ಹುನಗುಂದ
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಿದೆ ಎಂದು ಇಳಕಲ್ಲದ ಪೂಜ್ಯ ಗುರುಮಹಾಂತ ಸ್ವಾಮೀಜಿ ಹೇಳಿದರು.
ಶನಿವಾರ ಪಟ್ಟಣದ ವಿಜಯ ಮಹಾಂತೇಶ್ವರ ಮಠದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಜಾತಿಗಣತಿಯಲ್ಲಿ ಲಿಂಗಾಯತ ಧರ್ಮದ ಒಳಪಂಗಡದವರು ಧರ್ಮದ ಕಾಲಂ ನಲ್ಲಿ ಲಿಂಗಾಯತ ಎಂದು, ಜಾತಿ ಕಾಲಂ ನಲ್ಲಿ ಉಪಪಂಗಡದ ಹೆಸರು ನೋಂದಾಯಿಸುವಂತೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ.
ಕರ್ನಾಟಕ ಸರ್ಕಾರ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಒಂದು ವರ್ಷವಾದ ಪ್ರಯುಕ್ತ, ನಾಡಿನ ಜನತೆಗೆ ಬಸವ ತತ್ವದ ಆಚರಣೆ ಕುರಿತು ಜಾಗೃತಿ ಮೂಡಿಸಲು ಸೆ.10 ರಂದು ಬಾಗಲಕೋಟೆಯಲ್ಲಿ ಬಸವ ಸಂಸ್ಕೃತಿ ಉತ್ಸವ ನಡೆಯಲಿದೆ ಎಂದರು.

ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಎಸ್. ಆರ್. ಕಡಿವಾಲ ಮಾತನಾಡಿ, ಬಸವಣ್ಣನವರ ವಿದ್ಯಾಭೂಮಿ ಹಾಗೂ ಐಕ್ಯಭೂಮಿ ನಮ್ಮ ಜಿಲ್ಲೆ ಆಗಿರುವದರಿಂದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಬೇಕು ಎಂದರು.
ವಕೀಲ ಮಹಾಂತೇಶ ಅವಾರಿ ಮಾತನಾಡಿ, ಬಸವಣ್ಣನವರ ತತ್ವ ಆದರ್ಶಗಳು, ಲಿಂಗಾಯತ ಧರ್ಮ ಸಿದ್ಧಾಂತಗಳನ್ನು ಎಲ್ಲರ ಮನಸ್ಸುಗಳಿಗೆ ಮುಟ್ಟಿಸುವ ಕಾರ್ಯ ಇದಾಗಿದೆ ಎಂದರು.
ಹಿರಿಯರಾದ ಎಂ ಎನ್. ತೇನಹಳ್ಳಿ, ಸಿ. ಜಿ. ಹವಾಲ್ದಾರ ಹಾಗೂ ಎಸ್.ಕೆ. ಕೊನೆಸಾಗರ ಅವರು, ನಾವು ಮೊದಲು ಲಿಂಗಾಯತರು ಎಂಬ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಸಂಚಾಲಕ ಬಸವರಾಜ ಕಡಪಟ್ಟಿ, ಶಿವಣ್ಣ ನಾಗೂರ, ಡಾ.ಮಹಾಂತೇಶ ಕಡಪಟ್ಟಿ, ಅಶೋಕ ಭಾವಿಕಟ್ಟಿ, ಸಿದ್ದಲಿಂಗಪ್ಪ ಬೀಳಗಿ, ಎಂ. ಎಸ್. ಮಠ, ಎಸ್. ಜಿ.ಎಮ್ಮಿ, ಸಿ. ಬಿ. ಸಜ್ಜನ, ಶಿವಪ್ಪ ಹಡಪದ, ಸಂಗಮೇಶ ಹೊದ್ಲೂರ, ಅಕ್ಕನ ಬಳಗದ ಸದಸ್ಯರು ಇದ್ದರು.