‘ಗಾಳಿ ಬೆಳಕು ಒಳಗ ಬರಬೇಕು, ಒಳ್ಳೆ ವಾತಾವರಣ ಇರಬೇಕು ಇದೇ ನಿಜವಾದ ವಾಸ್ತು.’
ಹುಬ್ಬಳ್ಳಿ
ಹುಬ್ಬಳ್ಳಿ ನಗರದ ಬಸವರಾಜ ಹಾಗೂ ಭಾರತಿ ಅವರಾದಿ ದಂಪತಿಗಳ ನೂತನ ಮನೆ “ನಿಷ್ಕಲ”ದ ಗುರು ಪ್ರವೇಶ ಕಾರ್ಯಕ್ರಮ ಈಚೆಗೆ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಬಸವರಾಜ ಅವರ ಪುತ್ರ ಗುರುರಾಜ ಹಾಗೂ ಅವರ ಪತ್ನಿ ಸಂಗೀತಾ ಅವರು ಧರ್ಮಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪವೃಷ್ಟಿ ಮಾಡಿ ಬಸವಧ್ವಜಾರೋಹಣ ನೆರವೇರಿಸಿದರು. ನಂತರ ಸಾಮೂಹಿಕವಾಗಿ ಧ್ವಜಗೀತೆ ಹಾಡಲಾಯಿತು.

ಮನೆಯ ಸದಸ್ಯರು ಶ್ರೀಗುರು ಬಸವಲಿಂಗಾಯ ನಮಃ ಮಂತ್ರ ಪಠಿಸುತ್ತಾ ತಲೆಯ ಮೇಲೆ ವಚನ ಪುಸ್ತಕ ಇಟ್ಟುಕೊಂಡು ನೂತನ ಮನೆಯ ಗುರುಪ್ರವೇಶ ಮಾಡಿದರು.
ಬಸವ ಕೇಂದ್ರದ ಕ್ರಿಯಾ ಮೂರ್ತಿಗಳಾದ ಶರಣ ಬಸವಂತಪ್ಪ ತೋಟದ, ಸೋಮಶೇಖರ ಕುಂದಗೋಳ ಹಾಗೂ ಅನಿಲ ಅಂಗಡಿ ಅವರು ಎಲ್ಲ ಕಾರ್ಯಗಳನ್ನು ನೆರವೇರಿಸಿಕೊಟ್ಟರು.
ಬಸವಂತಪ್ಪ ತೋಟದವರು ಈ ಸಂದರ್ಭದಲ್ಲಿ ಮಾತಾಡುತ್ತಾ, ಬೇರೆ ಧರ್ಮದವರು ತಮ್ಮ ಧರ್ಮದ ಆಚರಣೆಗಳನ್ನು ಸರಿಯಾಗಿ ಪಾಲಿಸುತ್ತಾರೆ. ಲಿಂಗಾಯತರು ಕೂಡ ನಮ್ಮ ಧರ್ಮದ ಆಚರಣೆಗಳನ್ನು ತಿಳಿದುಕೊಳ್ಳಬೇಕು ಮತ್ತು ಅವುಗಳನ್ನು ಆಚರಣೆಗೆ ತರಬೇಕು. ಲಿಂಗಾಯತರಾಗಿ ಗೃಹಪ್ರವೇಶ ಕಾರ್ಯದಲ್ಲಿ ಕೆಲವರು ಹೋಮ ಹವನ ಮಾಡುತ್ತಾರೆ, ಆಕಳು ಹೋಗಿಸುತ್ತಾರೆ. ಆದರೆ ಲಿಂಗಾಯತ ಧರ್ಮದ ಆಚರಣೆಯಂತೆ ನಾವು ಇವನ್ನು ಮಾಡಬಾರದು. ದುಂದುವೆಚ್ಚವಿಲ್ಲದ ಸರಳವಾದ ಗುರುಪ್ರವೇಶದ ನಿಜಾಚರಣೆ ಕಾರ್ಯಕ್ರಮ ನಾವೆಲ್ಲ ಮಾಡಬೇಕು. ಅದರಂತೆ ನಾವಿಲ್ಲಿ ಮಾಡಿದ್ದೇವೆ ಎಂದರು.
ಶರಣರಾದ ಶಿವರುದ್ರಗೌಡ ವಾಸ್ತು ಅಂದರೇನು? ಮನೆ ಅಂದ್ರೆ ಹೇಗಿರಬೇಕು? ಎಂಬುದನ್ನು ವಿವರಿಸುತ್ತಾ, ಮನೆ ನೋಡಿದರ ಮನ ಹೋಗುವಂತಾಗಬೇಕು, ಜನ ನೋಡಿದರೆ ಕೀರ್ತಿವಂತರಾಗಬೇಕು, ಶರಣರ ಮನೆಗೆ ಹೋಗಿ ಬಂದರ ಬಸವಣ್ಣನಂತಾಗಬೇಕು ಎಂದು ಸಿದ್ಧರಾಮೇಶ್ವರರು ಹೇಳುತ್ತಾರೆ. ಅದಕ್ಕೆ ಈ ಮನೆ ಹೆಸರು ನಿಷ್ಕಲ ಅಂತ ಇಟ್ಟಿದ್ದಾರೆ. ಅಂದರೆ ಈ ಮನೆಯಲ್ಲಿ ಮುಂದೆ ವಾಸ ಮಾಡುವವರ ಹೃದಯದಲ್ಲಿ ಏನು ಕಲ್ಮಶ ಇರುವುದಿಲ್ಲ ಅಂತ ಅರ್ಥ.
ಯಾರೇ ಬಂದ್ರು ನಾವು ಪ್ರೀತಿಯಿಂದ ಮಾತಾಡಬೇಕು, ನಮ್ಮ ಹಿರಿಯರಿಗೆ ಗೌರವವನ್ನು ಕೊಡಬೇಕು. ಹಿರಿಯರನ್ನು ಪ್ರೀತಿಯಿಂದ ನೋಡಿಕೊಳ್ಳುವುದೇ ಒಂದು ದೊಡ್ಡ ವಾಸ್ತು. ಮನೆಯಲ್ಲಿ ವಾಸ್ತು ಸರಿ ಇಲ್ಲ, ಬಾಗಿಲು ಈ ದಿಕ್ಕಿಗೆ ಇರಬೇಕು, ಬಾಗಿಲು ಆ ದಿಕ್ಕಿಗೆ ಇರಬೇಕು ಎಂದು ಹೇಳುವಂತಾಗಬಾರದು. ಎಲ್ಲಾ ದಿಕ್ಕುನೂ ಚೊಲೋನ. ಗಾಳಿ ಬೆಳಕು ಒಳಗ ಬರಬೇಕು, ಒಳ್ಳೆ ವಾತಾವರಣ ಇರಬೇಕು ಇದೇ ನಿಜವಾದ ವಾಸ್ತು ಎಂದವರು ಹೇಳಿದರು.
ಕುಟುಂಬದ ಸದಸ್ಯರಿಗೆ ಲಿಂಗಾಯತ ಧರ್ಮದ ನಿಜಾಚರಣೆಯನ್ನು ತಿಳಿಸಿ ಹೇಳಿದುದರ ಪರಿಣಾಮವಾಗಿ, ಸ್ವಇಚ್ಛೆಯಿಂದ ಮಕ್ಕಳು ಸೇರಿದಂತೆ 15 ಜನ ಇಷ್ಟಲಿಂಗ ದೀಕ್ಷೆ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಜಾ.ಲಿಂ. ಮಹಾಸಭಾ ಯುವಘಟಕದ ಅದ್ಯಕ್ಷರಾದ ಸಿ. ಜಿ. ಪಾಟೀಲ ಹಾಗೂ ಶಿವರುದ್ರಗೌಡ ಪಾಟೀಲ, ಭೀಮನಗೌಡರ, ಮಲ್ಲೇಶ ಹಳಕಟ್ಟಿ, ಬಸವರಾಜ ದೇಸೂರ ಹಾಗೂ ಪ್ರಕಾಶ ಹೊಸಮನಿ, ಮಂಜುಳಾ ಹೊಸಮನಿ, ಅನ್ನಪೂರ್ಣ ಸವಟಗಿ, ರೂಪ ಅವಾರಿ, ಇತರ ಬಂಧು-ಮಿತ್ರರು ಉಪಸ್ಥಿತರಿದ್ದರು.