ಹೊಸಪೇಟೆಯಲ್ಲಿ ಗಮನ ಸೆಳೆದ ನಿಜಾಚರಣೆಯ ನಾಮಕರಣ ಸಮಾರಂಭ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಹೊಸಪೇಟೆ:

ಲಿಂಗಾಯತರಾದವರು ಗುರು ಲಿಂಗ ಜಂಗಮರನ್ನು ಸದಾ ಸ್ಮರಿಸಬೇಕು. ಶರಣರ ವಚನಗಳಂತೆ ನಾವು ಬದುಕಬೇಕೆಂದು ಹುಕ್ಕೇರಿ ತಾಲ್ಲೂಕ, ಬಸವಬೆಳವಿಯ ಪೂಜ್ಯ ಶರಣಬಸವ ದೇವರು ಹೇಳಿದರು.

ಅವರು ಇತ್ತೀಚೆಗೆ ಹೊಸಪೇಟೆಯ ಸುರಭಿ ಕಲ್ಯಾಣ ಮಂಟಪದಲ್ಲಿ ಲಿಂಗಾಯತ ತತ್ವದಂತೆ ಜರುಗಿದ ಚಿತ್ತವಾಡಗಿಯ ಲಿಂಗೈಕ್ಯ ಶರಣ ಅರಳಿ ಕೊಟ್ರೇಶಪ್ಪ ಅವರ 70ನೇ ವರ್ಧಂತಿ ಸಂಸ್ಮರಣೆ, ಅವರ ಮೊಮ್ಮಗನ ಲಿಂಗಧಾರಣೆ ಹಾಗೂ ನಾಮಕರಣ ಸಮಾರಂಭದಲ್ಲಿ ಅನುಭಾವ ನೀಡುತ್ತಿದ್ದರು.

ನಾವೆಲ್ಲ ಇದ್ದಾಗ ಉಳಿಯುವಂತ ಕಾರ್ಯ ಮಾಡಿ ಹೋಗಬೇಕು. ಲಿಂಗೈಕ್ಯ ಅರಳಿ ಕೊಟ್ರಪ್ಪನವರು ಅಂತಹ ಕಾರ್ಯ ಮಾಡಿ ಹೋಗಿದ್ದಾರೆ. ಅವರ ಕಾರ್ಯವನ್ನು ಅವರ ಧರ್ಮಪತ್ನಿ ಪಾರ್ವತಿ, ಮಗ ಪ್ರಭುದೇವ, ಸೊಸೆ ಪೂಜಾ ಹಾಗೂ ಬಂಧುಗಳು ಮುಂದುವರೆಸಿಕೊಂಡು ಹೊರಟಿದ್ದಾರೆ.

ನಮ್ಮ ಮಕ್ಕಳಿಗೆ ನಮ್ಮ ಶರಣ ಶರಣೆಯರು ನೆನಪಾಗುವಂತಹ ಹೆಸರುಗಳನ್ನಿಡಬೇಕು. ಮಕ್ಕಳನ್ನು ಹೆಸರಿನಿಂದ ಕರೆದಾಗ ನಮ್ಮ ಬಾಯಿ ಹಸನಾಗಬೇಕು ಅಂತಹ ಹೆಸರುಗಳನ್ನು ಇಡ್ರಿ ಎಂದು ಸಮಾರಂಭದಲ್ಲಿ ನೆರೆದವರಿಗೆ ಶರಣಬಸವದೇವರು ಹೇಳಿದರು.

ಚಿತ್ತರಗಿ-ಇಲಕಲ್ಲ ವಿಜಯ ಮಹಾಂತೇಶ ಮಠದ ಪೂಜ್ಯ ಗುರುಮಹಾಂತ ಸ್ವಾಮೀಜಿ ಸಮಾರಂಭದ ಸಾನಿಧ್ಯವಹಿಸಿದ್ದ ರು. ರಾಷ್ಟ್ರೀಯ ಬಸವದಳದ ಕಾರ್ಯಕರ್ತರು ಪ್ರಾರ್ಥನೆ, ಪೂಜೆ ನೆರವೇರಿಸಿದರು.

ಆರಂಭದಲ್ಲಿ ಧರ್ಮಗುರು ಬಸವಣ್ಣನವರ ಭಾವಚಿತ್ರಕ್ಕೆ ನಂತರ ಲಿಂಗೈಕ್ಯ ಶರಣ ಅರಳಿ ಕೊಟ್ರಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು.

ಕಾರ್ಯಕ್ರಮಕ್ಕೆ ಬಂದಂತ ಅನೇಕರು ಅರಳಿ ಕುಟುಂಬದವರನ್ನು ಸತ್ಕರಿಸಿದರು. ಅರಳಿ ಕುಟುಂಬದ ಬಂಧುಬಳಗ, ಚಿತ್ತವಾಡಗಿ, ಹೊಸಪೇಟೆಯ ಆಪ್ತಮಿತ್ರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *