ಹೊಸಪೇಟೆ:
ಇಷ್ಟಲಿಂಗ ಅಧ್ಯಯನ ಕೇಂದ್ರದಲ್ಲಿ ಭಾನುವಾರ ಚನ್ನ ಹುಣ್ಣಿಮೆಯ ಬೆಳದಿಂಗಳಲ್ಲಿ ಇಷ್ಟಲಿಂಗ ಪೂಜೆ, ಧ್ಯಾನ ಮತ್ತು ವೀರಗಂಟೆ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ನಡೆಯಿತು.
ಪ್ರಾಧ್ಯಾಪಕ ಮತ್ತು ಇಷ್ಟಲಿಂಗ ಅಧ್ಯಯನ ಕೇಂದ್ರದ ಸದಸ್ಯ ಡಾ. ಬಸವರಾಜ ಟಿ. ಹೆಚ್. ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, 12ನೇ ಶತಮಾನದಲ್ಲಿ ಅಸಮಾನತೆಯ ಮೀಸಲಾತಿ ಚೌಕಟ್ಟನ್ನು ಮೀರುವ ನಿಟ್ಟಿನಲ್ಲಿ ಬಸವಾದಿ ಶರಣರು ಇಷ್ಟಲಿಂಗವೆಂಬ ಪರ್ಯಾಯ ದೈವವನ್ನು ಕಂಡುಕೊಂಡರು.
ದೇವಾಲಯ ಸಂಸ್ಕೃತಿಯನ್ನು ತಿರಸ್ಕರಿಸಿ ಮನುಷ್ಯ ಪರಿಪೂರ್ಣ ಮನುಷತ್ವವನ್ನು ಸಾಧಿಸಿಕೊಂಡು, ತನ್ಮೂಲಕ ದೈವತ್ವದ ಕಡೆಗೆ ಸಾಗಲು ಇರುವ ಏಕೈಕ ಸಾಧನವೇ ಅರಿವಿನ ಕುರುಹು ಇಷ್ಟಲಿಂಗ.

ಇಷ್ಟಲಿಂಗ ಸಾಧನೆಯ ಮೂಲಕ ಅರಿವನ್ನು ಜಾಗೃತಿಗೊಳಿಸಿಕೊಂಡು, ಅಂಗ ಗುಣವನ್ನು ಕಳೆದುಕೊಂಡು ಲಿಂಗ ಗುಣವನ್ನು ಸಂಪಾದಿಸಿಕೊಂಡ ಪ್ರತಿಯೊಬ್ಬರು ಲಿಂಗಾಯತರಾದರು ಎಂದರು.
ಅವರಿವರೆನ್ನದೆ ತುಳಿತಕ್ಕೆ ಒಳಗಾದ ಎಲ್ಲಾ ಕಾಯಕ ಜೀವಿಗಳು, ಶ್ರಮ ಸಂಸ್ಕೃತಿಯನ್ನು ಅವಲಂಬಿಸಿದ ಶ್ರಮಿಕ ವರ್ಗದ ಜನ ಲಿಂಗಾಯತ ಮಾರ್ಗವನ್ನು ಬಸವಣ್ಣನ ನೇತೃತ್ವದಲ್ಲಿ ಅನುಸರಿಸಿದರು.
ಇಂತಹ ಕ್ರಾಂತಿಕಾರಕ ಬೆಳವಣಿಗೆಯಿಂದ ವಿಚಲಿತರಾದ ಪುರೋಹಿತಶಾಹಿ ಪಟ್ಟಭದ್ರರು ಪರ್ಯಾಯ ದೈವದ ಕುರಿತಾದ ಸಾಹಿತ್ಯವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ ಆ ಸಾಹಿತ್ಯವನ್ನು ನಾಶ ಮಾಡಿದ ಪರಿಣಾಮವಾಗಿ ಇಂದು ಮಡಿವಾಳ ಮಾಚಿ ತಂದೆಯ ಸಮುದಾಯದ ಜನ ಇಷ್ಟಲಿಂಗದಂತಹ ಅನನ್ಯ ಸಾಧನದಿಂದ ದೂರ ಉಳಿಯುವಂತಾಗಿದೆ.
ಯಾವ ದೇವಾಲಯ ಸಂಸ್ಕೃತಿಯನ್ನ ವೀರ ಗಂಟೆ ಮಡಿವಾಳ ಮಾಚಿ ತಂದೆ ತಿರಸ್ಕರಿಸಿದ್ದರು, ಅಂತಹ ದೇವಾಲಯಗಳಿಗೆ ಮಾಚಿ ತಂದೆಯ ಸಮುದಾಯ ಹೋಗುವಂತಾದದ್ದು ಶೋಚನೀಯ ಸಂಗತಿ.

ಇದನ್ನ ಅರ್ಥ ಮಾಡಿಕೊಂಡು ಇಂದಿನ ಮಡಿವಾಳ ಮಾಚಿದೇವ ಸಮುದಾಯದ ಜನ ಆಧ್ಯಾತ್ಮಿಕ ಸಬಲೀಕರಣಕ್ಕೆ ಒಳಗಾಗಿ ಮತ್ತೊಮ್ಮೆ ಆತ್ಮ ಶುದ್ಧೀಕರಣಕ್ಕಾಗಿ ದೈವತ್ವದ ಸಾಧನೆಗಾಗಿ ಮಡಿವಾಳ ಮಾಚಿತಂದೆ ಅಪ್ಪಿಕೊಂಡಂತಹ ವಿಶ್ವಗುರು ಬಸವಣ್ಣ ಕರುಣಿಸಿದ ಇಷ್ಟಲಿಂಗ ಮಾರ್ಗವನ್ನು ಅನುಸರಿಸಬೇಕಾಗಿದೆ.
ಯುದ್ಧ ನೀತಿ ಗೊತ್ತಿದ್ದ ಮತ್ತು ವೀರಾವೇಶದಿಂದ ಕೊಂಡಿ ಮಂಚಣ್ಣ ಮತ್ತು ಬಿಜ್ಜಳಾದಿಗಳ ಸೈನ್ಯವನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವಿದ್ದ ಏಕೈಕ ವ್ಯಕ್ತಿತ್ವ ಮಡಿವಾಳ ಮಾಚಿ ತಂದೆಯದು.
ಅವರು ಇಲ್ಲದೆಯೇ ಹೋಗಿದ್ದರೆ ಇಂದು ಲಿಂಗಾಯತ ಧರ್ಮ ಸಾಹಿತ್ಯ ಎನಿಸಿಕೊಳ್ಳುವ ವಚನ ಸಾಹಿತ್ಯ ನಮ್ಮ ಕೈಗೆ ದಕ್ಕದೇ ಇರಬಹುದಾದಂತಹ ಅಪಾಯವಿತ್ತು ಎಂದು ಬಸವರಾಜ ಹೇಳಿದರು.
ಇಷ್ಟಲಿಂಗ ಅಧ್ಯಯನ ಕೇಂದ್ರದ ಮುಖ್ಯಸ್ಥರು ಮತ್ತು ಖ್ಯಾತ ಮನೋವೈದ್ಯರಾದ ಡಾ. ಅಜಯ್ ಕುಮಾರ್ ತಾಂಡೂರ, ಇಷ್ಟ ಲಿಂಗದ ವೈಜ್ಞಾನಿಕ ತಿಳುವಳಿಕೆಯನ್ನು ಹೇಳಿಕೊಡುತ್ತಲೇ ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆಯನ್ನು ನೆರವೇರಿಸಿಕೊಟ್ಟರು.
ಮಡಿವಾಳ ಮಾಚಿತಂದೆಯ ಕುರಿತು ಅನುಭವ ನೀಡಿದ ನಿವೃತ್ತ ಪ್ರಾಧ್ಯಾಪಕ ಡಾ. ಎಸ್. ಶಿವಾನಂದ ಅವರು ಮಾತನಾಡಿ, ಮಡಿವಾಳ ಮಾಚಿತಂದೆ ನುಡಿದಂತೆ ನಡೆದ ಸತ್ಯಶರಣ. ಅಂದಿನ ಶರಣ ಸಮಾಜಕ್ಕೆ ಮಡಿವಂತಿಕೆಯನ್ನು ಕರುಣಿಸಿದ ಮಹಾಚೇತನ. ಸತ್ಯ ಶುದ್ಧ ಕಾಯಕ ಮಾಡಿ ಒಕ್ಕುದ ಮಿಕ್ಕುದ ದಾಸೋಹ ಮಾಡಿದ ಸತ್ಯಶರಣರ ಬಟ್ಟೆಗಳನ್ನ ಮಾತ್ರವೇ ಮಡಿ ಮಾಡುತ್ತಿದ್ದಂತಹ ವಿಶೇಷ ಕಾಯಕಜೀವಿ ಮಡಿವಾಳ ಮಾಚಿದೇವ.

ರಾಜ ಬಿಜ್ಜಳನ ಆದಿಯಾಗಿ ಯಾವುದೇ ಹಣವಂತರ ಮತ್ತು ಭಕ್ತರಲ್ಲದವರ ಬಟ್ಟೆಗಳನ್ನು ಮಡಿ ಮಾಡುವುದಿಲ್ಲ ಎಂದು ಶಪಥ ಜೀವನ ನಡೆಸಿದವರು ಮಡಿವಾಳ ಮಾಚಿದೇವರು. ನಾವು ಇಂದು ಅಂತಹ ನೈತಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಶರಣ ಮಾರ್ಗದಲ್ಲಿ ನಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕರ್ನಾಟಕ ರಾಜ್ಯ ಮಡಿವಾಳ ಸಂಘದ ರಾಜ್ಯಾಧ್ಯಕ್ಷರಾದ ಎಂ.ಕೆ. ಹನುಮಂತಪ್ಪನವರು ಷಟಸ್ಥಲ ಧ್ವಜಾರೋಹಣ ಮಾಡಿದರು. ಸಖೀ ಸಂಸ್ಥೆಯ ಕಾರ್ಯಕರ್ತೆಯರು ಗುರು ಪೂಜೆ ನೆರವೇರಿಸಿದರು. ನವ್ಯ ಅಂಗಡಿ ವಚನ ಪ್ರಾರ್ಥನೆ ನಡೆಸಿಕೊಟ್ಟರು.
ಸಖೀ ಸಂಸ್ಥೆಯ ಮುಖ್ಯಸ್ಥೆ ಡಾ. ಭಾಗ್ಯಲಕ್ಷ್ಮಿ ಅವರೊಂದಿಗೆ ಸಂಸ್ಥೆಯ 40 ಜನ ಕಾರ್ಯಕರ್ತರು, ಮಡಿವಾಳ ಸಮುದಾಯದ ಮುಖಂಡರು, ಪದಾಧಿಕಾರಿಗಳು, ಇಷ್ಟಲಿಂಗ ಅಧ್ಯಯನ ಕೇಂದ್ರ ಮತ್ತು ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

