ಬೆಂಗಳೂರು: ನಕಲಿ ಸುದ್ದಿಗಳ ಹಾವಳಿ ತಡೆಯಲು ಬಲವಾದ ಸತ್ಯಶೋಧನಾ ವ್ಯವಸ್ಥೆಗಳ ಅವಶ್ಯಕತೆಯಿದೆ ಎಂದು ಕ್ಯಾಬಿನೆಟ್ ಸಚಿವ ದಿನೇಶ್ ಗುಂಡೂರಾವ್ ಮಂಗಳವಾರ ಹೇಳಿದರು.
ನಕಲಿ ಸುದ್ದಿಗಳನ್ನು ಬಹಿರಂಗಪಡಿಸಲು ಮೀಸಲಾದ ಏಜೆನ್ಸಿಗಳನ್ನು ಸ್ಥಾಪಿಸಬೇಕು, ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಮಾಧ್ಯಮಗಳು ಒಟ್ಟಿಗೆ ಕೆಲಸ ಮಾಡಬೇಕು ಎಂದು ರಾವ್ ಕರ್ನಾಟಕ ಮಾಧ್ಯಮ ಅಕಾಡೆಮಿ ಆಯೋಜಿಸಿದ್ದ ನಕಲಿ ಸುದ್ದಿಗಳ ಮೇಲಿನ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಂಗಳವಾರ ಮಾತನಾಡಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಮುಖ್ಯಸ್ಥೆ ಆಯಿಷಾ ಖಾನಂ ಮಾತನಾಡಿ, “ಪ್ರತಿಯೊಬ್ಬ ಪತ್ರಕರ್ತನೂ ನಕಲಿ ಸುದ್ದಿಗಳ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ನಾವು ಮೀಸಲಾದ ಘಟಕವನ್ನು ಸ್ಥಾಪಿಸಬೇಕಾಗಿದೆ,” ಎಂದರು.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ರಾಜಕೀಯ ಸಂಪಾದಕ ಬನ್ಸಿ ಕಾಳಪ್ಪ “ನಕಲಿ ಸುದ್ದಿಗೆ ಜನ್ಮ ನೀಡುವ ತಂದೆ ತಾಯಿಯರಿದ್ದಾರೆ, ಪೋಷಿಸಿ ರಕ್ಷಿಸುವ ಅಣ್ಣ-ತಮ್ಮಂದಿರೂ ಇದ್ದಾರೆ. ಒಂದು ನಿರ್ದಿಷ್ಟ ನಕಲಿ ಸುದ್ದಿಯ ಹಿಂದೆ ಯಾರಿದ್ದಾರೆ ಎಂಬುದನ್ನು ತಿಳಿಯಲು, ಅದರಿಂದ ಯಾರಿಗೆ ಲಾಭವಾಗುತ್ತದೆ ಎಂಬುದನ್ನು ನೋಡಬೇಕು,” ಎಂದು ಹೇಳಿದರು.
ನಕಲಿ ಸುದ್ದಿಯನ್ನು ರಾಜಕೀಯ ಪಕ್ಷಗಳು ಅಥವಾ ಕೆಲವು ಜಾತಿ ಗುಂಪುಗಳು ಬಳಸಿಕೊಳ್ಳುತ್ತಿವೆ, ಎಂದು ಎಚ್ಚರಿಸಿದರು.

ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಮತ್ತು ಪಿಟಿಐ ಮಾಜಿ ಉದ್ಯೋಗಿ ಸಿದ್ದರಾಜು, ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್, ಹಿರಿಯ ಪತ್ರಕರ್ತರಾದ ಶ್ರೀನಿವಾಸ ಜೈನ, ಸುಭಾಷ್ ಹೊಗಾರ್, ಹಿರಿಯ ಪತ್ರಕರ್ತೆ ಆಶಾ ಕೃಷ್ಣಸ್ವಾಮಿ ಮುಂತಾದವರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.