ಮೈಸೂರಿನ ಹೊಸಮಠದಲ್ಲಿ ನೂತನ ಸ್ವಾಮೀಜಿಯ ಪಟ್ಟಾಧಿಕಾರ ಮಹೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ನಗರದ ಹೊಸಮಠದಲ್ಲಿ ನಿರಂಜನ ಪಟ್ಟಾಧಿಕಾರ ಮಹೋತ್ಸವ ಹಾಗೂ ಪೂಜ್ಯ ಚಿದಾನಂದ ಮಹಾಸ್ವಾಮೀಜಿಗಳವರ ಅಮೃತ ಮಹೋತ್ಸವ ಗುರುವಂದನೆ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿದರು.

ಪೀಠಾಧಿಪತಿ ಚಿದಾನಂದ ಸ್ವಾಮೀಜಿ ತಿ.ನರಸೀಪುರ ತಾಲ್ಲೂಕಿನ ಮುಡುಕನಪುರದ ವಟು ಎಂ.ಬಿ.ರಾಕೇಶ್‌ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಿದರು. ಮಾದಹಳ್ಳಿ ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ ಶಿವದೀಕ್ಷೆ ನೀಡಿದರು.

ಪಟ್ಟಕ್ಕೇರಿದ ನೂತನ ಸ್ವಾಮೀಜಿ ಅವರಿಗೆ ಸಿದ್ಧಬಸವ ಸ್ವಾಮೀಜಿ ಎಂದು ನಾಮಕರಣ ಮಾಡಲಾಯಿತು. ಅವರಿಗೆ ಭಕ್ತರ ಸಮ್ಮುಖದಲ್ಲಿ ದಿವ್ಯಸ್ನಾನ, ಭಸ್ಮರುದ್ರಾಕ್ಷ ಧಾರಣೆ, ಲಿಂಗಾಂಗಾನುಸಂಧಾನ, ಮಂತ್ರೋಪದೇಶ, ಪಂಚಮುದ್ರಾದಾನ, ವಿರಕ್ತಾಶ್ರಮಾಧಿಕಾರ, ಷಟ್ಸ್ಥಲ ಬ್ರಹ್ಮೋಪದೇಶ ಸೇರಿದಂತೆ‌ ವಿಧಿವಿಧಾನಗಳು ನಡೆದವು.

ಸಭೆಯಲ್ಲಿ ಮಾತನಾಡಿದ ಉತ್ತರಾಧಿಕಾರಿಯಾಗಿ ದೀಕ್ಷೆ ಸ್ವೀಕರಿಸಿದ ಸಿದ್ಧಬಸವ ಸ್ವಾಮೀಜಿ, ‘ಮಠದ ಗುರು ಪರಂಪರೆಯನ್ನು ನೆನೆಯುತ್ತಾ, ಹರಗುರುಚರಮೂರ್ತಿಗಳ ಆಶೀರ್ವಾದವನ್ನು ಪಡೆದು ಎಲ್ಲ ಜವಾಬ್ದಾರಿ ನಿರ್ವಹಿಸುವೆ’ ಎಂದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ‘ಹೊಸಮಠಕ್ಕೆ 500 ವರ್ಷದ ಇತಿಹಾಸವಿದ್ದು, ಚಿದಾನಂದ ಶ್ರೀ ಅವರು ನಟರಾಜ ಪ್ರತಿಷ್ಠಾನದ ಮೂಲಕ ಸುತ್ತೂರಿನ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು’ ಎಂದು ಹೇಳಿದರು.

‘ಅಂಥ ವೇಳೆಯಲ್ಲಿ ಸಿದ್ಧಬಸವ ಸ್ವಾಮೀಜಿ ಅವರನ್ನು ಅವರ ಪೋಷಕರು ಮಠಕ್ಕೆ ನೀಡಿದ್ದಾರೆ. ಶ್ರೀಗಳಿಗೆ ಸಮಾಜವೇ ತಾಯಿ, ತಂದೆ, ಬಂಧುಗಳು. ಸ್ವಹಿತ ಕಡೆಗಣಿಸಿ ಸಮಾಜದ ಕಲ್ಯಾಣಕ್ಕಾಗಿ ಪರಿಶ್ರಮಿಸುತ್ತಾರೆ. ಭಕ್ತರು ಅವರನ್ನು ಭಕ್ತಿ–ಶ್ರದ್ಧೆಯಿಂದ ನೋಡಿಕೊಳ್ಳಬೇಕು’ ಎಂದರು.

‘ಚಿದ್ಬೆಳಕು’ ಕೃತಿ ಮತ್ತು ‘ಚಿದಾಮೃತ’ ಚಿತ್ರ ಸಂಪುಟವನ್ನು ಗಣ್ಯರು ಬಿಡುಗಡೆ ಮಾಡಿದರು. ‘ಬಸವ ಸಂವಿಧಾನ– ಭಾರತ ಸಂವಿಧಾನ’ ಕುರಿತು ಇಳಕಲ್‌ನ ವಿಜಯ ಮಹಾಂತೇಶ್ವರ ಮಠದ ಗುರುಶಾಂತಸ್ವಾಮೀಜಿ ಮಾತನಾಡಿದರು.

ಪೂಜ್ಯ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿಗಳವರು, ಪೂಜ್ಯ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿಗಳವರು ಹಾಗೂ ಇಳಕಲ್‌ʼನ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಪೂಜ್ಯ ಗುರುಮಹಾಂತ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿದ್ದರು.

ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಶಾಸಕರಾದ ಜಿ.ಟಿ.ದೇವೇಗೌಡ, ಎಚ್‌.ಎಂ.ಗಣೇಶ್‌ ಪ್ರಸಾದ್, ಟಿ.ಎಸ್‌.ಶ್ರೀವತ್ಸ, ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ದೇವನೂರು ದಾಸೋಹ ಮಠದ ಗುರುಮಹಾಂತ ಸ್ವಾಮೀಜಿ, ಜೆಎಸ್‌ಎಸ್‌ ವಿದ್ಯಾಪೀಠದ ಕಾರ್ಯದರ್ಶಿ ಎಸ್‌.‍ಪಿ.ಮಂಜುನಾಥ್‌, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಹಿನಕಲ್‌ ಬಸವರಾಜು, ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ಮುಖಂಡರಾದ ಪ್ರತಾಪ್‌ ಸಿಂಹ, ಪ್ರದೀಪ್‌ ಕುಮಾರ್ ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BC3ULQcPxmhAhKS4XV9R1G

Share This Article
Leave a comment

Leave a Reply

Your email address will not be published. Required fields are marked *