ಹಳಿಯಾಳ
ಉಳವಿ ಚೆನ್ನಬಸವಣ್ಣ ಶರಣರ ಜಾತ್ರಾ ಮಹೋತ್ಸವಕ್ಕೆ ಹೋಗುತ್ತಿರುವ ಭಕ್ತಾಧಿಗಳಿಗೆ ಪಟ್ಟಣದಲ್ಲಿ ಅನ್ನದಾಸೋಹ ಸೇವೆ ಕಲ್ಪಿಸಲಾಗಿದೆ.
ಧಾರವಾಡ ರಸ್ತೆಯಲ್ಲಿನ ಅಂಗಡಿ ಗ್ಯಾಸ್ ಸರ್ವಿಸ್, ಎ.ಪಿ.ಎಂ.ಸಿ ಹತ್ತಿರ ಯಾತ್ರಾರ್ಥಿಗಳಿಗಾಗಿ ಅನ್ನ ದಾಸೋಹಕ್ಕೆಂದೇ ಪೆಂಡಾಲ್ ಹಾಕಲಾಗಿದೆ.

ಫೆಬ್ರವರಿ 12 ಭಾರತ ಹುಣ್ಣಿಮೆಯ ದಿನದಂದು ನಡೆಯಲಿರುವ ಜಾತ್ರೆಗೆ ಹೋಗುತ್ತಿರುವ ಅಪಾರ ಸಂಖ್ಯೆಯ ಭಕ್ತಾದಿಗಳಿಗೆ ಫೆಬ್ರವರಿ 5 ರಿಂದ 11ರ ವರೆಗೆ ಪ್ರತಿದಿನ ಬೆಳಿಗ್ಗೆ ಉಪಹಾರ-ಚಹಾ, ಮಧ್ಯಾಹ್ನ ವಿವಿಧ ಖಾದ್ಯಗಳನ್ನೊಳಗೊಂಡ ಅನ್ನದಾಸೋಹ, ಸಾಯಂಕಾಲ ಅಲ್ಪೋಪಹಾರ ಜೊತೆಗೆ ಚಹಾ, ಕಾಫಿಯ ದಾಸೋಹ ನಡೆಯುತ್ತಿದೆ.
‘ಪ್ರತಿನಿತ್ಯ ಸುಮಾರು 1 ಸಾವಿರದಿಂದ 2,500 ರವರೆಗೆ ಭಕ್ತಾಧಿಗಳು ಚಕ್ಕಡಿ, ಮತ್ತಿತರ ವಾಹನಗಳ ಮುಖಾಂತರ ಬಂದವರು ಪ್ರಸಾದ ಸೇವಿಸಿಕೊಂಡು ಹೋಗುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ಚಕ್ಕಡಿ ಹೂಡಿಕೊಂಡು ಬಂದ ಎತ್ತುಗಳಿಗೆ ಮೇವು, ನುಚ್ಚು ಪ್ರತ್ಯೇಕವಾಗಿ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಪಾದಯಾತ್ರೆ ಮೂಲಕ ಬಂದವರ ಕಾಲಿಗೆ ಲೇಪಿಸಿಕೊಳ್ಳಲು ನೋವು ನಿವಾರಕ ಎಣ್ಣೆ ಸಹ ಒದಗಿಸಲಾಗುತ್ತಿದೆ’ ಎಂದು ಸುಮಂಗಲಾ ಅಂಗಡಿ ಹೇಳುತ್ತಾರೆ.
ಬೈಲಹೊಂಗಲ, ಹುಬ್ಬಳ್ಳಿ, ಧಾರವಾಡ, ಗದಗ, ಬಾಗಲಕೋಟೆ, ಕಿತ್ತೂರು ಮತ್ತಿತರ ಭಾಗಗಳಿಂದ ಪಾದಯಾತ್ರೆಗೆ ತೆರಳುವ ಭಕ್ತಾದಿಗಳು ಮೊದಲೇ ಫೋನಾಯಿಸಿ ದಾಸೋಹ ಬೇಕೆಂದು ತಿಳಿಸುತ್ತಾರೆ. ಅವರಿಗಾಗಿ ಊಟ, ಉಪಾಹಾರ ಮಾಡಿಡಲಾಗುತ್ತದೆ, ಎಂದು ಸಿರಾಜ್ ತಿಳಿಸಿದರು.

ಸ್ಥಳೀಯರಾದ ಸುಮಂಗಲಾ ಚಂದ್ರಕಾಂತ ಅಂಗಡಿ, ಸಿರಾಜ್ ಮುಸ್ತಫಾ ಮುನವಳ್ಳಿ ಹಾಗೂ ಧಾರವಾಡದ ಉಳವಿ ಚನ್ನಬಸವೇಶ್ವರ ಅನ್ನದಾಸೋಹ ಸಮಿತಿಯ ಶ್ರಮದಿಂದ ಕಳೆದ ಆರು ವರ್ಷಗಳಿಂದ ಇಲ್ಲಿ ಅನ್ನ ದಾಸೋಹ ನಡೆಸಲಾಗುತ್ತಿದೆ. ಶಿವಾನಂದ ದೇವಗಿರಿ, ಸಂಜೀವ ಲಕಮನಹಳ್ಳಿ, ಶಿವಪುತ್ರಪ್ಪ ಬಾವಿಕಟ್ಟಿ, ವಿರೂಪಾಕ್ಷ ಹೊಟಗಿ, ಸರಸ್ವತಿ ಪೂಜಾರ ದಾಸೋಹ ಸೇವಾಕರ್ತರಾಗಿದ್ದಾರೆ.

ಭಕ್ತಾದಿಗಳು ದಾಸೋಹಕ್ಕಾಗಿ ಆಗಮಿಸುವವರಿದ್ದಲ್ಲಿ 94499 30493, 99165 26870, 948003 93190, 94827 52677 ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಲು ಅನ್ನದಾಸೋಹ ಸಮಿತಿ ಸದಸ್ಯರು ತಿಳಿಸಿದ್ದಾರೆ.

ಸುಮಂಗಲಾ ಅಂಗಡಿ ಅಕ್ಕಾವರಿಗೆ,ಸಿರಾಜ್ ಅಣ್ಣನವರಿಗೆ ಸಮಸ್ತ ದಾಸೋಹಿಗಳಿಗೆ ಶರಣು ಶರಣಾರ್ಥಿಗಳು , ಭಾವೈಕ್ಯತೆಯ ಹಾದಿಯಲ್ಲಿ ನಡೆಯುತ್ತಿರುವ ಈ ದಾಸೋಹ ಶರಣ ಸಿಧ್ದಾಂತವನ್ನು ಅಲ್ಷರಶಃ ಆಚರಣೆ ಮಾಡುತ್ತಿರುವವರು, ಒದುನೈಜಬಸವ ತತ್ವದ ಆಚರಣೆ