ಹಗರಿಬೊಮ್ಮನಹಳ್ಳಿಯಲ್ಲಿ ಹೊಸ ಸಂಭ್ರಮ ಸೃಷ್ಟಿಸಿದ ‘ಬಸವ ಚಿನ್ನಿದಿ’ ನಾಮಕಾರಣ

ವೀರಣ್ಣ ಕಲ್ಮನಿ
ವೀರಣ್ಣ ಕಲ್ಮನಿ

ಹಗರಿಬೊಮ್ಮನಹಳ್ಳಿ:

ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿಯ ಪ್ರಸಿದ್ದ ಚಾರ್ಟರ್ಡ್ ಅಕೌಂಟೆಂಟ್, ಶರಣ ಸರ್ಪಭೂಷಣ ಎಂ.ಎಸ್. ಮತ್ತು ಶರಣೆ ಅನಿತಾ ದಂಪತಿಗಳ ಮಗಳ ನಾಮಕಾರಣ ಕಾರ್ಯಕ್ರಮ ರವಿವಾರ ವಚನ ಧರ್ಮದ ಪ್ರಕಾರ ನೇರವೇರಿತು.

ಮೊದಲಿಗೆ ದಂಪತಿ ಮಗುವಿನ ಇಷ್ಟಲಿಂಗ ಪೂಜೆ ಮಾಡಿದರು. ನಂತರ ಹೆಣ್ಣು ಮಗುವಿಗೆ ‘ಬಸವ ಚಿನ್ನಿದಿ’ ಎಂದು ನಾಮಕರಣ ಮಾಡಲಾಯಿತು. ಬಂದವರೆಲ್ಲರು ತಾಯಿ, ಮಗುವಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ಶುಭಹಾರೈಸಿದರು.

ಲಿಂಗಾಯತ ಧರ್ಮ ಸಂಸ್ಥಾಪಕ, ಗುರು ಬಸವಣ್ಣನವರ ಭಾವಚಿತ್ರ ಮತ್ತು ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು.

ಈ ಕಾರ್ಯಕ್ರಮ ಹೊಸ ಸಂಭ್ರಮವನ್ನು ಸೃಷ್ಟಿಮಾಡಿತು, ಜೊತೆಗೆ ಸರಳ ಆಚರಣೆಗಳ ದಾರಿಯನ್ನು ತೋರಿಸಿತು ಎಂಬ ಅಭಿಪ್ರಾಯ ಕಾರ್ಯಕ್ರಮಕ್ಕೆ ಬಂದವರಿಂದ ಕೇಳಿಬಂತು.

ಅನುಭಾವ ನೀಡಿದ ಬಾಚಿಗೊಂಡನಹಳ್ಳಿ ತೋಂಟದಾರ್ಯ ಶಾಖಾ ಮಠದ ಶ್ರೀ ಶಿವಮಹಾಂತ ಸ್ವಾಮೀಜಿ ಲಿಂಗಾಯತ ಧರ್ಮದ ವಿಶಿಷ್ಟ ಹಾಗೂ ಸರಳ ಆಚರಣೆಗಳು ಆರ್ಥಿಕವಾಗಿ ಯಾರಿಗೂ ಹೊರೆಯಾಗುವುದಿಲ್ಲ ಎಂದು ಹೇಳಿದರು.

ವೈದಿಕರ ಎಲ್ಲಾ ದಾಳಿಯನ್ನು ಮೀರಿ ಬೆಳೆದಿರುವ ಲಿಂಗಾಯತ ಧರ್ಮ ಸ್ವತಂತ್ರವಾಗಿದೆ. ಅದೀಗ ವಿಶ್ವವ್ಯಾಪಿಯಾಗುವ ಕಾಲವೂ ದೂರವಿಲ್ಲ. ವಚನದ ಅಂತರ್ಗತ ಶಕ್ತಿಯನ್ನು ಯುವಜನತೆ ಅಭ್ಯಾಸ ಮಾಡುತ್ತ ಅವುಗಳನ್ನು ಅರಿತರೆ ಮುಂದೆ ಭಾರತ ಬಸವಭಾರತವಾಗಿ ಬೆಳಗಲಿದೆ ಎಂದರು. ಲಿಂಗಾಯತರು ತಮ್ಮ ಕಾಯಕ ಮತ್ತು ದಾಸೋಹಗಳನ್ನು ಸಮಾಜಮುಖಿಯಾಗಿ ಬಳಸಬೇಕು ಎಂದು ಕರೆ ನೀಡಿದರು.

ಎನ್.ಆರ್. ಪುರದ ಶ್ರೀ ಬಸವಯೋಗಿ ಪ್ರಭುಗಳು ನಾಮಕರಣ ಕಾರ್ಯವನ್ನು ವಚನ ಆಧಾರಿತವಾಗಿ ಎಲ್ಲರಿಗೂ ಅರ್ಥವಾಗುವಂತೆ ನಡೆಸಿಕೊಟ್ಟರು.

ಶರಣ ಎಂ.ಎಸ್. ಸರ್ಪಭೂಷಣ ಅವರು ಮಾತನಾಡಿ, 12ನೇ ಶತಮಾನದಲ್ಲಿ ಶರಣರು ಸ್ಥಾಪಿಸಿದ ಲಿಂಗಾಯತ ಧರ್ಮವನ್ನು ಜನತೆಗೆ ತಲುಪಿಸಲು ತೀವ್ರವಾಗಿ ತಡೆದ ವೈದಿಕ ಪರಂಪರೆಯವರ ಕುತಂತ್ರವನ್ನು ವಿವರಿಸಿದರು. ಮತ್ತು ಬಸವ ತತ್ವದ ಜನಪರ ನಿಲುವುಗಳ ಅನುಭವವನ್ನು ಹಂಚಿಕೊಂಡರು.

ನಿಜಾಚರಣೆಗಳನ್ನು ಜಾರಿಗೆ ತರುವ ಜವಬ್ದಾರಿ, ಶರಣ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ಸಾಗಿಸಬೇಕಾದ ಜವಾಂಬ್ದಾರಿ ಲಿಂಗಾಯತರ ಮೇಲಿದೆ ಎಂದು ಪೂಜ್ಯಶ್ರೀ ಬಸವಯೋಗಿ ಪ್ರಭುಗಳು ಹೇಳಿದರು.

ಈ ಕನ್ನಡ ಧರ್ಮವು ವಿಶ್ವವ್ಯಾಪಿಯಾಗಿ ಬೆಳೆಯಲು ಒತ್ತಾಸೆಯಾಗಿ ನಮ್ಮ ಕಾಯಕದಿಂದ ಬಂದ ಫಲದಲ್ಲಿ ಒಂದು ಭಾಗವನ್ನು ದಾಸೋಹವಾಗಿ ನೀಡಬೇಕೆಂದು, ಆ ಮೂಲಕ ಲಿಂಗಾಯತ ಚಳುವಳಿಯನ್ನು ಬಲಿಷ್ಡವಾಗಿ ಕಟ್ಟಲು ಶ್ರಮಿಸಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಎಂ.ಎಸ್. ಸರ್ಪಭೂಷಣ ಮತ್ತು ಹೊಸೂರ ಭರಮಲಿಂಗಪ್ಪನವರ ತಂಡಕ್ಕೆ ಜಾಗತಿಕ ಲಿಂಗಾಯತ ಮಹಾಸಭಾದ ಹಗರಿಬೊಮ್ಮನಹಳ್ಳಿಯ ಸಂಘಟನೆಯನ್ನು ಕಟ್ಟಲು, ಸ್ವಾಮಿಜಿಗಳು ಅವರಿಗೆ ಸದಸ್ಯತ್ವ ಪುಸ್ತಕಗಳನ್ನು ನೀಡುವುದರ ಮೂಲಕ ಚಾಲನೆ ನೀಡಿದರು.

ಬಸವ ಬಳಗ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಮತ್ತಿಹಳ್ಳಿ ಶೆಟ್ರು ಕುಟುಂಬದ ಶರಣ ಬಂಧುಗಳು, ಆಪ್ತರು, ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲರಿಗೂ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.

Share This Article
7 Comments
  • ಇಂತಹ ಶರಣ ತಂದೆ ತಾಯಿಯರಿಗೆ ಹುಟ್ಟಿದ ಮಗು ಲೋಕಕ್ಕೆ ಬೆಳಕಾಗಲಿ ಹಾಗೂ ಇಂತಹ ತಂದೆ ತಾಯಿಯರು ನಮಗೆಲ್ಲ ಮಾರ್ಗದರ್ಶಕರು ಇಂತಹ ಶರಣ ಸಂಸ್ಕೃತಿ ಮನೆ ಮನಗಳಲ್ಲಿ ಬೆಳಗಲಿ ಎಂದು ಅಪ್ಪ ಬಸವಣ್ಣನವರಲ್ಲಿ ಬೇಡಿಕೊಳ್ಳುತ್ತೇನೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ತಂದೆ ತಾಯಿಯರಿಗೆ ಹಾಗೂ ಮಕ್ಕಳಿಗೆ ಭಕ್ತಿಯ ಶರಣು ಶರಣಾರ್ಥಿಗಳು

  • ಅತ್ಯಂತ ಸ್ತುತ್ಯಾರ್ಹ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳು ನಿಯಮಿತವಾಗಿ ಜರುಗಲು ಲಿಂಗಾಯತ ಮಠಾಧೀಶರು ಹಳ್ಳಿ ಹಳ್ಳಿ ಗೆ ಹೋಗಿ ಲಿಂಗಾಯತ ಧರ್ಮದ ನಿಜ ಅರ್ಥವನ್ನು ತಿಳಿ ಹೇಳಬೇಕು. ಈಗಲೂ ಸಹ ಲಿಂಗಾಯತರು ಅಂತ ಹೇಳಿಕೊಂಡು ಸಹ ಅವನು ಕುರುಬ, ಇವನು ಬಣಜಿಗ, ಅವನು ಪಂಚಮಸಾಲಿ, ಇವನು ಕುಂಬಾರ, ಅವನು ಅಕ್ಕಸಾಲಿ, ಇವನು ಕಮ್ಮಾರ ಎಂದು ಹೇಳುವದು ರೂಢಿ. ಈ ರೀತಿಯ ಭೇದ ಭಾವ ಮೊದಲು ತೊಲಗಬೇಕು. ಅಂದಾಗ ಲಿಂಗಾಯತ ಧರ್ಮ ಜನಜನಿತ ಆಗುತ್ತದೆ. ನಾಮಕರಣ ಮಾಡಿದ ಕುಟುಂಬಕ್ಕೆ ನಮ್ಮೆಲ್ಲರ ಶರಣು ಶರಣಾರ್ಥಿ

  • ಹಗರಿಬೊಮ್ಮನಹಳ್ಳಿ ಯ ಶರ್ಪಭೂಷಣ ದಂಪತಿಗಳಿಗೆ ಅಭಿನಂದನೆಗಳು ಇಂಥ ನಿಜಾಣರಣೆ ಯು ತೊಟ್ಟಿಲು ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷದ ಸಂಗತಿ ಇತರರು ಈ ರೀತಿ ಮಾಡಿ ,ಲಿಂಗಾಯತ ಧರ್ಮ ಅಸ್ತಿತ್ವದಲ್ಲಿ ಇಡಬೇಕಾಗಿರೋದು ನಮ್ಮೆಲ್ಲರ ಕರ್ತವ್ಯ.

  • ಶರಣು ಶರಣಾರ್ಥಿಗಳು 🙏🙏🙏🙏, ಮಗುವಿಗೆ ಒಳ್ಳೆಯದಾಗಲಿ

  • “ಬಸವ ಚಿನ್ನಿದಿ” ಕಾರ್ಯಕ್ರಮ ನಡೆಸಿಕೊಟ್ಟಿ ರುವ ಸ್ವಾಮೀಜಿಗಳಿಗೆ ಅನಂತ ನಮನಗಳು. ಬಸವಣ್ಣನವರ ತತ್ವಗಳನ್ನು ಸಮಾಜ ಅಳವಡಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಸವ ಭಕ್ತರಿಗೆ ಸರಿಯಾದ ಮಾರ್ಗದರ್ಶನ ಸ್ವಾಮೀಜಿಗಳಿಂದ ಕಾರ್ಯಗತವಾದರೆ, “ಮಠ “ಎಂಬ ಹೆಸರಿಗೆ ಒಂದು ಬೆಲೆ ಬರುತ್ತದೆ.

  • ಸರ್ಪಭೂಷಣರು ಚಾಟೆಡ್ ಅಕೌಂಟ್ ದಂಪತಿಗಳಾಗಿದ್ದು ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ ಅದರೊಂದಿಗೆ ಬಸವ ತತ್ವ, ಸಿದ್ಧಾಂತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಎಲ್ಲ ತಮ್ಮ ಆಚರಣೆಗಳನ್ನು ಬಸವ ತತ್ವದಂತೆ ಲಿಂಗಾಯತ ಧರ್ಮದ ಆಚರಣೆಗಳಾಗಿ ಆಚರಿಸುವುದರೊಂದಿಗೆ ಸಮಾಜಕ್ಕೆ ಲಿಂಗಾಯತ ಧರ್ಮದ ಆಚರಣೆಗಳು ವೈಜ್ಞಾನಿಕ ವೈಚಾರಿಕ ಮತ್ತು ಸರಳತೆಯಿಂದ ಕೂಡಿದೆ ಎಂಬ ಸಂದೇಶವನ್ನು ನೀಡುತ್ತಿರುವ ದಂಪತಿಗಳಿಗೆ ಅನಂತ ಶರಣು ಶರಣಾರ್ಥಿಗಳು ಶಂಕರಪ್ಪ

  • ಇದೊಂದು ಅಪರೂಪ ಕಾರ್ಯಕ್ರಮ ಈ ಕಾರ್ಯಕ್ರಮ ನಮ್ಮ ಲಿಂಗಾಯತ ಸಮುದಾಯದಲ್ಲಿ ಇನ್ನು ಮುಂದೆ ಇತರದ ನಾಮಕರಣಗಳು ಜರಗಲಿ ಪ್ರತಿಯೊಬ್ಬರ ಮನೆಯಲ್ಲಿ ಬಸವ ಜನಿಸಲಿ ಬಸವಣ್ಣ ಹೆಸರು ಬೆಳೆಯಲಿ ಪ್ರತಿ ಮನೆ ಅಂಗಳದಲ್ಲಿ ಬಸವ ಓಡಾಡುತ್ತಿರಲಿ ಈ ಬಸವ ಪರಂಪರೆ ಹೆಮ್ಮರವಾಗಿ ಬೆಳೆದು ಬರಲಿ ಎಂದು ಆಶಿಸುವೆ ಶರಣು ಶರಣಾರ್ಥಿಗಳು,

Leave a Reply

Your email address will not be published. Required fields are marked *