ಹುಬ್ಬಳ್ಳಿ
ನಗರದ ಅಕ್ಷಯ ಕಾಲೋನಿಯ ಶರಣೆ ಗಂಗಾಂಬಿಕಾ ಬಳಗವು ಸೋಮವಾರದಂದು 187ನೆಯ ಮಹಾಮನೆಯನ್ನು ಅರ್ಥಪೂರ್ಣವಾಗಿ ಆಚರಿಸಿತು.
ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಜಯಂತಿ, ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ನಾಡಗೀತೆಗಳ
ಹಾಡಿನೊಂದಿಗೆ ವಚನ ದೀಪೋತ್ಸವವನ್ನು ಆಚರಿಸಲಾಯಿತು.
ಬಸವ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಬಳಗದ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.
ಅವಿರಳ ಜ್ಞಾನಿ ಚೆನ್ನಬಸವಣ್ಣನವರ ಜೀವನ ಸಿದ್ಧಾಂತ ಕುರಿತು ಮಾರ್ಮಿಕವಾಗಿ ಮಾತನಾಡಿದ ಬಳಗದ ಸಂಚಾಲಕಿ ಡಾ. ಸ್ನೇಹಾ ಭೂಸನೂರ ಅವರು, ಶರಣರ ಸ್ಮರಣೆ ಅದೊಂದು ದಿವ್ಯ ಅನುಭವ ಮತ್ತು ಸೌಭಾಗ್ಯ ಎಂದರು.
ಕನ್ನಡ ಭಾಷೆಗೆ ಶರಣರ ಕೊಡುಗೆಯ ಬಗ್ಗೆ ವಿವರಿಸಿ, ಇಂದು ಕನ್ನಡ ರಾಜ್ಯೋತ್ಸವದ ಆಚರಣೆಯು ಕನ್ನಡ ಉಳಿಸುವ, ಬೆಳೆಸುವ ಸಂಕಲ್ಪವನ್ನು ಆಶಿಸುತ್ತದೆ ಎಂದರು.
ಪತ್ರಕರ್ತೆ ಶೋಭಾ ದೇಸಾಯಿ ಅವರು ಮಾತನಾಡಿ, ನಮ್ಮ ಉತ್ತರ ಕರ್ನಾಟಕದ ಸುಂದರ ಭಾಷೆಯನ್ನು ಬೆಂಗಳೂರು, ಮೈಸೂರಿಗೆ ಹೋದಾಗ ಬಿಟ್ಟುಕೊಡದೆ ನಮ್ಮತನವನ್ನು ಉಳಿಸಿಕೊಳ್ಳಲು ಸೂಚಿಸಿದರು.
ಶ್ರೀಮತಿ ಸಂಜೋತಾ ಪಾಟೀಲ ಮಾತನಾಡಿ, ಪ್ರಸಕ್ತ ವರ್ಷ ಹಿರಿಯ ಬಂಡಾಯ ಸಾಹಿತಿ, ಶರಣ ಅಲ್ಲಮಪ್ರಭು ಬೆಟದೂರ ಅವರಿಗೆ ರಾಜ್ಯೋತ್ಸವದ ಪ್ರಶಸ್ತಿ ದೊರೆತುದು ತಮ್ಮ ಮನೆತನಕ್ಕೆ ಎರಡು ಬಾರಿ ರಾಜ್ಯೋತ್ಸವ ಪ್ರಶಸ್ತಿ ಬಂದಂತಾಯಿತು. ಅದು ಮಹಾಭಾಗ್ಯ ಎಂದು ತಮ್ಮ ಮಾವನವರಾದ ಶಂಕರಗೌಡ ಬೆಟದೂರ ಅವರನ್ನು ಸ್ಮರಿಸಿಕೊಂಡರು.
ದಿಪೋತ್ಸವ ನಡೆಯಿತು. ನಂತರ ಶ್ರೀಮತಿ ಜಯಶ್ರೀ ಹಿರೇಮಠ ಅವರು ಶರಣು ಸಮರ್ಪಣೆ ಗೈದರು. ಮಂಗಲದ ನಂತರ ಪ್ರಸಾದ ವಿತರಿಸಲಾಯಿತು.