ಶರಣ ಉತ್ಸವದಲ್ಲಿ 50,000 ಜನ ಭಕ್ತರಿಗೆ ದಾಸೋಹ ನೀಡಿದ ಇಳಕಲ್ ಮಠ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಇಳಕಲ್

ಇತ್ತೀಚೆಗೆ ನಡೆದ ಶರಣ ಸಂಸ್ಕೃತಿ ಮಹೋತ್ಸವದಲ್ಲಿ ಇಳಕಲ್ ಮಠದ ವತಿಯಿಂದ 50,000 ಜನ ಭಕ್ತರಿಗೆ ದಾಸೋಹ ನೀಡಲಾಯಿತು

ವಿಜಯ ಮಹಾಂತ ಶಿವಯೋಗಿಗಳು ಹಾಗೂ ಪೂಜ್ಯ ಡಾ.ಮಹಾಂತಪ್ಪಗಳ ಶರಣ ಸಂಸ್ಕೃತಿ ಮಹೋತ್ಸವದ ಭಾಗವಾಗಿ ಚಿತ್ತರಗಿ-ಇಳಕಲ್ ಮಠದಲ್ಲಿ ಮೂರು ದಿನಗಳ ವಚನ ಸಾಹಿತ್ಯದ ಮಹಾ ರಥೋತ್ಸವ, ಸಾಮೂಹಿಕ ಕಲ್ಯಾಣ ಮಹೋತ್ಸವ ಹಾಗೂ ವಚನ ಸಾಹಿತ್ಯದ ಪಲ್ಲಕ್ಕಿ ಮಹೋತ್ಸವ ಜರುಗಿದವು.

ಈ ಎಲ್ಲ ಉತ್ಸವಗಳಲ್ಲಿ ಇಳಕಲ್ ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ಭಕ್ತ ಜನರು ಬಂದು ಭಾಗವಹಿಸಿದರು.

ಬಂದಂತ ಭಕ್ತರಿಗೆ ಮಠದ ವಿಜಯ ಮಹಾಂತೇಶ ತರುಣ ಸಂಘದಿಂದ ಕಂಠಿ ವೃತ್ತದ ಅನುಭವ ಮಂಟಪದಲ್ಲಿ ಬೃಹತ್ ಪ್ರಸಾದ ದಾಸೋಹ ವ್ಯವಸ್ಥೆ ಏರ್ಪಾಟು ಮಾಡಲಾಗಿತ್ತು.

ಉತ್ಸವ ಶುರುವಾದಾಗಿನಿಂದ ದಾಸೋಹದಲ್ಲಿ ಸುಮಾರು 50 ಸಾವಿರ ಭಕ್ತರು ಪ್ರಸಾದ ಸೇವಿಸಿದರು.

ಮಠದ ವತಿಯಿಂದ 25 ಕ್ವಿಂಟಲ್ ಜೋಳವನ್ನು ಗಿರಣಿಗೆ ಹಾಕಿಸಿ ಹಿಟ್ಟು ತಯಾರಿಸಲಾಗಿತ್ತು. ಆ ಹಿಟ್ಟನ್ನು ಇಳಕಲ್ ಸುತ್ತಲಿರುವ 20 ಹಳ್ಳಿಗಳಿಗೆ ಕೊಟ್ಟು, ರೊಟ್ಟಿ ಮಾಡಿ ತರಲು ಹೇಳಲಾಗುತ್ತದೆ. ಹಳ್ಳಿಯ ಭಕ್ತ ಜನ ರೊಟ್ಟಿ ಮಾಡಿಕೊಂಡು, ಊರ ವತಿಯಿಂದ ತಮ್ಮದೇ ಸ್ವಂತ ವಾಹನದಲ್ಲಿ ತುಂಬಿಕೊಂಡು ಬಂದು ಮಠಕ್ಕೆ ಸಾವಿರಾರು ರೊಟ್ಟಿಗಳನ್ನು ತಲುಪಿಸುತ್ತಾರೆ. ಇದು ಈ ಭಾಗದ ಹಳ್ಳಿಯ ಜನರ ವಿಶೇಷತೆ ಹಾಗೂ ಅವರು ಮಹಾಂತ ಶಿವಯೋಗಿಗಳ ಮೇಲೆ ಇಟ್ಟಿರುವ ಭಕ್ತಿ ಹಾಗೂ ನಂಬಿಕೆಯಾಗಿದೆ.

ಒಟ್ಟು 55 ಕ್ವಿಂಟಾಲ್ ಅನ್ನದ ಅಕ್ಕಿ ಖರ್ಚಾಯಿತು. ಪ್ರತಿದಿನ ಬದನೆಕಾಯಿ ಪಲ್ಲೆ, ರೊಟ್ಟಿ, ಸಾರು, ಮಿರ್ಚಿ ಸಹ ವ್ಯವಸ್ಥೆ ಮಾಡಲಾಗಿತ್ತು, ಎಂದು ಪ್ರಸಾದ ವ್ಯವಸ್ಥೆ ನಿರ್ವಹಿಸಿದ ತರುಣ ಸಂಘದ ಅಧ್ಯಕ್ಷ ಶರಣಗೌಡ ಪಾಟೀಲ ಹೇಳಿದರು

ವಿಶೇಷವಾಗಿ ಮೊದಲ ದಿನ 12 ಕ್ವಿಂಟಾಲ್ ಸಿಹಿ ಬುಂದೆ, 02 ನೇ ದಿನ 10 ಕ್ವಿಂಟಾಲ್ ಗೋಧಿ ಹುಗ್ಗಿ, 03 ನೇ ದಿನ 06 ಕ್ವಿಂಟಾಲ್ ಉದುರು ಸಜ್ಜಕ ತಯಾರಿಸಿ ಒದಗಿಸಲಾಯಿತು.

ಬುಂದೆ ಪದಾರ್ಥ ದಾಸೋಹವನ್ನು ಗಿಡ್ಡಪ್ಪ ಬಂಡಿ, ಉದುರು ಸಜ್ಜಕ ದಾಸೋಹವನ್ನು ಮಹಾಂತೇಶ ಚಟ್ಟೇರ, ಮಿರ್ಚಿ ದಾಸೋಹವನ್ನು ರೋಟರಿ ಕ್ಲಬ್ ಸಂಸ್ಥೆಯವರು ನೀಡಿದ್ದರು. ಗೋದಿ ಹುಗ್ಗಿ ಗುಪ್ತ ದಾಸೋಹವಾಗಿ ಬಂದಿತು.

ಪ್ರತಿಬಾರಿ ಜಾತ್ರಾ ಅಡುಗೆಯನ್ನು ವಿಜಯಪುರ ತಾಲ್ಲೂಕಿನ ಕೋಳೂರು ಗ್ರಾಮದವರು ತಯಾರಿಸುತ್ತಿದ್ದರು. ಈ ಬಾರಿ ಸ್ಥಳೀಯ ಈರಣ್ಣ ಚುಂಚಾ, ಮಹಾತೇಶ ಮಿಣಜಿಗಿ, ರಾಘು ಹಾಗೂ ತಂಡ ತಯಾರಿಸಿತು.

ಈ ಲಿಂಗಾಯತ ಮಠ ಬಸವ ತತ್ವದಂತೆ ನಿತ್ಯ ತ್ರಿವಿಧ ದಾಸೋಹ ಮುಂದುವರೆಸಿಕೊಂಡು ಬಂದಿದೆ.

ನಿತ್ಯ ಮಠಕ್ಕೆ ಬರುವ 200-250 ಜನ ಭಕ್ತರಿಗೆ, 50 ಕೆ.ಜಿ. ಅನ್ನ-ಸಾರಿನ ದಾಸೋಹ ಇದ್ದೇ ಇರುತ್ತೆ. ಭಕ್ತರು ಹೆಚ್ಚಿನ ದಾಸೋಹ ನೀಡಿದಾಗ ಸಿರಾ, ಸಜ್ಜಕ, ಪಲ್ಲೆಗಳ ವ್ಯವಸ್ಥೆ ಕೂಡ ಆಗಿರುತ್ತದೆ. ಮಠದ ಪೀಠಾಧಿಪತಿ ಗುರುಮಹಾಂತಪ್ಪಗಳು ಸ್ವತಃ ಎಲ್ಲರಿಗೂ ಪ್ರಸಾದ ಮಾಡಿಸಿ ಕಳಿಸುತ್ತಾರೆ.

ಪ್ರವಾಸಿಗರು ಸಹ ಮಠಕ್ಕೆ ಭೇಟಿ ಕೊಡುತ್ತಾರೆ. ವಿದ್ಯಾರ್ಥಿ, ಶಿಕ್ಷಕರಿಗೆ ಪ್ರಸಾದದ ಜೊತೆಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಸಹ ಮಾಡಲಾಗುತ್ತದೆ.

Share This Article
1 Comment
  • ನಮ್ಮ ಲಿಂಗಾಯತ ಮಠಗಳು ಮಾಡುವಷ್ಟು ತ್ರಿವಿಧ ದಾಸೋಹವನ್ನು ಯಾವ ಬ್ರಾಹ್ಮಣಷಾಹಿ ಮಠಗಳು ಮಾಡಲು ಸಾದ್ಯವಿಲ್ಲ. .ಬಸವ ಮೀಡಿಯ ಕನಾ೯ಟಕದ ಯಾವುದೇ ಮೂಲೆಯಲ್ಲಿ ನಡೆದಿರುವ ಲಿಂಗಾಯತ ಧಮ೯ದ ಕಾಯ೯ಕ್ರಮಗಳನ್ನು ಬಸವಾಭಿಮಾನಿಗಳಿಗೆ ತಲುಪಿಸುತ್ತಿರುವ ನಿಮ್ಮ ಶ್ರಮಕ್ಕೆ ಅನಂತ ಶರಣು ಶರಣಾಥಿ೯ಗಳು 🙏🙏

Leave a Reply

Your email address will not be published. Required fields are marked *