ಕೊಪ್ಪಳ
ನಮ್ಮಲ್ಲಿ ಫ.ಗು.ಹಳಕಟ್ಟಿ ಅಂತ ಒಬ್ಬರು ಇದ್ದರು. ಅವರು ದೊಡ್ಡ ವಕೀಲರು. ಅವಾಗ ಬಾಂಬೆದೊಳಗೆ ವಿಧಾನ ಪರಿಷತ್ ಸದಸ್ಯರಿದ್ದರು. ಅವರು 84 ವರ್ಷ ಬದುಕಿದ್ದರು. 64 ವರ್ಷ ವಚನ ಸಾಹಿತ್ಯದ ಸಂಗ್ರಹದಲ್ಲಿ ತೊಡಗಿಕೊಂಡಿದ್ದರು.
ವಚನಗಳೆಲ್ಲ ಮೊದಲು ತಾಳೆಗರಿಯಲ್ಲಿದ್ದವು. ಅವುಗಳನ್ನು ಹೀಗೆಯೇ ಬಿಟ್ಟರೆ ಹಾಳಾಗಿ ಹೋಗುತ್ತವೆ ಎಂದು ಮನೆಮನೆಗೆ ಹೋಗಿ ಭಿಕ್ಷೆ ಬೇಡಿ, ಹಣಕೊಟ್ಟು ತಾಳೆಗರಿಗಳನ್ನು ತಂದು ವಚನಗಳನ್ನು ಮೊದಲು ಪ್ರಿಂಟ್ ಮಾಡಿದವರು ಹಳಕಟ್ಟಿ ಅವರು.
ಅವರು ಶಾಸಕರಾಗಿದ್ದವರು. ಬೇರೆ ಏನಾದರೂ ಮಾಡಬಹುದಿತ್ತು. ಆದರೆ, ಅವರು ವಚನ ಸಂಗ್ರಹದಲ್ಲಿಯೇ ತಮ್ಮ ಆಯುಷ್ಯ ಕಳೆದರು.
ಆವಾಗ ಮಂಗಳೂರಿನಲ್ಲಿ ಒಂದೇ ಒಂದು ಪ್ರಿಂಟಿಂಗ್ ಪ್ರೆಸ್ ಇತ್ತು. ಅದು ಬಿಟ್ಟು ರಾಜ್ಯದಲ್ಲಿ ಬೇರೆ ಪ್ರೆಸ್ ಇರಲಿಲ್ಲ. ಅವರು ಪ್ರಿಂಟ್ ಮಾಡೋದಿಲ್ಲ ಅಂದರಂತೆ. ಅದಕ್ಕೆ ಹಳಕಟ್ಟಿ ಅವರು ತಮ್ಮ ಆಸ್ತಿಪಾಸ್ತಿ ಎಲ್ಲ ಮಾರಿ ತಾವೇ ಸ್ವತಃ ಪ್ರಿಂಟಿಂಗ್ ಪ್ರೆಸ್ ಹಾಕಿದರು. ಹಲವು ಸಂಪುಟಗಳಲ್ಲಿ ವಚನ ಸಾಹಿತ್ಯವನ್ನು ಹೊರ ತಂದರು.
ಒಳಗೆ ಹರುಕು ಅಂಗಿ ಇರುತ್ತಿತ್ತಂತೆ. ಮೇಲೆ ಚಲೋ ಕೋಟು ಹಾಕಿಕೊಳ್ಳುತ್ತಿದ್ರಂತೆ. ಯಾಕೆಂದರೆ ಹೊಸ ಅಂಗಿ ತೆಗೆದುಕೊಂಡರೆ ಮತ್ತೆ ರೊಕ್ಕ ಇರೋದಿಲ್ಲ ಅದಕ್ಕೆ. ಮನೆ ಮನೆಗೆ ಸೈಕಲ್‌ಗಳಲ್ಲಿ ಓಡಾಡಿ ವಚನದ ಕಟ್ಟುಗಳನ್ನು ಜೋಪಾನ ಮಾಡುತ್ತಿದ್ದರಂತೆ. ಒಂದು ದಿನ ಯಾರೋ ಒಬ್ಬರು ಹಳಕಟ್ಟಿ ಅವರಿಗೆ ಬಟ್ಟೆ ಕೊಟ್ಟರಂತೆ. ಅದಕ್ಕೆ ಹಳಕಟ್ಟಿ ಅವರು ‘ಅಯ್ಯೋ ಬಟ್ಟೆ ಯಾಕೆ ಕೊಟ್ಟಿರಿ. ನನ್ನ ಸೈಕಲ್ ಟ್ಯೂಬ್‌ಗೆ ಒಂದಿಷ್ಟು ಹಣ ಕೊಟ್ಟಿದ್ದರೆ ಮನೆ ಮನೆಗೆ ತಿರುಗಿ ವಚನಗಳ ತಾಳೆಗರಿ ಕಟ್ಟು ತರಲು ಅನುಕೂಲ ಆಗುತ್ತಿತ್ತು’ ಎಂದರಂತೆ.
ಇಡೀ ವಚನ ಸಾಹಿತ್ಯ ನಮ್ಮ ಕೈಸೇರಿದ್ದು ಫ.ಗು.ಹಳಕಟ್ಟಿ ಅವರ ತ್ಯಾಗದಿಂದ. ಇಡೀ ನಾಡಿಗೆ, ಇಡೀ ಜಗತ್ತಿಗೆ ವಚನ ಸಿಕ್ಕಿದ್ದು ಅವರಿಂದ. ಕನ್ನಡದ ದೊಡ್ಡ ಕವಿ ಬಿ.ಎಂ.ಶ್ರೀ ಅವರು ಒಮ್ಮೆ ವಿಜಾಪುರಕ್ಕೆ ಕನ್ನಡದ ಕಾರ್ಯಕ್ರಮಕ್ಕೆ ಹೋಗಿದ್ದರಂತೆ. ಆಗ ಕಾರ್ಯಕ್ರಮದ ಆಯೋಜಕರು ಬಿಎಂಶ್ರೀ ಅವರನ್ನು ಗೋಲ ಗುಮ್ಮಟ ತೋರಿಸಲು ಕರೆದುಕೊಂಡು ಹೋದರಂತೆ. ಆಗ ಬಿಎಂಶ್ರೀ ಅವರು ‘ನಾನು ವಿಜಾಪುರಕ್ಕೆ ಗೋಲ ಗುಮ್ಮಟ ನೋಡಲು ಬಂದಿಲ್ಲ. ವಚನ ಸಾಹಿತ್ಯವನ್ನು ರಕ್ಷಿಸಿದ ವಚನ ಗುಮ್ಮಟ ಫ.ಗು.ಹಳಕಟ್ಟಿ ಅವರನ್ನು ನೋಡಲು ಬಂದಿದ್ದೇನೆ’ ಎಂದರಂತೆ.
ಆ ಗುಮ್ಮಟ ಒಂದು ಸಲ ಧ್ವನಿ ಮಾಡಿದರೆ ಏಳು ಸಲ ಪ್ರತಿಧ್ವನಿ ಮಾಡುತ್ತದೆ ಅಷ್ಟೆ. ಆದರೆ ಫ.ಗು.ಹಳಕಟ್ಟಿ ಕಟ್ಟಿದ ಗುಮ್ಮಟ ಕಾಲ ಕಾಲಕ್ಕೆ ಕೋಟ್ಯಂತರ ಜನರ ಹೃದಯದಲ್ಲಿ ನಿರಂತರ ಪ್ರತಿಧ್ವನಿ ಮಾಡುತ್ತಲೇ ಇರುತ್ತದೆ ಎಂದು ಹೇಳಿದರಂತೆ.
ಹಳಕಟ್ಟಿ ಅವರು ಶಾಸಕರಾಗಿ ಏನಾದರೂ ಮಾಡಬಹುದಿತ್ತು. ಆದರೆ ಅವರು ಲೋಕಕಲ್ಯಾಣಕ್ಕಾಗಿ ವಚನ ಸಂಗ್ರಹಕ್ಕೆ ತಮ್ಮ ಜೀವನ ಮೀಸಲಿಟ್ಟರು. ಹೃದಯದಲ್ಲಿ ಮೀಸಲು ಮಾಡಿದರೆ ಮನಸ್ಸು ಹರಿದಾಡುವುದಿಲ್ಲ. ಮನಸ್ಸು ಹರಿದಾಡದೇ ಇದ್ದರೆ ಜೀವನದಲ್ಲಿ ನೀವು ಗುರಿ ತಲುಪುತ್ತೀರಿ. ಮನಸ್ಸು ನಿರ್ಮಲವಾಗಿರಬೇಕು. ಅಂದರೆ ಜೀವನದಲ್ಲಿ ಉತ್ಸಾಹ ಬರುತ್ತದೆ. ನಮಗೆ ಜೀವನದಲ್ಲಿ ಉತ್ಸಾಹವೇ ಇಲ್ಲ. ಬೆಳಿಗ್ಗೆ ಎದ್ದರೆ ನಮ್ಮ ಭಾಷೆ ಏನು ಎಂದರೆ, ದೇವರು ಕಣ್ಣು ಮುಚ್ಚಬೇಕಾಗಿತ್ತು ಎನ್ನುತ್ತೇವೆ. ದೇವರು ಯಾಕೆ ಕಣ್ಣು ಮುಚ್ಚಬೇಕು. ನಿಮಗೆ ಕಣ್ಣು ತೆಗಿ ಅಂತ ಹೇಳಿದವರು ಯಾರು?
(ಕೃಪೆ – ಗವಿಸಿದ್ದೇಶ್ವರ ಮಠ, ಕೊಪ್ಪಳ)
Super article sharanare
This ortical is best message for Young generation
Supper ortical gurugale