ವಿಜಯಪುರ
ಇತ್ತೀಚೆಗೆ ಪತ್ರಿಕಾಗೋಷ್ಟಿಯಲ್ಲಿ ವಿಜಯಪುರ ಬಿಜೆಪಿ ಜಿಲ್ಲಾದ್ಯಕ್ಷ ಗುರುಲಿಂಗಪ್ಪ ಅಂಗಡಿಯವರು ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ಕುರಿತು ನೀಡಿದ ಹೇಳಿಕೆ, ಲಿಂಗಾಯತ ನಾಯಕ ಹಾಗೂ ಮುಖ್ಯಮಂತ್ರಿಯಾಗಲು ಹಿಂದೂ ಧರ್ಮವನ್ನು ಒಡೆಯಬೇಡಿ ಎಂದು ಹೇಳಿರುವುದು ಹಾಸ್ಯಾಸ್ಪದ, ದುರುದ್ದೇಶಪೂರ್ವಕವಾಗಿದ್ದು, ಸುಳ್ಳುಗಳಿಂದ ಕೂಡಿದ್ದು ಹಾಗೂ ಯಾವುದೇ ಕಾಮನ್ ಸೆನ್ಸ್ ಇಲ್ಲದೆ ನೀಡಿರುವ ಹೇಳಿಕೆ ಎಂದು ಕೆಪಿಸಿಸಿ ವೈದ್ಯ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ ರವಿಕುಮಾರ ಬಿರಾದಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಿಂಗಾಯತ ಸಮುದಾಯದಲ್ಲಿ ಅತ್ಯಂತ ಗೌರವ ಸ್ಥಾನದಲ್ಲಿರುವ ಇಡೀ ಜಂಗಮ ಸಮಾಜದ ಗುರು ತಾಯಿಯವರಿಗೆ ಅವಮಾನಕಾರ ಅಶ್ಲೀಲ ಪದ ಬಳಸಿರುವ ಗಡಿಪಾರು ಕನ್ನೇರಿ ಸ್ವಾಮಿಯ ಬೆಂಬಲವಾಗಿ ಮಾತನಾಡಿರುವ ಹಾಗೂ ಅವರ ಮಾತುಗಳನ್ನು ಖಂಡಿಸದೆ ಇರುವ ಅನಾಗರಿಕ ಮೂರು ಬಿಟ್ಟ ಬಿಜೆಪಿಯವರು ಇವರು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಲಿಂಗಾಯತ ಧರ್ಮ 12 ನೇ ಶತಮಾನದಲ್ಲೇ ವಿಶ್ವಗುರು ಬಸವಣ್ಣನವರಿಂದ ಸ್ಥಾಪನೆಯಾಗಿದ್ದು ಈ ಕುರಿತು ಸಾಕಷ್ಟು ಐತಿಹಾಸಿಕ ಸರಕಾರಿ ದಾಖಲೆಗಳು ನಮ್ಮ ಬಳಿ ಇವೆ, ಅದನ್ನು ನೋಡುವುದನ್ನು ಬಿಟ್ಟು ಬರೀ ಹಿಂದೂ ಧರ್ಮ ಒಡೆದರು ಎಂದು ಬೊಬ್ಬೆ ಹಾಕುತ್ತ ಕುಳಿತಿರುವುದು ಸರಿಯಲ್ಲ.
ಬೌಗೊಳಿಕವಾಗಿ, ಆನುವಂಶೀಯವಾಗಿ ನಾವೆಲ್ಲ ಹಿಂದೂಗಳೇ, ಆದರೆ ಧಾರ್ಮಿಕವಾಗಿ ಬೌದ್ಧ ಜೈನ ಸಿಖ್ ರಂತೆ ನಾವು ಲಿಂಗಾಯತರು ಪ್ರತ್ಯೇಕ ಧರ್ಮಿಯರು. ಈ ಮಾತನ್ನು ನಿಮ್ಮ ಆದರಣೀಯ ಸಾವರ್ಕರ್ ಅವರೇ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.
ಲಿಂಗಾಯತ ನಾಯಕ ತನ್ನಿಂದ ತಾನೇ ಮಾಡಿಕೊಳ್ಳಲು ಆಗಲ್ಲ, ಅದನ್ನು ತೀರ್ಮಾನಿಸುವುದು ಲಿಂಗಾಯತ ಸಮಾಜ, ಅಲ್ಲದೆ ಒಬ್ಬ ವ್ಯಕ್ತಿಯು ಒಂದು ಸಮಾಜಕ್ಕೆ ವಾಪಸ್ ನೀಡುವ ಸಮಾಜಸೇವೆಯನ್ನು ಗುರುತಿಸಿ ಲಿಂಗಾಯತ ಸಮುದಾಯ ತಮ್ಮ ನಾಯಕನನ್ನು ಆಯ್ಕೆ ಮಾಡುತ್ತದೆ. ಆ ನಿಟ್ಟಿನಲ್ಲಿ ಎಂ. ಬಿ. ಪಾಟೀಲರು ಈಗಾಗಲೇ ಸಮಸ್ತ ಲಿಂಗಾಯತ ನಾಯಕರಾಗಿ ಹೊರಹೊಮ್ಮಿದ್ದಾರೆ, ಆದ್ದರಿಂದ ಎಂ.ಬಿ. ಪಾಟೀಲರು ಯಾವುದೇ ಹಿಂದೂ ಧರ್ಮವನ್ನು ಒಡೆದಿಲ್ಲ ಅದರ ಅವಶ್ಯಕತೆಯೂ ಅವರಿಗಿಲ್ಲ.
ಅವರು ಬಸವಣ್ಣನವರು ಹಾಕಿಕೊಟ್ಟ ಕಾಯಕ ದಾಸೋಹ ಮಾರ್ಗದಲ್ಲಿ ಮುನ್ನಡೆಯುತ್ತಿದ್ದು ಬಡ ಲಿಂಗಾಯತರಿಗೆ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಪ್ರಾತಿನಿದಿತ್ವ ಕೊಡಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಅದನ್ನು ಸಹಿಸದೆ ನೀವು ಬಿಜೆಪಿಗರು ವಿನಾಕಾರಣ ಅವರ ತೇಜೋವಧೆಗೆ ನಿರಂತರ ಪ್ರಯತ್ನಿಸುತ್ತಿದ್ದೀರಿ.
ನಿಮ್ಮ ಪಕ್ಷದಲ್ಲಿಯ ಯಡಿಯೂರಪ್ಪ, ಬೊಮ್ಮಾಯಿ, ಶೆಟ್ಟರ್ ಸೇರಿದಂತೆ ನೀವುಗಳು ಸಮುದಾಯವನ್ನು ವೀರಶೈವ, ವೀರಶೈವ ಲಿಂಗಾಯತ, ಹಿಂದೂ ಅಂತ ಸದಾ ಗೊಂದಲದಲ್ಲಿಟ್ಟು ಬಡ ಲಿಂಗಾಯತ ಸಮುದಾಯಕ್ಕೆ ಮೋಸ ಮಾಡಿದ್ದೀರಿ, ಯಾವುದೇ ಕ್ಷೇತ್ರಗಳಲ್ಲಿ ಲಿಂಗಾಯತರಿಗೆ ಪ್ರಾತಿನಿದಿತ್ವ ಕೊಡಿಸಲು ಪ್ರಯತ್ನ ಪಟ್ಟಿರುವ ಉದಾಹರಣೆಗಳಿದ್ದರೆ ತಿಳಿಸಿ ಎಂದು ಸವಾಲು ಹಾಕಿದರು.
ಬಿಜೆಪಿ ಎಲ್ಲಾ ನಾಯಕರು ಲಿಂಗಾಯತರನ್ನು ಒಂದು ಓಟ ಬ್ಯಾಂಕ್ ಆಗಿ ಬಳಸಿಕೊಂಡು ತಮ್ಮ ತಮ್ಮ ಮನೆಯನ್ನು ಉದ್ದಾರ ಮಾಡಿಕೊಂಡು ಬಳಸಿ ಬೀಸಾಡಿದ್ದಾರೆಂದು ಆರೋಪಿಸಿದರು. ನಿಮ್ಮ ಯಡಿಯೂರಪ್ಪನವರು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಮೂರು ಮೂರು ಸಾರಿ ಕೇಂದ್ರಕ್ಕೆ ಸಹಿ ಮಾಡಿದ ಪತ್ರ ಕಳುಹಿಸಿದ್ದಾಗ ಯಡಿಯೂರಪ್ಪನವರು ಹಿಂದೂ ಧರ್ಮವನ್ನು ಒಡೆದಿದ್ದರೆ? ವೀರಶೈವ ಮಹಾಸಭಾ ಇತ್ತೀಚೆಗೆ ತನ್ನ ರಾಷ್ಟ್ರೀಯ ಸಮಾವೇಶದಲ್ಲಿ ವೀರಶೈವ ಲಿಂಗಾಯತರು ಹಿಂದೂಗಳಲ್ಲ ಎಂದು ಠರಾವು ಪಾಸು ಮಾಡಿದ್ದಾಗ ಹಿಂದೂ ಧರ್ಮ ಒಡೆಯಲಿಲ್ಲವೇ, ನಿಮ್ಮ ಅಮಿತ ಷಾ ರವರ ಜೈನ ಧರ್ಮ 2014 ರಲ್ಲಿ ಪ್ರತ್ಯೇಕ ಧರ್ಮ ಸ್ಥಾನಮಾನ ಪಡೆದಾಗ ಹಿಂದೂ ಧರ್ಮ ಒಡೆಯಲಿಲ್ಲವೇ?
ನಿಮ್ಮದೇ ನಾಯಕರು ಬ್ರಾಹ್ಮಣರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡಬೇಕೆಂದು ಹೇಳುತ್ತ ತಿರುಗುತ್ತಿದ್ದಾರೆ, ಇದರಿಂದ ಹಿಂದೂ ಧರ್ಮ ಒಡೆಯುವದಿಲ್ಲವೇ? ಇವೆಲ್ಲವುಗಳು ನಿಮಗೆ ಕಾಣಿಸುವುದಿಲ್ಲವೇ? ಅಥವಾ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದೀರಾ?
ನಿಮ್ಮ ಈ ಡಬಲ್ ಸ್ಟಾಂಡರ್ಡ್ ಎಡಬಿಡಂಗೀತನ, ಕನೇರಿ ಸ್ವಾಮಿಯ ತಪ್ಪುಗಳನ್ನು ತಪ್ಪು ಎಂದು ಹೇಳಲು ಆಗದೇ ಇರುವ ನಿಮ್ಮ ಷಂಡತನವನ್ನು ಲಿಂಗಾಯತರು ಎಂದಿಗೂ ಕ್ಷಮಿಸಲ್ಲ.
ಸಮಯ ಕೂಡಿ ಬಂದಾಗ ಕರುನಾಡ ಭಗೀರಥ ಎಂ.ಬಿ. ಪಾಟೀಲರು ಮುಖ್ಯ ಮಂತ್ರಿ ಆಗೇ ಆಗುತ್ತಾರೆ, ಅದಕ್ಕೆ ನಿಮ್ಮ ದೊಣ್ಣೆನಾಯಕನ ಅಪ್ಪಣೆ ಅಗತ್ಯವಿಲ್ಲ , ಇನ್ನೂ 20 ವರ್ಷ ನೀವು ಬಿಜೆಪಿಯವರು ವಿರೋಧ ಪಕ್ಷದಲ್ಲೇ ಇರುವಿರಿ. ಇನ್ನು 2028 ರಲ್ಲಿ ವಿಜಯಪುರ ಜಿಲ್ಲೆಯಲ್ಲಿ ನೀವುಗಳು ಅಕೌಂಟೇ ಓಪನ್ ಮಾಡಲ್ಲ, ನೀವು ಬಿಜೆಪಿ ಜಿಲ್ಲಾದ್ಯಕ್ಷರು ಅಂತ ನಿಮ್ಮ ಕಾರ್ಯಕರ್ತರಿಗೆ ನೆನಪು ಮಾಡಿಕೊಡಲು ನೀವು ನಿರಂತರ ಈ ರೀತಿ ಸುಳ್ಳು ಪ್ರಚಾರ ಮಾಡುತ್ತಾ ನಿಮ್ಮ ಇರುವಿಕೆಯನ್ನು ಪ್ರಚುರಪಡಿಸುತ್ತಿರುವಿರಿ. ನಿಮ್ಮ ಸುಳ್ಳುಗಳು ಅಪಪ್ರಚಾರಗಳು ನಿಮಗೇ ತಿರುಗುಬಾಣವಾಗಲಿವೆ ಎಂದು ಹೇಳಿದರು.
