ಗುಳೇದಗುಡ್ಡ
ಗುಳೇದಗುಡ್ಡದ ಗಿರಿಜಾ ಗಂಗಾಧರಪ್ಪ ಶೀಲವಂತ ಅವರ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಬಸವಕೇಂದ್ರ ವತಿಯಿಂದ ಶನಿವಾರ ಜರುಗಿತು.
ಚಿಂತನೆಗಾಗಿ ಆಯ್ದುಕೊಂಡ ವಚನ –
ನರರ ಬೇಡೆನು, ಸುರರ ಹಾಸೆನು
ಕರಂಗಳ ಹರಿಯ ಬಿಡೆನು
ಕಾಮನ ಬಲೆಗೆ ಸಿಲ್ಕೆನು, ಮರವೆಗೊಳಗಾಗೆನು
ಪ್ರಣವ ಪಂಚಾಕ್ಷರಿಯ ಜಪಿಸಿಹೆನೆಂದು
ತನುವ ಮರೆದು, ನಿಜಮುಕ್ತಳಾದೆನಯ್ಯ
ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ
-ಲಿಂಗಮ್ಮ ತಾಯಿಯವರು
ಪ್ರಾರಂಭದಲ್ಲಿ ವಚನ ಚಿಂತನೆಗೆ ತೊಡಗಿದ ಪ್ರೊ. ಶ್ರೀಕಾಂತ ಗಡೇದ ಅವರು – ಈ ವಚನವನ್ನು ಹಡಪದ ಅಪ್ಪಣ್ಣ ನವರ ಪುಣ್ಯಸ್ತ್ರೀ ಲಿಂಗಮ್ಮ ತಾಯಿಯವರು ರಚಿಸಿದ್ದಾರೆ. ಅಪ್ಪಣ್ಣಪ್ರಿಯ ಚೆನ್ನವಸವಣ್ಣ ಎಂಬುದು ಅವರ ಅಂಕಿತವಾಗಿದೆ. ನೂರಾ ಹದಿನಾಲ್ಕು ವಚನ ಗ್ರಂಥಗಳಲ್ಲಿ ಅವರ ಹೆಸರು ಉಲ್ಲೇಖವಾಗಿದೆ.
ಅಕ್ಷರವಿಲ್ಲದ ಕಾಲದಲ್ಲಿ ಅಕ್ಷರ ಕಲಿಸಿದ ಶ್ರೇಯಸ್ಸು ಶರಣರದು. ಅಂಗ-ಲಿಂಗಗಳ ನಡುವಿನ ಸಂದೇಹಗಳನ್ನು ನೀಗಿಕೊಂಡು, ಅಂತರಂಗ-ಬಹಿರಂಗಗಳನ್ನು ಒಂದು ಮಾಡಿದಾಗ ನರನು ಹರನಾಗುತ್ತಾನೆ ಎಂದರು.

ನಿವೃತ್ತ ಶಿಕ್ಷಕರಾದ ಚವ್ಹಾಣ ಗುರುಗಳು ಮಾತನಾಡುತ್ತ, ಕಳೆದ ’27 ವರ್ಷ’ಗಳಿಂದ ನಡೆಸಿಕೊಂಡು ಬಂದಂತಹ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ ಬಸವತತ್ವವನ್ನು ಮನೆ ಮನೆಗೂ ತಲುಪಿಸುವ ದಿಟ್ಟ ಕಾರ್ಯಕ್ರಮವಿದು. ಶರಣರು ಯಾವುದೇ ವಿಶ್ವವಿದ್ಯಾಲಯದಿಂದ ಬೆಳೆದು ಬಂದವರಲ್ಲ. ಅವರು ತಮ್ಮ ಅನುಭಾವದಿಂದ ಬೆಳೆದು ಸಮಸಮಾಜವನ್ನು ನಿರ್ಮಿಸಿದರು ಎಂದು ಹೇಳಿದರು.
ಪ್ರೊ. ಸುರೇಶ ರಾಜನಾಳ ಅವರು ವಚನದ ಚಿಂತನೆಯನ್ನು ಮುಂದುವರೆಸುತ್ತ – ನಿಜ ಮುಕ್ತನಾಗಬೇಕಾದ ಮಾರ್ಗವನ್ನು ಅತ್ಯಂತ ಸರಳ ಭಾಷೆಯಲ್ಲಿ ಹಡಪದ ಲಿಂಗಮ್ಮ ತಾಯಿಯವರು ಈ ವಚನದಲ್ಲಿ ಕಟ್ಟಿಕೊಟ್ಟಿದ್ದಾರೆ. ಗಾಳಿಗಿಂತ ವೇಗವಾದ ಮನಸ್ಸನ್ನು ಹಿಡಿದಿಡುವುದು ಬಹು ಕಷ್ಟಸಾಧ್ಯವಾದ ಮಾತು. ಆದರೆ ಇದನ್ನು ಪ್ರಣವ ಪಂಚಾಕ್ಷರಿ ಮಹಾಮಂತ್ರದಿಂದ ನಿಯಂತ್ರಿಸಿ ನಿಜಮುಕ್ತನಾಗಲು ಸಾಧ್ಯವಿದೆ ಎಂದು ತಿಳಿಸಿದರು.
ಹಿರಿಯ ಅನುಭಾವಿಗಳಾದ ಪ್ರೊ. ಮಹಾದೇವಯ್ಯ ನೀಲಕಂಠಮಠ ಅವರು, ವಾರದ ವಚನದ ಚಿಂತನೆಯಲ್ಲಿ ತೊಡಗಿ, ಪ್ರತಿಯೊಬ್ಬ ಮಾನವನೂ ಇಂದ್ರಿಯ ವಿಕಾರಗಳಿಂದ ದೂರವಿರಬೇಕು. ವೈದಿಕ ಪರಂಪರೆಯಿಂದ ಅಂತರವನ್ನು ಕಾಯ್ದುಕೊಳ್ಳಬೇಕು. ಮರೆವಿನಿಂದ ದೂರವಿದ್ದು ಅರಿವಿನೆಡೆಗೆ ಸಾಗಬೇಕು. ನರ, ಸುರರ ಬೇಡದೆ ಕಾಯವಿಕಾರಕ್ಕೆ ಒಳಗಾಗದೆ ತನುವ ಮರೆದರೆ ನಿಜಮುಕ್ತಳಾಗಲು ಸಾಧ್ಯವೆಂದು ಲಿಂಗಮ್ಮ ತಾಯಿಯವರು ಹೇಳಿದ್ದಾರೆ.
ದೇಹವಿದ್ದಾಗಲೇ ಧರ್ಮದ ಆಚರಣೆ ಸಾಧ್ಯ. ಸಕಾಯ ಭಕ್ತಿಯಿಲ್ಲದೆ, ನಿಷ್ಕಾಮ ಭಕ್ತರಾಗಬೇಕು. ಯಾವುದಕ್ಕೂ ಅಂಟಿಕೊಳ್ಳದೆ ಬದುಕನ್ನೂ ಸಾಗಿಸಬೇಕು. ಇದೇ ಶರಣರ ಆಶಯ ಎಂದರು.
ಅನುಭಾವಿ ಪ್ರೊ. ಸಿದ್ಧಲಿಂಗಪ್ಪ ಬರಗುಂಡಿ ಅವರು ಸಮಾರೋಪಗೈಯುತ್ತ, ಹಡಪದ ಲಿಂಗಮ್ಮ ತಾಯಿ ‘ಈ ವಚನದಲ್ಲಿ ಐಕ್ಯಸ್ಥಿತಿಯನ್ನು ಹೊಂದಲು ಏನೇನೂ ಮಾಡಬೇಕು ಎಂಬ ಅರಿವು ನೀಡಿದ್ದಾರೆ. ನರರನ್ನು ಬೇಡಬಾರದು. ಕಾಯಕ-ದಾಸೋಹವನ್ನ ಆತ ಅಳವಡಿಸಿಕೊಂಡಿರುವುದು ಒಂದು ಕಾರಣವಾದರೆ, ಇನ್ನೊಂದು ಹಂಗಿಗೆ ಒಳಗಾಗುತ್ತದೆ. ಹಾಗೆಯೇ ದೇವತೆಗಳನ್ನು ಬೇಡಿಕೊಂಡರೆ ಆ ಕ್ಷಣದ ಲೌಕಿಕ ಆಸೆ ಈಡೇರಬಹುದೇ ವಿನಃ ಸಮರಸ ಸ್ಥಿತಿ ಉಂಟಾಗದು.
ಸಕಲ ಇಂದ್ರಿಯಗಳ ದಾಸನಾಗದೇ, ಕಾಮನೆಗಳಿಗೆ ಒಳಗಾಗದೇ, ಸದಾ ಪ್ರಣವ ಪಂಚಾಕ್ಷರಿಯ ಜಪಿಸುತ್ತಲಿದ್ದರೆ, ದೇಹಭಾವವನ್ನು ನೀಗಿ ಐಕ್ಯಸ್ಥಲವನ್ನು ಹೊಂದುತ್ತಾರೆ ಎಂದು ಲಿಂಗಮ್ಮ ತಾಯಿ ಇಲ್ಲಿ ಅಪ್ಪಣೆ ಕೊಡಿಸಿದ್ದಾರೆ ಎಂದು ಬರುಗುಂಡಿಯವರು ತಿಳಿಸಿದರು.

ಜಯಶ್ರೀ ಬರಗುಂಡಿ ಹಾಗೂ ಶ್ರೀದೇವಿ ಶೇಖಾ ಅವರಿಂದ ವಚನ ಪ್ರಾರ್ಥನೆಯಾಗಿ, ಕಾರ್ಯಕ್ರಮವು ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಅನುಭಾವದ ನಂತರ ವಚನ ಮಂಗಲವಾಯಿತು.
ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ಆಯೋಜಕರು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಹಾಲಿಂಗಪ್ಪ ಕರನಂದಿ, ರಾಚಣ್ಣ ಕೆರೂರ, ಪಾಂಡಪ್ಪ ಕಳಸಾ, ಸುರೇಶ ರಾಜನಾಳ, ಪ್ರೊ. ಚಂದ್ರಶೇಖರ ಹೆಗಡೆ, ಶಿರೂರ ಸರ್, ಮಹೇಂದ್ರಕರ ಸಂತರು, ಡಾ. ಗೀರಿಶ ನೀಲಕಂಠಮಠ, ಪ್ರೊ. ಬಸಲಿಂಗಯ್ಯ ಕಂಬಾಳಿಮಠ, ಪುತ್ರಪ್ಪ ಬೀಳಗಿ, ಹುಚ್ಚೇಶ ಯಂಡಿಗೇರಿ, ಚಂದ್ರಶೇಖರ ತೆಗ್ಗಿ, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
