ಶಹಾಪುರ
“ಸರ್ವೇಜನ ಸುಖಿನೋ ಭವಂತು” ಎಂಬ ತತ್ವವಿದ್ದ ಕಾಲದಲ್ಲಿ, “ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ” ತತ್ವವು ೧೨ನೇ ಶತಮಾನದ ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣರ ಚಳುವಳಿಯ ಕಾಲ ಅಪರೂಪದ ಕಾಲವಾಗಿತ್ತು. ಒಬ್ಬರನ್ನೊಬ್ಬರು ಮುಟ್ಟಿದರೆ ಮಹಾಪಾಪವೆಂದು ಭಾವಿಸಲಾಗಿದ್ದ ಆ ಕಾಲಘಟ್ಟದಲ್ಲಿ, ಕೆಳವರ್ಗದ ಜನರನ್ನು ಒಪ್ಪಿ ಅಪ್ಪಿಕೊಂಡ ಮಹಾಪುರುಷರೆಂದರೆ ಬಸವಣ್ಣನವರು.
ಅದರಲ್ಲೂ, ಹಡಪದವರು ಎದುರು ಬಂದರೆ ಅಪಶಕುನ ಎಂದು ಭಾವಿಸುತ್ತಿದ್ದ ಸಂದರ್ಭದಲ್ಲಿ, ಅಣ್ಣ ಬಸವಣ್ಣನವರು ಹಡಪದ ಅಪ್ಪಣ್ಣನವರನ್ನು ತಮ್ಮ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡರು. ಮಾತ್ರವಲ್ಲದೆ, ತಮ್ಮ ಎಲ್ಲ ಕಾರ್ಯಗಳನ್ನು ಅವರ ಮೂಲಕವೇ ಮಾಡಿಸುತ್ತಿದ್ದರು. ಇದು ಬಸವಣ್ಣನವರ ವಿಶಾಲ ಮನಸ್ಸಿಗೆ ಸಾಕ್ಷಿಯಾಗಿದೆ.
ಅಪ್ಪಣ್ಣನವರ ವಚನ ಮುದ್ರಿಕೆಯು “ಬಸವಪ್ರಿಯ ಕೂಡಲಚೆನ್ನಬಸವಣ್ಣ” ಎಂಬುದಾಗಿದೆ. ಇದಕ್ಕೆ ಪೂರಕವಾಗಿ, ಅವರ ಒಂದು ವಚನದಲ್ಲಿ ಹೀಗೆ ಹೇಳುತ್ತಾರೆ: “ಅಯ್ಯ ಎನಗೆ ಬಸವಪ್ರಿಯನೆಂದರೂ ನೀನೆ, ಕೂಡಲಚೆನ್ನಬಸವಣ್ಣನೆಂದರೂ ನೀನೆ, ಗುರುವೆಂದರೂ ನೀನೆ, ಪ್ರಸಾದವೆಂದರೂ ನೀನೆ” ಎಂಬ ಮಾತುಗಳೇ ಸಾಕು.
ತಮಗೆ ಒಪ್ಪಿಸಿದ ಕಾರ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದ ಅಪ್ಪಣ್ಣ ತಮ್ಮ ಒಂದು ವಚನದಲ್ಲಿ ಹೀಗೆ ಹೇಳುತ್ತಾರೆ:
ತನ್ನ ತಾನರಿಯದೆ, ತನ್ನ ತಾನೋಡದೆ, ತನ್ನ ತಾನುಡಿಯದೆ, ಅನ್ಯರ ಸುದ್ದಿಯ ನುಡಿದಾಡುವ ಕುನ್ನಿಗಳಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ. ಅವನು ಸರ್ವಾಪರಾಧಿ, ಅವನ ಮುಖವ ನೋಡಲಾಗದು ಬಸವಪ್ರಿಯ ಕೂಡಲಚೆನ್ನಬಸವಣ್ಣ.
ಇಲ್ಲಿ, ತನ್ನನ್ನು ತಾನು ತಿಳಿದುಕೊಳ್ಳುವ ಮಹತ್ವವನ್ನು ಅಪ್ಪಣ್ಣ ಒತ್ತಿಹೇಳುತ್ತಾರೆ ಮತ್ತು ಅನ್ಯರ ವಿಷಯಗಳಲ್ಲಿ ತಲೆಹಾಕುವವರು ಸರ್ವಾಪರಾಧಿಗಳು ಎಂದು ಸಾರುತ್ತಾರೆ.
ಒಮ್ಮೆ ಅಲ್ಲಮಪ್ರಭುಗಳು ಬಸವಣ್ಣನವರ ಮಹಾಮನೆಗೆ ಬಂದಾಗ, ಬಸವಣ್ಣನವರು ಪೂಜೆಗೆ ಕುಳಿತಿರುತ್ತಾರೆ. ಆಗ ಅಪ್ಪಣ್ಣ, “ಬಸವಣ್ಣನವರೇ, ಯಾರೋ ಮಹಾತ್ಮರು ಬಂದಿದ್ದಾರೆ ಪ್ರಭು” ಎಂದಾಗ, ಅವರನ್ನು ಒಳಗೆ ಬರಲು ಹೇಳುತ್ತಾರೆ. ಅಪ್ಪಣ್ಣ ಪ್ರಭುಗಳಿಗೆ “ತಮಗೆ ಒಳಗೆ ಬರಲು ಹೇಳಿದ್ದಾರೆ” ಎನ್ನುತ್ತಾರೆ. ಆಗ ಪ್ರಭುಗಳು “ಜಂಗಮ ಮುಂದಿರಲು ಲಿಂಗಪೂಜೆಯೇ?” ಎಂದು ಕೇಳುತ್ತಾರೆ. ಈ ಮಾತನ್ನು ಅಪ್ಪಣ್ಣ ಬಸವಣ್ಣನವರಿಗೆ ತಿಳಿಸಿದಾಗ, ಬಸವಣ್ಣನವರು “ಅವರ ಮನೆಗೆ ಅವರು ಬರಲು ಸಂಕೋಚವೇ?” ಎಂದು ಕೇಳುತ್ತಾರೆ. “ಕಣ್ಣರಿಯದಿದ್ದರೂ ಕರುಳರಿಯದೆ” ಎಂಬ ಮಾತಿನಂತೆ, ಬಸವಣ್ಣನವರು ತಾವೇ ಬಂದು ಅಲ್ಲಮಪ್ರಭುಗಳಲ್ಲಿ ಕ್ಷಮೆ ಕೇಳುವ ಮೂಲಕ ಸಮಸ್ಯೆ ಸುಖಾಂತವಾಗುತ್ತದೆ.
ನಡೆ-ನುಡಿ ಒಂದಾಗಿರುವ ಬಗ್ಗೆ ಅಪ್ಪಣ್ಣನವರ ವಚನವೊಂದು ಹೀಗಿದೆ:
ನುಡಿದರೇನಯ್ಯ ನಡೆ ಇಲ್ಲದನ್ನಕ್ಕ? ನಡೆದರೇನಯ್ಯ ನುಡಿ ಇಲ್ಲದನ್ನಕ್ಕ?
ಈ ನಡೆ ನುಡಿಯರಿದು ಏಕವಾಗಿ,
ತಾವು ಮೃಡಸ್ವರೂಪರಾದ ಶರಣರಡಿಗೆರಗಿ ನಾನು ಬದುಕಿದೆನುಯ್ಯಾ ಬಸವಪ್ರಿಯ ಕೂಡಲಚೆನ್ನಬಸವಣ್ಣ.
ಇಲ್ಲಿ ನಡೆ ಮತ್ತು ನುಡಿ ಒಂದಾದವರೇ ಮೃಡಸ್ವರೂಪರು ಎಂದು ಅಪ್ಪಣ್ಣ ಹೇಳುತ್ತಾರೆ.
ವಂದನೆ ಮತ್ತು ನಿಂದೆಯ ಕುರಿತು ಈ ಕೆಳಗಿನ ವಚನದಲ್ಲಿ ಅಪ್ಪಣ್ಣನವರು ಹೀಗೆ ಹೇಳುತ್ತಾರೆ:
ವಂದನೆಗೆ ನಿಲ್ಲಬೇಡ, ನಿಂದನೆಗೆ ಓಡಬೇಡ. ಹಿಂದೂ ಮುಂದೂ ಆಡಬೇಡ, ಸಂದೇಹಗೊಳಬೇಡ.
ದ್ವಂದ್ವ ಬುದ್ಧಿಯ ಕಳೆದು ನಿಂದಿರೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ.
ಇಲ್ಲಿ ದ್ವಂದ್ವ ನೀತಿ ಬೇಡ ಎಂಬ ಭಾವವನ್ನು ಅಪ್ಪಣ್ಣ ವ್ಯಕ್ತಪಡಿಸುತ್ತಾರೆ.
ಅಪ್ಪಣ್ಣ ಮತ್ತು ಬಸವಣ್ಣನವರ ಸಂಬಂಧ ಎಂತಹದ್ದು ಎನ್ನುವುದಕ್ಕೆ, ಬಸವಣ್ಣನವರು ಕಲ್ಯಾಣವನ್ನು ತೊರೆದು ಕೂಡಲಸಂಗಮಕ್ಕೆ ಹೋದ ಬಳಿಕವೂ ಅಪ್ಪಣ್ಣ ಅವರ ಜೊತೆಯಲ್ಲಿ ಇರುತ್ತಾರೆ. ಬಸವಣ್ಣನವರು ತಮ್ಮ ಮಡದಿ ನೀಲಾಂಬಿಕೆಯವರನ್ನು ಕರೆದುಕೊಂಡು ಬರಲು ಕಲ್ಯಾಣಕ್ಕೆ ಅಪ್ಪಣ್ಣನನ್ನು ಕಳುಹಿಸುತ್ತಾರೆ.
ಅಪ್ಪಣ್ಣ ಬಂದು ನೀಲಾಂಬಿಕೆಯವರಿಗೆ “ತಾವು ಸಂಗಮಕ್ಕೆ ಬರಬೇಕೆಂದು ಅಣ್ಣನವರು ಹೇಳಿದ್ದಾರೆ” ಎಂದಾಗ, ಅಕ್ಕನವರು “ಅರಸು ಬಸವರಾಜ ಅಲ್ಲಿಗೆ ನಮ್ಮನ್ನು ಬರಹೇಳಿದರಂತೆ, ಅಲ್ಲಿರುವ ಸಂಗಯ್ಯ ಇಲ್ಲಿಲ್ಲವೇ? ಅಲ್ಲಿ ಇಲ್ಲಿ ಎಂಬ ಸಂದೇಹವೇಕೆ? ಬಲ್ಲ ಮಹಾತ್ಮರಿಗಿದು ತರವೇ?” ಎನ್ನುತ್ತಾರೆ.
ಅವರು ತಂಗಡಿಗೆಗೆ ಬರುವುದರಲ್ಲೇ, ಅಣ್ಣನವರು ಲಿಂಗೈಕ್ಯರಾದ ಸುದ್ದಿ ತಿಳಿದು, ತಂಗಡಿಗೆಯಲ್ಲೇ ತಮ್ಮ ಕೈಯೊಳಗಿನ ಲಿಂಗದಲ್ಲಿ ಐಕ್ಯರಾಗುತ್ತಾರೆ. ಅದನ್ನು ನೋಡಿ ಅಪ್ಪಣ್ಣನೂ ಲಿಂಗೈಕ್ಯರಾಗುತ್ತಾರೆ ಎಂಬುದಕ್ಕೆ ಅಲ್ಲಿರುವ ಅವರ ಸಮಾಧಿಗಳೇ ಸಾಕ್ಷಿ.
ಬದುಕಿನಲ್ಲಿ ಅಣ್ಣ ಮತ್ತು ಅಕ್ಕನವರ ಜೊತೆ ಒಂದಾಗಿ ಬದುಕಿದ ಈ ಎರಡು ಮಹಾನ್ ಜೀವಗಳು ಸಾವಿನಲ್ಲೂ ಒಂದಾಗಿದ್ದು ಐತಿಹಾಸಿಕ ಘಟ್ಟವೇ ಸರಿ. ಅವರ ಬದುಕು ನಮಗೆ ದಾರಿದೀಪವಾಗಿದೆ.