ಧರ್ಮ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಿ: ಶಿವಾನಂದ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಹಾವೇರಿ

ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಬೇಕು. ಇತರೆ ಕಾಲಂನಲ್ಲಿ ಉಪ ಪಂಗಡಗಳನ್ನು ನಮೂದಿಸಬೇಕು ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ಕರೆ ನೀಡಿದರು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಬಸವ ಸಂಸ್ಕೃತಿ ಅಭಿಯಾನ ಸಮಿತಿ ಹಾಗೂ ವಿವಿಧ ಬಸವಪರ ಸಂಘಟನೆಗಳ ಸಹಯೋಗದೊಂದಿಗೆ ಭಾನುವಾರ ನಗರದ ರಜನಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಅಭಿಯಾನ ಪ್ರಯುಕ್ತ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಜತೆ ವಚನ ಸಂವಾದದಲ್ಲಿ ಮಾತನಾಡಿದರು.

ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಾವು ಏನು ಬರೆಸಬೇಕು. ವೀರಶೈವ ಲಿಂಗಾಯತ ಅಂತ ಒಬ್ಬರು, ಲಿಂಗಾಯತ ಅಂತ ಇನ್ನೊಬ್ಬರು ಹೇಳುತ್ತಾರೆ. ಮತ್ತೊಬ್ಬರು ಹಿಂದೂ ಲಿಂಗಾಯತ ಬರೆಸಿ ಎನ್ನುತ್ತಾರೆ. ಈ ಬಗ್ಗೆ ನಿಖರ ಸ್ಪಷ್ಟತೆ ಕೊಡಬೇಕು ಎಂದು ಕೇಳಿ ಬಂದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಲಿಂಗಾಯತ ಎಂಬುದು ಧರ್ಮನೋ ಜಾತಿನೋ ಎಂದು ಪ್ರಶ್ನಿಸಿದಾಗ ಲಿಂಗಾಯತ ಧರ್ಮ ಎಂದು ಸಾರ್ವಜನಿಕರು ಒಕ್ಕೊರಲಿನಿಂದ ಹೇಳಿದರು. ಇಷ್ಟು ಸ್ಪಷ್ಟತೆ ಇದ್ದರೆ ಸಾಕು ಎಂದು ಹೇಳಿದ ಶ್ರೀಗಳು, ಧರ್ಮ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಬೇಕು.

ಲಿಂಗಾಯತ ಧರ್ಮದಲ್ಲಿ 99 ಉಪ ಪಂಗಡಗಳು ಇವೆ. ಆಯಾ ಪಂಗಡಗಳಿಗೆ ಅನುಗುಣವಾಗಿ ಇತರೆ ಕಾಲಂನಲ್ಲಿ ಉಪಪಂಗಡ ಬರೆಯಿಸಬೇಕು. ಈ ಉಪ ಪಂಗಡಗಳಲ್ಲಿ ವೀರಶೈವ ಎಂಬುದೂ ಇದೆ. ಈ ಹಿನ್ನೆಲೆ ಲಿಂಗಾಯತ ವೀರಶೈವ ಎಂದು ಬರೆಸಬೇಕೆ ಹೊರತು ವೀರಶೈವ ಲಿಂಗಾಯತ ಎಂದು ಬರೆಸಬಾರದು. ಇದು ತಪ್ಪು. ಇನ್ನೂ ಹೆಚ್ಚಿನ ಮಾಹಿತಿ ಸರ್ಕಾರದ ದಾಖಲಾತಿಗಳಲ್ಲಿದ್ದು, ಆ ದಾಖಲಾತಿ ಮೇರೆಗೆ ನಮೂದಿಸಬೇಕೆಂದು ತಿಳಿಸಿದರು.

ಲಿಂಗದೀಕ್ಷೆ ಪಡೆಯುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಲಿಂಗದೀಕ್ಷೆ ತೆಗೆದುಕೊಳ್ಳುವವರು ಬಸವಗುರು ತತ್ವ ಅಳವಡಿಸಿಕೊಳ್ಳಬೇಕು. ಗುರುವಿನ ಮೇಲೆ ನಂಬಿಕೆ, ಶ್ರದ್ಧೆ, ಇಷ್ಟಲಿಂಗದ ಮೇಲೆ ನಂಬಿಕೆಯುಳ್ಳವರಾಗಿರಬೇಕು. ದುಷ್ಟ ದುರ್ಗುಣ ತ್ಯಜಿಸಿ ಸದ್ಗುಣ ಚಾರಿತ್ರ್ಯ ಬೆಳೆಸಿಕೊಂಡಿರಬೇಕು. ಜಾತಿ, ಮತ, ಪಂಥ, ಭೇದ, ಭಾವ ಇಲ್ಲದಿರುವ ಯಾರು ಬೇಕಾದರೂ ದೀಕ್ಷೆ ತೆಗೆದುಕೊಳ್ಳಬಹುದು. ಅದೇ ರೀತಿ ದೀಕ್ಷೆ ಕೊಡುವವರು ಅರಿವು, ಆಚಾರ, ಅನುಭಾವಿ, ಜ್ಞಾನಿಯಾದ ಗುರುಗಳಾಗಿರಬೇಕು ಎಂದರು.

ಬಸವಲಿಂಗ ಪಟ್ಟದೇವರು ಭಾಲ್ಕಿ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ ಶಿರಸಿ, ಬಸವಪ್ರಭು ಸಾಮೀಜಿ ಬಸವಕಲ್ಯಾಣ, ಅಲ್ಲಮಪ್ರಭು ಸ್ವಾಮೀಜಿ, ಶಿವಾನಂದ ಸ್ವಾಮೀಜಿ ಮೊದಲಾದ ಮಠಾಧೀಶರು ಇದ್ದರು.

ಸಾಮರಸ್ಯದ ನಡಿಗೆಗೆ ಜಿಲ್ಲಾಧಿಕಾರಿ ಚಾಲನೆ

ಬಸವ ಸಂಸ್ಕೃತಿ ಅಭಿಯಾನ ಅಂಗವಾಗಿ ನಗರದ ಹುಕ್ಕೇರಿಮಠ ಆವರಣದಲ್ಲಿ ಭಾನುವಾರ ಮಧ್ಯಾಹ್ನ ಸಾಮರಸ್ಯದ ನಡಿಗೆ, ಮೆರವಣಿಗೆಗೆ ಚಾಲನೆ ನೀಡಲಾಯಿತು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಬಸವ ಸಂಸ್ಕೃತಿ ಅಭಿಯಾನ ಸಮಿತಿ ಜಿಲ್ಲಾ ಘಟಕ ಸೇರಿದಂತೆ ವಿವಿಧ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಮರಸ್ಯದ ನಡಿಗೆ ಮೆರವಣಿಗೆಗೆ ಜಿಲ್ಲಾಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಚಾಲನೆ ನೀಡಿದರು.

ಹುಕ್ಕೇರಿಮಠದಿಂದ ಆರಂಭವಾದ ಸಾಮರಸ್ಯದ ನಡಿಗೆ ಮೆರವಣಿಗೆಯು ಪೋಸ್ಟ್ ಆಫೀಸ್ ರಸ್ತೆ, ಮೇಲಿನಪೇಟೆ ಕ್ರಾಸ್, ದ್ಯಾಮವ್ವನ ಪಾದಗಟ್ಟಿ, ಎಂ.ಜಿ. ರೋಡ್, ಎಂ.ಜಿ. ವೃತ್ತ, ಹಳೇ ಕೋರ್ಟ್, ಜೆ.ಪಿ ವೃತ್ತ, ಗೂಗಿಕಟ್ಟಿ, ಪಿ.ಬಿ ರಸ್ತೆ, ಹೊಸಮನಿ ಸಿದ್ದಪ್ಪ ವೃತ್ತದ ಮಾರ್ಗವಾಗಿ ರಜನಿ ಸಭಾಂಗಣವನ್ನು ತಲುಪಿತು.

ಸಾಮರಸ್ಯದ ನಡಿಗೆಯಲ್ಲಿ ಶರಣೆಯರು ವಚನ ಗ್ರಂಥವನ್ನು ತಲೆ ಮೇಲೆ ಹೊತ್ತು ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಡೊಳ್ಳು ವಾದ್ಯ, ಗೊಂಬೆ ಕುಣಿತ, ಝಾಂಜ್ ಮೇಳ, ನಂದಿಕೋಲು ಕುಣಿತ ಸೇರಿದಂತೆ ಸಕಲ ವಾದ್ಯ ವೈಭವಗಳೊಂದಿಗೆ ಬಸವಣ್ಣನವರ ಕುರಿತಾದ ಸ್ಥಬ್ಧಚಿತ್ರ ಮೆರವಣಿಗೆಯೂ ನಡೆಯಿತು.

ಮೆರವಣಿಗೆಯುದ್ದಕ್ಕೂ ಬಸವಣ್ಣನವರ ಕುರಿತಾದ ವಚನಗಳನ್ನು ಹೇಳುತ್ತಾ, ಬಸವ ಯಪರ ಘೋಷಣೆಗಳನ್ನು ಕೂಗುತ್ತಾ ಹೆಜ್ಜೆ ಹಾಕಿದರು.

ಈ ವೇಳೆ ಲಿಂಗಾಯತ ಮಠಾಪತಿಗಳ ಒಕ್ಕೂಟದ ಅಧ್ಯಕ್ಷ ಬಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು, ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗದಗ ತೊಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ, ಕೂಡಲಸಂಗಮ ಬಸವಧರ್ಮ ಪೀಠದ ಡಾ. ಗಂಗಾಮಾತಾಜಿ, ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಶಿರಸಿಯ ಮಲ್ಲಿಕಾರ್ಜುನ ಸ್ವಾಮೀಜಿ, ಬಸವಕಲ್ಯಾಣದ ಬಸವಪ್ರಭು ಸ್ವಾಮೀಜಿ, ಬೆಳಗಾವಿಯ ಅಲ್ಲಮಪ್ರಭು ಸ್ವಾಮೀಜಿ, ಹಂದಿಗುಂದದ ಶಿವಾನಂದ ಸ್ವಾಮೀಜಿ, ಶೇಗುಣಸಿಯ ಮಹಾಂತಪ್ರಭು ಸ್ವಾಮೀಜಿ, ಬನವಾಸಿಯ ಬಸವನಾಗಭೂಷಣ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ಸಾವಿರಾರು ಬಸವಾಭಿಮಾನಿಗಳು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
Leave a comment

Leave a Reply

Your email address will not be published. Required fields are marked *