ಗುಳೇದಗುಡ್ಡ
‘ಮನೆಯಲ್ಲಿ ಮಹಾಮನೆ’ ಸಾಪ್ತಾಹಿಕ ಕಾರ್ಯಕ್ರಮ ಮತ್ತು ಮೇದಾರ ಕೇತಯ್ಯ ತಂದೆಗಳ ಸ್ಮರಣೋತ್ಸವ ಕಾರ್ಯಕ್ರಮವು ಶನಿವಾರ ಗುಳೇದಗುಡ್ಡದ ಕಂಠಿ ಪೇಟೆಯ ಶರಣ ದಾನಪ್ಪ ಬಂಡಿ ಅವರ ಮನೆಯಲ್ಲಿ ಜರುಗಿತು.
ಬಸವಾದಿ ಶರಣ ಕೇತಯ್ಯ ತಂದೆಯ ವಚನ –
ಇಂದ್ರಿಯಂಗಳ ಕೊಂದೆಹೆನೆಂದಡೆ, ಅವು ಕಂದರ್ಪನ ಹಂಗು,
ಕಂದರ್ಪನ ಕೊಂದೆಹೆನೆಂದಡೆ, ಅವು ಕಂಗಳ ಲಾಭ,
ಕಂಗಳು ಮುಚ್ಚಿಯಲ್ಲದೆ ಲಿಂಗವ ಕಾಣಬಾರದು.
ಅದು ನಿರಂಗಂಗಲದೆ, ಜಗದ ಹಂಗಿನವರಿಗಿಲ್ಲಾ ಎಂದೆ, ಗವರೇಶ್ವರಾ.
ಎಂಬ ಈ ವಚನದ ಮೇಲೆ ಅನುಭಾವ ನಡೆಯಿತು.
ಮಹಾಮನೆಯ ಕಾರ್ಯಕ್ರಮದಂತೆ ಪ್ರಾರಂಭದಲ್ಲಿ ಶರಣೆ ದಾನಮ್ಮ ಕುಂದರಗಿ, ಜಯಕ್ಕ ಬರಗುಂಡಿ ಹಾಗೂ ಸಂಗಡಿಗರಿಂದ ಸಾಮೂಹಿಕ ಪ್ರಾರ್ಥನೆಯ ನಂತರ ಪ್ರೊ. ಸುರೇಶ ತಿ. ರಾಜನಾಳ ಅವರು ಪ್ರಾಸ್ತಾವಿಕವಾಗಿ ತಮ್ಮ ಚಿಂತನೆಯನ್ನು ಪ್ರಾರಂಭಿಸಿ, ವಚನಕಾರರಾದ ಮೇದಾರ ಕೇತಯ್ಯ ತಂದೆಗಳ ಬಗ್ಗೆ ತಿಳಿಸುತ್ತಾ ಅನುಭಾವ ಪ್ರಾರಂಭಿಸಿ, ಶಿವಯೋಗದ ಮೂಲಕ ಇಂದ್ರಿಯ ನಿಗ್ರಹ ಮಾಡಿಕೊಂಡು ಲಿಂಗವನ್ನು ಕಾಣಬಹುದು ಎಂದು ಚಿಂತನೆಯಲ್ಲಿ ತಿಳಿಸಿದರು.
ಮುಂದುವರೆದು ಶರಣ ಮಹಾಂತೇಶ ಸಿಂದಗಿ ಮಾತನಾಡುತ್ತಾ, ಮೇದಾರ ಕೇತಯ್ಯನವರ ಬಗ್ಗೆ ಸವಿಸ್ತಾರವಾಗಿ ಅವರ ಕಾಯಕ ದಾಸೋಹದ ನಿಷ್ಠೆಯನ್ನು ತಮ್ಮ ಅನುಭಾವದಲ್ಲಿ ಹೇಳಿದರು.
ಚಿಂದಾನಂದ ಕಾಟವಾ ಅವರು ಚಿಂತನೆಗೆ ಇಳಿಯುತ್ತ ಶರಣರು ದಿನದ ಬದುಕನ್ನು ಸಾಗಿಸುತ್ತಿದ್ದರು. ಅಂದರೆ ಪ್ರತಿ ದಿನದ ದುಡಿಮೆ ಅಂದೇ ಖರ್ಚು ಮಾಡುತ್ತಿದ್ದರು, ಸಂಗ್ರಹಕ್ಕೆ ಒತ್ತು ಕೊಟ್ಟವರಲ್ಲ, ನಾಳಿನ ಚಿಂತೆ ಎಂದೂ ಮಾಡಿದವರಲ್ಲ ದಿನಂಪ್ರತಿ ಕಾಯಕ ದಾಸೋಹದಲ್ಲಿ ಇರುತ್ತಿದ್ದರು. ಇಂದ್ರಿಯಗಳಿಗೆ ಕಂಗಳು ಕಾಮನ ಬಾಗಿಲು ಅವುಗಳನ್ನು ಶರಣರ ವಚನಗಳ ಮಾರ್ಗದಂತೆ ನಡೆಸಿ ಬದಕನ್ನು ಸಾಗಿಸಬೇಕು ಎಂದು ತಿಳಿಸಿದರು.
ಗೋಷ್ಠಿಯ ಸಮಾರೋಪದಂತೆ ಪ್ರೊ. ಮಹಾದೇವಯ್ಯ ಪ. ನೀಲಕಂಠಮಠ ಅವರು ವಚನವನ್ನು ಮತ್ತೊಮ್ಮೆ ವಾಚಿಸುತ್ತ , ಕೇತಯ್ಯನವರ ಕೆಲವೇ ವಚನಗಳು ಲಭ್ಯ ಆದರೂ ಅವು ಉಚ್ಚ ಮಟ್ಟದಲ್ಲಿವೆ. ಹೊರಗಿನ ಇಂದ್ರಿಯಗಳಿಂದ ಬದಕನ್ನು ಕಟ್ಟಿಕೊಳ್ಳಲಾರದೆ ಅಂತರಂಗದ ಇಂದ್ರಿಯಗಳಲ್ಲಿ ಲಿಂಗ ಸ್ಥಾಪಿಸಿ ಲಿಂಗವನ್ನು ಕಾಣಬೇಕು. ಯೋಗದ ಬಗ್ಗೆ ತಿಳಿಸುತ್ತ ಅಳಿಯುವ ಯೋಗಕ್ಕಿಂತ ಅಳಿಯದೆ ಉಳಿಯುವ ಯೋಗ ಮಾಡಬೇಕು ಎಂದರು.
ವಚನ ಪ್ರಾರ್ಥನೆ, ಧರ್ಮ ಗುರು ಬಸವ ಸ್ಮರಣೆಯೊಂದಿಗೆ ಗೋಷ್ಠಿಯು ಸಾಮೂಹಿಕ ವಚನಗಳನ್ನು ಹೇಳುವುದರ ಮೂಲಕ ಸಂಪನ್ನಗೊಂಡಿತು.
ಗೋಷ್ಠಿಯಲ್ಲಿ ಮಹಾಮನೆಯ ಒಡೆಯರಾಗಿರುವ ದಾನಪ್ಪ ಬಂಡಿ ಪರಿವಾರದವರು, ನೆರೆಹೊರೆಯವರು, ಮೇದಾರ ಕೇತಯ್ಯ ಸಮಾಜದ ಬಾಂಧವರು, ಗುಳೇದಗುಡ್ಡ ಬಸವಕೇಂದ್ರ ಸದಸ್ಯರಾದ ಅಶೋಕ ಸೌದಿ, ಸಿದ್ದಯ್ಯ ಎಂ. ರೇವಣಸಿದ್ದೇಶ್ವರಮಠ, ಶರಣರಾದ ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ಸುರೇಶ ರಾಜನಾಳ, ಕಂಠಿ ಪೇಟೆ ಹಿರಿಯರು, ಮಂಜುನಾಥ ನಾಯನೇಗಲಿ, ಸಿದ್ದಯ್ಯ ಎಂ. ರೇವಣಸಿದ್ದೇಶ್ವರಮಠ ಮಹೇಂದ್ರಕರ ಮತ್ತು ಶರಣೆಯರಾದ ಶ್ರೀದೇವಿ ಮು. ಶೇಖಾ, ಜಯಶ್ರೀ ಬರಗುಂಡಿ, ಕುಪ್ಪಸ್ತ, ವಿಶಾಲಾಕ್ಷಿ ಗಾಳಿ ಹಾಗೂ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶ್ವಿಸಿಗೊಳಿಸಿದರು.