ಹೊಸ ಓದು: ವಿಶ್ವಬಂಧು ಮರುಳಸಿದ್ದ ಮತ್ತು ಚತುರಾರ್ಚಾಯರ ಚಾರಿತ್ರಿಕ ಅಧ್ಯಯನ

ಮರುಳಸಿದ್ದರು ತಳಸಮುದಾಯದಲ್ಲಿ ಹುಟ್ಟಿದ ಕಾರಣವೇ ಅವರು ನಿರ್ಲಕ್ಷ್ಯಕ್ಕೆ ಕಾರಣವಾಗಿರಬಹುದೇ ಎಂಬ ವಾದ ಇದರಲ್ಲಿ ಇದೆ.

ಶಿವಮೊಗ್ಗ

ಶರಣರು ಮತ್ತು ವಚನ ಚಳುವಳಿಯ ಕುರಿತ ಅನೇಕ ಶೋಧಗಳು ನಡೆದಿವೆ ಅದಕ್ಕೆ ಹೊಸ ಸೇರ್ಪಡೆ ಚಂದ್ರಶೇಖರ ಆರ್. ಯು. ಅವರು ಬರೆದಿರುವ ‘ವಿಶ್ವಬಂಧು ಮರುಳಸಿದ್ದ ಹಾಗೂ ಚತುರಾರ್ಚಾಯರ ಚಾರಿತ್ರಿಕ ಅಧ್ಯಯನ’ ಕೃತಿ.

ಬಸವಣ್ಣನವರು, ಅಕ್ಕಮಹಾದೇವಿ, ಅಲ್ಲಮಪ್ರಭು, ಚೆನ್ನ ಬಸವಣ್ಣ ಈ ನಾಲ್ಕು ಜನರಿಗೂ ಇರುವಷ್ಟೆ ಮಹತ್ವ ಮರುಳಸಿದ್ದರಿಗೂ ಇದೆ ಎನ್ನುವುದು ಈ ಸಂಶೋಧಕರ ವಾದ. ವಚನ ಸಂದರ್ಭದಲ್ಲಿ ಮರುಳಸಿದ್ದರಿಗೆ ಅವರದೆ ಆದ ಅನನ್ಯತೆ ಇದ್ದರೂ ಮುಂದೆ ಅದರ ಕುರಿತ ಅಧ್ಯಯನದಲ್ಲಿ ಮರುಳಸಿದ್ದರು ಏಕೆ ಮಹತ್ವವನ್ನು ಪಡೆಯಲಿಲ್ಲ ಎನ್ನುವ ಪ್ರಾಕ್ ಕಲ್ಪನೆಗೆ ( Hypothesis) ಸಂಶೋಧಕರು ಬರುತ್ತಾರೆ.
ಬೇರೆ ಪ್ರಕಾರಗಳಿಗಿಂತ‌ ಸಂಶೋಧನೆ ಭಿನ್ನ ಏಕೆಂದರೆ ಸಂಶೋಧಕ ಒಂದೇ ಸಲ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ‌ಮರುಳಸಿದ್ದರು ತಳಸಮುದಾಯದಲ್ಲಿ ಹುಟ್ಟಿದ ಕಾರಣವೇ ಅವರು ನಿರ್ಲಕ್ಷ್ಯಕ್ಕೆ ಕಾರಣವಾಗಿರಬಹುದೇ ಎಂಬ ವಾದ ಇದರಲ್ಲಿ ಇದೆ.

ಮರುಳಸಿದ್ದರ ಕುರಿತಾಗಿ ಅಧ್ಯಯನ ಮಾಡುವವರಿಗೆ ಆಕರಗಳ ( Source) ಗಳ ಕೊರತೆ ಇತ್ತು ಎಂದು ಭಾವಿಸುವುದಾದರೆ ಆ ವಾದವನ್ನು ಚಂದ್ರಶೇಖರ್ ಸಂಪೂರ್ಣವಾಗಿ ಒಡೆದು ಹಾಕುತ್ತಾರೆ. ‌ಏಕೆಂದರೆ ಮರುಳಸಿದ್ದರ ಕುರಿತಾಗಿ ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೂ 92 ಪುಟಗಳ ಸಾಹಿತ್ಯಿಕ ಉಲ್ಲೇಖವನ್ನು ನೀಡುತ್ತಾರೆ.

ವಚನ ಚಳುವಳಿ ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಅದರ ಶೋಧ ಸರಳವಲ್ಲ. ಈ ಸರಳವಲ್ಲ ಎನ್ನುವುದನ್ನು ಶೋಧದ ವಿಧಾನ ಎಂಬುದಾಗಿ ಮಾತ್ರ ಹೇಳುತ್ತಿಲ್ಲ. ಇದರ ಕೆಲವು ಸತ್ಯಗಳು ಸಂಪ್ರದಾಯ ವಾದಿಗಳನ್ನು ಕೆರಳಿಸಲೂಬಹುದು. ಆ ಹಿನ್ನಲೆಯಲ್ಲಿ ನೋಡಿದರೆ ಚಂದ್ರಶೇಖರ್ ಅವರು ವಿಶಿಷ್ಟವಾದ ವಿಷಯವನ್ನೆ ಸಂಶೋಧನೆಗೆ ತೆಗೆದುಕೊಂಡಿದ್ದಾರೆ ಎಂದೆ ಹೇಳಬೇಕು.

ಶೈಕ್ಷಣಿಕ ಉದ್ದೇಶವನ್ನು ಹೊಂದಿಲ್ಲದೆ ಈ ಸಂಶೋಧನೆ ಅದರ ಕಟ್ಟುಪಾಡುಗಳನ್ನು ಮೀರಿದೆ ಎಂದು ಹೇಳಬಹುದು. ಶೈಕ್ಷಣಿಕ ಶೋಧವು ಸಾಂಸ್ಥಿಕವಾದ ಅನೇಕ ನಿಯಮಗಳನ್ನು ಪಾಲಿಸಿಯೆ ಸಮಾಜಕ್ಕೆ ಬರಬೇಕು. ಚಂದ್ರಶೇಖರ ಅವರ ಈ ಕೃತಿ ಹಾಗಲ್ಲ.

ಅಕ್ಕಮಹಾದೇವಿಯ ದೀಕ್ಷಾಗುರು ಮರುಳಸಿದ್ದರು ಎನ್ನುವುದು ಕುತೂಹಲಕಾರಿ ಸಂಗತಿಯಾಗಿದೆ. ಹಾಗಿದ್ದರೆ ಮುಖ್ಯವಾಹಿನಿಯಲ್ಲಿ ಚರ್ಚೆಗೆ ಒಳಗಾಗಬೇಕಿದ್ದ ಮರುಳಸಿದ್ದರು ಯಾಕೆ ಹಿನ್ನಲೆಗೆ ಸರಿದರು ಎನ್ನುವುದು‌ ಕೃತಿಯಲ್ಲಿ ಮತ್ತೆ ಮತ್ತೆ ಚರ್ಚೆಯಾಗಿದೆ. ರೇವಣಸಿದ್ದ, ಮರುಳಸಿದ್ದ, ಪಂಡಿತಾರಾಧ್ಯ, ಏಕೋರಾಮರಾಧ್ಯ ಈ ನಾಲ್ಕು ಜನ ಚತುರಾರ್ಚಾಯರ ಕುರಿತಾಗಿ ಕುರಿತು ಮಾತನಾಡುವಾಗ ಚರಿತ್ರೆಯ ಅಧ್ಯಯನ ಮಾದರಿಯನ್ನು ಚಂದ್ರಶೇಖರ್ ಆರ್. ಯು ಅವರು ಬಳಸಿಕೊಂಡಿದ್ದಾರೆ.

ಚರಿತ್ರೆಯ ಅಧ್ಯಯನ ವಿಧಾನವು ಒಂದು ಕ್ರಮಬದ್ದವಾದ ಅಧ್ಯಯನ ಕ್ರಮ. ಹೀಗಾಗಿ ಚತುರರ್ಚಾಯರ ಉಲ್ಲೇಖಗಳು ದೊರಕುವ ಆಧಾರಗಳನ್ನು ನೀಡುತ್ತಾರೆ. ಅದು ಕೆರೆಯ ಪದ್ಮರಸನ ಕೃತಿಯಿಂದ ಮೊದಲಾಗುತ್ತದೆ.

ಆದರಿದು ಇದು ಮರುಳಸಿದ್ದರು ಮತ್ತು ಚತುರಾರ್ಚಾಯರ ಕುರಿತಾಗಿ ಮಾತ್ರ ಮಾತನಾಡುವ ಕೃತಿಯಲ್ಲ.
ಒಂದು ದೃಷ್ಟಿಯಿಂದ ಇಡೀ ವಚನ ಚಳುವಳಿಯ ಅಲಕ್ಷ್ಯಿತ ನೆಲೆಗಳನ್ನು ಮುಟ್ಟುವ ಪ್ರಯತ್ನ ಮಾಡುತ್ತದೆ. ಅದರ ಮೂಲಕ ವಚನ ಪರಂಪರೆಯ ಶೋಧಗಳು ಸಾಕಷ್ಟು ಆಗಬೇಕಿದೆ ಎನ್ನುವುದನ್ನು ಈ ಕೃತಿ ಸ್ಪಷ್ಟಪಡಿಸುತ್ತದೆ.

ಶಾಸನಗಳು ಪಠ್ಯ(Text) ಗಳಾದರೆ ಅವುಗಳಿಗೆ ಸಹಪಠ್ಯ (Co Text)ಗಳು ಕೂಡ ರಚನೆಯಾಗಿವೆ ಎನ್ನುವ ಸಂಗತಿಯು ಈ ಕೃತಿಯ ಹಿನ್ನಲೆಯಲ್ಲಿ ಮುಖ್ಯವಾದುದು.

ಅಕ್ಕಮಹಾದೇವಿಯ ವಚನಗಳು ಶಾಸನಗಳಲ್ಲಿ ಕಂಡುಬರುತ್ತವೆ ಎನ್ನುವುದು ವಚನಗಳನ್ನು ಹೇಗೆ ಕಾಪಿಡುವ ಪ್ರಯತ್ನ ಮಾಡಲಾಯಿತು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಈ ಕೃತಿಯ ಭಾಷೆ ಸರಳವಾಗಿದೆ. ಸಂಶೋಧನೆಯ ಭಾಷೆ ಸರಳವಾಗಿರಬೇಕಾದುದು ಅದರ ಮೊದಲ‌ ಅಂಶಗಳಲ್ಲಿ ಒಂದು. ಅದನ್ನು ಚಂದ್ರಶೇಖರ್ ಸ್ಪಷ್ಟವಾಗಿ ನಿರ್ವಹಣೆ ಮಾಡಿದ್ದಾರೆ.

ಇತ್ತೀಚೆಗೆ ಸಂಶೋಧನೆ ಎನ್ನುವ ಕ್ಷೇತ್ರವು ಹಲವು ರೀತಿಯಲ್ಲಿ ಕಲುಷಿತಗೊಳ್ಳುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.‌ ಇಂತಹ ಹೊತ್ತಿನಲ್ಲಿ ಚಂದ್ರಶೇಖರ್ ಅವರು ‘ ಹಂಗಿಲ್ಲದ’ ಒಂದು ಸಂಶೋಧನೆಯನ್ನು ಮಾಡಿದ್ದಾರೆ.

ಹಾಗೆಂದ ಮಾತ್ರಕ್ಕೆ ಈ ಕೃತಿಗೆ ಮಿತಿಗಳು ಇಲ್ಲವೆಂದಲ್ಲ. ಎಲ್ಲ‌ ಸಂಶೋಧನಾ ಕೃತಿಗಳಿಗೂ ಇರುವಂತೆ ಈ ಕೃತಿಗೂ ಮಿತಿಗಳಿವೆ. ಸಂಶೋಧನೆಯನ್ನು ಬರೆಯುತ್ತ ಹೋದ ಹಾಗೆ ಚಂದ್ರಶೇಖರ್ ವಸ್ತುನಿಷ್ಠತೆಯನ್ನು ಬಿಟ್ಟು ಭಾವನಾತ್ಮಕತೆಯತ್ತ ಹೊರಳುತ್ತಾರ ಎನಿಸುತ್ತದೆ. ಹಾಗೆ ಅನಿಸಲು ಕಾರಣ ವಿಷಯದ ಹರವು ಮತ್ತು ವ್ಯಾಪ್ತಿ.

ಈ ಶೋಧ ಸಂಪೂರ್ಣವಾಗುವ ಹೊತ್ತಿಗೆ ಒಬ್ಬ ಶೋಧಕ ಭಾವನಾತ್ಮಕತೆಯನ್ನು ಅನುಭವಿಸದಿರಲು ಸಾಧ್ಯವೆ ಎನ್ನುವ ಪ್ರಶ್ನೆ ಕಾಣುತ್ತದೆ. ಇಲ್ಲಿ ಶೋಧಗೊಂಡಿರುವ ವಿಷಯಗಳು ಅನೇಕ ಪ್ರಶ್ನೆಗಳನ್ನು ನಮ್ಮ ಮುಂದೆ ಇಡುತ್ತದೆ‌. ಅವುಗಳನ್ನು ವಸ್ತುನಿಷ್ಠವಾಗಿ ಒಪ್ಪಿಕೊಳ್ಳುವ ಮನಸ್ಥಿತಿ ಈ ಸಮಾಜಕ್ಕೆ ಬಂದಲ್ಲಿ ಮಾತ್ರ ಚಂದ್ರಶೇಖರ್ ಅವರ ಶ್ರಮ‌ ಸಾರ್ಥಕವಾಗುತ್ತದೆ.

Share This Article
Leave a comment

Leave a Reply

Your email address will not be published. Required fields are marked *

ಉಪನ್ಯಾಸಕರು, ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ