ಗುಳೇದಗುಡ್ದದ ಕಾರ್ಯಕ್ರಮದಲ್ಲಿ ಅಪ್ಪಣ್ಣ ತಂದೆಗಳ ಸ್ಮರಣೋತ್ಸವ

ಗುಳೇದಗುಡ್ಡ

ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ ಶರಣ ಶಿವುಕುಮಾರ ಶಿವಪ್ಪ ಶೀಪ್ರಿ ಅವರ ಮನೆಯಲ್ಲಿ ಜರುಗಿತು. ಬಸವ ತಂದೆಗಳ ಆಪ್ತರಾಗಿದ್ದು, ಸದಾ ಅವರ ಜೊತೆಗೆ ಸಖ್ಯವನ್ನು ಹೊಂದಿದ್ದ ಹಡಪದ ಅಪ್ಪಣ್ಣ ತಂದೆಗಳ ವಿಶೇಷ ಸ್ಮರಣೋತ್ಸವ ಆಚರಿಸಲಾಯಿತು.

ಚಿಂತನೆಗಾಗಿ ಆಯ್ದುಕೊಂಡ ಅಪ್ಪಣ್ಣ ತಂದೆಗಳ ವಚನ –

ಸಾವಾಗ ದೇವನೆಂದರೆ, ಸಾವು ಬಿಡುವುದೇ?
ಇದಾವ ಮಾತೆಂದು ನುಡಿವಿರಿ. ಎಲೆಯಣ್ಣಗಳಿರಾ
ಬಾಳುವಲ್ಲಿ ಬದುಕುವಲ್ಲಿ ಗುರು ಲಿಂಗ ಜಂಗಮವನರಿಯದೆ
ಹಾಳುಹರಿಯ ತಿಂದ ಶುನಕನಂತೆ, ಕಾಲ್ಗೆಡೆದು
ಓಡಾಡಿ ಎಳಲಾರದೆ ಬಿದ್ದಾಗ, ಶಿವ ಶಿವ
ಎಂದರೆ, ಅಲ್ಲಿ ದೇವನಿಪ್ಪನೆಂದು ಇದ ನೋಡಿ
ನಾಚಿ ನಗುರ್ತಿರ್ದ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ

ಕುಮಾರಿ ದಾನಮ್ಮ ಕುಂದರಗಿ ಹಾಗೂ ಸಂಗಡಿಗರಿಂದ ಸಾಮೂಹಿಕ ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿ. ನಂತರ ಅಪ್ಪಣ್ಣ ತಂದೆಗಳ ಭಾವಚಿತ್ರಕ್ಕೆ ಪುಷ್ಪಗಳನ್ನು ಸಮರ್ಪಿಸುವುದರ ಮೂಲಕ ಸ್ಮರಣೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪ್ರೊ. ಶ್ರೀಕಾಂತ ಗಡೇದ ಅವರು ಅಪ್ಪಣ್ಣ ತಂದೆಗಳ ಕುರಿತಾಗಿ ಸವಿಸ್ತಾರವಾಗಿ ಅವರ ಇತಿಹಾಸವನ್ನು, ಅವರ ಬದುಕಿನ ಸಾರವನ್ನು ಅತ್ಯಂತ ಹೃದಯ ಸ್ಪರ್ಶಿಯಾಗಿ ತಿಳಿಯಪಡಿಸಿದರು. ಬಸವ ತಂದೆಗಳು ಮತ್ತು ಹಡಪದ ಅಪ್ಪಣ್ಣ ತಂದೆಗಳು ಒಂದು ನಾಣ್ಯದ ಎರಡು ಮುಖಗಳು. ಅಪ್ಪಣ್ಣನವರ ಅನೇಕ ವಚನಗಳನ್ನು ಉದಾಹರಿಸುತ್ತ ವ್ಯಸನ, ಮದಗಳಿಂದ ಮುಕ್ತನಾಗುವುದರ ಕುರಿತಾಗಿ ಅವರ ವಚನಗಳಲ್ಲಿ ಕಂಡುಬರುತ್ತವೆ. ಸಮಾಜದಲ್ಲಿ ‘ಹಡಪದ’ ಕಾಯಕದ ಬಗ್ಗೆ ಇದ್ದ ಮೌಢ್ಯತೆಯನ್ನು ಹೋಗಲಾಡಿಸಲು ಅರಿವಿನ ಜೊತೆಗೆ ಆಚಾರವನ್ನು ತಂದಿದ್ದಾರೆ ಅಂತ ಹೇಳಲು ಬಸವ ತಂದೆಗಳು ಅಪ್ಪಣ್ಣ ತಂದೆಗಳನ್ನು ಜೊತೆ ಆಪ್ತರನ್ನಾಗಿಸಿಕೊಂಡು ಅವರ ಸಖ್ಯದಲ್ಲಿ ಇದ್ದರು ಎನ್ನುವದನ್ನು ವಚನಗಳಿಂದ ತಿಳಿದುಬರುತ್ತದೆ ಎಂದು ತಮ್ಮ ಚಿಂತನೆಯಲ್ಲಿ ತಿಳಿಹೇಳಿದರು.

ಕಾರ್ಯಕ್ರಮ ಮುಂದುವರೆದು ಪ್ರೊ. ಗಾಯತ್ರಿ ಕಲ್ಯಾಣಿ ಅವರು ಅಮಾನವೀಯತೆ ತುಂಬಿಕೊಂಡ ಪುರೋಹಿತಶಾಹಿ ಧರ್ಮದ ಆಚಾರ ವಿಚಾರಗಳನ್ನು ಜಗತ್ತಿಗೆ ಇದೇ ಧರ್ಮ ಅಂತ ಹೇಳುತ್ತ ಒಂದೆರಡು ವರ್ಗಗಳ ಸ್ವಾರ್ಥ ಮನಸ್ಸಿನ ಧರ್ಮ ಗುರುಗಳು ಜಾರಿಗೆ ತಂದು, ಸಮಾಜದಲ್ಲಿ ಕಗ್ಗತ್ತಲೆಯನ್ನು ಮೂಡಿಸಿದ್ದರು. ಶರಣರು ಅವರ ಆಚಾರ-ವಿಚಾರಗಳನ್ನು ಪ್ರಶ್ನಿಸುತ್ತ, ಸತ್ಯದ ಅರಿವನ್ನು ಸಮಾಜಕ್ಕೆ ನೀಡುತ್ತ, ಬದುಕಿ ಬೆಳಕನ್ನು ಚಲ್ಲಿದರು. ಈ ಮೌಢ್ಯ ವಿಚಾರ-ಆಚಾರಗಳಿಂದ ಹೊರಬಂದವರು ಲಿಂಗಾಯತರೆನಿಸಿಕೊಂಡರು. ಸಮಸ್ಯೆಗಳು ಬದುಕಿನಲ್ಲಿ ಬಂದಾಗ ಆ ದೇವ ಬಗೆಹರಿಸುತ್ತಾನೆ ಎಂಬ ಕಾರಣಕ್ಕೆ ಜನರು ಅವನನ್ನು ನೆನೆಯುತ್ತಾರೆ. ಆದರೆ ಅದು ಸತ್ಯ ಅಲ್ಲ ಎಂದು, ಬದುಕಿನ ಪ್ರಾರಂಭದಲ್ಲಿ ಆಚಾರ-ವಿಚಾರಗಳ ಸರಿ-ತಪ್ಪುಗಳನ್ನು ನಾವು ಮಾಡುವ ಕಾರ್ಯಗಳನ್ನು ಪರಿಶೀಲಿಸಿಕೊಂಡು ಬದುಕನ್ನು ಸಾಗಿಸಿದರೆ, ಬದುಕು ಸಮಸ್ಯೆಗಳಿಂದ ಮುಕ್ತವಾಗಿರುತ್ತದೆ ಅಥವಾ ಸಮಸ್ಯೆ ಎಂದರೆ ಏನು ಅಂತ ತಿಳಿಯುವದಿಲ್ಲ. ಸದಾ ಬದುಕು ನೆಮ್ಮದಿಯಲ್ಲಿ ಇರುತ್ತದೆ ಎಂದು ಈ ವಚನದ ಮೂಲಕ ಅಪ್ಪಣ್ಣ ತಂದೆಗಳು ಎಚ್ಚರಿಸುತ್ತಾರೆ, ದಾರಿ ತೋರಿದ್ದಾರೆ ಎಂದು ತಮ್ಮ ಅನುಭಾವದಲ್ಲಿ ಹೇಳಿದರು.

ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಪ್ರೊ. ಸುರೇಶ ರಾಜನಾಳ ಅವರು ಮಹಾಮನೆಯ ಮನೆತನದ ಹಿರಿಯ ಜೀವಿಗಳು ಆಧ್ಯಾತಿಕರು. ಅವರ ಬದುಕಿನ ಬಗ್ಗೆ ತಿಳಿಸಿ, ಅಂಗ ಹೇಗೆ ಲಿಂಗವಾಗಬೇಕೆಂಬುದು ತಿಳಿಸುವುದು ಶರಣರ ಮುಖ್ಯ ವಿಚಾರವಾಗಿತ್ತು, ದಿಕ್ಸೂಚಿಯಾಗಿತ್ತು. ವಚನಗಳು ಯಾಕೆ ಈಗಿನ ದಿನಮಾನಗಳಲ್ಲಿಯೂ ಪ್ರಸ್ತುತ ಹೇಗೆ ಎಂದರೆ ಶರಣರು ಅರಿವು ಆಚಾರವಂತರಾಗಿ, ಅನುಭಾವಿಗಳಾಗಿ ಬದುಕಿ ನಮಗೆಲ್ಲಾ ತೋರಿಸಿದ್ದಾರೆ. ಕಾಯಕ ದಾಸೋಹದ ನಂತರ ಹಾಳು ಹರಟೆ ಮಾಡದೇ ಶರಣರು ಅನುಭವ ಮಂಟಪದಲ್ಲಿ ಸೇರಿ ತಾವು ಕಂಡುಕೊಂಡ ಅರಿವನ್ನು ವ್ಯಕ್ತಪಡಿಸುತ್ತ, ಅವುಗಳ ಸತ್ಯ-ಅಸತ್ಯಗಳನ್ನು ಕಂಡುಕೊಳ್ಳುತ್ತಿದ್ದರು. ಆ ಚಿಂತನದಲ್ಲಿ ತಮ್ಮಲ್ಲಿಂದ ತಪ್ಪುಗಳನ್ನು ತಿದ್ದಿಕೊಂಡು ಬದುಕುತ್ತಿದ್ದರು ಎಂಬುದನ್ನು ನಾವೆಲ್ಲ ಮನಗಾಣಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅನುಭಾವದ ನಂತರ ಶರಣೆಯರಿಂದ ವಚನ ಮಂಗಲವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಕಾರ್ಯಕ್ರಮದ ಸಂಘಟಕರು ಶರಣು ಸಮರ್ಪಣೆ ಸಲ್ಲಿಸಿದರು. ಕುಟುಂಬದ ಬಂಧುಗಳು, ನೆರೆಹೊರೆಯವರು, ಬಸವಕೇಂದ್ರದ ಸದಸ್ಯರು, ಚಂದ್ರಶೇಖರ ತೆಗ್ಗಿ, ಪಾಂಡಪ್ಪ ಕಳಸಾ, ಪುತ್ರಪ್ಪ ಬೀಳಗಿ, ಯಂಡಿಗೇರಿ, ಸುರೇಶ ರಾಜನಾಳ, ಕಂಬಾಳಿಮಠ ಸರ್, ಗೀತಾ ತಿಪ್ಪಾ, ಪ್ರೊ. ಗಾಯತ್ರಿ ಕಲ್ಯಾಣಿ, ನೇತ್ರಾ ರಕ್ಕಸಗಿ, ವಚನಾ ಶೇಖಾ, ಶ್ರೀದೇವಿ ಶೇಖಾ, ವಿಶಾಲಕ್ಷಿ ಗಾಳಿ, ದಾನಮ್ಮ ಕುಂದರಗಿ, ಮೊದಲಾದರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *