ಇಳಕಲ್ಲಿನಲ್ಲಿ 32 ಗಂಟೆಗಳ ಕಾಲ ನಡೆದ ವಚನ ತಾಡೋಲೆಗಳ ಪಲ್ಲಕ್ಕಿ ಮೆರವಣಿಗೆ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಇಳಕಲ್ಲ

ಇಳಕಲ್ಲ ವಿಜಯಮಹಾಂತ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವದ ಭಾಗವಾಗಿ ಪಲ್ಲಕ್ಕಿ ಮಹೋತ್ಸವವು ಈ ವರ್ಷ ಹೊಸ ದಾಖಲೆ ನಿರ್ಮಿಸಿದೆ.

ವಚನ ತಾಡೋಲೆಗಳ ಕಟ್ಟುಗಳು, ಬಸವಣ್ಣ ಹಾಗೂ ವಿಜಯ ಮಹಾಂತೇಶ ಸ್ವಾಮೀಜಿಯವರ ಭಾವಚಿತ್ರಗಳನ್ನು ಹೊತ್ತ ಪಲ್ಲಕ್ಕಿ ಮಹೋತ್ಸವವು 32 ಗಂಟೆಗಳ ಕಾಲ ಸಂಚರಿಸಿತು.

ಗುರುಮಹಾಂತಪ್ಪಗಳು ವಚನ ತಾಡೋಲೆ ಕಟ್ಟುಗಳನ್ನು ತಲೆಮೇಲೆ ಹೊತ್ತು ಕೊಂಡು ಬಂದು ಪಲ್ಲಕ್ಕಿಯಲ್ಲಿ ಕೂರಿಸಿದ ನಂತರ ಮಂಗಳವಾರ (ಸೆ.03) ಮಧ್ಯಾಹ್ನ 04 ಗಂಟೆಗೆ ಮಠದಿಂದ ಮೆರವಣಿಗೆ ಹೊರಟಿತು. ಮನೆ ಮನೆಗಳ ಮುಂದೆ ನಿಂತು ಭಕ್ತರಿಂದ ಕಾಯಿ, ಕರ್ಪುರ, ಹಾರ, ಕಾಣಿಕೆಗಳನ್ನು ಸ್ವೀಕರಿಸಿ ಬುಧವಾರ ಮಧ್ಯರಾತ್ರಿ 12ಗಂಟೆ ಸಮಯಕ್ಕೆ ಮಠಕ್ಕೆ ಮರಳಿತು. ಮಕ್ಕಳಿಗೆ ತೊಡಿಸುವ ಕುಂಚಿಗಿ ಅರ್ಪಿಸಿದರು.

ಕಳೆದ ಬಾರಿ 30ಗಂಟೆ ಸಂಚರಿಸಿದ್ದರೆ, ಈ ಬಾರಿ 32 ಗಂಟೆ ಸಂಚರಿಸಿ ದಾಖಲೆ ನಿರ್ಮಿಸಿತು.

ಭಕ್ತರ ಸಂಭ್ರಮದ ನಡುವೆ ಇಂಚು ಇಂಚಾಗಿ ಮುಂದುವರೆದ ಮೆರವಣಿಗೆ ಕ್ರಮಿಸಿದ ಒಟ್ಟು ದೂರ 1.5 ಕಿ ಮೀ ಮಾತ್ರ.

ಇಷ್ಟೊಂದು ದೀರ್ಘ ಕಾಲ ಸಂಚರಿಸುವ ಪಲ್ಲಕ್ಕಿ ಮೆರವಣಿಗೆ ಇಳಕಲ್ಲಿನ ವಿಶೇಷ ಆಕರ್ಷಣೆ ಎಂದು ಭಕ್ತರು ಹೇಳುತ್ತಾರೆ. ಈ ಜಾತ್ರೆಗೆ ಜಿಲ್ಲೆ, ಹೊರಜಿಲ್ಲೆಗಳಿಂದ ಸಾವಿರಾರು ಜನ ಬರುತ್ತಾರೆ.

ಇಡೀ ಪಟ್ಟಣದ ತುಂಬಾ ಹಬ್ಬದ ವಾತಾವರಣದ ನಿರ್ಮಿಸುವ ಈ ಅಡ್ಡಪಲ್ಲಕ್ಕಿಯ ಉತ್ಸವದಲ್ಲಿ ಜಾತಿ, ಧರ್ಮ ಭೇದವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ.

ಇಳಕಲ್ಲ ಧರ್ಗಾದ ಪೀಠಾಧಿಪತಿ ಹಜರತ್ ಹುಸೇನರು ಹಾಗೂ ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಮುಸ್ಲಿಂ ಬಾಂಧವರು ದರ್ಗಾದಿಂದ ಪಾದಯಾತ್ರೆ ಹೊರಟು, ಮಹಾಂತ ಸ್ವಾಮೀಜಿ ಮಠಕ್ಕೆ ಬಂದು ಪೀಠಾಧಿಪತಿ ಗುರುಮಹಾಂತಸ್ವಾಮಿಗಳನ್ನು ಸತ್ಕರಿಸಿದರು.

ಬಸವ ಕೇಂದ್ರ, ಶ್ರೀ ವಿಜಯ ಮಹಾಂತೇಶ ತರುಣ ಸಂಘ, ಅಕ್ಕನ ಬಳಗಳಂತಹ ಹಲವಾರು ಸಂಘಟನೆಗಳು ಭಾಗವಹಿಸಿದ್ದರು.

ಶರಣ ಸಂಸ್ಕೃತಿ ಮಹೋತ್ಸವದ ಭಾಗವಾಗಿ ಪಲ್ಲಕ್ಕಿ ಮಹೋತ್ಸವವು ಪ್ರತಿ ವರ್ಷ ನಡೆಯುತ್ತದೆ. ಸೋಮವಾರ ವಚನ ಕಟ್ಟುಗಳನ್ನು ಬೆನ್ನಿಗೆ ಕಟ್ಟಿಕೊಂಡು ವಚನ ಯಾತ್ರೆ, ಸಾಮೂಹಿಕ ಕಲ್ಯಾಣ ಮಹೋತ್ಸವಗಳೂ ನಡೆದವು.

ಹಾಲು ಕುಡಿಯುವ ಹಬ್ಬ, ‘ಚಿತ್ತರಗಿ ಚಿಜ್ಯೋತಿ’ ಗ್ರಂಥ ಬಿಡುಗಡೆ, ಜಾನಪದ ಗೋಷ್ಠಿ, ನಿಸರ್ಗ ಚಿಕಿತ್ಸಾ ಗೋಷ್ಠಿ, ಅನುಭಾವ ಗೋಷ್ಠಿ, ವಚನ ಸಂಗೀತ ಗೋಷ್ಠಿ, ವಚನ ಸಂಗೀತ ಸೌರಭ, ಶಂಕ್ರಣ್ಣ ನಾಗರಾಳ ಒಣಬೇಸಾಯ ಪ್ರಶಸ್ತಿ ಸಮಾರಂಭ, ಲಿಂಗವಂತ ಧರ್ಮ ಗ್ರಂಥ ಬಹುಮಾನ ಸಮಾರಂಭ, ಲಿಂಗವಂತ ಕಾಯಕ ಸಂಜೀವಿನಿ ಕಾರ್ಯಕ್ರಮ, ವಚನ ಸಿದ್ದಾಂತ ಉಪನ್ಯಾಸ ಮಾಲಿಕೆ, ಮಕ್ಕಳ ಗೋಷ್ಠಿ, ಮಹಿಳಾ ಗೋಷ್ಠಿ, ವಿಶ್ವ ಬಸವ ಧರ್ಮ ಸಮಾವೇಶ, ಬಸವಧರ್ಮ ಪ್ರವಚನ ಮತ್ತೀತರ ಕಾರ್ಯಕ್ರಮಗಳೂ ಯಶಸ್ವಿಯಾಗಿ ನಡೆದವು.

ಹಾಲುಗ್ಗಿ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ಜಾತ್ರೆಗೆ ಬರುವ ಲಕ್ಷಾಂತರ ಜನರಿಗೆ ಮಠದ ವತಿಯಿಂದ ಮೂರು ದಿನಗಳ ಕಾಲ ದಾಸೋಹ ಸೇವೆ ನಡೆಯಿತು. ಈ ದಾಸೋಹ ಸೇವೆಗೆಂದೇ ಭಕ್ತರು ಹಣ, ವಸ್ತುಗಳ ದೇಣಿಗೆ ಈ ಬಸವ ಪರಂಪರೆಯ ಮಠಕ್ಕೆ ಅರ್ಪಿಸುತ್ತಾರೆ.

Share This Article
Leave a comment

Leave a Reply

Your email address will not be published. Required fields are marked *