ಹರಳಯ್ಯನವರ ಗವಿಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

೧೨ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ೩೬ ಜನ ಶರಣೆಯರು ಏಕಕಾಲಕ್ಕೆ ವಚನ ಬರೆದಿದ್ದು ಕಲ್ಯಾಣ ಹೊರತು ಪಡಿಸಿದರೆ ವಿಶ್ವದ ಇತಿಹಾಸದಲ್ಲಿ ಕಾಣ ಸಿಗದು. ವಿಶ್ವದ ಮೊದಲ ಮಹಿಳಾವಾದಿ ಬಸವಣ್ಣ ಎಂದು ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಸಹಪ್ರಾಧ್ಯಾಪಕಿ ಪ್ರೊ. ಮೀನಾಕ್ಷಿ ಬಿರಾದಾರ ಹೇಳಿದರು.

ಅವರು ನಗರದ ಹರಳಯ್ಯನವರ ಗವಿಯಲ್ಲಿ ಅಂತರರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಂಯುಕ್ತಾಶ್ರಯದಲ್ಲಿ ಹರಳಯ್ಯನವರ ಗವಿಯಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅನುಭಾವ ನೀಡಿ, ಮಹಿಳೆ ಸಂಸ್ಕೃತಿಯ ತೊಟ್ಟಿಲು, ಸಂಸ್ಕೃತಿ ಉಳಿಸುವ ಬೆಳೆಸುವ ಶಕ್ತಿ ಮಹಿಳೆಯಲ್ಲಿದೆ.

ಸ್ತ್ರೀಯರಿಗೆ ಯಾವ ಧರ್ಮದಲ್ಲಿಯೂ ಧಾರ್ಮಿಕ ಸಂಸ್ಕಾರವಿರಲಿಲ್ಲ. ಮಹಿಳೆಯರಿಗೂ ಇಷ್ಟಲಿಂಗ ನೀಡಿ ಧಾರ್ಮಿಕ ಸಂಸ್ಕಾರ ನೀಡುವ ಪದ್ಧತಿ ಇದೆ. ಆತ್ಮಕ್ಕೆ ಹೆಣ್ಣು-ಗಂಡು ಎಲ್ಲರೂ ಸಮಾನರು. ಮಹಿಳೆಯ ಆತ್ಮವಿಶ್ವಾಸಕ್ಕೆ ಯಾರಾದರೂ ತಲೆಬಾಗಲೇಬೇಕು ಇದಕ್ಕೆ ಉದಾಹರಣೆ ೧೨ನೇ ಶತಮಾನದ ಅಕ್ಕಮಹಾದೇವಿ. ಕಷ್ಟ ಬಂದರೆ ಕೈ ಚೆಲ್ಲಬಾರದು ಮೂಢನಂಬಿಕೆಗಳಿಗೆ ಬಲಿಯಾಗಬೇಡಿ ಇದರಿಂದ ಹಣ ಸಮಯ ಶಕ್ತಿ ವ್ಯರ್ಥವಾಗುತ್ತದೆ. ಶರಣೆಯರಂತೆ ಸತ್ಯದ ಆಚರಣೆ ಆಳವಡಿಸಿಕೋಳಬೇಕು ಎಂದರು.

ನಗರಸಭೆ ಸದಸ್ಯೆ ನಿರ್ಮಲಾ ಶಿವಣಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆ ಮಮತೆಯುಳ್ಳವಳು, ಮಹತ್ವಾಕಾಂಕ್ಷೆಯುಳ್ಳವರು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು. ಯಾವ ಮಹಾತ್ಮರ ಚರಿತ್ರೆ ಓದಿದರೂ ತಾಯಿಯ ಸಂಸ್ಕಾರದಿಂದಲೇ ಆ ಸಾಧನೆ ಸಾಧ್ಯವಾಗಿರುವುದು ತಿಳಿಯುತ್ತದೆ.

ಮಹಿಳೆ ಅಬಲೆಯಲ್ಲ ಅವಳು ಸಬಲೆ, ಸ್ತ್ರೀ ಶಕ್ತಿ, ಸಾಮರ್ಥ್ಯದಿಂದ ದೇಶದ ಅಭಿವೃದ್ಧಿ ಸಾಧ್ಯ. ಕೀಳರಿಮೆ ಬಿಟ್ಟು ಸ್ವಂತ ವಿಕಾಸಕ್ಕೆ ಮುಂದಾಗಬೇಕು. ಜಗತ್ತೆ ನನ್ನ ಮನೆಯೆಂದು ಹೆಣ್ಣು ಸುಖವಾಗಿದ್ದಾಗ ಮಾತ್ರ ಜಗತ್ತು ಸುಖವಾಗಿರಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿಕೊಂಡಿದ್ದ ಅಕ್ಕನ ಬಳಗದ ಸುಲೋಚನಾ ಗುದಗೆ, ಹರಳಯ್ಯ ಸಮಾಜದ ಮೀನಾ ಜಾಧವ ಮಾತನಾಡಿದರು. ಪುಷ್ಪಾವತಿ ಹೊಳಕುಂದೆ ನಗೆಹನಿಗಳನ್ನು ಹೇಳಿದರು. ವೇದಿಕೆಯಲ್ಲಿ ಹರಳಯ್ಯ ಕಲ್ಯಾಣಮ್ಮ ಮಹಾಶಕ್ತಿಕೂಟದ ರೂಪಾ ಜಾಧವ, ಹಡಪದ ಅಪ್ಪಣ ಮಹಾಶಕ್ತಿಕೂಟದ ಕಾವೇರಿ ಜಂಗೆ, ಜೇಡರ ದಾಸಿಮಯ್ಯ ಮಹಾಶಕ್ತಿಕೂಟದ ನೀಲಾವತಿ ವಟಗೆ, ಮಡಿವಾಳ ಮಾಚಿದೇವ ಶಕ್ತಿಕೂಟದ ರೇಖಾ ಮಡಿವಾಳ, ಅಕ್ಕಮ್ಮ ಮಹಾಶಕ್ತಿಕೂಟದ ರಾಣಿ ಜಗತಾಪ, ತರಂಗಿಣಿ ಮಹಾಆಕ್ತಿಕೂಟದ ರೇಣುಕಾ ಮಿರಜದಾರ, ಮುಕ್ತಾಯಕ್ಕ ಮಹಾಶಕ್ತಿಕೂಟದ ಮಹಾನಂದಾ ಕಿರಣಗೆ ಉಪಸ್ಥಿತರಿದ್ದರು, ರಾಜಶ್ರೀ ಖೂಬಾ ಸ್ವಾಗತಿಸಿದರೆ, ಜಯಶ್ರೀ ಬಿರಾದಾರ ನಿರೂಪಿಸಿದರು. ಕವಿತಾ ರಾಜೋಳೆ ಶರಣು ಸಮರ್ಪಿಸಿದರು.



ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/E98vBDEsxjs5GHomGeoNMz

Share This Article
Leave a comment

Leave a Reply

Your email address will not be published. Required fields are marked *