ಹುಬ್ಬಳ್ಳಿ
ನಗರದ ಅಕ್ಷಯ ಕಾಲೋನಿಯ ಶರಣೆ ಗಂಗಾಂಬಿಕಾ ಬಳಗವು 188ನೆಯ ಮಹಾಮನೆ ಕಾರ್ಯಕ್ರಮವನ್ನು ವಿನೂತನವಾಗಿ ಆಚರಿಸಿತು.
ಬದುಕಿನ ಅರ್ಥ ಕಂಡುಕೊಳ್ಳಲು ಬಸವಾದಿ ಶರಣರ ವಚನ ದೀಪ್ತಿಯ ಬೆಳಕಿನಲ್ಲಿ ಸಾಗುವ ಉದ್ದೇಶದಿಂದ ಸ್ಥಾಪನೆಗೊಂಡಿರುವ ಈ ಬಳಗವು ಸೋಮವಾರದಂದು ದಾಕ್ಷಾಯಣಿ ಶಂಕರ ಕೋಳಿವಾಡ ಅವರ ಮನೆಯಲ್ಲಿ ನೆರವೇರಿತು.
ಬಸವಾದಿ ಶರಣರ 108 ವಚನಗಳ ಪಾರಾಯಣವನ್ನು ಮಾಡಲಾಯಿತು. ಬಸವ ಕೇಂದ್ರದ ಮಹಿಳಾ ಘಟಕ, ಕಲ್ಯಾಣಿ ಮಹಿಳಾ ಮಂಡಳ ಮತ್ತು ಗಂಗಾಂಬಿಕಾ ಬಳಗದ ನೂರಾರು ಮಹಿಳೆಯರು ಕೂಡಿಕೊಂಡು ಏಕಕಾಲಕ್ಕೆ ವಚನ ಪಾರಾಯಣ ಮಾಡಿದ್ದು ವಿಶೇಷವಾಗಿತ್ತು.
ಇದೇ ಸಂದರ್ಭದಲ್ಲಿ ಗಂಗಂಬಿಕಾ ಬಳಗದ ಸಂಚಾಲಕರಾದ ಡಾ. ಸ್ನೇಹಾ ಭೂಸನೂರ ಅವರು ವಚನ ಪಾರಾಯಣ ನಡೆಸಿಕೊಟ್ಟು, ಶರಣರು ಬರೆದ ಜೀವಕಾರುಣ್ಯದ ವಚನಗಳು ನಮ್ಮ ಮನದ ಮಲಿನತೆಯನ್ನು ಕಳೆಯುವವು. ಕಾರಣ ಮಹಿಳೆಯರು ದಿನಾಲೂ ಮನೆಯಲ್ಲಿ ಮಕ್ಕಳು, ಮನೆಯವರೊಂದಿಗೆ ವಚನ ಪಾರಾಯಣ ಮಾಡಬೇಕು, ಸಂಸ್ಕಾರವಂತರಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಸವ ಕೇಂದ್ರದ ಮಹಿಳಾ ಘಟಕದ ಉಪಾಧ್ಯಕ್ಷರಾದ ಶರಣೆ ನೀಲಗಂಗಾ ಹಳ್ಯಾಳ ಅವರು ವಚನ ಪಾರಾಯಣದ ಮಹತ್ವವನ್ನು ತಿಳಿಸಿಕೊಟ್ಟು, ಮಹಿಳೆಯರು ನೂರೆಂಟು ದೇವರ ಮೊರೆ ಹೋಗದೆ, ಏಕದೇವೋಪಾಸನೆಯ ಇಷ್ಟಲಿಂಗದಲ್ಲಿ ದೃಷ್ಟಿ ನೆಟ್ಟು, ನಿಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಬೇಕು ಎಂದರು.
ಲಕ್ಷ್ಮಿ ಲಿಂಗಶೆಟ್ಟರರಿಂದ ಪ್ರಾರ್ಥನೆ, ದಾಕ್ಷಾಯಣಿ ಅವರಿಂದ ಸ್ವಾಗತ, ಶಶಿಕಲಾ ಕೊಡೇಕಲ್ಲರಿಂದ ಶರಣು ಸಮರ್ಪಣೆ ನಡೆಯಿತು. ನಂತರ ಪ್ರಸಾದ ವಿತರಿಸಲಾಯಿತು.
