುವುದು ಸೇವಾ ದೀಕ್ಷೆಯಾಗಿದೆ. ನಮ್ಮ ಹಾಗೂ ಜಗತ್ತಿನ ಕಲ್ಯಾಣವೇ ಜಾಗತಿಕ ಲಿಂಗಾಯತ ಮಹಾಸಭಾದ ಉದ್ದೇಶವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಪ್ರೊ. ಸಿದ್ಧಲಿಂಗಪ್ಪ ಬರಗುಂಡಿ ಮಾತನಾಡಿದರು.
ರವಿ ಯಡಹಳ್ಳಿ ಅವರು ನೂತನ ಪದಾಧಿಕಾರಿಗಳಿಗೆ ಸೇವಾಧೀಕ್ಷೆ ಬೋಧಿಸಿದರು.
ಲಿಂಗಾಯತದ ಅಸ್ಮಿತೆಯನ್ನು ಕಾಪಾಡಿದಂತಹ ಹರ್ಡೇಕರ್ ಮಂಜಪ್ಪ, ಫ.ಗು. ಹಳಕಟ್ಟಿ ಮತ್ತೀತರ ಶರಣರನ್ನು, ಲಿಂಗಾಯತದ ಅಸ್ಮಿತೆಗಾಗಿ ಹುತಾತ್ಮರಾಗಿರುವ ಧೀರ ಶರಣ ಎಂ.ಎಂ.ಕಲಬುರಗಿಯವರನ್ನು ಸಭೆ ಸ್ಮರಿಸಿಕೊಂಡಿತು.
ಆರಂಭದಲ್ಲಿ ಶರಣ ಧ್ವಜಾರೋಹಣ ಮಾಡಲಾಯಿತು. ಶಂಕರ ಸಣಪಾ ಅವರಿಂದ ವಚನ ಗಾಯನ ಜರುಗಿತು. ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಮೋಹನ ಕರ್ಣಂದಿ, ಪ್ರೊ. ಎಸ್.ಆರ್. ಕಡಿವಾಲ, ಸಣ್ಣವೀರಪ್ಪ ದೊಡ್ಡಮನಿ, ಮಹಾಲಿಂಗಪ್ಪ ಕರನಂದಿ, ಮುರುಗೇಶ ಶೇಖಾ, ಯಲ್ಲಪ್ಪ ಮನ್ನಿಕಟ್ಟಿ, ಶಿವು ಗೋತಗಿ, ಗೀತಾ ತಿಪ್ಪಾ, ಸುರೇಖಾ ಗೆದ್ದಲಮನಿ, ಜಯಶ್ರೀ ಬರಗುಂಡಿ, ಗಾಯತ್ರಿ ಕಲ್ಯಾಣಿ ಮತ್ತೀತರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.