‘ಸಂವಿಧಾನ ಎದೆಗಪ್ಪಿಕೊಳ್ಳೋಣ, ಮನುಸ್ಮೃತಿಗೆ ಕೊಳ್ಳಿ ಇಡೋಣ’
ಬೆಂಗಳೂರು
ಅಸಮಾನತೆಯ ಪ್ರತೀಕವಾದ ಮನುಸ್ಮೃತಿ ಗ್ರಂಥವನ್ನು ಡಾ.ಬಿ.ಆರ್.ಅಂಬೇಡ್ಕರ್ ಸುಟ್ಟ ಐತಿಹಾಸಿಕ ದಿನವಾದ ಡಿಸೆಂಬರ್ 25ರಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮನುಸ್ಮೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ವಿರುದ್ಧ ಕೂಡ ದಲಿತ ಸಂಘಟನೆಗಳು ಪ್ರತಿಭಟಿಸಿದವು.

ಬೀದರ್
ಬಸವಕಲ್ಯಾಣದಲ್ಲಿ ಮನುಸ್ಮೃತಿ ಪ್ರತಿಕೃತಿ ದಹನ ದಿನ ಆಚರಣೆ ಮಾಡಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಅವರು 1927ರ ಡಿ.25 ರಂದು ಮನುಸ್ಮೃತಿ ದಹಿಸಿದ ಘಟನೆಯ ಸ್ಮರಣಾರ್ಥವಾಗಿ ನಗರದ ದಲಿತ ಮುಖಂಡರಿಂದ ಅಂಬೇಡ್ಕರ್ ಪ್ರತಿಮೆ ಎದುರು ಮನುಸ್ಮೃತಿ ಪ್ರತಿಕೃತಿ ದಹನ ದಿನ ಆಚರಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಮನುಸ್ಮೃತಿ ಮಹಿಳಾ ವಿರೋಧಿ ಮಾತ್ರವಲ್ಲ, ಇಡೀ ಮಾನವ ವಿರೋಧಿಯಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ತಾಲೂಕಾ ಸಂಚಾಲಕ ಪಿಂಟು ಕಾಂಬ್ಳೆ ಅಭಿಪ್ರಾಯಪಟ್ಟರು.

ಕಲಬುರಗಿ
ದಲಿತ ಸಂಘರ್ಷ ಸಮಿತಿಯ ಮುಖಂಡರು ನಗರದ ಜಗತ್ ವೃತ್ತದಲ್ಲಿ ಮನುಸ್ಮೃತಿಯ ಗ್ರಂಥದ ಪ್ರತಿಗಳನ್ನು ದಹನ ಮಾಡಿದರು. ಜಾತಿಯತೆ ಲಿಂಗ ಅಸಮಾನತೆ ಯನ್ನು ತೋರಿಸಿಕೊಡುವ ಮನಸ್ಮೃತಿಯು ಮಾನವನ ವಿರೋಧ ಗ್ರಂಥವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಅಂಬೇಡ್ಕರ್ ಅವರ ಕುರಿತಾಗಿ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು.
ಹುಬ್ಬಳ್ಳಿ
ದುರ್ಗದಬೈಲ್ ವೃತ್ತದಲ್ಲಿ ಸಮಾವೇಶಗೊಂಡ ಸಂಘಟನೆಗಳ ಸದಸ್ಯರು ಮನುಸ್ಮೃತಿ ದಹನ ದಿನದ ಪ್ರಯುಕ್ತ ಮನುಸ್ಮೃತಿ ಗ್ರಂಥ ದಹಿಸಿದರು.
‘ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವೇ ಭಾರತದಲ್ಲಿ ವೇದ್ಯವಾಗಬೇಕೇ ಹೊರತು, ಅಸಮಾನತೆ, ಜಾತಿವಾದವನ್ನು ಪ್ರೇರೇಪಿಸುವ ಮನುಸ್ಮೃತಿಯಲ್ಲ’ ಎಂದು ಟೀಕಿಸಿ ಸಮತಾ ಸೇನಾ ಹಾಗೂ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾ ಮಂಡಳದ ಸದಸ್ಯರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಮಂಡ್ಯ
ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ಜನಶಕ್ತಿ ನೇತೃತ್ವದಲ್ಲಿ ಮನುಸ್ಮೃತಿಯ ಪ್ರತಿಯನ್ನು ದಹಿಸಿ ಸಂವಿಧಾನದ ಆಶಯ ಸಂಪೂರ್ಣ ಅನುಷ್ಠಾನಕ್ಕೆ ಆಗ್ರಹಿಸಲಾಯಿತು.
‘ಸಂವಿಧಾನವನ್ನು ಎದೆಗಪ್ಪಿಕೊಳ್ಳೋಣ, ಮನುಸ್ಮೃತಿಗೆ ಕೊಳ್ಳಿ ಇಟ್ಟು ಸಮತೆಯ ಜ್ಯೋತಿ ಬೆಳಗಿಸೋಣ’ ಘೋಷಣೆಯಡಿ ದಲಿತ, ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮನುಸ್ಮೃತಿ ದಹಿಸಿ ಮನುವಾದದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿ
ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ವತಿಯಿಂದ ಮನುಸ್ಮೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.
ಹಾಸನ
ಹಾಸನ ನಗರದ ಹೇಮಾವತಿ ಪ್ರತಿಮೆಯ ಎದುರಿನಲ್ಲಿ ಪ್ರಗತಿಪರ ಸಂಘಟನೆಗಳು ಮನುಸ್ಮೃತಿಯ ಪ್ರತಿಯನ್ನು ಸುಟ್ಟು, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು.

ಹೊಳೆನರಸೀಪುರ
ಪಟ್ಟಣದ ಅಂಬೇಡ್ಕರ್ ಪ್ರತಿಮೆ ಬಳಿ ದಂಡೋರ ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಅವರ ನೇತೃತ್ವದಲ್ಲಿ ಮನುಸ್ಮೃತಿ ದಹಿಸಲಾಯಿತು.
ಅಮಿತ್ ಶಾ ಅವರ ಕೆಲವು ಹೇಳಿಕೆಗಳು ಸಂವಿಧಾ ನದ ತತ್ವಗಳಿಗೆ ವಿರುದ್ಧವಾಗಿದ್ದು, ಇದನ್ನು ಗಂಭೀ ರವಾಗಿ ಪರಿಗಣಿಸಬೇಕೆಂದು ಕೇಂದ್ರ ಸರಕಾರವನ್ನು ಸಂಘಟನೆಗಳ ಮುಖಂಡರು ಆಗ್ರಹಿಸಿದರು.
ಆಳಂದ
ಪಟ್ಟಣದ ಬಸ್ ನಿಲ್ದಾಣದ ಮುಂದೆ ದಲಿತ ಸಮನ್ವಯ ಸಮಿತಿಯ ವತಿಯಿಂದ ಮನಸ್ಮೃತಿ ದಹಿಸಿ ಸಮಿತಿಯ ಅಧ್ಯಕ್ಷ ದಯಾನಂದ್ ಸೇರಿಕಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖಂಡರಾದ ಬಸಲಿಂಗಪ್ಪ ಗಾಯಕ್ವಾಡ್, ಬಾಬುರಾವ್ ಅರುಣೋದಯ, ಸುನಿಲ್ ಹಿರೋಳಿಕರ, ಮಲ್ಲಿಕಾರ್ಜುನ್ ಬೋಳಣಿ ಮಾತನಾಡಿದರು.
ತಿ.ನರಸೀಪುರ
ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಹಾಗೂ ಮುಖಂಡರು ತಾಲ್ಲೂಕು ಆಡಳಿತ ಸೌಧದ ಮುಂಭಾಗದ ಅಂಬೇಡ್ಕರ್ ಪ್ರತಿಮೆಯ ಬಳಿ ಬುಧವಾರ ‘ಸಂವಿಧಾನ ಎದೆಗಪ್ಪಿಕೊಳ್ಳೋಣ, ಮನುಸ್ಮೃತಿಗೆ ಕೊಳ್ಳಿ ಇಡೋಣ’ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಉದ್ಯಾನವನದಲ್ಲಿನ ಪ್ರತಿಮೆ ಬಳಿ ಸೇರಿದ್ದ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು, ಮನುವಾದಿ ಸಂಸ್ಕೃತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಮನುಸ್ಮೃತಿ ಪ್ರತಿಗಳನ್ನು ದಹಿಸಿದರು.
ಜಾಗೃತ ಭಾರತ…..