ಕೊಪ್ಪಳ
ಮಾನವ ಚರಿತ್ರೆಯಲ್ಲಿ 12ನೇ ಶತಮಾನವು ಸುವರ್ಣಾಕ್ಷರಗಳಲ್ಲಿ ಬರೆದಿಡುವ ಕಾಲವಾಗಿದೆ. ಆ ಕಾಲದಲ್ಲೇ ಬಸವಣ್ಣನವರೊಂದಿಗೆ ಹಡಪದ ಅಪ್ಪಣ್ಣನವರು ಸಮ ಸಮಾಜದ ನಿರ್ಮಾಣಕ್ಕಾಗಿ ದುಡಿದಿದ್ದರು. ಜಾತಿರಹಿತ ಸಮಾಜ ನಿರ್ಮಾಣಕ್ಕೆ ಕರೆ ಕೊಟ್ಟಿದ್ದರು. ಇಂದು ಅಪ್ಪಣ್ಣನವರ ಕುರಿತಾದ ಅಧ್ಯಯನಗಳು ಕಡಿಮೆಯಾಗಿವೆ. ಅವರ ತತ್ವ ಮತ್ತು ಚಿಂತನೆಗಳ ಬಗ್ಗೆ ಹೆಚ್ಚಾಗಿ ಅಧ್ಯಯನಗಳು ಆಗಬೇಕು. ಇದರಿಂದ ಹಡಪದ ಅಪ್ಪಣ್ಣನವರ ಬಗ್ಗೆ ಯುವಜನತೆಗೆ ಇನ್ನೂ ಹೆಚ್ಚಾಗಿ ತಿಳಿಯಲು ಸಹಾಯವಾಗುತ್ತದೆ ಎಂದು ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಮುಮ್ತಾಜ್ ಬೇಗಂ ಹೇಳಿದರು.
ಅವರು ಮಂಗಳವಾರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ ನಗರಸಭೆ ಮತ್ತು ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು.

ಹಡಪದ ಅಪ್ಪಣ್ಣನವರ 250ಕ್ಕೂ ಹೆಚ್ಚು ವಚನಗಳು ದೊರೆತಿವೆ. ಅವರು ಹೆಚ್ಚಾಗಿ ಬೆಡಗಿನ ವಚನಗಳನ್ನು ರಚಿಸಿದ್ದಾರೆ. ಅವರ ವಚನಗಳ ತಾತ್ವಿಕತೆಯ ಹಿನ್ನೆಲೆಯಲ್ಲಿ ಅವರನ್ನು ಅರ್ಥೈಸಿಕೊಳ್ಳಬೇಕು. ಅವರು ವೈಚಾರಿಕ ಪ್ರಜ್ಞೆಯುಳ್ಳವರಾಗಿದ್ದರು. ಸಮಾಜವು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಲು ವೈಚಾರಿಕಪ್ರಜ್ಞೆ ಬಹಳ ಮುಖ್ಯ, ಹಾಗಾಗಿ ಅಪ್ಪಣ್ಣನವರ ವಚನಗಳನ್ನು ಹೆಚ್ಚಾಗಿ ಓದಬೇಕು ಎಂದು ಬೇಗಂ ಹೇಳಿದರು.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಹಡಪದ ಅಪ್ಪಣ್ಣನವರು 12ನೇ ಶತಮಾನದ ಬಸವಣ್ಣನವರ ಆತ್ಮಿಯ ಸಹಾಯಕರಾಗಿ ಜಾತಿಭೇದ ಹಾಗೂ ಮೌಡ್ಯತೆಗಳನ್ನ ತೊಡೆದುಹಾಕಲು ಹೋರಾಡಿದ್ದರು. ಎಲ್ಲಾ ಜಾತಿ ಧರ್ಮಗಳಿಗೆ ಸಮಾನತೆ ಕೊಡಲು ಸಹ ಹಗಲಿರುಳು ಶ್ರಮಿಸಿ, ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ್ದರು. ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ನಾವೂ ಕೂಡ ಸಾಗಬೇಕಾಗಿದೆ. ನಮ್ಮ ಮಕ್ಕಳಿಗೆ ಬಸವಣ್ಣನವರ ಮತ್ತು ಹಡಪದ ಅಪ್ಪಣ್ಣನವರ ಚಿಂತನೆಗಳನ್ನು ಕಲಿಸಿ ಅವರನ್ನು ಈ ಸಮಾಜಕ್ಕೆ ಒಳ್ಳೆ ನಾಗರಿಕರನ್ನಾಗಿ ಮಾಡಬೇಕು ಎಂದರು.
ಈ ವಿಶ್ವದಲ್ಲಿ ಅನೇಕ ರಾಷ್ಟ್ರಗಳು ಒಂದೆ ಧರ್ಮಕ್ಕೆ ಸಿಮಿತವಾಗಿರುವುದನ್ನು ನಾವೂ ಕಾಣುತ್ತೇವೆ. ಆದರೆ, ನೂರಾರು ಧರ್ಮ, ಜಾತಿಗಳನ್ನು ಹೊಂದಿರುವ ನಮ್ಮ ದೇಶದಲ್ಲಿ ಸಹೋದರತ್ವದ ಗುಣಗಳು ನೋಡಲು ಸಿಗುತ್ತವೆ ಅಂದರೆ ಅದಕ್ಕೆ ಮುಖ್ಯ ಕಾರಣ ಬಸವಣ್ಣನವರು ಮತ್ತು ಹಡಪದ ಅಪ್ಪಣ್ಣನವರು ಎನ್ನುವುದನ್ನು ನಾವು ಮರೆಯಲಾಗದು. ಇಂತಹ ಮಹನೀಯರ ಹಾದಿಯಲ್ಲಿ ಎಲ್ಲರೂ ಸಾಗಬೇಕು. ಯಾವುದೇ ಭೇದವಿಲ್ಲದೆ ಎಲ್ಲರೂ ಅನ್ಯೋನ್ಯವಾಗಿ ಬಾಳಬೇಕು. ಒಗ್ಗಟ್ಟಿನಿಂದ ಮುನ್ನೆಡೆದರೆ ಎಲ್ಲರೂ ಆ ಸಮಾಜವನ್ನು ಗೌರವದಿಂದ ಕಾಣುತ್ತಾರೆ. ಹಡಪದ ಅಪ್ಪಣ್ಣನವರು ಯಾವ ರೀತಿಯಲ್ಲಿ ತುಳಿತಕ್ಕೆ ಒಳಗಾದವರನ್ನು ಮೇಲಕ್ಕೆ ಎತ್ತುವ ಕೆಲಸ ಮಾಡಿದರು, ಅವರ ಹಾದಿಯಲ್ಲಿ ನಾವೆಲ್ಲರೂ ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ಮುಖ್ಯವಾಹಿನಿಗೆ ಕರೆತರುವಂತಹ ಕೆಲಸ ಮಾಡಿದರೆ, ಸಮಾಜವು ಬಲಿಷ್ಠವಾಗುತ್ತದೆ. ಹಾಗಾಗಿ ನಾವು ನೀವೆಲ್ಲರೂ ಬಸವಣ್ಣ ಮತ್ತು ಹಡಪದ ಅಪ್ಪಣ್ಣನವರ ಹಾದಿಯಲ್ಲಿ ನಡೆಯೋಣ ಎಂದು ಹೇಳಿದರು.

ಕೊಪ್ಪಳದ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಅವರು ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಡಪದ ಅಪ್ಪಣ್ಣನವರು ಪ್ರಸಿದ್ದಿಯನ್ನು ಪಡೆದ ಶರಣರಾಗಿದ್ದರು. ವಿಶ್ವದ ಮೊದಲ ಸಂಸತ್ತು ಎಂದು ಕರೆಯಲ್ಪಡುವ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಹಡಪದ ಅಪ್ಪಣ್ಣನವರು ಬಸವಣ್ಣನವರ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದು ಎಲ್ಲರಿಗೂ ಹೆಮ್ಮೆಯ ವಿಷಯ. ಅಂದು ಹಡಪದ ಜನಾಂಗದವರ ಮುಖ ನೋಡಬಾರದು ಎನ್ನುವ ಮೌಢ್ಯ ಹರಿದಾಡುತಿತ್ತು, ಹಾಗಾಗಿ ಬಸವಣ್ಣನವರು ನನ್ನ ನೋಡಲು ಬರುವವರು ಮೊದಲು ಹಡಪದ ಅಪ್ಪಣ್ಣನವರ ಮುಖ ನೋಡಿಕೋಂಡು ಬರುವಂತೆ ಆದೇಶಿಸಿದ್ದರು. ಬಸವಣ್ಣನವರಿಗೆ ಅಪ್ಪಣ್ಣನವರು ಬಹಳಷ್ಟು ಆತ್ಮೀಯರಾಗಿದ್ದರು.
ಅಪ್ಪಣ್ಣನವರು 250ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದು, ಅವರು ಪ್ರತಿಯೊಂದು ವನಚನಗಳಲ್ಲಿ ವಿಭಿನ್ನವಾದ ಸಂದೇಶಗಳನ್ನು ಕೊಟ್ಟಿದ್ದಾರೆ. ಈ ದಿನ ನಾವು ನಮ್ಮ ಮಕ್ಕಳಿಗೆ ಹಡಪದ ಅಪ್ಪಣ್ಣನವರ ಜೀವನ ಸಾರಾಂಶವನ್ನ ತಿಳಿಸಿಕೊಡಬೇಕು ಮತ್ತು ಅವರಂತೆ ಪ್ರಮಾಣಿಕವಾಗಿ ನಮ್ಮ ಕೆಲಸದಲ್ಲಿ ಅವರನ್ನು ಕಾಣಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೊಪ್ಪಳ ನಗರಸಭೆ ಆಯುಕ್ತರಾದ ಸುರೇಶ ಬಬಲಾದಿ, ತಾಲ್ಲೂಕು ಪಂಚಾಯತ ಸಹಾಯಕ ನಿರ್ದೇಶಕ ಮಹೇಶ ಹಡಪದ, ಕೊಪ್ಪಳ ನಗರಸಭೆ ಸದಸ್ಯರಾದ ಬಸವಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶಂಕರ ಮಾಮನಿ, ಮುತ್ತಣ್ಣ ಚಲವಾದಿ ಹಾಗೂ ಹಡಪದ ಸಮಾಜದ ಮುಖಂಡರಾದ ಹನುಮಂತಪ್ಪ ಸರಿಗಮ, ಈಶಪ್ಪ ಮುದ್ದಬಳ್ಳಿ, ಅಂದಪ್ಪ, ಬಸವರಾಜ, ಗವಿಸಿದ್ದಪ್ಪ ಮಾದಿನೂರ, ಮೌನೇಶ ಹಡಪದ, ಶಿವಕುಮಾರ ಕಾರಟಗಿ, ಮುತ್ತಣ್ಣ ಮಾದಿನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮೆರವಣಿಗೆ
ವೇದಿಕೆ ಕಾರ್ಯಕ್ರಮಕ್ಕೆ ಮೊದಲು ಹಡಪದ ಅಪ್ಪಣ್ಣನವರ ಭಾವ ಚಿತ್ರದ ಮೇರವಣಿಗೆಯು ಅಕ್ಕಮಹಾದೇವಿ ದೇವಸ್ಥಾನದಿಂದ ಕೋಟೆ ರಸ್ತೆಯ ಮಾರ್ಗವಾಗಿ, ಗಡಿಯಾರ ಕಂಬ, ಜವಾಹರ್ ರಸ್ತೆಯ ಮೂಲಕ ಅಶೋಕ ವೃತ್ತದವರೆಗೆ ನಡೆಯಿತು. ಮೆರವಣಿಗೆಯಲ್ಲಿ ಕುಂಬ ಹೊತ್ತ 101 ಮಹಿಳೆಯರು ಗಮನ ಸೆಳೆದರು.