ಎಮ್ಮವರಿಗೆ ಸಾವಿಲ್ಲ: ವಿಶ್ವಚೈತನ್ಯದ ಭಾಗವಾಗಿ ಬದುಕಿದ ಶರಣರು

ಗುಳೇದಗುಡ್ಡ

ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ ತಿಪ್ಪಾಪೇಟೆಯ ಚನ್ನಪ್ಪ ಚಿಂದಿ ಅವರ ಮನೆಯಲ್ಲಿ ನಡೆಯಿತು.

ಚಿಂತನೆಗಾಗಿ ಆಯ್ದುಕೊಂಡ ವಚನ –

ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು,
ಸಾವೆಂಬುದು ಸಯವಲ್ಲ.
ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ
ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದೆಡೆಯಿಲ್ಲ.
ಕೂಡಲಸಂಗಮದೇವರ ಶರಣ ಸೊಡ್ಡಳ ಬಾಚರಸರು
ನಿಜಲಿಂಗದ ಒಡಲೊಳಗೆ ಬಗಿದು ಹೊಕ್ಕಡೆ,
ಉಪಮಿಸಬಲ್ಲವರ ಕಾಣೆನು.

ಧರ್ಮಗುರು ಬಸವ ತಂದೆಯ ಈ ವಚನವನ್ನು ವಿಶ್ಲೇಷಣೆಗೆ ಎತ್ತಿಕೊಂಡ ಪ್ರೊ. ಶ್ರೀಕಾಂತ ಗಡೇದ ಅವರು ಮಾತನಾಡುತ್ತ, ಬಸವ ತಂದೆಗಳು ಅಂದಿನ ಎಲ್ಲ ಕಾಯಕದ ಎಲ್ಲ ಶರಣರನ್ನು ಅಪ್ಪಿಕೊಂಡು ನಡೆದವರು.

ಅವರ ಕಷ್ಟ ಸುಖಗಳಲ್ಲಿ ಭಾಗಿಯಾದವರು, ಅದಕ್ಕಾಗಿ ಜನನ ಮರಣದ ಭೀತಿಯನ್ನು ಕಳೆದುಕೊಂಡು ಮರಣವನ್ನೇ ಮಹಾನವಮಿನ್ನಾಗಿಸಿದರು (ಸಂಭ್ರಮವನ್ನಾಗಿಸಿಕೊಂಡವರು) ಎಂದು ಹೇಳಿದರು.

ಈ ವಚನದ ಅನುಭಾವವನ್ನು ಮುಂದುವರೆಸಿ ಮಾತನಾಡಿದ ಮಹಾಂತೇಶ ಸಿಂದಗಿ ಅವರು, ‘ಎಮ್ಮವರು’ ಎಂದರೆ ಸಮಗ್ರ ‘ಶರಣ ಸಂಕುಲ’. ಅವರು ಅಂಗ ಲಿಂಗದ ಭೇದವನರಿದು ಬದುಕಿದವರು. ಅವರು ಸಾಯಲಿಲ್ಲ; ಲಿಂಗದಲ್ಲಿ ಐಕ್ಯರಾದರು. ಅದನ್ನೇ ಸೊಡ್ಡಳ ಬಾಚರಸರನ್ನು ಉದಾಹರಣೆಯನ್ನಾಗಿಸಿಕೊಂಡು ಪ್ರತಿಯೊಂದು ಜೀವಿಯೂ ಲಿಂಗದಲ್ಲಿ ಉದಯವಾಗಿ ಲಿಂಗದಲ್ಲಿಯೇ ಐಕ್ಯವಾಗುತ್ತದೆ. ಹೀಗಾಗಿ ಎಮ್ಮವರಿಗೆ ಸಾವಿಲ್ಲ, ಅಲ್ಲಿರುವುದು ಐಕ್ಯಸ್ಥಿತಿ. ಇದು ಲಿಂಗವಂತರ ತತ್ವ ಸಿದ್ಧಾಂತ ಎಂದು ಹೇಳಿದರು.

ಚಿದಾನಂದಸಾ ಕಾಟವಾ ಅವರು ಈ ವಚನದ ತಾತ್ಪರ್ಯವನ್ನು ವಿವರಿಸಿ ಮಾತನಾಡುತ್ತ – ನಮ್ಮ ಶರಣರು ತಮ್ಮ ವಚನಗಳ ಮೂಲಕ ಇಂದಿಗೂ ಬದುಕಿದ್ದಾರೆ. ದೈಹಿಕವಾಗಿ ಅವರಿಲ್ಲವಾದರೂ ಕಾಯಕ, ದಾಸೋಹಗಳ ಮೂಲಕ ಇಂದಿಗೂ ಬದುಕಿದ್ದಾರೆ.

ಅವರು ನೀಡಿದ ವಚನಗಳ ಮೂಲಕ ಇಂದಿಗೂ ಇದ್ದಾರೆ. ಮುಂದೆಯೂ ಇರುತ್ತಾರೆ. ಹೀಗಾಗಿ ಅವರಿಗೆ ಸಾವಿಲ್ಲ ಎಂದರು.

ಸಿದ್ಧಲಿಂಗಪ್ಪ ಬರಗುಂಡಿ ಅವರು ಈ ವಚನವನ್ನು ಸಮಾರೋಪಗೊಳಿಸುತ್ತ, ಧರ್ಮಗುರು ಬಸವ ತಂದೆಗಳು ಲಿಂಗಾಯತ ಧರ್ಮದ ಬಹುಮುಖ್ಯವಾದ ತತ್ವವೊಂದನ್ನು ಇಲ್ಲಿ ತಿಳಿಸಿದ್ದಾರೆ. ಸಾಮಾನ್ಯರ ಬದುಕಿನಲ್ಲಿ ಸಾವು ಎನ್ನುವದು ಬಹು ದುಃಖಕರವಾದ ವಿಷಯ. ಹಲವರಿಗೆ ಸಾವು ಎನ್ನುವ ಶಬ್ದವೇ ಹೆದರಿಕೆಯನ್ನು ತರುವಂತಹುದು. ಕಾರಣ ಸಾವಿನ ಕುರಿತು ಅಜ್ಞಾನ. ಯಾವ ವಸ್ತು ಹುಟ್ಟಿದೆಯೋ ಅದು ಮರಣಿಸಲೇಬೇಕು. ಆದರೆ ಶರಣರು ಹುಟ್ಟಿದವರಲ್ಲ, ವಿಶ್ವಚೈತನ್ಯದ ಭಾಗವಾಗಿ ಬದುಕಿದವರು.

ಮಹಾಲಿಂಗದಿಂದ ನಾದ-ಬಿಂದು-ಕಳೆಗಳ ಮೂಲಕ ಪಂಚಭೂತಗಳ ಮೂಲಕ ಹೊಂದಿದ ಶರೀರ ಕಾಮಾದಿ ಅರಿಷಡ್ವರ್ಗ, ಅಷ್ಟಮದಗಳು ಮೊದಲಾಗಿ ಮಲತ್ರಯಗಳಿಗೆ ಪಕ್ಕಾಗಿ ಅಂಗ ಎನಿಸಿಕೊಳ್ಳುತ್ತಾನೆ. ಹೀಗಾಗಿ ಅಂಗ ಗುಣಗಳನ್ನು ನೀಗಿಸಿಕೊಂಡರೆ ಆತನೇ ಲಿಂಗ ಎನಿಸಿಕೊಳ್ಳುತ್ತಾನೆ. ಇದನ್ನೇ ಲಿಂಗೋದ್ಭವ ಹಾಗೂ ಲಿಂಗೈಕ್ಯ ಎಂದು ಕರೆಯುತ್ತಾರೆ.

ಹೀಗಾಗಿ ಶರಣರಿಗೆ ಜನನ ಮರಣಗಳಿಲ್ಲ. ಭಕ್ತ ಸ್ಥಲದಿಂದ ಸಾಗಿ ಐಕ್ಯಸ್ಥಲ ಸೇರಿ ಮಹಾಲಿಂಗವೇ ಆಗುತ್ತಾನೆ. ಹೀಗೆ ಈ ಹಂತವನ್ನು ತಲುಪಿದವರಲ್ಲಿ ಸೊಡ್ಡಳ ಬಾಚರಸರೂ ಒಬ್ಬರು ಎಂದು ಬರಗುಂಡಿಯವರು ವಚನದ ಅರ್ಥವನ್ನು ವಿವರಿಸಿದರು.

ಕಾರ್ಯಕ್ರಮದ ಅನುಭಾವದ ನಂತರ ವಚನದೊಂದಿಗೆ ಮಂಗಲವಾಯಿತು. ಪ್ರಾರಂಭದಲ್ಲಿ ಕುಮಾರಿ ದಾನಮ್ಮ ಕುಂದರಗಿ, ಜಯಶ್ರೀ ಬರಗುಂಡಿ ಅವರು ವಚನ ಪ್ರಾರ್ಥನೆಗೈದರು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಕಾರ್ಯಕ್ರಮದ ನಿರೂಪಕರಾದ ಪ್ರೊ. ಸುರೇಶ ರಾಜನಾಳ ಅವರು ಎಲ್ಲರನ್ನು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರೊ. ಬಸಲಿಂಗಯ್ಯ ಕಂಬಾಳಿಮಠ, ಹುಚ್ಚೇಶ ಸಿಂದಗಿ, ಪಾಂಡಪ್ಪ ಕಳಸಾ, ಮಹಾಲಿಂಗಪ್ಪ ಕರನಂದಿ, ಪುತ್ರಪ್ಪ ಬೀಳಗಿ, ಚಂದ್ರಶೇಖರ ತೆಗ್ಗಿ, ಬಸವರಾಜ ಖಂಡಿ, ಪ್ರೊ. ಶಿವಕುಮಾರ ಶೀಪ್ರಿ, ರಾಚಣ್ಣ ಕೆರೂರ, ಗಾಯತ್ರಿ ಕಲ್ಯಾಣಿ, ಸುರೇಖಾ ಗೆದ್ದಲಮರಿ, ಅನ್ನಪೂರ್ಣ ರಾ. ಕೆರೂರ, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BC3ULQcPxmhAhKS4XV9R1G

Share This Article
Leave a comment

Leave a Reply

Your email address will not be published. Required fields are marked *