ಹೊಸಪೇಟೆಗೆ ಗಾಂಧೀಜಿಯವರನ್ನು ಕರೆತಂದ ಶರಣ ಬೆಲ್ಲದ ಚೆನ್ನಪ್ಪನವರು

ನಾಗರಾಜ ಗಂಟಿ
ನಾಗರಾಜ ಗಂಟಿ

ಹೊಸಪೇಟೆ

ಬೆಲ್ಲದ ಚೆನ್ನಪ್ಪನವರು ಆಗರ್ಭ ಶ್ರೀಮಂತ ಮನೆತನದಲ್ಲಿ ಜನಿಸಿದ್ದರು ಸಹ ಸರಳತೆಯ ಜೀವನ ನಡೆಸಿದರು. ಕರ್ನಾಟಕದ ಗಾಂಧಿ ಎಂದು ಹೆಸರಾಗಿದ್ದ ಹರ್ಡೇಕರ್ ಮಂಜಪ್ಪನವರ ಪ್ರಭಾವದಿಂದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ, ಹೊಸಪೇಟೆಯ ಚಿತ್ತವಾಡಗಿಯನ್ನು ಸ್ವಾತಂತ್ರ್ಯ ಹೋರಾಟದ ಪ್ರಮುಖ ಕೇಂದ್ರವನ್ನಾಗಿಸಿ, ಹಲವಾರು ಹೋರಾಟಗಾರರಿಗೆ ತಮ್ಮ ಮನೆಯಲ್ಲೇ ವಾಸ್ತವ್ಯ ನೀಡಿದರು.

ಹಾಗೆಯೇ ನಾಗನಗೌಡ ಮತ್ತು ಶಂಕರಗೌಡ ಅವರ ಜೊತೆಗೂಡಿ ಹಲವಾರು ಸ್ವಾತಂತ್ರ್ಯದ ಚಳುವಳಿಯಲ್ಲಿ ಭಾಗವಹಿಸಿದರು. ಇತಿಹಾಸದಲ್ಲಿ ಮೊಟ್ಟಮೊದಲು ಹೊಸಪೇಟೆಗೆ ಮಹಾತ್ಮ ಗಾಂಧೀಜಿಯವರನ್ನು ಕರೆಯಿಸಿದರು. ಹೊಸಪೇಟೆ ರೈಲು ನಿಲ್ದಾಣದ ಬಳಿ ನಡೆದ ಸಮಾವೇಶದಲ್ಲಿ ಮಹಾತ್ಮ ಗಾಂಧೀಜಿಯವರು ಭಾಗವಹಿಸಿ, ಹೋರಾಟದ ಸ್ಪೂರ್ತಿಯನ್ನು ಎಲ್ಲರಿಗೂ ತುಂಬಿದ್ದರು ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶರಣೆ ಎಚ್. ಸೌಭಾಗ್ಯಲಕ್ಷ್ಮೀ ಹೇಳಿದರು.

ಅವರು ವಿಜಯನಗರ ಜಿಲ್ಲಾ ಹಾಗೂ ತಾಲೂಕಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಹೊಸಪೇಟೆ ಹಾಗೂ ಜಗದ್ಗುರು ಕೊಟ್ಟೂರು ಸ್ವಾಮಿ ಐಟಿಐ ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ 171ನೇ ಮಹಾಮನೆ ಪ್ರಯುಕ್ತ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಬೆಲ್ಲದ ಚೆನ್ನಪ್ಪನವರು ಮತ್ತು ಸ್ವಾತಂತ್ರ್ಯ ಹೋರಾಟ” ಎಂಬ ವಿಷಯದ ಕುರಿತು ಮಾತನಾಡಿದರು.

ಬೆಲ್ಲದ ಚನ್ನಪ್ಪನವರು ಸ್ವಾತಂತ್ರ್ಯ ಹೋರಾಟಕ್ಕೆ ಅನನ್ಯ ಸೇವೆ ಸಲ್ಲಿಸಿದ ನೈಜ ಹೋರಾಟಗಾರರು. ಯುವ ಸಮೂಹ ಅವರ ಇತಿಹಾಸ ತಿಳಿದುಕೊಂಡು ಸ್ಪೂರ್ತಿ ಪಡೆದುಕೊಳ್ಳಬೇಕು, ಶ್ರೇಷ್ಠ ಹೋರಾಟಗಾರರಾಗಿದ್ದ ಬೆಲ್ಲದ ಚೆನ್ನಬಸಪ್ಪನವರು, ಯಾವುದೇ ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ, ಸದಾವಕಾಲ ಸರಳ ಖಾದಿ ಬಟ್ಟೆ ಧರಿಸಿ ಸರ್ವರಿಗೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಹಾಗೆಯೇ ಬಸವಾದಿ ಶರಣರ ತತ್ವದಂತೆ ಮಹಾದಾಸೋಹಿ ಆಗಿದ್ದರು. ಸಕಲರಿಗೂ ಲೇಸನ್ನೇ ಬಯಸಿದವರು. ಶರಣ ತತ್ವದಂತೆ ನಡೆದ ನಿಜಶರಣ ಅವರಾಗಿದ್ದರು. ಇಂತಹ ನೈಜ ಹೋರಾಟಗಾರರ ಹಾಗೂ ಸ್ಥಳೀಯವಾದ ಇತಿಹಾಸವನ್ನು ಸರ್ವರು ತಿಳಿಯಬೇಕಾದದ್ದು ಅಗತ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದ ಶರಣೆ ಡಾ: ಅಕ್ಕಮಹಾದೇವಿ ಆರ್.ಎಸ್. ಅಧ್ಯಕ್ಷರು, ಕದಳಿ ಮಹಿಳಾ ವೇದಿಕೆ ಹೊಸಪೇಟೆ ಇವರು, ಶರಣ ಸಾಹಿತ್ಯ ಪರಿಷತ್ತು ಶರಣರ ವಿಚಾರಗಳನ್ನು ಮನೆ-ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದು, ಸರ್ವರು ಶರಣ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತದೆ. ವಚನಗಳ ಸಂಗ್ರಹ, ಪ್ರಚಾರ, ಪ್ರಸಾರ ಮಾಡುವ ಕಾರ್ಯ ಪರಿಷತ್ತು ಮಾಡುತ್ತಿದೆ ಎಂದರು. ಪರಿಷತ್ ಸಂಸ್ಥಾಪಕರು ಮೈಸೂರಿನ ಸುತ್ತೂರು ಶ್ರೀಗಳಾದ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು.

ಬಸವಾದಿ ಶಿವ ಶರಣರ ವಚನಗಳು ಮನುಕುಲಕ್ಕೆ ಮಾದರಿಯಾಗಿದ್ದು, ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ವಚನಗಳನ್ನು ಓದುವ ಮೂಲಕ ಶರಣ ತತ್ವವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಅಕ್ಕಮಹಾದೇವಿ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ಅರವಿಂದ ಪ್ರಿನ್ಸಿಪಾಲರು, ಐಟಿಐ ಕಾಲೇಜು ಇವರು ವಹಿಸಿಕೊಂಡಿದ್ದರು.

ವಚನ ಗಾಯನವನ್ನು ಶ್ರೀಮತಿ ಪುಷ್ಪ ಮಲ್ಲಿಕಾರ್ಜುನ ಹೊಸಪೇಟೆ ಹಾಗೂ ಸಭಾ ನಿರ್ವಹಣೆಯನ್ನು ನಾಗರಾಜ ಗಂಟಿ ಹಂಪಾಪಟ್ಟಣ ಅವರು ನೆರವೇರಿಸಿದರು. ಕಾಲೇಜು ಉಪನ್ಯಾಸಕರಾದ ಒಪ್ಪಂತೇಶ್ವರ, ರಾಣಿ ಚೆನ್ನಮ್ಮ ಶಾಲೆಯ ಶಿಕ್ಷಕರಾದ ಗೋವಿಂದರಾಜ, ಐಟಿಐ ಕಾಲೇಜು ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share This Article
Leave a comment

Leave a Reply

Your email address will not be published. Required fields are marked *