ಗುಳೇದಗುಡ್ಡದಲ್ಲಿ ಮಾದಾರ ಚೆನ್ನಯ್ಯ ತಂದೆಯ ವಚನ ನಿರ್ವಚನ

ಗುಳೇದಗುಡ್ಡ

ಶರಣ ಮಾದಾರ ಚೆನ್ನಯ್ಯ ತಂದೆಯ ವಚನವನ್ನು ಶರಣ ಸದಾನಂದ ನಾಗನೂರ, ಗುಳೇದಗುಡ್ಡ, ಅವರ ಮನೆಯಲ್ಲಿ ಶನಿವಾರ, ಜರುಗಿದ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದಲ್ಲಿ ಅನುಭಾವಕ್ಕೆ ಆಯ್ದುಕೊಳ್ಳಲಾಗಿತ್ತು.

ಕಾಯದ ಸುಳುಹುಳ್ಳನ್ನಕ್ಕ ಕರ್ಮಪೂಜೆ ಬೇಕೆಂಬರು.
ಜೀವನ ಸಂಚಾರವುಳ್ಳನಕ್ಕ ಜ್ಞಾನವರಿಯಬೇಕೆಂಬರು.
ಜ್ಞಾನ ಧ್ಯಾನಿಸಿ, ಕಾಬಲ್ಲಿ, ಕಾಯದ ಕರ್ಮದಿಂದ ಮುಕ್ತಿಯೋ?
ಜೀವನ ಜ್ಞಾನದಿಂದ ಮುಕ್ತಿಯೋ? ಜ್ಞಾನ
ಧ್ಯಾನದಿಂದ ಮುಕ್ತಿಯೋ?
ಧ್ಯಾನಿಸಿ ಕಾಲ ಕುರುಹ ಎನಗೊಂದುಬಾರಿ ತೋರಾ.
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ]ರಾಮ ರಾಮನಾ.
-ಮಾದಾರ ಚೆನ್ನಯ್ಯ ತಂದೆಗಳು

ಸ್ವಾರ್ಥ ಪರನಾದ ಮನುಷ್ಯ ತಾನೊಬ್ಬನೇ ಚೆನ್ನಾಗಿ ಇರಬೇಕೆಂದು ಅನೇಕ ವಾಮಮಾರ್ಗಗಳನ್ನು ಹಿಡಿದನು. ಅದರಲ್ಲಿ ಈ ಧಾರ್ಮಿಕ ವಿಧಿವಿಧಾನಗಳು ಸಹ ಸೇರಿಕೊಂಡಿವೆ. ಮರಣದ ನಂತರದಲ್ಲಿ ತಾನು ಸಕಲ ವೈಭವದಿಂದ ಇರಬೇಕೆಂದು, ಭೂಲೋಕವಲ್ಲದೆ ಇನ್ನೊಂದು ಲೋಕ ತನ್ನ ಮರಣದ ನಂತರ ಇದೆ ಎಂದು, ಅಲ್ಲಿ ಇರುವ ಕಲ್ಪನೆಗೆ ಒಳಗಾಗಿ ಈ ಭೂಲೋಕದಿಂದ ಮುಕ್ತಿ (ಮೋಕ್ಷ)ವನ್ನು ಪಡೆಯಬೇಕೆಂದು ಹಂಬಲಿಸಿದ.

ಅದಕ್ಕಾಗಿ ಅನೇಕ ಮೌಢ್ಯಾಚರಣೆಗಳ ದಾಸನಾಗಿ ಸರಿಯಾದ ಜ್ಞಾನದ ಕೊರೆತೆಯಿಂದಾಗಿ ಅವುಗಳನ್ನು ಅನುಸರಿಸಿದ. ಆದರೆ, ಶರಣರು ತಮ್ಮ ನಡೆ-ನುಡಿಗಳಿಂದ ಮೌಢ್ಯಗಳಿಂದ ಹೇಗೆ ಹೊರಬರಬಹುದೆಂದು ತೋರಿಸಿಕೊಟ್ಟರು. ಕಾಯಕ ಮತ್ತು ದಾಸೋಹ ಲಿಂಗಾಯತರ ಎರಡು ಸಂಸ್ಕೃತಿಗಳು ಎಂದು ಕಾರ್ಯಕ್ರಮ ಪ್ರಾರಂಭದಲ್ಲಿ ಶರಣ ಪ್ರೊ. ಶ್ರೀಕಾಂತ ಗಡೇದ ಅವರು ಅನುಭವ ನೀಡಿದರು.

ನಿರೂಪವಾದ ಚೈತನ್ಯಕ್ಕೆ ಈ ಕಾಯ ಸ್ವರೂಪವಾದದ್ದು. ಈ ಕಾಯಕ್ಕೆ ಕರ್ಮ ಬೇಕು ಸಾಧನೆಗೆ. ಒಳ್ಳೆಯ ಕರ್ಮ ಅರಿವಿನಿಂದ ಸಾಧ್ಯ. ಅದಕ್ಕೆ ಜ್ಞಾನ ಸಹಕಾರಿ. ಸ್ವಾರ್ಥದಿಂದ ಕೂಡಿದ ಕರ್ಮ ಸಲ್ಲದು. ಸಾಧನೆ ಅಸಾಧ್ಯ. ಸರಿಯಾಗಿ ಅರಿಯದ ಕರ್ಮದಿಂದ ಪ್ರಸಾದ ಕಾಯ ನಾಶ, ಮೋಕ್ಷ ಅಸಾಧ್ಯ. ಅರಿಷಡ್ವರ್ಗಗಳನ್ನು ಅರಿತರೆ ಮುಕ್ತಿ ಮಾರ್ಗ ಗೋಚರ ಎಂದು ಚಿದಾನಂದ ಕಾಟವಾ ಶಾಸ್ತ್ರೀಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಹಾಗೆ ಪ್ರೊ. ಗಾಯತ್ರಿ ಕಲ್ಯಾಣಿ ಯವರು ಈ ವಚನ ತರ್ಕಬದ್ಧವಾಗಿದೆ. ಇದರ ಚಿಂತನೆ ದೊರಕಿರುವುದು ನಮ್ಮ ಅದೃಷ್ಟ. ಮುಕ್ತಿ ಮಾರ್ಗದ ಆಯ್ಕೆಯ ಅರಿವು ಈ ವಚನದಿಂದ ತಿಳಿಯುವುದನ್ನು ಚೆನ್ನಯ್ಯ ತಂದೆಗಳು ಸೂಕ್ಷ್ಮವಾಗಿ ತಿಳಿಹೇಳಿದ್ದಾರೆ ಎಂದು ಹೇಳಿದರು.

ಚಿಂತನೆ ಮುಂದುವರೆದು ಅನುಭಾವಿಗಳಾದ ಮಹಾಂತೇಶ ಸಿಂದಗಿಯವರು ಚೆನ್ನಯ್ಯ ಹಾಗೂ ಬಸವ ತಂದೆಗಳ ಸಂಬಂಧವನ್ನು ತಿಳಿಸುತ್ತಾ ವೈದಿಕರ ದೃಷ್ಟಿಯಲ್ಲಿ ನಾವೆಲ್ಲರೂ ಶೂದ್ರರೇ. ಶರಣರ ಕೃಪೆಯಿಂದ ಆ ಹೀನ ಮನಸ್ಥಿತಿಯಿಂದ ಮುಕ್ತಿಯನ್ನು ಪಡೆದೆವು. ಜೀವ ಚೈತನ್ಯದಿಂದ ಸುಳುಹುವಿನಕ್ಕ ಈ ಕಾಯಕ್ಕೆ ಕರ್ಮ ಬೇಕು. ಈ ಕಾಯದ ಜೀವನ ಸುಗಮವಾಗಿ ಯಾವುದೇ ಅಡೆತಡೆಗಳಿಲ್ಲದೆ ಸಾಗಬೇಕೆಂದರೆ ಜ್ಞಾನದ ಅರಿವು ಆಧಾರ. ಹೀಗೆ ಚೈತನ್ಯ ಕಾಯದಲ್ಲಿ ಕಾಯ ಕರ್ಮದಲ್ಲಿ, ಕರ್ಮ ಜ್ಞಾನದಲ್ಲಿ ಧ್ಯಾನಿಸಿದಾಗ ಜೀವ ಕಾಯದ ಅರಿವಿಲ್ಲದೆ ಸಾಗುವುದೇ ಮುಕ್ತಿ ಎಂದು ತಮ್ಮ ಚಿಂತನೆಯಲ್ಲಿ ಹೇಳಿದರು.

ಇದೇ ವಚನವನ್ನು ಕುರಿತು ಅನುಭಾವವನ್ನು ಮುಂದುವರಿಸಿದ ಸಮಾರೋಪದಂತೆ ಮಾತನಾಡಿದ ಶರಣ ಪ್ರೊ. ಮಹಾದೇವಯ್ಯ ಪ. ನೀಲಕಂಠಮಠ ಅವರು ವಚನದ ಆಶಯವನ್ನು ತಿಳಿಸುತ್ತ, ಭಾರತೀಯರಲ್ಲಿ ಇಹ ಮತ್ತು ಪರಕ್ಕೆ ಸಂಬಧಿಸಿದಂತೆ ಅನೇಕ ಭಿನ್ನ ಭಿನ್ನ ನಂಬಿಕೆಗಳಿವೆ. ಮರಣೋತ್ತರ ನಂತರದ ಸ್ಥಿತಿ ಅನೇಕ ನಂಬಿಕೆಗಳಿವೆ. ಅದರಲ್ಲಿ ಮುಕ್ತಿ ಮೋಕ್ಷದ ಕಲ್ಪನೆಯೂ ಒಂದು. ಸಾಮಾನ್ಯವಾಗಿ ಶರೀರದಿಂದ ಆತ್ಮನ ಬಿಡುಗಡೆ ಮತ್ತು ಸ್ವರ್ಗ ನರಕಗಳ ಪ್ರಾಪ್ತಿ ಇತ್ಯಾದಿ ಹೀಗಾಗಿ ಭಕ್ತಿ ಮಾರ್ಗ, ಜ್ಞಾನ ಮಾರ್ಗ ಮತ್ತು ಕರ್ಮ ಮಾರ್ಗಗಳನ್ನು ಅವರು ಕಂಡುಕೊಂಡರು.

ಆದರೆ ಶರಣರು ಇದನ್ನೆಲ್ಲ ಮೀರಿ ಸ್ವರೂಪ ಚಿಂತನೆಯಲ್ಲಿ ತೊಡಗಿ ಮುಕ್ತಿಗಿಂತ ಭಿನ್ನವಾದ ಐಕ್ಯದ ನೆಲೆಯನ್ನು ಕಂಡುಕೊಂಡರು. ಇಲ್ಲಿ ತ್ರಿವಿಧನಾದ ಅಂಗನು ತ್ರಿವಿಧವಾದ ಲಿಂಗವನ್ನು ಪೂಜಿಸಿ ಲಿಂಗವೇ ಆಗುತ್ತಾನೆ. ಇದು ಕಾರಣ, ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರಗಳಿಂದ ಇಷ್ಟ, ಪ್ರಾಣ, ಭಾವ ಲಿಂಗವನ್ನು ಹೊಂದುತ್ತಾನೆ. ತನು ಅಂದರೆ ಶರೀರ ಇರುವವರೆಗೆ ಇಷ್ಟಲಿಂಗವನ್ನು ತನ್ನ ಅರಿವಿನ ಕುರುಹಾಗಿ ಪೂಜಿಸುತ್ತ ಪ್ರಾಣಲಿಂಗವೇ ಆಗುತ್ತ, ಭಾವದಲ್ಲಿ ಭಾವಲಿಂಗವೇ ಆಗುತ್ತಾನೆ. ಆಗ ನಾನು – ತಾನು ಎಂಬುದಿಲ್ಲ. ಇವೆಲ್ಲ ಏಕಕಾಲದಲ್ಲಿ ನಡೆಯುವಂತಹುದು. ಯಾವುದೂ ಮೇಲ್ಲಲ್ಲ, ಯಾವುದೂ ಕೀಳಲ್ಲ. ಇದನ್ನೇ ಪೂರ್ವಿಕರಲ್ಲಿ ಕೆಲವರು ಕರ್ಮ, ಇನ್ನು ಕೆಲವರು ಜ್ಞಾನ, ಧ್ಯಾನ ಮುಖ್ಯವೆಂದು ವಾದಿಸುತ್ತಿರುವಾಗ ಮಾದರ ಚೆನ್ನಯ್ಯ ಶರಣರು ಇವನ್ನೆಲ್ಲ ಮೀರಿ ತನು, ಮನ ಮತ್ತು ಭಾವದ ಸ್ಥಿತಿಯನ್ನು ಮೀರಿ ತನ್ನಲ್ಲಿ ತಾನು ಮೀರಿ ನಿಂತು ಆತ್ಮರಾಮನಾಗುವ ಸ್ಥಿತಿಯನ್ನು ಈ ವಚನದಲ್ಲಿ ಅರುಹಿದ್ದಾರೆ ಎಂದು ವಿವರಿಸಿದರು

ಮಹಾಮನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿಂದ ಶರಣ ಸಿದ್ಧರಾಮೇಶ್ವರ ತಂದೆಗಳ ವಚನ ಬಸವ ಸ್ತುತಿಯೊಂದಿಗೆ ಪ್ರಾರಂಭವಾಗಿ, ಅನುಭಾವದ ನಂತರ ವಚನ ಮಂಗಲವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಶರಣ ಸದಾನಂದ ನಾಗನೂರ ಹಾಗೂ ಕುಟುಂಬದವರಿಗೆ ಕಾರ್ಯಕ್ರಮದ ಕಾರ್ಯದರ್ಶಿಗಳು ಶರಣು ಸಮರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶರಣಾದ ಪ್ರೊ. ಬಸಯ್ಯ ಕಂಬಾಳಿಮಠ, ಶಿವಾನಂದ ಸಿಂದಗಿ, ಪ್ರೊ. ಶಿವಕುಮಾರ ಶೀಪ್ರಿ, ಜಿರ್ಲಿ ಗೌಡರ, ಪುತ್ರಪ್ಪ ಬೀಳಗಿ, ಅಚನೂರ, ಪಾಂಡಪ್ಪ ಕಳಸಾ, ರಾಚಣ್ಣ ಕೆರೂರ, ಮಹಾಲಿಂಗಪ್ಪ ಕರನಂದಿ, ಯಂಡಿಗೇರಿ, ಶರಣೆಯರಾದ ಗೀತಾ ತಿಪ್ಪಾ, ಸುರೇಖಾ ಗೆದ್ದಲಮರಿ, ಶ್ರೀದೇವಿ ಶೇಖಾ ಹಾಗೂ ಸದಾನಂದ ನಾಗನೂರ ಹಾಗೂ ಅವರ ಪರಿವಾರದವರು ಸೇರಿದಂತೆ ಓಣಿಯ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
Leave a comment

Leave a Reply

Your email address will not be published. Required fields are marked *