ಮನುವಾದದ ವಿರುದ್ಧ ಭಾರತದಲ್ಲಿ ಬಹು ದೊಡ್ಡ ಸಂಸ್ಕೃತಿ ಇದೆ

ರಂಜಾನ್ ದರ್ಗಾ
ರಂಜಾನ್ ದರ್ಗಾ

.

ಶರಣರು ವೈದಿಕದ ಎಲ್ಲವನ್ನೂ ವಿರೋಧ ಮಾಡಿದರು. ವೈದಿಕದ ಎಲ್ಲದಕ್ಕೂ ಪರ್ಯಾಯ ಕೊಟ್ಟರು.

ಸಾಂಸ್ಕೃತಿಕ ರಾಜಕಾರಣ ಖಂಡಿತವಾಗಿಯೂ ಈ ಕಾಲಘಟ್ಟದಲ್ಲೇ ಪ್ರಾರಂಭವಾದುದಲ್ಲ. ಇದಕ್ಕೆ ಕನಿಷ್ಠ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಹಿಂದಿನಿಂದಲೂ ಬೆಳೆದುಬಂದ ಸಾಂಸ್ಕೃತಿಕ ಹಿಂಸೆಯ ಬಗ್ಗೆ ನಾವು ಈಗಾದರೂ ನೇರವಾಗಿ ಸತ್ಯವನ್ನು ಮಾತನಾಡುವ ಧೈರ್ಯವನ್ನು ತಂದುಕೊಳ್ಳಬೇಕಾಗಿದೆ. ಯಾಕೆ ಹೀಗಾಯಿತು ಇದಕ್ಕೆ ಕಾರಣರಾರು. ಈ ದೇಶದಲ್ಲಿ ಸಾಂಸ್ಕೃತಿಕ ರಾಜಕಾರಣ ಎಂದು ಹುಟ್ಟಿತು? ಎಂಬುದರ ಕುರಿತು ನಾವು ಗಾಢವಾದ ಚಿಂತನೆ ಮಾಡಬೇಕಾಗಿದೆ.

ಇಂದಿನ ಟರ್ಕಿ ದೇಶ ಯುರೂಪ ಮತ್ತು ಏಷ್ಯಾಖಂಡದಲ್ಲಿ ಹಂಚಿ ಹೋಗಿದೆ. ಅದರ ಏಷ್ಯಾದ ಭಾಗದಲ್ಲಿನ ಅನಾಟೊಲಿಯಾದಿಂದ ಅಂದರೆ ಯಾವುದಕ್ಕೆ ನಾವು ಏಷ್ಯಾ ಮೈನರ್ ಎಂದಿ ಕರೆಯುತ್ತೇವೆಯೋ ಅಲ್ಲಿಂದ ಬಂದ ಆರ್ಯರು ಯಾವಾಗ ಮೊಹೆಂಜೊದಾರೊ ಸಂಸ್ಕೃತಿಯ ಮೇಲೆ ದಾಳಿ ಮಾಡಿದರೊ ಅಂದಿನಿಂದ ಈ ದೇಶದಲ್ಲಿ ಸಾಂಸ್ಕೃತಿಕ ರಾಜಕಾರಣ ಆರಂಭವಾಗಿದೆ. ಮೂಲನಿವಾಸಿಗಳನ್ನು ಸಂಪೂರ್ಣವಾಗಿ ಹದ್ದುಬಸ್ತಿನಲ್ಲಿಡಲು ಮಾಡಿದ ಅವರ ಪ್ರಯತ್ನಗಳು ಅತ್ಯಂತ ಕ್ರೂರವಾಗಿವೆ, ಭಯಾನಕವಾಗಿವೆ.

ಇವತ್ತು ಮೂಲನಿವಾಸಿಗಳು ಸಂಪೂರ್ಣವಾಗಿ ತಮ್ಮ ಸಾಂಸ್ಕೃತಿಕ ನೆಲೆಗಳನ್ನು ಕಳೆದುಕೊಂಡು, ಯಾರು ತಮ್ಮನ್ನು ಗುಲಾಮರನ್ನಾಗಿ ಮಾಡಿದರೊ ಅವರ ಸಂಸ್ಕೃತಿಯನ್ನು ಒಪ್ಪಿಕೊಂಡು ಬದುಕುತ್ತಿರುವಂಥ ಪರಿಸ್ಥಿತಿಯ ಇದೆ. ಕಳೆದ ಮೂರುಸಾವಿರ ವರ್ಷಗಳ ಅವಧಿಯಲ್ಲಿ ಮೂಲನಿವಾಸಿಗಳಿಗೆ ಆದ ಅನ್ಯಾಯದ ಕುರಿತು ಈಗಲಾದರೂ ಪ್ರಜ್ಞೆ ಮೂಡಬೇಕಿದೆ.

‘ಮನಸ್ಮೃತಿ ಎನ್ನುವುದು ಆರ್ಯರ ಧರ್ಮಗ್ರಂಥ ಅಲ್ಲ, ಅದೊಂದು ಸಾಂಸ್ಕೃತಿಕ ರಾಜಕಾರಣದ ಗ್ರಂಥ’ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ನಾವು ಎಷ್ಟೊಂದು ಅಜ್ಞಾನದಿಂದ ಬದುಕುತ್ತಿದ್ದೇವೆ ಎಂಬುದರ ಅರಿವು ಅದನ್ನು ಓದಿದ ನಂತರ ಮೂಡುವುದು. ಆರ್ಥಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಚೌಕಟ್ಟಿನಲ್ಲಿ ಶೇಕಡಾ ೯೦ರಷ್ಟು ಜನರನ್ನು ಮೂರು ಸಾವಿರ ವರ್ಷಗಳಿಂದ ಹಿಡಿದಿಡುವ ಶಕ್ತಿಯನ್ನು ಅವರು ಹೇಗೆ ಪಡೆದುಕೊಂಡರು ಎಂಬುದರ ಕುರಿತು ಇತಿಹಾಸದ ಕಡೆಗೆ ಗಮನ ಹರಿಸಿದಾಗ, ಲೋಕಾಯತದಿಂದ ಲಿಂಗಾಯತದವರೆಗೆ ಅವರ ಸಾಂಸ್ಕೃತಿಕ ರಾಜಕಾರಣದ ವಿರುದ್ಧ ಅನೇಕ ವಿಧಾನದಲ್ಲಿ ಹೋರಾಟಗಳು ನಡೆದಿವೆ ಎಂಬುದು ಅರಿವಿಗೆ ಬಾರದೆ ಇರದು.

ಮುನುವಾದಿಗಳು ಲೋಕಾಯತರ ಕೊಲೆ ಮಾಡಿದರು. ಅವರ ಸಾಹಿತ್ಯವನ್ನು ಸುಟ್ಟರು. ನಂತರ ಜೈನರು ಬಂದರು. ಕೆಲವೇ ಶತಮಾನಗಳಲ್ಲಿ ಅವರು ಆ ಒಂದು ಪ್ರಬಲ ಶಕ್ತಿಗೆ ತಲೆಬಾಗಿದರು. ಜೈನಧರ್ಮದ ನಂತರ ಬೌದ್ಧ ಧಮ್ಮ ಬಂದಿತು. ಆ ಬೌದ್ಧರನ್ನೂ ಸುಟ್ಟು ಹಾಕಿದರು. ಅವರ ಸಾಹಿತ್ಯವನ್ನು ಸುಟ್ಟರು. ನಮಗೆ ಹೆಚ್ಚಿನ ಬೌದ್ಧ ಸಾಹಿತ್ಯ ಸಿಕ್ಕಿದ್ದು ಶ್ರೀಲಂಕಾ ಮತ್ತು ಟಿಬೆಟ್‌ಗಳಲ್ಲಿ. ಈ ರೀತಿಯಾಗಿ ಮತ್ತೆ ಅದು ಪುನರುಜ್ಜೀವನ ಪಡೆಯಿತು.

ಬೌದ್ಧ ಧಮ್ಮದ ನಂತರ ೧೨ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ದುಡಿಯುವ ವರ್ಗದ ಬೃಹತ್ ಚಳವಳಿಯಾಯಿತು. ಆ ಚಳವಳಿ ಎಲ್ಲ ರೀತಿಯಿಂದಲೂ ಮನುವಾದಿ ವೈದಿಕ ವ್ಯವಸ್ಥೆಗೆ ಸವಾಲಾಯಿತು. ಸಂಪೂರ್ಣವಾದ ಪರ್ಯಾಯ ಸಂಸ್ಕೃತಿಯನ್ನು ನಾವು ಎಲ್ಲಿಯಾದರೂ ಕಾಣಲಿಕ್ಕೆ ಸಾಧ್ಯವಾದರೆ ಅದು ೧೨ನೇ ಶತಮಾನದ ದುಡಿಯುವ ವರ್ಗದ ಚಳವಳಿಯಲ್ಲಿ. ಬಸವಣ್ಣನವರು ಇಡೀ ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಕಾಯಕಜೀವಿಗಳನ್ನು ಒಟ್ಟಾರೆ ದುಡಿಯುವ ವರ್ಗವಾಗಿ ಸಂಘಟಿಸಿದರು. ಐರೋಪ್ಯ ದೇಶಗಳಲ್ಲಿ ಕೂಡ ವೃತ್ತಿ ಸಂಘಗಳು ಇದ್ದವು. ಆದರೆ ವರ್ಗಪ್ರಜ್ಞೆಯನ್ನು ನಾವು ಅಲ್ಲಿ ಕಾಣುವುದಿಲ್ಲ. ಶೋಷಣೆಗೆ ಒಳಗಾದ ಎಲ್ಲ ದುಡಿಯುವ ಜನರು ಒಂದು ಸಂಕುಲವಾದರು.

ಸಂಕುಲ ಎಂದರೆ ಜಾತಿ, ವರ್ಗ, ವರ್ಣ ಮತ್ತು ಲಿಂಗಭೇದವಿಲ್ಲದ ಸಮತಾ ಸಮಾಜ. ಇಂಥ ಒಂದು ಸಮಾಜವನ್ನು ಪಡೆಯಬೇಕಾದರೆ ಬಸವಾದಿ ಶರಣರು ಎಷ್ಟೊಂದು ಕಷ್ಟ ಎದುರಿಸಿರಬಹುದು ಎಂಬುದನ್ನು ಕಲ್ಪಿಸಲೂ ಸಾಧ್ಯವಿಲ್ಲ.

ಕಾಯಕಜೀವಿಗಳ ಈ ವಚನ ಚಳವಳಿ ಒಂದು ಧರ್ಮವಾಗಿ ಪ್ರಾರಂಭವಾಗಿಲ್ಲ. ಸಮತಾ ಬದುಕಿನ ಆಶಯಗಳನ್ನು ಹೊಂದಿದ್ದ ಆ ಚಳವಳಿಯೆ ಬಸವಣ್ಣನ ಧರ್ಮವಾಗಿತ್ತು. ಕಲ್ಯಾಣ ಹತ್ಯಾಕಾಂಡದ ನಂತರ ಯಾವಾಗ ಚಳವಳಿ ಸ್ಥಗಿತಗೊಂಡಿತೊ ಆವಾಗ ಅದು ತನ್ನ ಚಲನಶೀಲತೆಯನ್ನು ಕಳೆದುಕೊಂಡಿತು. ತದನಂತರÀ ಅದು ಧರ್ಮವಾಗಿ ರೂಪ ತಾಳಿತು. ಯಾವಾಗ ಅದು ಚಳವಳಿರಹಿತ ಧರ್ಮವಾಯಿತೊ ಆವಾಗ ಅಂದರೆ ೧೫ನೇ ಶತಮಾನದ ಹೊತ್ತಿಗೆ ಅದು ಮತ್ತೆ ಹಳೆಯ ಶೈವ ಮತ್ತು ವೈದಿಕದ ಕಡೆಗೆ ಹೊರಳಿತು.

ಇವತ್ತಿನ ಪರಿಸ್ಥಿತಿ ನೋಡಿದರೆ ೧೨ನೇ ಶತಮಾನದ ಚಳವಳಿಗೆ ಮತ್ತು ಆ ಧರ್ಮವನ್ನು ಆಚರಿಸುತ್ತಿರುವವರ ಜೀವನವಿಧಾನಕ್ಕೆ ಧಾರ್ಮಿಕ ಸಂಪ್ರದಾಯಗಳನ್ನು ಬಿಟ್ಟರೆ ಯಾವುದೇ ಸಂಬಂಧ ಇಲ್ಲ ಎಂಬುದು ನಮಗೆ ಭಾಸವಾಗುವುದು. ಯಾವ ರೀತಿಯಾಗಿ ಶರಣರು ವೇದಕ್ಕೆ ಒರೆಯ ಕಟ್ಟಿದರು, ಶಾಸ್ತ್ರಕ್ಕೆ ನಿಗಳವನಿಕ್ಕಿದರು, ಯಾವ ರೀತಿಯಾಗಿ ಆಗಮದ ಮೂಗ ಕೊಯ್ದರು ಎಂಬುದರ ಕುರಿತು ನಾವು ಈಗ ಆಳವಾದ ಚಿಂತನೆ ಮಾಡಬೇಕಾಗಿದೆ.

ನೂರಾರು ವೃತ್ತಿಸಂಘಗಳನ್ನು ಕೂಡಿಸಿ ಒಂದು ಸಂಕುಲ ಮಾಡುವುದು ಕಲ್ಪನೆಗೂ ಮೀರಿದ್ದಾಗಿದೆ. ವಿವಿಧ ಪ್ರಕಾರದ ಕಾಯಕಜೀವಿಗಳನ್ನು ಅದು ಹೇಗೆ ಒಂದು ವರ್ಗವಾಗಿ ಕೂಡಿಸಿರಬಹುದು? ಆ ಅನನ್ಯವಾದ ಶರಣ ಸಂಕುಲ ನಮಗೆ ಇವತ್ತಿಗೂ ಮಾದರಿಯಾಗಿ ಕಾಣುತ್ತದೆ.

ಸಾವಿರಾರು ಸ್ಥಾವರ ಲಿಂಗಗಳು ಎಲ್ಲ ಕಡೆಗಳಲ್ಲಿದ್ದವು. ಬಸವಣ್ಣನವರು ಅವುಗಳನ್ನು ಏಕೆ ನಿರಾಕರಣೆ ಮಾಡಿದರು. ಇಷ್ಟಲಿಂಗವನ್ನು ಏಕೆ ಸೃಷ್ಟಿಸಿದರು. ಯಾರಿಗೆ ದೇವಸ್ಥಾಗಳಲ್ಲಿ ಹೋಗಲು ಅವಕಾಶವಿಲ್ಲವೊ ಅವರ ಎದೆಯ ಮೇಲೆ ದೇವರು ಇಷ್ಟಲಿಂಗದ ಸಂಕೇತವಾಗಿ ಬಂದು ಕೂಡುವಂತೆ ಅದು ಹೇಗೆ ಮಾಡಿದರು. ಈ ಕುರಿತು ನಾವು ಯೋಚಿಸಬೇಕಿದೆ. ಸಂಪೂರ್ಣವಾಗಿ ದೇವಾಲಯಗಳ ನಿರಾಕರಣೆ ಮಾಡಿದ ಶರಣರು ಎದೆಯ ಮೇಲೆ ಲಿಂಗವನ್ನು ಕಟ್ಟಿಕೊಂಡಾಗ, ಆ ಲಿಂಗ ಏನು ಹೇಳುತ್ತಿತ್ತು ಎಂದರೆ, ‘ನನ್ನನ್ನು ಕಟ್ಟಿಕೊಂಡವರು ಜಾತಭೇದ ಮಾಡುವುದಿಲ್ಲ, ಲಿಂಗಭೇದ ಮಾಡುವುದಿಲ್ಲ, ವರ್ಗಭೇದ ಮಾಡುವುದಿಲ್ಲ, ಮಾನವ ಏಕತೆಯನ್ನು ಸಾರುತ್ತಾರೆ’ ಎಂಬುದು. ಬಸವಣ್ಣನವರ ವಚನವೊಂದು ಈ ಕುರಿತು ಬಹಳ ಸುಂದರವಾಗಿ ವಿವರಿಸುತ್ತದೆ.

“ಲಿಂಗವ ಪೂಜಿಸಿ ಫಲವೇನಯ್ಯಾ
ಸಮರತಿ ಸಮಕಳೆ ಸಮ ಸುಖವ ಅರಿಯದನ್ನಕ್ಕ?
ಲಿಂಗವ ಪೂಜಿಸಿ ಫಲವೇನಯ್ಯಾ
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ?

ಈ ವಚನಕ್ಕೆ ಅನುಭಾವದ ನೆಲೆಯ ಪಾರಮಾರ್ಥಿಕ ಮತ್ತು ಸಾಮಾಜಿಕ ನೆಲೆಯ ಲೌಕಿಕ ಅರ್ಥಗಳಿವೆ. ಅನುಭಾವದ ನೆಲೆಯ ಅರ್ಥವು ಲಿಂಗಾಂಗಸಾಮರಸ್ಯದ ‘ಶರಣ ಸತಿ ಲಿಂಗ ಪತಿ’ ಭಾವವನ್ನು ಒಳಗೊಂಡಿದೆ. ಭಕ್ತರ ಮತ್ತು ದೇವರ ಮಧ್ಯೆ ಸಮತೆಯನ್ನು ಸಾಧಿಸುವ ಇಷ್ಟಲಿಂಗಯೋಗದ ಪರಿಣಾಮವನ್ನು ಅರಹುತ್ತದೆ. ಆದರೆ ಸದ್ಯ ಇಲ್ಲಿ ನಮಗೆ ವಚನದ ಸಾಮಾಜಿಕ ಅರ್ಥ ಮಹತ್ವಪೂರ್ಣವಾಗಿದೆ.

ಸಮರತಿ ಎಂದರೆ ಲಿಂಗಭೇದವಿರಬಾರದು, ಸಮ ಕಳೆ ಎಂದರೆ ಯಾರಿಗೂ ಯಾವುದೇ ವಿಶೇಷ ಕಳೆ ಇಲ್ಲ. ಬ್ರಹ್ಮ ಕಳೆ ಇಲ್ಲ, ಕ್ಷಾತ್ರ ಕಳೆ ಇಲ್ಲ. ಇರುವುದೊಂದೇ ಕಳೆ, ಅದು ಮಾನವ ಕಳೆ. ಸಮಸುಖ ಅಂದರೆ ನಿಸರ್ಗ ಯಾರಿಗೂ ವಿಶೇಷವಾದ ಸುಖವನ್ನು ಕೊಟ್ಟಿಲ್ಲ. ಶ್ರೀಮಂತನೋ ಬಡವನೋ ಹೆಣ್ಣೋ ಗಂಡೋ ಜ್ಞಾನಿಯೊ ಅಜ್ಞಾನಿಯೊ ಯಾರೇ ಇದ್ದರೂ ನಿಸರ್ಗ ಸರ್ವರಿಗೂ ಅಂದರೆ ಒಟ್ಟಾರೆ ಇಡೀ ಜೀವಸಂಕುಲಕ್ಕೆ ಸಮನಾಗಿ ಕಾಣುವುದು. ಈ ಅರಿವೇ ಲಿಂಗಪೂಜಾ ಫಲ.

ದುಡಿಯುವ ವರ್ಗದ ನಾಯಕರಾಗಿದ್ದ ಬಸವಣ್ಣ ಪ್ರತಿಯೊಂದಕ್ಕೂ ಪ್ರತಿಫಲ ಬಯಸಿದ್ದಾರೆ. “ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ” (ಕಾಯಕ ಮಾಡುವುದಕ್ಕಷ್ಟೇ ನಿನ್ನ ಹಕ್ಕಿದೆ. ಅದರ ಫಲದ ಮೇಲೆ ಇಲ್ಲ.) ಎಂದು ಭಗವದ್ಗೀತೆ (ಅಧ್ಯಾಯ ೨, ಶ್ಲೋಕ ೪೭) ಹೇಳುತ್ತದೆ. ನೀವು ಕರ್ಮದ ಫಲಾಪೇಕ್ಷೆ ಇಲ್ಲದೆ ಕರ್ಮವನ್ನು ಮಾಡಿರಿ ಎಂದು ತಿಳಿಸುತ್ತದೆ. ಆದರೆ ಬಸವಣ್ಣನವರು ಹಾಗೆ ಹೇಳಲಿಲ್ಲ. “ನಾನಾವಾವ ಕರ್ಮಂಗಳ ಮಾಡಿದಡೆಯು ಆ ಕರ್ಮಫಲಭೋಗವ ನೀ ಕೊಡುವೆ ಎಂಬುದ ನಾ ಬಲ್ಲೆನು.” ಎಂದು ಅವರು ಕೆಲಸ ಮತ್ತು ಕೂಲಿಗೆ ಸಂಬಂಧವನ್ನು ಕಲ್ಪಿಸಿದ್ದಾರೆ. “ಲಿಂಗವ ಪೂಜಿಸಿ ಫಲವೇನಯ್ಯಾ” ವಚನದಲ್ಲಿ ನಾಲ್ಕು ಲೌಕಿಕ ವಿಚಾರಗಳನ್ನು ಹೇಳುತ್ತಾರೆ. ಲಿಂಗಭೇದವಿಲ್ಲ, ಜಾತಿ ಮತ್ತು ವರ್ಣಭೇದವಿಲ್ಲ, ವರ್ಗಭೇದವಿಲ್ಲ ಮತ್ತು ಇಡೀ ಮಾನವ ಕುಲ ನದಿಯೊಳಗೆ ನದಿ ಬೆರೆಸಿದಂತೆ ಒಂದಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.

ಈ ನಾಲ್ಕು ಸಮಸ್ಯೆಗಳು ನಮ್ಮ ಈ ಕಾಲದ ಜಾಗತಿಕ ಸಮಸ್ಯೆಗಳಾಗಿವೆ. ನಾವೆಲ್ಲ ಈ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದು ಬರಿ ಜಾಗತೀಕರಣದಿಂದ ಬಂದದ್ದಲ್ಲ. ಕೇವಲ ಒಂದು ಧರ್ಮದಿಂದ ಬಂದದ್ದಲ್ಲ. ಇದು ಶೋಷಣೆಯ ಸಿದ್ಧಾಂತದಿಂದ ಬಂದದ್ದು.

ಜಗತ್ತಿನಲ್ಲಿ ನಿಜವಾದ ಅರ್ಥದಲ್ಲಿ ಎರಡೇ ಸಂಸ್ಕೃತಿಗಳಿವೆ. ಒಂದು ಎಲ್ಲ ಮಾನವರನ್ನು ಒಳಗೊಳ್ಳುವ ಸಂಸ್ಕೃತಿ. ಇನ್ನೊಂದು ಅದಕ್ಕೆ ವಿರುದ್ಧವಾದ ಅನ್ಯ ವರ್ಣ ಮತ್ತು ಕೋಮಿನವರನ್ನು ಹೊರಹಾಕುವ ಸಂಸ್ಕೃತಿ. “ಇವನಾರವ ಇವನಾರವ ಇವನಾರವ” ಎನ್ನುವುದೇ ವರ್ಣಾಶ್ರಮ ಧರ್ಮದ ಸಂಸ್ಕೃತಿ. “ಇವ ನಮ್ಮವ ಇವ ನಮ್ಮವ ಇವ ನಮ್ಮವ” ಎನ್ನುವುದು ಲೋಕಾಯತರ, ಜೈನರ, ಬೌದ್ಧರ, ಶರಣರ, ದಾಸರ, ಸಂತರ, ಸೂಫಿ ಸಂತರ ಒಟ್ಟಾರೆ ಭಕ್ತಿಪಂಥದವರ ಸಂಸ್ಕೃತಿಯಾಗಿದೆ.

ಈ ಒಳಗೊಳ್ಳುವ ಮತ್ತು ಹೊರಹಾಕುವ ಸಾಂಸ್ಕೃತಿಕ ವೈರುಧ್ಯಗಳು ಮತ್ತು ಇವುಗಳ ಮಧ್ಯೆ ನಡೆಯುವ ಶೀತಲ ಸಮರಗಳು ಈ ಕಾಲದಲ್ಲಿ ಸೃಷ್ಟಿಯಾದವುಗಳಲ್ಲ ಎಂದು ಮತ್ತೆ ಮತ್ತೆ ಹೇಳಬಯಸುತ್ತೇನೆ.

ಮನುಸಂಸ್ಕೃತಿಗೆ ವಿರುದ್ಧವಾಗಿ ನಮಗೆ ಬಹಳ ದೊಡ್ಡ ಸಂಸ್ಕೃತಿ ಇದೆ. ಇವತ್ತು ನಾವಿಲ್ಲಿ ಸೇರಿದ್ದೇವಲ್ಲಾ, ನಮ್ಮ ಮೂಲನಿವಾಸಿ ಸಂಸ್ಕೃತಿಗೂ ಅಷ್ಟೇ ದೊಡ್ಡ ಇತಿಹಾಸವಿದೆ. ಹೊರಹಾಕುವ ಸಂಸ್ಕೃತಿಯವರ ವಿರುದ್ಧ ಒಳಗೊಳ್ಳುವ ಸಂಸ್ಕೃತಿಯವರೆಲ್ಲ ನಿರಂತರವಾಗಿ ಹೋರಾಟ ಮಾಡಿದ ಹಿನ್ನೆಲೆಯಿಂದಾಗಿ ಇವತ್ತು ನಾವು ಇಲ್ಲಿ ಬಂದು ಚಿಂತನ ಮಂಥನ ಮಾಡಲು ಸಾಧ್ಯವಾಗಿದೆ.

ನಮ್ಮ ದೇಶದಲ್ಲಿ ಮುಖ್ಯವಾಗಿ ನಾಲ್ಕು ಧರ್ಮಗಳು ಹುಟ್ಟಿದವು. ಜೈನಧರ್ಮ, ಬೌದ್ಧ ಧಮ್ಮ, ಲಿಂಗಾಯತ ಧರ್ಮ ಮತ್ತು ಸಿಖ್ಖ ಧರ್ಮ, ಈ ನಾಲ್ಕು ಧರ್ಮಗಳ ಸಾಮಾನ್ಯ ಲಕ್ಷಣ ಎಂದರೆ ಅವೈದಿಕ ಲಕ್ಷಣ. ಲೋಕಾಯತ, ಆಜೀವಿಕ, ಅಚಲ ದರ್ಶನಗಳು, ಪಂಥಗಳು ಮತ್ತು ಈ ನಾಲ್ಕೂ ಧರ್ಮಗಳು ಯಾವ ಕಾಲಕ್ಕೂ ವೈದಿಕವನ್ನು ಒಪ್ಪಿಕೊಳ್ಳಲಿಲ್ಲ. ಇದೇ ಮೂಲ ನಿವಾಸಿಗಳ ದೊಡ್ಡ ಶಕ್ತಿ.

ನಮ್ಮ ಸಂವಿಧಾನ ರೂಪುಗೊಳ್ಳಬೇಕಾದರೆ ಕೇವಲ ವಿದೇಶಿ ಚಿಂತನಾಕ್ರಮ ಮತ್ತು ವಿದೇಶಗಳ ವಿಚಾರಧಾರೆ ಕಾರಣ ಎನ್ನುವ ತಪ್ಪು ಕಲ್ಪನೆಯನ್ನು ಬಹಳಷ್ಟು ಜನ ಹೊಂದಿದ್ದಾರೆ. ನಮ್ಮ ಸಂವಿಧಾನ ರಚನೆಯ ಕ್ರಮಕ್ಕಾಗಿ ವಿದೇಶಗಳ ವಿಚಾರಗಳನ್ನು ಪರಿಗಣಿಸಿರಬಹುದು. ಜಗತ್ತು ಒಂದೇ ಆಗಿರುವುದರಿಂದ ಇದು ಸಹಜವಾದ ಕ್ರಮವೇ ಆಗಿದೆ. “ಆನೋ ಭದ್ರಾ ಕೃತವೋ ಯಂತು ವಿಶ್ವತಃ” (ಉದಾತ್ತ ವಿಚಾರಗಳು ನಮ್ಮೆಡೆಗೆ ಎಲ್ಲೆಡೆಯಿಂದ ಬರಲಿ) ಎನ್ನುವ ಹಾಗೆ ಜಗತ್ತಿನಲ್ಲಿ ಕೊಡು ಕೊಳ್ಳುವಿಕೆ ಇದ್ದೇ ಇರುತ್ತದೆ. ಆದರೆ ಮೂರುಸಾವಿರ ವರ್ಷಗಳ ನಿರಂತರವಾದ ಅವೈದಿಕ ಹೋರಾಟವೇ ನಮ್ಮ ಸಂವಿಧಾನದ ಆತ್ಮವಾಗಿದೆ ಎಂಬುದನ್ನು ನಾವು ಅರಿಯಬೇಕು. ಬುದ್ಧ ಮತ್ತು ಬಸವಣ್ಣ ಇಲ್ಲದೆ ಹೋಗಿದ್ದರೆ ನಮಗೆ ಅಂಬೇಡ್ಕರರು ಸಿಗುತ್ತಿದ್ದಿಲ್ಲ. ಅಂಬೇಡ್ಕರ್ ಸಿಗಬೇಕಾದರೆ ಮೂರು ಸಾವಿರ ವರ್ಷಗಳ ನಿರಂತರ ಹೋರಾಟವಿದೆ. ಇದನ್ನು ನಾವು ಮರೆಯಬಾರದು. ಆ ಹೋರಾಟದ ಫಲದಿಂದಲೇ ನಮಗೆ ಸಂವಿಧಾನ ಸಿಕ್ಕಿದೆ.

ಸಂವಿಧಾನದಲ್ಲಿ ಧರ್ಮ ನಿರಪೇಕ್ಷತೆಯ ವಿಚಾರವಿದೆ. ಹಾಗೆಂದರೆ ಧರ್ಮಗಳನ್ನು ಬಿಡುವುದಲ್ಲ. ಸಂವಿಧಾನದಲ್ಲಿ ‘ಧರ್ಮ ನಿರಪೇಕ್ಷತೆ’ ಎಂದರೆ ‘ರಾಜ್ಯ ಶಕ್ತಿಯಲ್ಲಿ ಧರ್ಮದ ಮೂಗು ತೂರಿಸುವಿಕೆಗೆ ಅವಕಾಶ ಇಲ್ಲ’ ಎಂದ ಹಾಗೆ. ಇದು ಸೆಕ್ಯುಲರ (ಧರ್ಮ ನಿರಪೇಕ್ಷತೆ) ಎನ್ನುವದರ ಅರ್ಥ.

ಬಾಬಾ ಸಾಹೇಬರು “ಶಿಕ್ಷಣ ಸಂಘಟನೆ ಹೋರಾಟ” ಎಂದು ಹೇಳಿದ್ದರು. ನನಗೆ ಆಶ್ಚರ್ಯವೆನಿಸುತ್ತದೆ. ಬಸವಣ್ಣನವರು ಈ ವಿಚಾರವನ್ನೇ ಕೃತಿಗೆ ಇಳಿಸಿದ್ದರು. ಅವರ ಇಡೀ ಚಿಂತನಾ ಕ್ರಮ ಶಿಕ್ಷಣ, ಸಂಘಟಣೆ ಮತ್ತು ಹೋರಾಟವಾಗಿತ್ತು. ನಾವು ಲಿಂಗಾಯತದ ಹಿನ್ನೆಲೆಯನ್ನು ‘ಜಗತ್ತಿನಲ್ಲಿ ಮೊದಲಿಗೆ ನಡೆದ ದುಡಿಯುವ ಜನರ ಬೃಹತ್ ಚಳವಳಿ’ ಎಂಬ ವಾಸ್ತವದ ನೆಲೆಯಲ್ಲೇ ನೋಡಬೇಕು. ಅದಕ್ಕೆ ನಾವು ವಚನ ಚಳವಳಿ ಎಂದೇ ಕರೆದಿದ್ದೇವೆ.

ವಚನ ಚಳವಳಿಯು ಜೀವನವಿಧಾನವೇ ಆಗಿದೆ. ಯಾವ ಜೀವನವಿಧಾನ ಎಂದರೆ ಸಮತಲದ (ಹಾರಿಜಾಂಟಲ್) ಜೀವನ ವಿಧಾನ. ದೇಶದಲ್ಲಿ ಲೋಕಾಯತರಿಂದ ಪ್ರಾರಂಭವಾದ ಈ ವಿಧಾನವನ್ನು ಕನ್ನಡದ ನೆಲದಲ್ಲಿ ಬಸವಣ್ಣನವರು ನಮಗೆ ಹೇಳಿಕೊಟ್ಟರು. ನಮ್ಮ ದೇಶದಲ್ಲಿ ಮನುಸ್ಮೃತಿ ಏನು ಹೇಳುತ್ತದೆ? ಎಂದು ಕೇಳಿದರೆ, ಅದೆಲ್ಲ ವರ್ಟಿಕಲ್ ಕಲ್ಚರ್ (ಶೇಣೀಕೃತ ಸಂಸ್ಕೃತಿ) ಎಂದೇ ಹೇಳಬೇಕಾಗುತ್ತದೆ. ಇದು ಅನೇಕ ಮಹಡಿಗಳ ಅಪಾರ್ಟ್ಮೆಂಟ್ ಇದ್ದ ಹಾಗೆ. ನಮ್ಮ ದೇಶದಲ್ಲಿ ಈ ಅಪಾರ್ಟ್ಮೆಂಟ್ ಕಲ್ಚರ್ ಮೂರು ಸಾವಿರ ವರ್ಷಗಳಿಂದ ಜಾರಿಯಲ್ಲಿದೆ. ಇದರಲ್ಲಿ ನಾಲ್ಕು ಮಹಡಿಗಳಿವೆ. ಆ ನಾಲ್ಕೂ ಮಹಡಿಗಳನ್ನು ಕಲ್ಪಿಸಿಕೊಂಡಾಗ ನಮ್ಮ ಮನಸ್ಸಿನಲ್ಲಿ ಸಹಜವಾಗೇ ಮೂಡುವುದು ಏನೆಂದರೆ, ನಾಲ್ಕನೇ ಮಹಡಿಯಲಿ ಬ್ರಾಹ್ಮಣ ಇರುತ್ತಾನೆ. ಮೂರನೇ ಮಹಡಿಯಲ್ಲಿ ಕ್ಷತ್ರಿಯ ಇರುತ್ತಾನೆ. ಎರಡನೆಯ ಮಹಡಿಯಲ್ಲಿ ವೈಶ್ಯ ಇರುತ್ತಾನೆ. ಮೊದಲ ಮಹಡಿಯಲ್ಲಿ ಶೂದ್ರ ಇರುತ್ತಾನೆ. ಅತಿ ಶೂದ್ರನಾದ ಪಂಚಮನು ತಳಮನೆಯಲ್ಲಿ ಇರುತ್ತಾನೆ!

ಈ ಸಂಸ್ಕೃತಿಯನ್ನು ಒಡೆಯಲು ಎಷ್ಟೊಂದು ಹೋರಾಟಗಳಾಗಿವೆ ಎಂಬುದರ ಕಡೆಗೆ ನಾವು ಗಮನ ಹರಿಸಬೇಕಾಗಿದೆ. ಅವು ನಮಗೆ ಸ್ಫೂರ್ತಿಯನ್ನು ಕೊಡುತ್ತವೆ. ನಾವು ನಿರಾಶೆಗೊಳ್ಳಬೇಕಾಗಿಲ್ಲ. ನಾನಿಲ್ಲಿ ಎಷ್ಟೊಂದು ಯುವಕರನ್ನು ನೋಡುತ್ತಿದ್ದೇನೆ. ಇವರೆಲ್ಲ ನನಗೆ ಶ್ರೇಣೀಕೃತ ಸಂಸ್ಕೃತಿಯ ಮೇಲೆ ವಿಚಾರಗಳ ಬಾಂಬ್ ಹಾಕುವವರ ಹಾಗೆ ಕಾಣುತ್ತಿದ್ದಾರೆ. ನಮ್ಮ ಪೂರ್ವಜರು ವಿಚಾರಗಳ ಬಾಂಬುಗಳನ್ನು ಸೃಷ್ಟಿಸಿದ್ದಾರೆ. ಅವುಗಳನ್ನು ಉಪಯೋಗ ಮಾಡುವ ಕಾಲ ಇದಾಗಿದೆ.

ಇವತ್ತು ಯಾವುದಕ್ಕೆ ನಾವು ಧರ್ಮ ನಿರಪೇಕ್ಷತೆ ಅನ್ನುತ್ತೇವೆಯೊ ಅದು ನಮ್ಮ ಸಂವಿಧನದ ಪೀಠಿಕೆಯಲ್ಲೇ ಇದೆ. ಪೀಠಿಕೆಯಲ್ಲಿನ ಈ ಒಂದು ಪದವನ್ನು ಅತಿ ಹೆಚ್ಚು ಗಂಭೀರವಾಗಿ ಪರಿಗಣಿಸಬೇಕಾಗಿದೆ. 2014ರಲ್ಲಿ ಮೋದಿ ಅವರು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದಾಗ ಮುಂಬೈಯಲ್ಲಿ ಭಾಷಣ ಮಾಡುವಾಗ ‘ನಾನು ಹಿಂದೂ ನ್ಯಾಷನಾಲಿಸ್ಟ್’ ಎಂದು ಹೇಳಿದ್ದು ಜಗತ್ತಿಗೇ ಗೊತ್ತು. ಇದು ಸಂವಿಧಾನದ ಧರ್ಮ ನಿರಪೇಕ್ಷ ನೀತಿಗೆ ವಿರುದ್ಧವಾದುದಲ್ಲವೆ? ಹಿಂದೂ ನ್ಯಾಷನಾಲಿಸ್ಟ್, ಮುಸ್ಲಿಂ ನ್ಯಾಷನಾಲಿಸ್ಟ್, ಕ್ರಿಶ್ಚಿಯನ್ ನ್ಯಾಷನಾಲಿಸ್ಟ್, ಸಿಖ್ಖ ನ್ಯಾಷನಾಲಿಸ್ಟ್ ಎಂದು ಹೇಳುವುದು ಅಪರಾಧ ಎಂದು ಹೇಳುವ ಧೈರ್ಯ ನಮಗೆ ಬರಬೇಕು.

ಶತಮಾನಗಳಿಂದಲೂ ನಮ್ಮ ದೇಶದ ಭಾವೈಕ್ಯದಲ್ಲಿ ಭಕ್ತಿಪಂಥದ ಪಾತ್ರ ಬಹಳ ಹಿರಿದಾಗಿದೆ. ೧೨ನೇ ಶತಮಾನದಲ್ಲಿ ಯಾವುದನ್ನು ನಾವು ಕಂಡುಕೊಂಡೆವೊ ಅದರ ಪರಿಣಾಮ ಮಹಾರಾಷ್ಟ್ರದ ಸಂತರ ಮೇಲೆ ಆಯಿತು. ಉತ್ತರದ ಸಂತರ ಮೇಲೆಯೂ ಆಯಿತು. ಇದರಿಂದಾಗಿ ೧೫ನೇ ಶತಮಾನದಲ್ಲಿ ಭಕ್ತಿಪಂಥ ಉಚ್ಛ್ರಾಯ ಸ್ಥಿತಿಗೆ ಬಂದಿತು. ಸೂಫಿಗಳು, ತುಕಾರಾಮ, ಕಬೀರ ಮುಂತಾದವರು ದೊಡ್ಡ ಸಂತರೇ ಆಗಿದ್ದರು. ಅವರೆಲ್ಲ ಗುರು ಪರಂಪರೆಯೊಂದಿಗೆ ವೈಯಕಿಕವಾಗಿ ಹೋರಾಟ ಮಾಡಿದರು. ಆದರೆ ಶರಣರ ವೈಶಿಷ್ಟö್ಯವೇನೆಂದರೆ ಅವರು ಸಂಘಟಿತ ಚಳವಳಿ ಮಾಡಿದರು. ಆದ್ದರಿಂದಲೇ ಶರಣರ ಚಳವಳಿ ಜಗತ್ತಿನ ಮೊದಲ ಸಂಘಟಿತ ಚಳವಳಿಯಾಗಿದೆ. ಅದು ದುಡಿಯುವ ಜನರು ಒಂದಾಗುವ ಮೂಲಕ ಸೃಷ್ಟಿಯಾದ ಚಳವಳಿಯಾಗಿತ್ತು.

ಶರಣರು ವೈದಿಕದ ಎಲ್ಲವನ್ನೂ ವಿರೋಧ ಮಾಡಿದರು. ವೈದಿಕದ ಎಲ್ಲದಕ್ಕೂ ಪರ್ಯಾಯ ಕೊಟ್ಟರು. ಅಲ್ಲಿ ಮೂರ್ತಿಗಳಿವೆ, ಸ್ಥಾವರವಿದೆ. ಅವುಗಳನ್ನು ಮುಟ್ಟಲು ಅವಕಾಶವಿಲ್ಲದವರ ಕೊರಳಲ್ಲಿ ಬಸವಣ್ಣನವರು ಇಷ್ಟಲಿಂಗ ರೂಪದ ದೇವರನ್ನು ಕಟ್ಟಿದರು. ಅಲ್ಲಿ ದಾನವಿತ್ತು. ಪಡೆಯುವವರು ಕೀಳರಿಮೆ ಅನುಭವಿಸುತ್ತಿದ್ದರು. ಇಲ್ಲಿ ಉಳ್ಳವರು ದಾಸೋಹ ಭಾವದಿಂದ, ದೇವರಿಗೆ ಕೊಡವಂತೆ ಇಲ್ಲದವರಿಗೆ ಕೊಡತೊಡಗಿದರು. ಅಲ್ಲಿ ಕರ್ಮಸಿದ್ಧಾಂತವಿದೆ. ಇಲ್ಲಿ ಕಾಯಕ ಸಿದ್ಧಾಂತ ತಂದರು. ನೀವು ವೈದಿಕದ ಯಾವುದನ್ನೇ ತೆಗೆದುಕೊಳ್ಳಿ ಅದಕ್ಕೆ ಬಸವಣ್ಣನವರು ಪರ್ಯಾಯ ಕೊಟ್ಟರು. ಅಲ್ಲಿ ವೇದಗಳಿವೆ, ಇಲ್ಲಿ ವಚನಗಳು ಬಂದವು. ಅಲ್ಲಿ ಪುಣ್ಯ ಪಾಪಗಳಿವೆ. ಅದನ್ನು ಕೂಡ ಬಸವಾದಿ ಶರಣರು ವಿರೋಧಿಸಿದ್ದಾರೆ.

“ಪುಣ್ಯ ಪಾಪವೆಂಬ ಉಭಯಕರ್ಮವನಾರು ಬಲ್ಲರು
ಇದನಾರುಂಬರು
ದೇಹ ತಿಂಬೊಡೆ ದೇಹ ತಾ ಮಣ್ಣು
ಜೀವ ತಿಂಬೊಡೆ ಜೀವ ತಾ ಬಯಲು
ಈ ಉಭಯನಿರ್ಣಯವ ಕೂಡಲಸಂಗನ ಶರಣನೆ ಬಲ್ಲ.”
ಎಂದು ಬಸವಣ್ಣನವರು ತಿಳಿಸಿದ್ದಾರೆ.

ದಲಿತ ಮೂಲದ ಮಹಿಳೆ ಆಯ್ದಕ್ಕಿ ಲಕ್ಕಮ್ಮ ಅರಸನನ್ನು ಎದುರು ಹಾಕಿಕೊಳ್ಳುತ್ತಾಳೆ. “ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ” ಎಂದು ಪ್ರಶ್ನಸುತ್ತಾಳೆ. ರಾಜನಿಗೆ ಮುಖಾಮುಖಿಯಾಗಿ ಶಿವಭಕ್ತರನ್ನು ನಿಲ್ಲಿಸುತ್ತಾಳೆ. ರಾಜ್ಯಶಕ್ತಿಯನ್ನು ಎದುರು ಹಾಕಿಕೊಳ್ಳುತ್ತಾಳೆ. “ಬೆಟ್ಟ ಬಲ್ಲಿತ್ತೆಂದಡೆ ಉಳಿಯ ಮೊನೆಯಲಿ ಬಡತನವಿದ್ದರೆ ಒಡೆಯದೆ” ಎಂದು ಕೂಡ ಆಕೆ ಪ್ರಶ್ನಿಸಿದ್ದಾಳೆ. ಸಮಕಾಲಿನ ಸಾಂಸ್ಕೃತಿಕ ಮುಖಾಮುಖಿಗೆ ಇದೊಂದೇ ಸಾಲು ಸಾಕು.

ಶ್ರಮಣಬೆಳಗೊಳದ ಬೆಟ್ಟದ ಹಾಗೆ ಅಸಮಾನತೆಯ ಬೆಟ್ಟ ಬಹಳ ಗಟ್ಟಿಮಟ್ಟಿಯಾಗಿದೆ. ಬಡವರು ಎಲ್ಲಿಯವರೆಗೆ ಉಳಿಯ ಮೊನೆಯ ಹಾಗೆ ತೀಕ್ಷವಾಗುವುದಿಲ್ಲವೊ, ಸೂಕ್ಷಮಮತಿಗಳಾಗಿ ಶೋಷಣೆಯನ್ನು ಅರ್ಥ ಮಾಡಿಕೊಳ್ಳುವುದಿಲ್ಲವೊ ಅಲ್ಲಿಯವರೆಗೆ ಅವರ ಮಧ್ಯೆ ನಿಜವಾದ ಒಗ್ಗಟ್ಟು ಮೂಡುವುದಿಲ್ಲ. ಒಗ್ಗಟ್ಟು ಮೂಡುವವರೆಗೂ ಶೋಷಣೆಯ ವ್ಯವಸ್ಥೆ ಹೀಗೆ ಮುಂದುವರಿಯುವುದು. ಲಕ್ಷಾಂತರ ಜನ ತೀಕ್ಷ್ಣವಾದ ಉಳಿಯನ್ನು ಹಿಡಿದುಕೊಂಡು ದೊಡ್ಡ ಕಲ್ಲಿನ ಬೆಟ್ಟವನ್ನು ಒಡೆಯಲು ಹೋದರೆ ಅದು ಉಳಿಯುವುದೆ? ಸಾಧ್ಯವಿಲ್ಲ. ಹಾಗೆಯೆ ಬಡವರು ಬಗ್ಗಟ್ಟಾದರೆ ಶೋಷಣೆಯ ವ್ಯವಸ್ಥೆ ನಿರ್ನಾಮವಾಗುವುದು. ಇಂಥ ದೊಡ್ಡ ಚಿಂತನಾ ಸಂಪತ್ತನ್ನೇ ಬಸವಾದಿ ಶರಣರು ನಮಗೆ ಸಂಪತ್ತಾಗಿ ಬಿಟ್ಟುಹೋಗಿದ್ದಾರೆ. ಶೋಷಕರ ಸಂಪತ್ತಿಗೆ ಸವಾಲು ಹಾಕುವುದನ್ನು ಈ ಮೂಲಕ ಕಲಿಸಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರö್ಯ, ಪ್ರಶ್ನಿಸುವ ಹಕ್ಕು, ವ್ಯಕ್ತಿ ಸ್ವಾತಂತ್ರö್ಯ, ಸಾಮೂಹಿಕ ಜವಾಬ್ದಾರಿ ಹೀಗೆ ಎಲ್ಲದರ ಬಗ್ಗೆಯೂ ಶರಣರು ಚಿಂತಿಸಿದ್ದಾರೆ. ಆದರೆ ಒಳಗೊಳ್ಳಬೇಕಾದ ನಮ್ಮ ಜನರು ಹೊರಗೆ ಹೋಗಿ “ಇವನಾರವ” ಎನ್ನುವವರಿಗೆ ಮತ ಚಲಾಯಿಸುತ್ತಾರೆ. ನಮ್ಮ ಜನರೇ ಅವರ ಸೇವಕರಾಗಿದ್ದಾರೆ. ಶೋಷಕರನ್ನು ಬೆಂಬಲಿಸುವ ವಿಚಿತ್ರ ಪರಿಸ್ಥಿತಿ ಎಲ್ಲ ಧರ್ಮ ಮತ್ತು ಜಾತಿಗಳವರ ಸಮಸ್ಯೆ ಆಗಿದೆ. ನಮಗೆ ಆಯ್ದಕ್ಕಿ ಲಕ್ಕಮ್ಮನ ರಾಜಕೀಯ ಪ್ರಜ್ಞೆ ನಮಗೆ ಬೇಕಿದೆ. ಬಸವಣ್ಣ ರಾಜಕೀಯ ತತ್ತ್ವಜ್ಞಾನಿ ಎಂಬ ಸತ್ಯದ ಅರಿವಾಗಬೇಕಿದೆ. ಬಸವಣ್ಣನವರನ್ನು ರಾಜಕೀಯ ತತ್ತ್ವಜ್ಞಾನಿ ಎಂದು ಇಂಗ್ಲಂಡ್ ಒಪ್ಪಿಕೊಂಡಿದ್ದರಿಂದಲೇ ಲ್ಯಾಂಬೆತ್‌ನಲ್ಲಿ ಬಸವಣ್ಣನವರ ಮೂರ್ತಿಯ ಸ್ಥಾಪನೆ ಆಯಿತೆಂಬುದನ್ನು ನಾವು ಮರೆಯಬಾರದು. ಸಾಂಸ್ಕೃತಿಕ ರಾಜಕಾರಣ ಅರ್ಥ ಆಗದೆ ಶೋಷಣೆಯ ಮೂಲ ಅರ್ಥವಾಗುವುದಿಲ್ಲ.

(ಶ್ರಮಣ ಸಂಸ್ಕೃತಿ ಟ್ರಸ್ಟ್ ಮತ್ತು ಬಯಲು ಬಳಗ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ, ಧಾರವಾಡ ಅವರು ೨೦೨೪ನೇ ಮಾರ್ಚ್ ೨ ಮತ್ತು ೩ ರಂದು “ಸಮಕಾಲೀನ ಮುಖಾಮುಖಿ: ಸಾಂಸ್ಕೃತಿಕ ರಾಜಕಾರಣ” ಕುರಿತು ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಕಮ್ಮಟದ ದಿಕ್ಸೂಚಿ ಭಾಷಣ.)

Share This Article
Leave a comment

Leave a Reply

Your email address will not be published. Required fields are marked *