ಇಳಕಲ್ ಮಠದಲ್ಲಿ ‘ಗಣಾಚಾರ ಪ್ರಶಸ್ತಿ’ ಪ್ರಶಸ್ತಿ ಪ್ರದಾನ ಸಮಾರಂಭ

ಬಸವ ಮೀಡಿಯಾ
ಬಸವ ಮೀಡಿಯಾ

ಇಳಕಲ್

ನಗರದ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದಲ್ಲಿ “ಗಣಾಚಾರ ಪ್ರಶಸ್ತಿ” ಪ್ರದಾನ ಸಮಾರಂಭ ನಡೆಯಿತು.

ಈ ವರ್ಷದ ‘ಶ್ರೀ ಅಂಬಿಗ ಚೌಡಯ್ಯ ಪ್ರಶಸ್ತಿ’ ಹಾಗೂ ‘ಶ್ರೀ ಅಂಬಿಗ ಕುಮಾರ ಚೌಡಯ್ಯ ಪ್ರಶಸ್ತಿ’ಯನ್ನು ಬಸವನಬಾಗೇವಾಡಿಯ ಲಕ್ಷ್ಮಣ ಆರ್. ಗೊಳಸಂಗಿ ಹಾಗೂ ಇಂಡಿಯ ಪಾರ್ವತಿ ಸೊನ್ನದ ಅವರಿಗೆ ಪ್ರಧಾನ ಮಾಡಲಾಯಿತು.

ರಾಮದುರ್ಗದ ಬಸವಬೆಳಗು ಪತ್ರಿಕೆಯ ಗೌರವ ಸಂಪಾದಕರಾದ ಪ್ರೊ. ಸಿದ್ದಣ್ಣ ಲಂಗೋಟಿ ಅವರು ಮಾತನಾಡಿ, “೧೨ನೇ ಶತಮಾನದ ಬಸವಾದಿ ಶರಣರ ಪರಂಪರೆಯ ಬಳಿವಿಡಿದು ೨೦-೨೧ನೇ ಶತಮಾನದವರೆಗೆ ಅನೇಕru ಅಧ್ಯಯನ ಮಾಡಿ ಅರಿತು-ಆಚಾರ-ಅನುಭಾವದಿಂದ ವಚನಗಳನ್ನು ರಚಿಸುತ್ತಿದ್ದಾರೆ. ವಚನ ಸಾಹಿತ್ಯವು ಚಲನಶೀಲ ಹಾಗೂ ಅನುಭಾವ ಸಾಹಿತ್ಯ,” ಎಂದು ಹೇಳಿದರು.

ಅತಿಥಿಗಳು, ಹಿರಿಯ ಸಾಹಿತಿ, ಅನುಭಾವಿಗಳಾದ ಪ. ಗು. ಸಿದ್ದಾಪೂರ ಮಾತನಾಡಿ, “ವಚನ ಸಾಹಿತ್ಯವು ಮಕ್ಕಳ ಸಾಹಿತ್ಯವಾಗಿದೆ, ಬಹಳ ಸರಳ ಪದಗಳಿಂದ ಕೂಡಿದೆ. ಆದರೆ ಅದನ್ನು ಪಚನ ಮಾಡಿಕೊಳ್ಳಲು ಸೋಲುತ್ತಿರುವ ನಮಗೆ ಕಬ್ಬಿಣದ ಕಡಲೆಯಂತೆ ಅನಿಸುತ್ತಿವೆ” ಎಂದರು.

ಸಮಾರಂಭದಲ್ಲಿ ‘ತ್ರಿಪದಿ ತೀರ್ಥ’ ಮತ್ತು ‘ವಿಶ್ವಗುರು ಬಸವಣ್ಣನವರ ವಚನಗಳು’ ಎಂಬ ಗ್ರಂಥಗಳನ್ನು ಸಿದ್ದರಾಮ ಬೆಲ್ದಾಳ ಶರಣರಿಂದ ಲೋಕಾರ್ಪಣೆಗೊಳಿಸಲಾಯಿತು.

ಸಮಾರಂಭದ ನೇತೃತ್ವ ವಹಿಸಿದ್ದ ಪೂಜ್ಯ ಬಸವಲಿಂಗ ಸ್ವಾಮಿಗಳು ಮಾತನಾಡಿ, “ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯಾ” ಎಂಬ ವಚನದಂತೆ ಶರಣರ ಅನುಭಾವ ಗೋಷ್ಠಿಗಳ ಸದುಪಯೋಗ ಪಡೆದುಕೊಳ್ಳುವುದರ ಕುರಿತು ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳ ಅನುಸಂಧಾನ ಮಾಡಿದರು.

ಸಾನಿಧ್ಯವನ್ನು ವಹಿಸಿದ್ದ ಪೂಜ್ಯ ಗುರುಮಹಾಂತ ಮಹಾಸ್ವಾಮಿಗಳು, ಬಸವಾದಿ ಶರಣರ ಪರಂಪರೆಯು ನಡೆದು ಬಂದ ದಾರಿಯ ಕುರಿತು ಆಶೀರ್ವಚನ ನೀಡಿದರು.

ವೇದಿಕೆಯಲ್ಲಿ ನವಲಿಂಗ ಶರಣರು, ಮಾತೆ ಸತ್ಯಕ್ಕ, ವಿರತೀಶಾನಂದ ಸ್ವಾಮೀಜಿ ಮನಗೂಳಿ, ಎಸ್. ವಾಯ್. ಗದಗ ಮತ್ತಿತರರು ಉಪಸ್ಥಿತರಿದ್ದರು.

ಅಕ್ಕನ ಬಳಗದ ಶರಣೆಯರು ಪ್ರಾರ್ಥನೆ ಮಾಡಿದರು. ಕಲಾಶ್ರೀ ಕ್ಯಾರಕೊಪ್ಪ ಸ್ವಾಗತಿಸಿದರು. ಸಂಗನಬಸವನಶ್ರೀಪಾದ ಹಾದಿಮನಿ ಕಾರ್ಯಕ್ರಮ ನಿರೂಪಣೆ ಹಾಗೂ ಶರಣು ಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
Leave a comment

Leave a Reply

Your email address will not be published. Required fields are marked *