ವಿವಿಧ ಬಸವ ಸಂಘಟನೆಗಳ 800ಕ್ಕೂ ಹೆಚ್ಚು ಶರಣ ಬಂಧುಗಳು ಭಾಗಿ
ಹಂಪಿ
ಲಿಂಗಾಯತ ಧರ್ಮ ಪುನರುತ್ಥಾನ ಕೇಂದ್ರ, ವಿಶ್ವವಿಖ್ಯಾತ ಹಂಪಿ ಕ್ಷೇತ್ರದ ನಾಗೇನಹಳ್ಳಿ ಧರ್ಮಗುಡ್ಡದಲ್ಲಿ, ವಿಶ್ವಗುರು ಬಸವಣ್ಣನವರ ಸಂಸ್ಮರಣಾ ಕಾರ್ಯಕ್ರಮ ರವಿವಾರ ಅರ್ಥಪೂರ್ಣವಾಗಿ ನಡೆಯಿತು.

ಬೆಳಿಗ್ಗೆ ಪೂಜ್ಯರು, ಗಣ್ಯರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟನೆಗೊಂಡಿತು. ಪ್ರಾಸ್ತಾವಿಕವಾಗಿ ಉಪನ್ಯಾಸಕ ಟಿ. ಹೆಚ್. ಬಸವರಾಜ ಮಾತನಾಡುತ್ತ, 2018ರಲ್ಲಿ ಇಲ್ಲಿ ಇಷ್ಟಲಿಂಗ ಅಧ್ಯಯನ ಕೇಂದ್ರ ಸ್ಥಾಪನೆ ಆದಾಗಿನಿಂದ, ಶರಣರ ಸ್ಮಾರಕವಾಗಿರುವ ಹಂಪಿಯ ಧರ್ಮದಗುಡ್ಡದಲ್ಲಿ ಈ ಸಂಸ್ಮರಣಾ ಕಾರ್ಯಕ್ರಮ ನಡೆದುಕೊಂಡು ಬಂದಿದೆ.
ಈ ಸ್ಥಳ ಲಿಂಗಾಯತ ಧರ್ಮದ ಅಸ್ಮಿತೆಯ ಕುರುವಾಗಿದೆ. ಶರಣೆ ಹಡಪದ ಲಿಂಗಮ್ಮ ಹಾಗೂ ಚನ್ನಬಸವಣ್ಣನವರ ಗವಿಗಳು ಇಲ್ಲಿ ಇರುವುದೇ ಐತಿಹಾಸಿಕ ಸಾಕ್ಷಿಯಾಗಿದೆ. ಅಕ್ಕಪಕ್ಕದ ಗ್ರಾಮಗಳಾದ ಬಸವನದುರ್ಗ, ಕಾಲಘಟ್ಟ, ನಾಗಾಯಿಹಳ್ಳಿ (ನಾಗೇನಹಳ್ಳಿ) ಇವುಗಳು ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿವೆ, ಈ ಧರ್ಮದಗುಡ್ಡ ಹಾಗೂ ಹೊಂದಿಕೊಂಡಿರುವ ಗ್ರಾಮಗಳು ಕಲ್ಯಾಣ ಕ್ರಾಂತಿಯ ನಂತರದಲ್ಲಾದ ಸ್ಥಿತ್ಯಂತರಕ್ಕೆ ಸಾಕಷ್ಟು ಸಾಕ್ಷಿಯನ್ನು ಜನಪದರಲ್ಲಿ ಒದಗಿಸಿಕೊಡುತ್ತವೆ, ಆದ್ದರಿಂದ ಈ ಸ್ಥಳವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಸಂಡೂರು ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮಿ ಅವರು ಸೆಪ್ಟೆಂಬರ್ 01ರಿಂದ ಸಾಂಸ್ಕೃತಿಕ ನಾಯಕ ಬಸವಣ್ಣ, ಲಿಂಗಾಯತ ಧರ್ಮದ ಜಾಗೃತಿ ಸಾರುವ ‘ಬಸವ ಸಂಸ್ಕೃತಿ ಅಭಿಯಾನ’ ರಾಜ್ಯಾದ್ಯಂತ ನಡೆಯಲಿದ್ದು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಎಲ್ಲ ಮಠಾಧೀಶರು, ಲಿಂಗಾಯತ ಸಂಘಟನೆಗಳು, ಸಮಾಜ ಬಂಧುಗಳು ಸಭೆ ಸೇರಿ ಜಿಲ್ಲೆಗಳಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಹೊಸಪೇಟೆ, ಹಾಲಕೆರೆ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಪೂಜ್ಯ ಬಸವಲಿಂಗ ಸ್ವಾಮೀಜಿ ಅವರು ನಮ್ಮ ಮಠ ನಿರಂತರವಾಗಿ 12ನೇ ಶತಮಾನದ ಶರಣರ ಆಶಯಗಳನ್ನು ಈಡೇರಿಸುವಲ್ಲಿ ನಿರಂತರ ಪ್ರಯತ್ನ ಮಾಡುತ್ತಿದೆ. ಈ ಭಾಗದಲ್ಲಿ ಯಾವುದೇ ಸಂಘಟನೆಯ ಲಿಂಗಾಯತ ಧರ್ಮ ಪ್ರಚಾರ ಕಾರ್ಯಕ್ಕೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ, ಆ ಭಾಗವಾಗಿ ನಮ್ಮ ಪಕ್ಕದಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಚನ ಸಾಹಿತ್ಯ ಅಧ್ಯಯನ ಕೇಂದ್ರವನ್ನು ತೆರೆಯಲು, ವಿಶ್ವವಿದ್ಯಾನಿಲಯ ಹಾಗೂ ಸರ್ಕಾರದ ಮೇಲೆ ಒತ್ತಡ ತರಲು ಪ್ರಯತ್ನಿಸಲಾಗುವುದು ಹಾಗೂ ಅದಕ್ಕೆ ಬೇಕಾದ ಆರ್ಥಿಕ ಸಹಾಯವನ್ನು ಕೂಡ ನೀಡಲಾಗುವುದು ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಡಾ. ಜೆ.ಎಸ್. ಪಾಟೀಲ ಅವರು, ಹಿಂದಿನ ಹೆಜ್ಜೆಯನ್ನು ಅರಿಯದೆ ಮುಂದಣ ಹೆಜ್ಜೆಯನ್ನು ಅರಿಯಲು ಸಾಧ್ಯವಿಲ್ಲ ಎನ್ನುವ ಅಲ್ಲಮಪ್ರಭುದೇವರ ವಾಣಿಯಂತೆ ಲಿಂಗಾಯತ ಧರ್ಮದ ಇತಿಹಾಸವನ್ನು ತಿಳಿದು, ಸರ್ವಕಾಲಕ್ಕೂ ಶ್ರೇಷ್ಠವಾದ ಬಸವಾದಿ ಶರಣರ ಚಿಂತನೆಗಳನ್ನು ಇಂದು ಪ್ರಚಾರಪಡಿಸುವುದು ಅತ್ಯವಶ್ಯಕವಾಗಿದೆ. 12ನೇ ಶತಮಾನದ ಶರಣರು ಯಾರ ವಿರುದ್ಧ ಹೋರಾಡಿದರು, ಯಾಕಾಗಿ ಹೋರಾಡಿದರು, ಯಾವ ತತ್ವ-ಸಿದ್ಧಾಂತಗಳನ್ನು ಪ್ರತಿಪಾದಿಸಿದರು ಎನ್ನುವುದು ಬಹಳ ಮುಖ್ಯವಾಗಿದೆ.

ಅಂದು ವೈದಿಕ ಆಚರಣೆಯನ್ನು ಶರಣರು ಧಿಕ್ಕರಿಸಿದರು, ಆದರೆ ಇಂದು ಲಿಂಗಾಯತರೆಂದು ಹೇಳಿಕೊಳ್ಳುವ ನಾವುಗಳು, ಹಾಗೂ ಕೆಲವು ಲಿಂಗಾಯತ ಮಠಗಳು ವೈದಿಕ ಆಚರಣೆಗಳನ್ನು ಆಚರಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ನಮ್ಮ ಕುಟುಂಬಗಳಲ್ಲಿ ಲಿಂಗಾಯತ ತತ್ವ ಸಿದ್ಧಾಂತಗಳನ್ನು ಅನುಸರಿಸಿ, ಜೀವನದಲ್ಲಿ ಅಳವಡಿಸಿಕೊಂಡಾಗ ಸಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.

ಪೂಜ್ಯ ಶಾರದಾ ಮಾತೆ ಅವರು, ವಿಶ್ವಗುರು ಬಸವಣ್ಣನವರ ಕಾರ್ಯ, ಸಾಧನೆ, ಸಂದೇಶಗಳ ವಚನ ಚಿಂತನೆ ಮಾಡಿದರು. ರಾಷ್ಟ್ರೀಯ ಬಸವದಳದ ರವಿಶಂಕರ್ ಅವರು, ಪೂಜ್ಯ ಡಾ. ಮಾತೆ ಮಹಾದೇವಿ ಅವರ ಸಂಕಲ್ಪದಂತೆ 2018ರಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು. ಡಾ. ಜೆ.ಎಸ್. ಪಾಟೀಲರ ‘ಎಳೆಹೂಟೆ’ ನಾಟಕ ಕೃತಿ ಬಿಡುಗಡೆಗೊಳಿಸಲಾಯಿತು.
ನಿರ್ಣಯಗಳು
ಶರಣ ಟಿ. ಎಚ್. ಬಸವರಾಜ ಅವರು ನಿರ್ಣಯಗಳನ್ನು ಸಭೆಗೆ ವಿವರಿಸಿದರು.
೧) ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಚನ ಅಧ್ಯಯನ ಪೀಠ ಸ್ಥಾಪಿಸಬೇಕು.
೨) ಧರ್ಮದ ಗುಡ್ಡ ನಾಗೇನಹಳ್ಳಿಯಲ್ಲಿ ಚನ್ನಬಸವಣ್ಣನವರ ಸ್ಮಾರಕ ನಿರ್ಮಾಣ ಮಾಡಬೇಕು.
೩) ಹಂಪಿ ಕ್ಷೇತ್ರದ ಈ ಪರಿಸರದಲ್ಲಿ, ವಿಶ್ವಗುರು ಬಸವಣ್ಣನವರ ಪುತ್ಥಳಿ ನಿರ್ಮಾಣ ಮಾಡುವ ಸಂಕಲ್ಪ.
೪) ಹಂಪಿ ಉತ್ಸವದಲ್ಲಿ ಪ್ರೌಢದೇವರಾಯ ಹಾಗೂ ಸಂಗಮವಂಶದ ಬಗ್ಗೆ, ವಿಜಯ ಕಲ್ಯಾಣ ಏರ್ಪಡಿಸುವುದು. ಈ ಎಲ್ಲ ನಿರ್ಣಯಗಳಿಗೆ ಸೇರಿದ ಶರಣರು ಚಪ್ಪಾಳೆ ತಟ್ಟುವ ಮೂಲಕ ಅನುಮೋದಿಸಿದರು.
ಬೆಳಿಗ್ಗೆ 6 ರಿಂದ ವಿಶ್ವಗುರು ಬಸವೇಶ್ವರ ಪೂಜಾ ಅನುಷ್ಠಾನ, ಇಷ್ಟಲಿಂಗ ಅನುಸಂಧಾನ ಹಾಗೂ ಪಥ ಸಂಚಲನ ನಡೆಯಿತು.
ಕಾರ್ಯಕ್ರಮದಲ್ಲಿ ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು, ಮತ್ತಿತರ ಜಿಲ್ಲೆಯ ಹಿರಿಯ ಶರಣರಾದ ಕೋರಿಶೆಟ್ಟರ ಲಿಂಗಣ್ಣ, ಮಾವಿನಹಳ್ಳಿ ಬಸವರಾಜ, ಶಾಂತಲಿಂಗಪ್ಪ, ಡಿ ಬಸವರಾಜ, ವೀರಣ್ಣ ಕೊರಳಹಳ್ಳಿ, ಈಶಣ್ಣ ಲಿಂಗಾಯತ, ಬಸವಕಿರಣ ಸ್ವಾಮಿ, ಪನ್ನರಾಜ್ ಸೇರಿದಂತೆ 800ಕ್ಕೂ ಹೆಚ್ಚು ಸಂಖ್ಯೆಯ ಶರಣ ಬಂಧುಗಳು ಭಾಗವಹಿಸಿದ್ದರು.

ಕಾರ್ಯಕ್ರಮ ವಚನದೊಂದಿಗೆ ಮಂಗಲಗೊಂಡು, ಎಲ್ಲರೂ ಪ್ರಸಾದ ದಾಸೋಹ ಸ್ವೀಕರಿಸಿದರು.
ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭೆ, ಅಕ್ಕ ನಾಗಲಾಂಬಿಕ ಮಹಿಳಾಗಣ, ಬಸವ ಬಳಗ, ಇಷ್ಟಲಿಂಗ ಅಧ್ಯಯನ ಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭೆ, ಶರಣ ಸಾಹಿತ್ಯ ಪರಿಷತ್, ವಿಶ್ವಗುರು ಬಸವೇಶ್ವರ ಟ್ರಸ್ಟ್, ಬಸವ ಕೇಂದ್ರ, ಬಸವ ಸಮಿತಿ, ಅಕ್ಕನ ಬಳಗ, ಅಕ್ಕಮಹಾದೇವಿ ಮಹಿಳಾ ಗಣಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.